ಒಲಿಂಪಿಕ್ಸ್ ಪದಕ ಗೆದ್ದೇ ಗೆಲ್ಲುತ್ತೇನೆ…ಟಾರ್ ರಸ್ತೆಯಲ್ಲಿ ಚಿನ್ನದ ಕನಸಿನ ಓಟ..!
ಈ ಎಲ್ಲಾ ಕ್ರೀಡಾಪಟುಗಳ ಪೋಷಕರು ಮರಾಠವಾಡ ಪ್ರದೇಶದಲ್ಲಿ ರೈತರು, ಕಬ್ಬು ಕಡಿಯುವವರು, ಕೃಷಿ ಕಾರ್ಮಿಕರು ಮತ್ತು ವಲಸೆ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಇಂತಹ ಬಡ ಮಕ್ಕಳನ್ನು ಮುನ್ನಲೆಗೆ ತರುವ ಕಾಯಕಕ್ಕೆ ಕೈ ಹಾಕಿದ್ದಾರೆ ಶ್ರೀ ಸಮರ್ಥ್ ಅಥ್ಲೆಟಿಕ್ಸ್ ಸ್ಪೋರ್ಟ್ಸ್ ರೆಸಿಡೆನ್ಶಿಯಲ್ ಅಕಾಡೆಮಿಯ ಸಂಸ್ಥಾಪಕ ರವಿ ರಸ್ಕಟ್ಲಾ.

ಸಾಧಕರಿಗೆ ಸಾವಿರ ಸವಾಲುಗಳು…ಸಾಧನೆಯ ಹಾದಿಯೇ ಕಲ್ಲು ಮುಳ್ಳುಗಳು…ಹೀಗೆ ಸಾಧನೆಯ ಬೆನ್ನೇರಿ ಹೊರಟಿರುವ ಪುಟ್ಟ ಬಾಲೆಯ ಹೆಸರು ವರ್ಷಾ ಕದಮ್. ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ಕೃಷಿ ಕಾರ್ಮಿಕರಾದ ವಿಷ್ಣು ಮತ್ತು ದೇವಶಾಲಾ ಅವರ ಪುತ್ರಿ. ತೀರಾ ಹಿಂದುಳಿದ ಕುಟುಂಬದಲ್ಲಿ ಜನಿಸಿರುವ ವರ್ಷಾ ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ದಾರೆ. ಈ ಕನಸುಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ಕೂಡ ಒಂದು.
ನಾನು ಮುಂದೊಂದು ದಿನ ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಪದಕವನ್ನು ಗೆದ್ದೇ ಗೆಲ್ಲುತ್ತೇನೆ ಎಂದೇಳುವಾಗ 13 ವರ್ಷದ ವರ್ಷಾ ಅವರ ಕಣ್ಣುಗಳಲ್ಲಿ ಹೊನ್ನಿನ ಹೊಳಪು ಮೂಡುತ್ತೆ. ಇದಕ್ಕಾಗಿ ಪಡುತ್ತಿರುವ ಕಷ್ಟ ಕಾರ್ಪಣ್ಯಗಳ ಕತ್ತಲೆ ಆ ಬೆಳಕಿನೊಂದಿಗೆ ಮಾಸುತ್ತದೆ. ಅಂತಹದೊಂದು ಆತ್ಮ ವಿಶ್ವಾಸದೊಂದಿಗೆ ವರ್ಷಾ ಕದಮ್ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಈ ಅಭ್ಯಾಸ ಹಾದಿ ಮೊದಲೇ ಹೇಳಿದಂತೆ ಕಲ್ಲು ಮುಳ್ಳಿನ ಹಾದಿ.
ಏಕೆಂದರೆ ವರ್ಷಾ ಈಗಲೂ ಬರಿಗಾಲಲ್ಲಿ ಓಡುತ್ತಿದ್ದಾಳೆ. ಟಾರ್ ರಸ್ತೆಯಲ್ಲೇ ಓಡುತ್ತಾ ಕ್ರೀಡಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಹೀಗೆ ನಾಲ್ಕು ಗಂಟೆಗಳ ಕಠಿಣ ತರಬೇತಿಯ ನಂತರ ಆಕೆಯ ದಣಿದ ಮತ್ತು ಗಾಯಗೊಂಡ ಬರಿ ಪಾದಗಳು ಅಂತಿಮವಾಗಿ ನೆಲದ ಮೇಲೆ ವಿಶ್ರಾಂತಿ ಪಡೆಯುತ್ತಿವೆ. ಆದರೆ ಈ ಎಲ್ಲಾ ನೋವುಗಳನ್ನು ಆಕೆ ನುಂಗುತ್ತಿರುವುದು ಭವಿಷ್ಯದ ಒಲಿಂಪಿಕ್ಸ್ ಚಿನ್ನದ ಪದಕ್ಕಾಗಿ, ಅದುವೇ ತನ್ನ ಅತೀ ದೊಡ್ಡ ಗುರಿ ಎನ್ನುತ್ತಾರೆ ವರ್ಷಾ ಕದಮ್.
“ನನ್ನ ಹೆತ್ತವರು ದುಬಾರಿ ಓಟದ ಬೂಟುಗಳನ್ನು ಖರೀದಿಸಲು ಸಾಧ್ಯವಿಲ್ಲದ ಕಾರಣ ನಾನು ಈ ರೀತಿಯಲ್ಲಿ ಓಡುತ್ತೇನೆ” ಎಂದೇಳುವಾಗ ಆಕೆಯಲ್ಲಿ ಯಾವುದೇ ನೋವಿಲ್ಲ. ಬದಲಾಗಿ ಅದು ಯಾವುದು ಕೂಡ ತನ್ನ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬ ಆತ್ಮ ವಿಶ್ವಾಸವನ್ನು ಎತ್ತಿ ತೋರಿಸುತ್ತದೆ.
“ನಾನು ಓಟವನ್ನು ಪ್ರೀತಿಸುತ್ತೇನೆ. 2021 ರಲ್ಲಿ ನಡೆದ ಬುಲ್ಡಾನಾ ಅರ್ಬನ್ ಫಾರೆಸ್ಟ್ ಮ್ಯಾರಥಾನ್ ನನ್ನ ಮೊದಲ ರೇಸ್ ಆಗಿತ್ತು. ಐದು-ಕಿಲೋಮೀಟರ್ ದೂರದ ರೇಸ್ನಲ್ಲಿ ಅಂದು ನಾನು 2ನೇ ಸ್ಥಾನ ಪಡೆದಿದ್ದೆ. ಮೊದಲ ಪದಕವನ್ನು ಗೆದ್ದಾಗ ನನಗೆ ತುಂಬಾ ಸಂತೋಷವಾಯಿತು. ಆ ಗೆಲುವು ನನ್ನಲ್ಲಿ ಹೊಸ ಉತ್ಸಾಹ ಮೂಡಿಸಿತು. ಇದೀಗ ಹೆಚ್ಚಿನ ಸ್ಪರ್ಧೆಗಳನ್ನು ಗೆಲ್ಲುವುದೇ ನನ್ನ ಗುರಿ ಎನ್ನುತ್ತಾರೆ ವರ್ಷಾ.
ನನ್ನ ತಾಯಿಯ ಚಿಕ್ಕಪ್ಪ ಪರಾಜಿ ಗಾಯಕ್ವಾಡ್ ರಾಜ್ಯ ಮಟ್ಟದ ಕ್ರೀಡಾಪಟು. ಅವರು ಈಗ ಸೇನೆಯಲ್ಲಿದ್ದಾರೆ. ಅವರನ್ನು ನೋಡಿ ನಾನೂ ಓಡತೊಡಗಿದೆ. 2019 ರಲ್ಲಿ ಇಂಟರ್‌ಸ್ಕೂಲ್ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ನಾಲ್ಕು ಕಿಲೋಮೀಟರ್ ಕ್ರಾಸ್-ಕಂಟ್ರಿ ಓಟದಲ್ಲಿ ಎರಡನೇ ಶ್ರೇಯಾಂಕವನ್ನು ಪಡೆದಿದ್ದೆ. ಅಲ್ಲಿಂದ ಶುರುವಾದ ಓಟವು ಈಗಲೂ ಮುಂದುವರೆದಿದೆ ಎಂದು ವರ್ಷಾ ಸಂತಸ ವ್ಯಕ್ತಪಡಿಸುತ್ತಾರೆ.
ವರ್ಷಾ 2020 ರಲ್ಲಿ ಪರ್ಭಾನಿ ಜಿಲ್ಲೆಯ ಪಿಂಪಲ್ಗಾಂವ್ ಥೋಂಬರೆ ಗ್ರಾಮದ ಹೊರವಲಯದಲ್ಲಿರುವ ಶ್ರೀ ಸಮರ್ಥ್ ಅಥ್ಲೆಟಿಕ್ಸ್ ಸ್ಪೋರ್ಟ್ಸ್ ರೆಸಿಡೆನ್ಶಿಯಲ್ ಅಕಾಡೆಮಿಗೆ ಸೇರಿದ್ದಾರೆ. ಅಕಾಡೆಮಿಯಲ್ಲಿ ಹಿಂದುಳಿದಿರುವ ಸಮುದಾಯಗಳ 13 ಇತರ ಕ್ರೀಡಾಪಟುಗಳಿದ್ದಾರೆ. ಇವರಲ್ಲಿ ಎಂಟು ಹುಡುಗರು ಮತ್ತು ಐದು ಹುಡುಗಿಯರು.
ಈ ಎಲ್ಲಾ ಕ್ರೀಡಾಪಟುಗಳ ಪೋಷಕರು ಮರಾಠವಾಡ ಪ್ರದೇಶದಲ್ಲಿ ರೈತರು, ಕಬ್ಬು ಕಡಿಯುವವರು, ಕೃಷಿ ಕಾರ್ಮಿಕರು ಮತ್ತು ವಲಸೆ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಇಂತಹ ಬಡ ಮಕ್ಕಳನ್ನು ಮುನ್ನಲೆಗೆ ತರುವ ಕಾಯಕಕ್ಕೆ ಕೈ ಹಾಕಿದ್ದಾರೆ ಶ್ರೀ ಸಮರ್ಥ್ ಅಥ್ಲೆಟಿಕ್ಸ್ ಸ್ಪೋರ್ಟ್ಸ್ ರೆಸಿಡೆನ್ಶಿಯಲ್ ಅಕಾಡೆಮಿಯ ಸಂಸ್ಥಾಪಕ ರವಿ ರಸ್ಕಟ್ಲಾ.
ಇಲ್ಲಿ ತರಬೇತಿ ಪಡೆದ ಯುವಕರು ರಾಜ್ಯ ಮತ್ತು ರಾಷ್ಟ್ರಮಟ್ಟದ ಓಟಗಳಲ್ಲಿ ಅಂತಿಮ ಗೆರೆಯನ್ನು ತಲುಪಿದ್ದಾರೆ. ಮತ್ತೆ ಕೆಲವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಹೀಗಾಗಿ ಮುಂದೊಂದು ದಿನ ವರ್ಷಾ ಕದಮ್ ಕೂಡ ಭಾರತವನ್ನು ಪ್ರತಿನಿಧಿಸುವ ವಿಶ್ವಾಸ ಹೊಂದಿದ್ದಾರೆ.
“ಇಲ್ಲಿನ ಮಕ್ಕಳಲ್ಲಿ ವಿವಿಧ ಕ್ರೀಡೆಗಳಿಗೆ ಸಾಕಷ್ಟು ಸಾಮರ್ಥ್ಯವಿದೆ. ಆದರೆ ಅವರ ಕುಟುಂಬಗಳಲ್ಲಿ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವಂತಹ ಪರಿಸ್ಥಿತಿಯಿದೆ. ಹೀಗಾಗಿಯೇ ಕ್ರೀಡೆಯನ್ನು ವೃತ್ತಿಯನ್ನಾಗಿಸುವುದು ಅವರಿಗೆ ಕಷ್ಟಕರವಾಗಿದೆ” ಎಂದು ರವಿ ಹೇಳುತ್ತಾರೆ.
2016 ರಲ್ಲಿ ನಾನು ಅಕಾಡೆಮಿಯನ್ನು ಪ್ರಾರಂಭಿಸುವ ಮೊದಲು ಜಿಲ್ಲಾ ಪರಿಷತ್ ಶಾಲೆಗಳಲ್ಲಿ ಕ್ರೀಡೆಗಳನ್ನು ಕಲಿಸುತಿದ್ದೆ. ನನಗೆ ಚಿಕ್ಕ ವಯಸ್ಸಿನಿಂದಲೇ ಗ್ರಾಮೀಣ ಮಕ್ಕಳಿಗೆ ಉಚಿತವಾಗಿ ಅತ್ಯುತ್ತಮ ತರಬೇತಿಯನ್ನು ನೀಡಬೇಕೆಂದು ಬಯಕೆಯಿತ್ತು. ಇದೀಗ ಈ ಅಕಾಡೆಮಿಯ ಮೂಲಕ ತರಬೇತಿ ನೀಡುತ್ತಿದ್ದೇನೆ” ಎಂದು ರವಿ ರಸ್ಕಟ್ಲಾ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್ಗೆ ನೇರ ಅರ್ಹತೆ ಪಡೆದ ನೀರಜ್ ಚೋಪ್ರಾ
ಒಟ್ಟಿನಲ್ಲಿ ಟಾರ್ ರಸ್ತೆಯಲ್ಲಿ ಶುರುವಾಗಿರುವ ವರ್ಷಾ ಕದಮ್ ಅವರ ಓಟವು 2028 ರ ವೇಳೆಗೆ ಲಾಸ್ ಏಂಜಲೀಸ್ ಒಲಿಂಪಿಕ್ಸ್ನ ಮುಖ್ಯ ಟ್ರ್ಯಾಕ್ಗೆ ಬಂದು ತಲುಪಲಿ…ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಚಿನ್ನದ ಪದಕ ಗೆಲ್ಲುವ ವರ್ಷಾ ಅವರ ಬಾಲ್ಯದ ಕನಸು ಕೂಡ ಈಡೇರಲಿ ಎಂದು ಆಶಿಸೋಣ.
SC- ruralindiaonline.org
Published On - 5:18 pm, Tue, 29 August 23




