Fact Check: ಮನಮೋಹನ್ ಸಿಂಗ್ ಅಂತ್ಯಕ್ರಿಯೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿಲ್ಲ ಎಂಬ ಸುಳ್ಳು ಪೋಸ್ಟ್ ವೈರಲ್
ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಇಂದು ದೆಹಲಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ನಡೆದಿದೆ. ಇದಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಆದರೆ, ರಾಹುಲ್ ಗಾಂಧಿ ಭಾಗವಹಿಸಿಲ್ಲವೇ?.
ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶನಿವಾರ (ಡಿ. 28) ದೆಹಲಿಯ ನಿಗಮಬೋಧ ಘಾಟ್‌ನಲ್ಲಿ ನಡೆದ ಅಂತಿಮ ವಿಧಿವಿಧಾನದಲ್ಲಿ ಪೂರ್ಣ ಸರ್ಕಾರಿ ಗೌರವ, ಗನ್ ಸಲ್ಯೂಟ್ ನೀಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮನಮೋಹನ್ ಸಿಂಗ್ ಅವರ ಪುತ್ರಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸಿಖ್ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿದೆ. ಈ ಸಂದರ್ಭ ಕಾಂಗ್ರೆಸ್‌ನ ಹಿರಿಯ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿಲ್ಲ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಎಕ್ಸ್ ಬಳಕೆದಾರರೊಬ್ಬರು, ‘‘ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರದಲ್ಲಿ ಸೋನಿಯಾರನ್ನು ಮರೆತುಬಿಡಿ – ರಾಹುಲ್ ಮತ್ತು ಪ್ರಿಯಾಂಕಾ ಕೂಡ ಇರಲಿಲ್ಲ. ಕುಟುಂಬಕ್ಕೆ ಸೇರದ ಕಾಂಗ್ರೆಸ್ ಸದಸ್ಯರನ್ನು ಹೀಗೆ ನಡೆಸಿಕೊಳ್ಳುತ್ತಾರೆ. ಮನಮೋಹನ್ ಸಿಂಗ್ ಸಿಖ್, ಬಂಗಾಳಿ ಬ್ರಾಹ್ಮಣ ಪ್ರಣಬ್ ದಾ, OBC ಸೀತಾರಾಮ್ ಕೇಸ್ರಿ ಅಥವಾ ತೆಲುಗು PVNR ಅವರನ್ನು ಇವರು ಸೇವಕರಂತೆ ನೋಡುತ್ತಾರೆ’’ ಎಂದು ಹೇಳಲಾಗಿದೆ.
Forget Sonia —even Rahul & Priyanka weren’t present at the last rites of Manmohan Singh.
This is how they treat Congress members who don’t belong to the family.
Be it Sikh Manmohan Singh, Bengali Brahmin Pranab Da, OBC Sitaram Kesri or Telugu PVNR, they see them as servants.
— Mr Sinha (@MrSinha_) December 28, 2024
Fact Check:
ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದು ಸುಳ್ಳು ಎಂಬುದು ಕಂಡುಬಂದಿದೆ. ಸಿಂಗ್ ಅವರ ಅಂತ್ಯಕ್ರಿಯೆಯ ಲೈವ್ ದೃಶ್ಯಗಳಲ್ಲಿ ನಾವು ಅನೇಕ ದೃಶ್ಯಗಳಲ್ಲಿ ರಾಹುಲ್ ಗಾಂಧಿಯನ್ನು ಕಂಡಿದ್ದೇವೆ. ರಾಹುಲ್ ಗಾಂಧಿ ಸೇರಿದಂತೆ ಅನೇಕ ಹಿರಿಯ ಕಾಂಗ್ರೆಸ್ ನಾಯಕರು ನವದೆಹಲಿಯಲ್ಲಿ ಮಾಜಿ ಪ್ರಧಾನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. NEWS9 “ರಾಹುಲ್ ಗಾಂಧಿ ಅವರು ನಿಗಮ್ ಬೋಧ್ ಘಾಟ್‌ನಲ್ಲಿ ಡಾ. ಮನಮೋಹನ್ ಸಿಂಗ್ ಅವರಿಗೆ ಅಂತಿಮ ಗೌರವ ಸಲ್ಲಿಸಿದರು” ಎಂಬ ಶೀರ್ಷಿಕೆಯ ಲೈವ್ ಸ್ಟ್ರೀಮ್ ದೃಶ್ಯಾವಳಿಗಳನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ, ಸಿಂಗ್ ಅವರ ಪಾರ್ಥಿವ ಶರೀರದ ಮೇಲೆ ಅವರು ಹಾರವನ್ನು ಹಾಕುತ್ತಿದ್ದಾರೆ.
ಮತ್ತೊಂದು ವೀಡಿಯೋದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ದೆಹಲಿಯ ಕಾಂಗ್ರೆಸ್ ಪ್ರಧಾನ ಕಛೇರಿಯಲ್ಲಿ ರಾಹುಲ್, ಪ್ರಿಯಾಂಕಾ ಮತ್ತು ಸೋನಿಯಾ ಗಾಂಧಿ ಅವರು ಗೌರವ ಸಲ್ಲಿಸಿದ ಎಎನ್‌ಐ ಸುದ್ದಿಗಳ ದೃಶ್ಯಾವಳಿಗಳನ್ನು ಸಹ ನಾವು ಕಂಡುಕೊಂಡಿದ್ದೇವೆ.
ಹೆಚ್ಚುವರಿಯಾಗಿ, ರಾಹುಲ್ ಗಾಂಧಿಯವರು ಎಕ್ಸ್ನಲ್ಲಿ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ‘‘ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಜಿ ಅವರಿಗೆ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಕೊನೆಯ ವಿದಾಯ ನೀಡಲಾಯಿತು. ಸಿಂಗ್ ಅವರ ನಮ್ರತೆ, ಮಾರ್ಗದರ್ಶನ ಮತ್ತು ದೇಶಕ್ಕೆ ನೀಡಿದ ಕೊಡುಗೆ ಯಾವಾಗಲೂ ಇತಿಹಾಸದ ಪುಟಗಳಲ್ಲಿ ಉಳಿಯುತ್ತದೆ.’’ ಎಂದು ಬರೆದುಕೊಂಡಿದ್ದಾರೆ.
कांग्रेस मुख्यालय में पूर्व प्रधानमंत्री डॉ मनमोहन सिंह जी को अंतिम विदाई दी।
डॉ सिंह की विनम्रता, मार्गदर्शन और देश के लिए योगदान इतिहास के पन्नों में सदा जीवित रहेंगे। pic.twitter.com/jfqT4PYUis
— Rahul Gandhi (@RahulGandhi) December 28, 2024
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿಲ್ಲ ಎಂಬ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಛೇರಿಯಿಂದ ಡಾ. ಮನಮೋಹನ್ ಸಿಂಗ್ ಅವರ ಅಂತಿಮ ಯಾತ್ರೆಯನ್ನು ಆರಂಭಿಸಲಾಯಿತು. ಅಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮುಂತಾದ ಕಾಂಗ್ರೆಸ್ ಪಕ್ಷದ ನಾಯಕರು ಮಾಜಿ ಪ್ರಧಾನಿಗೆ ಗೌರವ ಸಲ್ಲಿಸಿದರು.
ಇದನ್ನೂ ಓದಿ: Fact Check: ಬಿಹಾರದಲ್ಲಿ ಆನೆ ಸವಾರಿ ಮಾಡಿದ ಹುಲಿ?: ಈ ವಿಡಿಯೋದ ನಿಜವಾದ ಕಥೆ ಏನು?
92 ವರ್ಷದ ಮನಮೋಹನ್ ಸಿಂಗ್ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಗುರುವಾರ ರಾತ್ರಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ನಿಧನರಾದರು. ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಎಂದು ಪರಿಗಣಿಸಲ್ಪಟ್ಟ ಮನಮೋಹನ್ ಸಿಂಗ್ ಅವರು 2004ರಿಂದ 2014ರ ಅವಧಿಯಲ್ಲಿ 10 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಗೌರವಾರ್ಥವಾಗಿ ದೇಶಾದ್ಯಂತ 7 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Sun, 29 December 24