ಕೈ ಕಳೆದುಕೊಂಡ ನಿಶಾದ್ಗೆ ತಾಯಿಯೇ ಸ್ಪೂರ್ತಿ
Nishad Kumar: ನಿಶಾದ್ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬದುವಾನ್ ಗ್ರಾಮದ ನಿವಾಸಿ. ಅವರು ಚಂಡೀಗಢದ ಸೆಕ್ಟರ್ 10 ರ ಡಿಎವಿ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದರು. ಇದರ ನಂತರ ಅವರು ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಇದೀಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಕೀರ್ತಿ ಪಾತಾಕೆಯನ್ನು ಮುಗಿಲೆತ್ತರಕ್ಕೇರಿಸಿದ್ದಾರೆ.
ಆಟದಲ್ಲಿ ಸವಾಲಿಲ್ಲ ಎಂದಾದರೆ, ಆಟವಾಡಿ ಗೆಲ್ಲುವುದರಲ್ಲಿ ಮಜಾ ಏನು? ಇಂತಹ ಸವಾಲುಗಳೇ ಈಗ ಭಾರತೀಯ ಪ್ಯಾರಾ-ಅಥ್ಲೀಟ್ ನಿಶಾದ್ ಕುಮಾರ್ ಅವರನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಅದು ಸಹ ಪ್ಯಾರಾಲಿಂಪಿಕ್ಸ್‌ನಲ್ಲಿ ಹೈ ಜಂಪ್ ಟಿ47 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ. ಇದೀಗ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟಿರುವ ನಿಶಾದ್ ಈ ವರ್ಷದ ಅಕ್ಟೋಬರ್‌ನಲ್ಲಿ ತಮ್ಮ 25 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಅದಕ್ಕೂ ಮೊದಲು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಹೈ ಜಂಪ್ನಲ್ಲಿ ಪದಕ ಗೆದ್ದಿರುವುದು ವಿಶೇಷ. ಈ ಮೂಲಕ ಈ ಸಾಧನೆ ಮಾಡಿದ ದೇಶದ ಅತ್ಯಂತ ಕಿರಿಯ ಪ್ಯಾರಾ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಆದರೆ ನಿಶಾದ್ ಅವರ ಈ ಸಾಧನೆಯ ಹಿಂದೆ ಕಣ್ಣೀರ ಕಥೆಯೊಂದಿದೆ.
6ನೇ ವಯಸ್ಸಿನಲ್ಲಿ ಕೈ ಕಳೆದುಕೊಂಡ ನಿಶಾದ್:
1999 ರಲ್ಲಿ ಜನಿಸಿದ ನಿಶಾದ್ ಕುಮಾರ್ 6 ವರ್ಷದವನಾಗಿದ್ದಾಗ ಲಾನ್ ಮೂವರ್ ಅಪಘಾತದಲ್ಲಿ ಬಲಗೈಯನ್ನು ಕಳೆದುಕೊಂಡರು. ಆದರೆ, ಆ ಅಪಘಾತ ತನ್ನ ದೌರ್ಬಲ್ಯವಾಗಲು ನಿಶಾದ್ ಬಿಡಲಿಲ್ಲ. ಕ್ರೀಡೆಯ ಮೇಲಿನ ಪ್ರೀತಿ ಅವರ ತಾಯಿಯಿಂದ ಸಿಕ್ಕಿತು. ನಿಶಾದ್ ಅವರ ತಾಯಿ ರಾಜ್ಯ ಮಟ್ಟದಲ್ಲಿ ವಾಲಿಬಾಲ್ ಮತ್ತು ಡಿಸ್ಕಸ್ ಥ್ರೋ ಆಟಗಾರ್ತಿಯಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ತನ್ನ ತಾಯಿಯಿಂದ ಸ್ಫೂರ್ತಿ ಪಡೆದ ಅವರು, ತಾನೂ ಸಹ ಆಟಗಾರನಾಗಿ ಭಾರತಕ್ಕೆ ಹೆಮ್ಮೆ ತರಲು ನಿರ್ಧರಿಸಿದ್ದಾರೆ.
2009 ರಲ್ಲಿ ಪ್ರಾರಂಭವಾದ ಈ ಅನುಕ್ರಮವು 2019 ರಲ್ಲಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನತ್ತ ಕೊಂಡೊಯ್ಯಿತು. T47 ಹೈ ಜಂಪ್ ವಿಭಾಗದಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ನಿಶಾದ್ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಮೊದಲ ದೊಡ್ಡ ಬ್ರೇಕ್ ಅನ್ನು ಪಡೆದುಕೊಂಡರು. ಅಲ್ಲದೆ ಕಂಚಿನ ಪದಕ ಗೆದ್ದ ಆಧಾರದ ಮೇಲೆ ಅವರು ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಅಲ್ಲಿ ಅವರು ಏಷ್ಯನ್ ದಾಖಲೆಯೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇದರ ನಂತರ, 2022 ರಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ನಿಶಾದ್ ಕುಮಾರ್ ಚಿನ್ನದ ಪದಕ ಗೆದ್ದರು.
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 2.06 ಮೀಟರ್ ಜಿಗಿದ ನಿಶಾದ್, ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಕೇವಲ 2.04 ಮೀಟರ್ ಜಿಗಿದಿದ್ದರೂ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಬ್ಯಾಕ್ ಟು ಬ್ಯಾಕ್ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲೀಟ್ ಎನಿಸಿಕೊಂಡಿದ್ದಾರೆ.