ಕಾರ್ಡ್ನಿಂದ ಅತಿ ಎತ್ತರದ ಮನೆ ನಿರ್ಮಿಸಿ ಗಿನ್ನೆಸ್ ರೆಕಾರ್ಡ್ ಬರೆದ ಹದಿನೈದರ ಪೋರ
ತಮ್ಮ ವಿಭಿನ್ನವಾದ ಪ್ರತಿಭೆಯನ್ನು ಬಳಸಿಕೊಂಡು ಯಾರು ಕೂಡ ಮಾಡದ ಸಾಧನೆ ಮಾಡುವ ಮೂಲಕ ಕೆಲವರು ಗಿನ್ನೆಸ್ ದಾಖಲೆ ಬರೆಯುವುದನ್ನು ನೀವು ನೋಡಿರಬಹುದು. ಆದರೆ ಇದೀಗ ಹದಿನೈದು ವರ್ಷ ವಯಸ್ಸಿನ ಅರ್ನವ್ ಡಾಗಾ ಬಾಲಕನು ಕಾರ್ಡ್ ನಿಂದ ಅತೀ ಎತ್ತರದ ಮನೆಯನ್ನು ನಿರ್ಮಿಸಿ ಈಗಾಗಲೇ ಇರುವ ನಾಲ್ಕು ದಾಖಲೆಯನ್ನು ಬ್ರೇಕ್ ಮಾಡಿದ್ದಾನೆ. ಈ ಕುರಿತಾದ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಹುಡುಗನ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ.

ಕೋಲ್ಕತ್ತಾ, ಮೇ 27: ಈಗಿನ ಕಾಲದಲ್ಲಿ ಮಕ್ಕಳು ತುಂಬಾನೇ ಬುದ್ಧಿವಂತರು. ತಮ್ಮ ಅಸಾಮಾನ್ಯ ಪ್ರತಿಭೆಯಿಂದ ಎಲ್ಲರೂ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತಹ ಸಾಧನೆಗಳನ್ನು ಮಾಡುತ್ತಾರೆ. ಆದರೆ ಇದಕ್ಕೆ ಉದಾಹರಣೆಯಂತಿದ್ದಾನೆ ಈ ಕೋಲ್ಕತ್ತಾ (Kolkata) ದ ಹದಿನೈದರ ಪೋರ. ಅರ್ನವ್ ಡಾಗಾ (Anarv Daga) ಎನ್ನುವ ಬಾಲಕನು ಕಾರ್ಡ್ ಗಳಿಂದ ಅತೀ ಎತ್ತರದ ಮನೆ ನಿರ್ಮಿಸುವ ಮೂಲಕ ಈ ಹಿಂದಿನ ನಾಲ್ಕು ಗಿನ್ನೆಸ್ ವಿಶ್ವ ದಾಖಲೆ (Guinnes World Record) ಯನ್ನು ಮುರಿದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಹೆಸರಿನ ಖಾತೆಯಲ್ಲಿ ಅರ್ನವ್ ಡಾಗಾ ಎಂಬ ಬಾಲಕನ ಸಾಧನೆಯ ಕುರಿತಾದ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಈ ಹುಡುಗನೊಬ್ಬನು 24 ಗಂಟೆಯಲ್ಲಿ ನಾಲ್ಕು ದಾಖಲೆಯನ್ನು ಮುರಿಯುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾನೆ. ಕಳೆದ ಅಕ್ಟೋಬರ್ 14 ರಂದು ಅನರ್ವ್ ಡಾಗಾ ಕಾರ್ಡ್ ನಿಂದ ಅತಿ ಎತ್ತರದ ಮನೆ ನಿರ್ಮಿಸಿ ವಿಶ್ವ ದಾಖಲೆ ಪುಟಕ್ಕೆ ಸೇರ್ಪಡೆಯಾಗಿದ್ದಾನೆ ಎಂದು ಬರೆದುಕೊಳ್ಳಲಾಗಿದೆ. ಯಾವುದೇ ಗಮ್ ಹಾಗೂ ಟೇಪ್ ಬಳಸದೇ ಸರಿಸುಮಾರು 1.43 ಲಕ್ಷ ಕಾರ್ಡ್ ಗಳನ್ನು ಬಳಸಿ 40 ಅಡಿ ಉದ್ದದ ಮನೆಯನ್ನು ನಿರ್ಮಿಸಿದ್ದಾನೆ.
ಇದನ್ನೂ ಓದಿ : ಮಲಗಿದ್ದವನ ಮೈ ಮೇಲೆ ಹರಿದಾಡಿದ ದೈತ್ಯಾಕಾರದ ಕಾಳಿಂಗ ಸರ್ಪ, ಎದೆ ಝಲ್ ಎನಿಸುವ ದೃಶ್ಯ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
View this post on Instagram
ಈ ಪೋಸ್ಟ್ ವೊಂದು ಹದಿನೇಳು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ಬಾಲಕನ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ಎಲ್ಲರಿಗೂ ಮಾದರಿ ಈ ಹದಿನೈದರ ಪೋರ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ. ಇನ್ನೊಬ್ಬರು, ನಿಮ್ಮ ಏಕಾಗ್ರತೆ, ಅಂತಿಮವಾಗಿ ನಿಮ್ಮ ಗೆಲುವು ನಿಜಕ್ಕೂ ಅದ್ಭುತವಾಗಿದೆ ಎಂದಿದ್ದಾರೆ. ಮತ್ತೊಬ್ಬರು,ಭಾರತೀಯರು ಎಲ್ಲದರಲ್ಲಿಯೂ ಮ್ಯಾಜಿಕ್ ಮಾಡುತ್ತಾರೆ ಎಂದು ಭಾರತೀಯ ಪ್ರತಿಭೆಗಳನ್ನು ಹೊಗಳಿದ್ದಾರೆ. ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








