ಅರುಣಾ ಸಾಯಿರಾಂ ಅವರ ಹಾಡುಗಾರಿಕೆಯನ್ನು ಒಮ್ಮೆ ಕೇಳಿ ಎನ್ನುತ್ತಿದ್ದಾರೆ ಉದ್ಯಮಿ ಆನಂದ ಮಹೀಂದ್ರಾ
Aruna Sairam : ಉದ್ಯಮಿ ಆನಂದ ಮಹೀಂದ್ರಾ ಈ ಬಾರಿ ಪದ್ಮಶ್ರೀ ಅರುಣಾ ಸಾಯಿರಾಂ ಅವರ ಹಳೆಯ ವಿಡಿಯೋ ಒಂದನ್ನು ಟ್ವೀಟ್ ಮಾಡಿದ್ದಾರೆ. ಕರ್ನಾಟಕ ಸಂಗೀತದ ರಸದೌತಣ ನಿಮಗಾಗಿ.
Viral Video : ಆಗಾಗ ಮಾಹಿತಿಯುಕ್ತ, ಆಲೋಚನೆಗೆ ಹಚ್ಚುವ ಮತ್ತು ಆಸಕ್ತಿಕರ ವಿಡಿಯೋ ಮತ್ತು ಫೋಟೋ ಟ್ವೀಟ್ ಮೂಲಕ ನೆಟ್ಟಿಗರ ಗಮನ ಸೆಳೆಯುವ ಉದ್ಯಮಿ ಆನಂದ ಮಹೀಂದ್ರಾ ಈಗ ಮತ್ತೊಂದು ಹೊಸ ಟ್ವೀಟ್ ಮಾಡಿದ್ದಾರೆ. ಪದ್ಮಶ್ರೀ ಅರುಣಾ ಸಾಯಿರಾಂ 2009ರಲ್ಲಿ ದರ್ಬಾರ್ ಅಂತಾರಾಷ್ಟ್ರೀಯ ದಕ್ಷಿಣ ಏಷಿಯಾ ಸಂಗೀತೋತ್ಸವದಲ್ಲಿ ಹಾಡಿರುವ ಹಳೆಯ ವಿಡಿಯೋ ಇದು. ಈ ಸಂಗೀತಮಯ ಟ್ವೀಟ್ ನೊಂದಿಗೆ ನಿಮ್ಮ ದಿನವನ್ನು ಆರಂಭಿಸಿ ಎಂದಿದ್ದಾರೆ.
The perfect way to start a day. With the legend, Aruna Sairam. She transforms music into magic. pic.twitter.com/Gx29jaav7G
— anand mahindra (@anandmahindra) November 29, 2022
ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಅರುಣಾ ಸಾಯಿರಾಂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಮನ್ನಣೆ ಗಳಿಸಿರುವ ಹಿರಿಯ ಗಾಯಕಿ. ಮುಂಬೈನಲ್ಲಿ ವಾಸವಾಗಿದ್ದ ತಮಿಳಿನ ಸಂಗೀತ ಕುಟುಂಬವೊಂದರಲ್ಲಿ ಇವರು ಜನಿಸಿದರು. ಸಹಜವಾಗಿ ಸಂಗೀತದಲ್ಲಿ ಆಸಕ್ತಿ ಬೆಳೆಯಿತು. ನಂತರ ಮುಂಬೈನಲ್ಲಿ ಸಂಗೀತ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಾಗ ಅರುಣಾ ಅವರಿಗೆ ಕೇವಲ ಎಂಟು ವರ್ಷ. 14ನೇ ವಯಸ್ಸಿನಲ್ಲಿ ಅವರು ಮೊಟ್ಟಮೊದಲ ಬಾರಿಗೆ ಸ್ವತಂತ್ರ ಸಂಗೀತ ಕಛೇರಿಯನ್ನು ನೀಡಿದರು. 21ನೇ ವಯಸ್ಸಿಗೆ ಚೆನ್ನೈನ ಸಂಗೀತ ಅಕಾಡೆಮಿಯಲ್ಲಿ ನಡೆದ ವಾರ್ಷಿಕ ಸಂಗೀತ ಸಮ್ಮೇಳನದಲ್ಲಿ ಅತ್ಯುತ್ತಮ ಯುವ ಸಂಗೀತ ಕಲಾವಿದ ಪ್ರಶಸ್ತಿಯನ್ನೂ ಪಡೆದುಕೊಂಡರು.
ಹೀಗೆ ಶುರುವಾದ ಇವರ ಕಲಾಪಯಣ ಇಂದಿಗೂ ನಿರಂತರವಾಗಿ ಸಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಅತ್ಯದ್ಭುತವಾಗಿದೆ ಎಂದಿದ್ದಾರೆ. ಯೂಟ್ಯೂಬ್ನಲ್ಲಿ ಇವರ ಸಾಕಷ್ಟು ವಿಡಿಯೋಗಳು ಕೇಳಲು ಲಭ್ಯವಿವೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:27 pm, Tue, 29 November 22