ISRO Scientist Salary 2024: ಇಸ್ರೋ ವಿಜ್ಞಾನಿಗಳಿಗೆ ಸಿಗುವ ತಿಂಗಳ ಸಂಬಳ ಎಷ್ಟು? ಇಲ್ಲಿದೆ ಮಾಹಿತಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾರತದ ಹೆಮ್ಮೆ ಅಂದ್ರೆ ತಪ್ಪಾಗಲಾರದು. ತನ್ನ ಸಾಧನೆಯ ಮೂಲಕವೇ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿರುವ ಇಸ್ರೋದಲ್ಲಿ ಕಾರ್ಯ ನಿರ್ವಹಿಸುವ ವಿಜ್ಞಾನಿಗಳಿಗೆ ಎಷ್ಟು ಸಂಬಳ ಇರಬಹುದು, ಅವರು ತಿಂಗಳಿಗೆ ಎಷ್ಟು ಸಂಪಾದನೆ ಮಾಡಬಹುದು ಎಂಬ ಕುತೂಹಲ ಹಲವರಲ್ಲಿ ಇದ್ದೇ ಇರುತ್ತದೆ. ನಿಮಗೂ ಕೂಡಾ ಈ ಕುತೂಹಲ ಇದ್ಯಾ? ಫ್ರೆಶರ್ಸ್‌ಗಳಿಂದ ಹಿಡಿದು ಉನ್ನತ ತಜ್ಞರ ವರೆಗೆ ಇಸ್ರೋದ ವಿಜ್ಞಾನಿಗಳ ತಿಂಗಳ ಸಂಬಳ ಎಷ್ಟು ಎಂಬ ಮಾಹಿತಿ ಇಲ್ಲಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾರತದ ಹೆಮ್ಮೆ ಅಂತಾನೇ ಹೇಳಬಹುದು. ಜೊತೆಗೆ ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್ ಸೇರಿದಂತೆ ಅನೇಕ ಸಾಧನೆಗಳಿಂದ ಇಸ್ರೋ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಯಶಸ್ಸಿನ ಹಿಂದೆ ಇಸ್ರೋದ ವಿಜ್ಞಾನಿಗಳ ಪಾತ್ರ ಮಹತ್ತರವಾದದ್ದು. ಇಸ್ರೋದ ಯಶಸ್ಸಿನ ಕಥೆ, ವಿಜ್ಞಾನಿಗಳ ಕಾರ್ಯತಂತ್ರ ಇವೆಲ್ಲವನ್ನು ನೋಡಿದಾಗ ಹೆಚ್ಚಿನ ಯುವ ಮನಸ್ಸುಗಳು ನಾವು ಕೂಡಾ ಈ ಹೆಮ್ಮೆಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಬೇಕೆಂದು ಬಯಸುತ್ತಾರೆ. ಅಷ್ಟೇ ಅಲ್ಲದೆ ಹಲವರಿಗೆ ಇಸ್ರೋದಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನಿಗಳು, ಇಂಜಿನಿಯರ್‌ಗಳಿಗೆ ಎಷ್ಟು ಸಂಬಳ ಇರಬಹುದು ಎಂಬ ಕುತೂಹಲವೂ ಇದೆ. ಹಾಗಾದ್ರೆ ಇಸ್ರೋ ವಿಜ್ಞಾನಿಗಳು ಎಷ್ಟು ಸಂಪಾದನೆ ಮಾಡ್ತಾರೆ, ಫ್ರೆಶರ್ಸ್‌ಗಳಿಂದ ಹಿಡಿದು ಉನ್ನತ ತಜ್ಞರ ವರೆಗೆ ಇಸ್ರೋದ ವಿಜ್ಞಾನಿಗಳ ತಿಂಗಳ ಸಂಬಳ ಎಷ್ಟು ಈ ಎಲ್ಲದರ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಇಸ್ರೋ ವಿಜ್ಞಾನಿಗಳ ಒಂದು ತಿಂಗಳ ಸಂಬಳ ಎಷ್ಟು?
7 ನೇ ವೇತನ ಆಯೋಗದ ಅಡಿ ಇಸ್ರೋ ವಿಜ್ಞಾನಿಗಳ ಮೂಲ ವೇತನವು 56,100 ರೂ. ಗಳಿಂದ ಪ್ರಾರಂಭವಾಗುತ್ತದೆ. ಇಲ್ಲಿ ವಿಜ್ಞಾನಿಗಳಿಗೆ ಅವರ ಹುದ್ದೆಗೆ ಅನುಗುಣವಾಗಿ ವಿವಿಧ ರೀತಿಯಲ್ಲಿ ವೇತನ ನೀಡಲಾಗುತ್ತದೆ. ಮೂಲ ವೇತನದ ಜೊತೆಗೆ ಇಸ್ರೋ ವಿಜ್ಞಾನಿಗಳು ತುಟ್ಟಿ ಭತ್ಯೆ (ಡಿಎ), ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಮತ್ತು ಪ್ರಯಾಣ ಭತ್ಯೆಗಳನ್ನು ಸಹ ಪಡೆಯುತ್ತಾರೆ.
ಇಸ್ರೋ ವಿಜ್ಞಾನಿ ವೇತನ ರಚನೆ:
• ಮೂಲ ವೇತನ- ರೂ. 56,100
• ತುಟ್ಟಿಭತ್ಯೆ – ರೂ. 6732
• ಮನೆ ಬಾಡಿಗೆ ಭತ್ಯೆ – ರೂ. 13464
• ಸಾರಿಗೆ ಭತ್ಯೆ – ರೂ. 7200
• ISRO ವಿಜ್ಞಾನಿಗಳ ಒಟ್ಟು ಸಂಬಳ – ರೂ. 84360
ಇಲ್ಲಿ ವೈಜ್ಞಾನಿಕ ಸಹಾಯಕರಿಗೆ ಮಾಸಿಕ 44,900 ರೂ.ನಿಂದ 1,42,400 ರೂ., ಬಿ ಶ್ರೇಣಿ ತಂತ್ರಜ್ಞರಿಗೆ 21,000 ರಿಂದ 69,100 ರೂ., ವಿಜ್ಞಾನಿ/ಇಂಜಿನಿಯರ್ (SC) 56,100 – 1,77,500 ರೂ, ವಿಜ್ಞಾನಿ/ಇಂಜಿನಿಯರ್ (ಎಸ್.ಡಿ.)ಗೆ 67,700 – 2,08,700 ರೂ. ವರೆಗೆ ಸಂಬಳವನ್ನು ನೀಡಲಾಗುತ್ತದೆ. ವಿಜ್ಞಾನಿ/ಇಂಜಿನಿಯರ್ ಆಗಿ ಆಯ್ಕೆಯಾದ ಫ್ರೆಶರ್ಸ್‌ಗಳಿಗೆ ತಿಂಗಳಿಗೆ 56,100 ರೂ. ಸಂಬಳವನ್ನು ನೀಡಲಾಗುತ್ತದೆ. ನಂತರ ಅವರ ಅನುಭವ ಮತ್ತು ಪ್ರಮೋಷನ್ ಆಧಾರದ ಮೇರೆಗೆ ಸಂಬಳವನ್ನು ಹೆಚ್ಚಿಸಲಾಗುತ್ತದೆ.
ಇದನ್ನೂ ಓದಿ: ನಾನು ನಿನ್ನನ್ನು ಬಹಳ ಸಂತೋಷದಿಂದ ಕಿಡ್ನ್ಯಾಪ್ ಮಾಡಲು ಬಯಸುತ್ತೇನೆ; ಮಹಿಳೆಗೆ ಆತಂಕಕಾರಿ ಸಂದೇಶ ಕಳುಹಿಸಿದ ಉಬರ್ ಡ್ರೈವರ್
ಇಸ್ರೋದಲ್ಲಿ ವಿಜ್ಞಾನಿಯಾಗಲು ಬೇಕಾಗಿರುವ ಅರ್ಹತೆ:
ಇಸ್ರೋದಲ್ಲಿ ವಿಜ್ಞಾನಿಯಾಗಲು ಬಯಸುವವರು 12 ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಲ್ಲಿ ಕನಿಷ್ಠ ಶೇಕಡಾ 60% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಲ್ಲದೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ B.Sc. ಮತ್ತು ನಾಲ್ಕು ವರ್ಷಗಳ B.Tech, ಹಾಗೂ PhD ಕೋರ್ಸ್ ಅನ್ನು ಸಹ ಪೂರ್ಣಗೊಳಿಸಿರಬೇಕು.
ಖಗೋಳಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತದ ವಿಷಯವನ್ನು ಒಳಗೊಂಡು ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಥವಾ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಮಾಡಿರುವ ಅಭ್ಯರ್ಥಿಗಳು ಇಸ್ರೋದಲ್ಲಿ ವಿಜ್ಞಾನಿಯಾಗಲು ಅರ್ಹರಾಗಿರುತ್ತಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ