ಭಾರತದ ಅತ್ಯಂತ ದುಬಾರಿ ಹೋಟೆಲ್; ಒಂದು ರಾತ್ರಿಗೆ ಕೇವಲ ರೂ. 29 ಲಕ್ಷ
Rajasthan : ಐಷಾರಾಮಿ ಅನುಭವ ನಿಮಗೆ ಸಿಗಬೇಕೆಂದರೆ ಜೈಪುರದಲ್ಲಿರುವ ರಾಜ್ ಪ್ಯಾಲೇಸ್ ಹೋಟೆಲ್ಲಿನ 'ಮಹಾರಾಜಾಸ್ ಪೆವಿಲಿಯನ್ ಸೂಟ್’ ಇಂದೇ ಬುಕ್ ಮಾಡಿ.
Viral News : ಲೌಕಿಕದಲ್ಲಿ ಹೆಚ್ಚು ಆಸಕ್ತಿ ಇರುವವರಿಗೆ ಐಷಾರಾಮಿ ಅನುಭವವನ್ನು ಹೊಂದಬೇಕೆಂಬ ತುಡಿತ ಇದ್ದೇ ಇರುತ್ತದೆ. ಅವರವರ ಜೇಬು ಎಷ್ಟು ಗಟ್ಟಿಯಾಗಿದೆ ಎನ್ನುವುದರ ಮೇಲೆ ಅದು ಅವಲಂಬಿಸಿರುತ್ತದೆ. ಹೋಟೆಲ್ಗಳ ವಿಷಯಕ್ಕೇ ಬನ್ನಿ. ಭಾರತದಲ್ಲಿ ಅತ್ಯಂತ ದುಬಾರಿ ಐಷಾರಾಮಿ ಹೋಟೆಲ್ ಯಾವುದು ಗೊತ್ತೇ? ಅಲ್ಲಿಯ ವಿಶೇಷ ಕೋಣೆಗೆ ದಿನಕ್ಕೆ ಎಷ್ಟು ಬಾಡಿಗೆ ಎನ್ನುವುದೇ ತಿಳಿದಿದೆಯೇ? ಅಲ್ಲದೆ ಈ ಬೇಸಿಗೆಯಲ್ಲಿ ಮಹಾರಾಜರ ಜೀವನಶೈಲಿಯ ಒಂದು ಸಣ್ಣ ಅನುಭವ ನಿಮಗೆ ಬೇಕೆನ್ನಿಸುತ್ತಿದ್ದಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿಕೊಂಡು ಪ್ರಯಾಣಕ್ಕೆ ಸಿದ್ಧರಾಗಿ!
ಅಸಾಮಾನ್ಯ ಶೈಲಿಯ ಸಾಂಸ್ಕೃತಿಕ ಪ್ರವಾಸ, ತಲ್ಲೀನಗೊಳಿಸುವ ಶ್ರೀಮಂತ ಪರಂಪರೆ, ಅದ್ಭುತ ನೋಟಗಳು, ಇವೆಲ್ಲವುಗಳ ಜೊತೆಗೆ ಸುಖ ಹಾಗೂ ವಿಲಾಸ ಬಯಸುವ ಹಣವುಳ್ಳ ಪ್ರವಾಸಿಗಳಿಗೆ, ವಿಶೇಷತಃ ವಿದೇಶೀಯರಿಗೆ, ರಾಜಸ್ಥಾನ ಪ್ರಮುಖ ಆಕರ್ಷಣೆಯಾಗಿ ಬೆಳೆದಿದೆ. ಇಲ್ಲಿ ರಜಪೂತರ ಕಾಲದ ಲೆಕ್ಕವಿಲ್ಲದಷ್ಟು ಅರಮನೆಗಳನ್ನು ಬೇರೆಲ್ಲೂ ದಕ್ಕದ ಸುಖ ಸುಪ್ಪತ್ತಿಗೆಗಳುಳ್ಳ ದೊಡ್ಡ ಪಂಚತಾರಾ ಹೋಟೆಲ್ಲುಗಳನ್ನಾಗಿ ಪರಿವರ್ತಿಸಲಾಗಿದೆ. ಹೀಗಿರುವಾಗ ಅತ್ಯಂತ ತುಟ್ಟಿಯ ಹೋಟೆಲ್ ಈ ನೆಲದಲ್ಲಿ ಇರುವುದು ಅಚ್ಚರಿಯ ಸಂಗತಿಯೇನಲ್ಲವಲ್ಲ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
ಅದರ ಅನುಭವ ನಿಮಗೆ ಸಿಗಬೇಕೆಂದರೆ ಜೈಪುರದಲ್ಲಿರುವ ರಾಜ್ ಪ್ಯಾಲೇಸ್ ಹೋಟೆಲ್ಲಿನ ‘ಮಹಾರಾಜಾಸ್ ಪೆವಿಲಿಯನ್ ಸೂಟ್’ ಇಂದೇ ಬುಕ್ ಮಾಡಿ. ಇದಕ್ಕೆ ನಾವು ಸೂಟ್ ಅಥವಾ ಕೋಣೆ ಎಂದು ವಾಡಿಕೆಯಲ್ಲಿ ಅಂದರೂ, ವಾಸ್ತವದಲ್ಲಿ ಅದೊಂದು ನಾಕು ಮಜಲಿನ ಮನೆ! ಪ್ರತಿ ಮಹಡಿಯಲ್ಲೂ ಒಂದೊಂದು ಮಲಗುವ ಕೋಣೆ ಇದೆ. ಅಲ್ಲಿನ ಮಾಸ್ಟರ್ ಬೆಡ್‌ರೂಮ್‌ನಲ್ಲಿ ಠಾಕೂರ್ ಸಾಹೇಬರ ಸಿಂಹಾಸನವಿದೆ ಹಾಗೂ ಬಂಗಾರದಿಂದ ಸಿಂಗರಿಸಿರುವ ಗೋಡೆಗಳಿವೆ.
ಇದನ್ನೂ ಓದಿ : Mothers Day: ಒಂದೇ ವಿಮಾನದಲ್ಲಿ ತಾಯಿಮಗಳು, ಗಗನಸಖಿ ಮಗಳು ಅಮ್ಮನ ಬಗ್ಗೆ ಹೇಳಿದ್ದೇನು?
ಇದರ ದಿನದ ಬಾಡಿಗೆ ಕೇವಲ ರೂ 29 ಲಕ್ಷ. ಸುಮಾರು 300 ವರ್ಷಗಳ ಹಿಂದೆ ಜೈಪುರದ ಅರಸರ ನಿವಾಸವಾಗಿದ್ದ ಈ ಅರಮನೆಯ ಕೋಣೆಗಳಲ್ಲಿ ನೀವು ಬಂಗಾರದ ಪೀಠೋಪಕರಣಗಳು, ಖಾಸಗಿ ಈಜುಗೊಳ, ಖಾಸಗಿ ಮ್ಯೂಸಿಯಮ್, ವೈಭವೋಪೇತ ಊಟದ ಕೋಣೆ, ಮಹಡಿಯ ಮೇಲೆ ಉದ್ಯಾನ, ನಿಮಗಾಗಿಯೇ ಜ್ಯೋತಿಷಿ, ಸ್ಪಾ, ನುರಿತ ಬಟ್ಲರ್, ಜಗತ್ತಿನ ಅತ್ಯಂತ ವಿಶೇಷ ಪೇಯಗಳು… ಇವನ್ನೆಲ್ಲಾ ಅನುಭವಿಸಿ ಆ ಕೆಲವು ಕ್ಷಣಗಳಾದರೂ ರಾಜಪದವಿ ಪಡೆಯುತ್ತೀರಿ!
ಏನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:13 pm, Mon, 15 May 23