Viral Video: ದೃಷ್ಟಿಹೀನ ಮಗಳೊಂದಿಗೆ ಗೌರವ ಕಾನೂನು ಪದವಿ ಸ್ವೀಕರಿಸಿದ ತಾಯಿಯ ಭಾವನಾತ್ಮಕ ಕ್ಷಣ
ಟರ್ಕಿಯ ಸಕಾರ್ಯ ವಿಶ್ವವಿದ್ಯಾನಿಲಯದಲ್ಲಿ ದೃಷ್ಟಿ ವಿಕಲಚೇತನ ಮಗಳೊಂದಿಗೆ ಆಕೆಯ ತಾಯಿಯು ಗೌರವ ಪದವಿ ಸ್ವೀಕರಿಸುತ್ತಿರುವ ಭಾವನಾತ್ಮಕ ಕ್ಷಣದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಾಯಿಯ ತ್ಯಾಗ ಮತ್ತು ಪ್ರೀತಿಗೆ ಸರಿಸಾಟಿ ಯಾವುದು ಇಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.
ತಾಯಿ ಪ್ರೀತಿಗಿಂತ ಮಿಗಿಲಾದದ್ದು ಜಗತ್ತಿನಲ್ಲಿ ಯಾವುದು ಇಲ್ಲ. ತಾಯಿಯನ್ನು ಕಣ್ಣಿಗೆ ಕಾಣುವ ದೇವರೆಂದು ಹೆಳುತ್ತಾರೆ. ಆ ಮಾತು ಅಕ್ಷರಶಃ ನಿಜ. ತನ್ನ ಮಕ್ಕಳಿಗಾಗಿ ತಾಯಿ ಏನು ಬೇಕಾದರೂ ಮಾಡುತ್ತಾಳೆ. ಯಾವ ತ್ಯಾಗಕ್ಕೂ ಸಿದ್ಧಳಿರುತ್ತಾಳೆ. ಮಕ್ಕಳಿಗೆ ಒಂದೊಳ್ಳೆ ಭವಿಷ್ಯವನ್ನು ರೂಪಿಸುವ ಸಲುವಾಗಿ ತನ್ನ ಜೀವನವನ್ನೇ ತೇಯುತ್ತಾಳೆ. ತಾಯಿಯ ಪ್ರೀತಿಯನ್ನು ಮೀರಿದ್ದು ಯಾವುದು ಇಲ್ಲ ಎಂದು ತೋರಿಸುವ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇದೆ. ಇದೇ ರೀತಿಯಲ್ಲಿ ಇತ್ತೀಚಿಗೆ ಒಬ್ಬ ತಾಯಿಯ ಪ್ರೀತಿ ಮತ್ತು ತ್ಯಾಗದ ಕಥೆ ವೈರಲ್ ಆಗಿದ್ದು, ಆಕೆ ತನ್ನ ದೃಷ್ಟಿ ವಿಕಲಚೇತನ ಮಗಳ 4 ವರ್ಷಗಳ ಕಾನೂನು ಪದವಿಯ ವಿದ್ಯಾಭ್ಯಾಸದಲ್ಲಿ ಪ್ರತಿದಿನ ಮಗಳ ಜೊತೆ ತಾನು ಕಾಲೇಜಿಗೆ ಹೋಗಿ, ಅವಳಿಗೆ ಹೇಳಿಕೊಡುತ್ತಿದ್ದ ಪಾಠ ಹಾಗೂ ಇತರ ಚಟುವಟಿಕೆಗಳನ್ನು ಜೋರಾಗಿ ಓದಿ ಹೇಳುತ್ತಾ ಮಗಳನ್ನು ಕಾನೂನು ಪದವಿಧರೆಯನ್ನಾಗಿ ಮಾಡಿದ್ದಾರೆ.
ಈ ಘಟನೆಯು 2018ರಲ್ಲಿ ಟರ್ಕಿಯಲ್ಲಿ ನಡೆದಿದ್ದು, ಈ ಕುರಿತ ಫೋಟೋವೊಂದು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೊದಲ್ಲಿ ಟರ್ಕಿಯ ಸಕಾರ್ಯ ವಿಶ್ವವಿದ್ಯಾನಿಯಯದಲ್ಲಿ ನಾಲ್ಕು ವರ್ಷಗಳ ಅಧ್ಯಯನದ ನಂತರ ಬೆರ್ರು ಮೆರ್ವೆ ಕುಲ್ ಎಂಬ ಯುವತಿಗೆ ಪದವಿ ಪ್ರಮಾಣ ಪತ್ರವನ್ನು ಹಾಗೂ ಮಗಳ ವಿದ್ಯಾಭ್ಯಾಸಕ್ಕಾಗಿ ಆಕೆಯ ತಾಯಿ ಹವ್ವಾ ಕುಲ್ ಅವರ ಅಚಲವಾದ ಸಮರ್ಪಣೆ ಮತ್ತು ಬದ್ಧತೆಯನ್ನು ಗುರುತಿಸಿ ಅವರಿಗೂ ಗೌರವ ಪದವಿ ಪ್ರಮಾಣ ಪತ್ರವನ್ನು ನೀಡಿರುವುದನ್ನು ಕಾಣಬಹುದು.
ಇದನ್ನೂ ಓದಿ: Viral Video: ನ್ಯೂಯಾರ್ಕ್ ನಗರಕ್ಕೆ ಮುತ್ತಿಗೆ ಹಾಕಿದ ಜೇನು ಸಮೂಹ
ಟರ್ಕಿಯ ಸಕಾರ್ಯ ವಿಶ್ವವಿದ್ಯಾನಿಲಯದಲ್ಲಿ ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳಿಗೆ ಓದಲು ಸಹಾಯಕವಾಗುವಂತಹ ಸಂಪನ್ಮೂಲಗಳು ಅಥವಾ ಮೂಲಸೌಕರ್ಯಗಳು ಇರಲಿಲ್ಲ. ಇದರಿಂದ ತನ್ನ ಮಗಳ ವಿದ್ಯಾಭ್ಯಾಸಕ್ಕೆ ಹಾಗೂ ಉಜ್ವಲ ಭವಿಷ್ಯಕ್ಕೆ ತೊಂದರೆಯಾಗಬಾರದೆಂದು ಸ್ವತಃ ಹವ್ವಾ ಕುಲ್ ಮಗಳೊಂದಿಗೆ 4 ವರ್ಷಗಳ ಕಾಲ ಕಾಲೇಜಿಗೆ ಹೋಗಿ ಅಲ್ಲಿ ಹೇಳಿ ಕೊಡುತ್ತಿದ್ದ ಪಾಠ ಹಾಗೂ ಶೈಕ್ಷಣಿಕ ಪುಸ್ತಕಗಳನ್ನು ಮಗಳಿಗೆ ಜೋರಾಗಿ ಓದಿ ಹೇಳುತ್ತಾ ಅಭ್ಯಾಸ ಮಾಡಿಸುತ್ತಿದ್ದರು. ವಿಶ್ವವಿದ್ಯಾನಿಲಯವು ಮರ್ವೆ ಕುಲ್ ಅವರು ಕಾಲೇಜಿನಲ್ಲಿ ನಾಲ್ಕು ವರ್ಷಗಳ ಕಾಲ ಅಧ್ಯಯನ ಮಾಡಿದ ನಂತರ ಅವರಿಗೆ ಪದವಿ ಪ್ರಮಾಣ ಪತ್ರವನ್ನು ನೀಡಿದರು. ಮತ್ತು ಅದೇ ವೇದಿಕೆಯಲ್ಲಿ ಆಕೆಯ ತಾಯಿಗೂ ಅವರ ಮಗಳ ವಿದ್ಯಾಭ್ಯಾಸಕ್ಕಾಗಿ ಅವರ ಸಮರ್ಪಣೆ ಮತ್ತು ಬದ್ಧತೆಗಾಗಿ ಗೌರವ ಪದವಿ ಪ್ರಮಾಣ ಪತ್ರವನ್ನು ನೀಡಲಾಯಿತು. ಮೆರ್ವೆ ಕುಲ್ ಮತ್ತು ಆಕೆಯ ತಾಯಿ ಹವ್ವಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಪ್ರಾಧ್ಯಾಪಕ ಮಹ್ಮುತ್ ಬಿಲೆನ್ ಈ ತಾಯಿಯ ಕಾರ್ಯವನ್ನು ಶ್ಲಾಘಿಸಿದರು.
Overheard: Mom who helped her blind daughter graduate from law school by attending every class and reading each textbook out aloud for 4 years received an honorary law degree for her effort. pic.twitter.com/niGvvK2NpV
— Mohamad Safa (@mhdksafa) June 11, 2023
ಈ ವೈರಲ್ ಫೋಟೋವನ್ನು ಮೊಹಮದ್ ಸಫಾ (@mhdksafa) ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಮಗಳೊಂದಿಗೆ ಪ್ರತಿ ತರಗತಿಯಲ್ಲೂ ಹಾಜರಾಗುವ ಮೂಲಕ ಮತ್ತು 4 ವರ್ಷಗಳ ಕಾಲ ಪ್ರತಿ ಪಠ್ಯ ಪುಸ್ತಕಗಳನ್ನು ಗಟ್ಟಿಯಾಗಿ ಓದುವ ಮೂಲಕ ತನ್ನ ಅಂಧ ಮಗಳಿಗೆ ಕಾನೂನು ಪದವಿಯನ್ನು ಪಡೆಯಲು ಸಹಾಯ ಮಾಡಿದ ತಾಯಿಯ ಪ್ರಯತ್ನದಿಂದ ತಾಯಿ ಮಗಳು ಇಬ್ಬರು ಗೌರವ ಕಾನೂನು ಪದವಿಯನ್ನು ಪಡೆದರು’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಫೋಟೊದಲ್ಲಿ ತಾಯಿ ಮತ್ತು ಮಗಳು ಗೌರವ ಪದವಿಯನ್ನು ಸ್ವೀಕರಿಸುತ್ತಿರುವ ಭಾವನಾತ್ಮಕ ಕ್ಷಣವನ್ನು ಕಾಣಬಹುದು.
ಜೂನ್ 11 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 3.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 48.7 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ ಗಳನ್ನೂ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಅದಕ್ಕಾಗಿಯೇ ಹೇಳುವುದು ಸ್ವರ್ಗವು ತಾಯಿಯ ಪಾದದಡಿಯಲ್ಲಿದೆ ಅಂತಾ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ತಾಯಿಯ ಪ್ರೀತಿಗೆ ಸರಿಸಾಟಿ ಯಾವುದೂ ಇಲ್ಲ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಈ ತಾಯಿ ಎಲ್ಲಾ ಗೌರವಕ್ಕೂ ಅರ್ಹಳು ಎಂದು ಬರೆದುಕೊಂಡಿದ್ದಾರೆ. ನಾಲ್ಕನೇಯವರು ‘ತಾಯಿಯಂದಿರು ಅದ್ಭುತವೇ ಸರಿ. ಅವರು ತಮ್ಮ ಮಕ್ಕಳಿಗಾಗಿ ಏನು ಬೇಕಾದರೂ ಮಾಡುತ್ತಾರೆ’ ಎಂದು ಹೇಳಿದ್ದಾರೆ.
ತಾಯಿ ಮಗಳು ಗೌರವ ಪದವಿಯನ್ನು ಸ್ವೀಕರಿಸುವ ವೀಡಿಯೋ ಲಿಂಕ್ ನ್ನು ಮಹ್ಮುತ್ ಬಿಲೆನ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ