Video: ಭಾರತೀಯರಿಗೆ ಉದ್ಯೋಗ ನೀಡಿದ ಪುಣ್ಯಾತ್ಮ ಈ ವ್ಯಕ್ತಿ, 51 ವರ್ಷದ ಬಳಿಕ ಕೇರಳಕ್ಕೆ ಎಂಟ್ರಿ, ಹೇಗಿತ್ತು ನೋಡಿ ಸ್ವಾಗತ
ಒಳ್ಳೆಯ ಗುಣಗಳನ್ನು ಹೊಂದಿರುವ ಜನರನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಕಳೆದ ಐದು ದಶಕಗಳಿಂದ ಯುಎಇಯಲ್ಲಿ ನೆಲೆಸಿದ್ದು ಅನೇಕ ಭಾರತೀಯರಿಗೆ ಉದ್ಯೋಗ ಸಿಗಲು ಸಹಾಯ ಮಾಡಿದ್ದ ವ್ಯಕ್ತಿ ತಯ್ಯಿಲ್ ಅಬ್ದುಲ್ ಗಫೂರ್ ಭಾರತಕ್ಕೆ ಮರಳಿದ್ದಾರೆ. ಗಫೂರ್‌ಗೆ ಭವ್ಯ ಸ್ವಾಗತ ನೀಡಲಾಗಿದ್ದ ಅದ್ಭುತ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕೇರಳ, ಆಗಸ್ಟ್ 18: ಈಗಿನ ಕಾಲದಲ್ಲಿ ಒಳ್ಳೆತನ, ಒಳ್ಳೆಯ ವ್ಯಕ್ತಿಗಳು ಸಿಗುವುದೇ ವಿರಳ. ಆದರೆ ಪರೋಪಕಾರ ಹಾಗೂ ಸಹಾಯ ಮಾಡುವ ಗುಣಗಳಿಂದ ಗುರುತಿಸಿಕೊಂಡವರು ಈ ತಯ್ಯಿಲ್ ಅಬ್ದುಲ್ ಗಫೂರ್ (Thayyil Abdul Gafoor). ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಉದ್ಯೋಗ ವೀಸಾ ಪಡೆಯಲು ಭಾರತೀಯರಿಗೆ ಸಹಾಯ ಮಾಡುತ್ತಿದ್ದ ಹಾಗೂ ತನ್ನ ಊರಿನ ಲಕ್ಷಾನುಗಟ್ಟಲೇ ಜನರಿಗೆ ಉದ್ಯೋಗಗಳಿಗೆ (Job) ವೈಯಕ್ತಿಕವಾಗಿ ಮಾರ್ಗದರ್ಶನ ನೀಡಿದ್ದ ಕೇರಳದ ವ್ಯಕ್ತಿಯಾದ ಅಬ್ದುಲ್ ಗಫೂರ್ ಅವರು ತಮ್ಮ ಹುಟ್ಟೂರಿಗೆ ಮರಳಿದ್ದಾರೆ. ತಮ್ಮ ಸಹಾಯ ಮಾಡುವ ಗುಣಗಳಿಂದ ಗುರುತಿಸಿಕೊಂಡಿರುವ ಈ ವ್ಯಕ್ತಿಗೆ ಕೇರಳದ ಜನರಿಂದ ಭವ್ಯ ಸ್ವಾಗತ ದೊರತಿದ್ದು ಈ ಸಂತೋಷದ ಕ್ಷಣದ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
64 ವರ್ಷದ ತಯ್ಯಿಲ್ ಅಬ್ದುಲ್ ಗಫೂರ್ ಇತರರಿಗೆ ಉದ್ಯೋಗಗಳನ್ನು ಗಳಿಸಿಕೊಡುವಲ್ಲಿ ಎಲ್ಲರಿಗೂ ಬಹಳ ಹತ್ತಿರವಾಗಿದ್ದಾರೆ ಎನ್ನಲಾಗಿದೆ. ಗಲ್ಫ್ ನ್ಯೂಸ್ ಪ್ರಕಾರ ಗಫೂರ್ ಅವರು ತಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಆಯೋಜಿಸಿದ್ದ ಪಾರ್ಟಿಯ ನಂತರದಲ್ಲಿ ಅಂದರೆ ಕಳೆದ ವಾರ ದುಬೈಗೆ ವಿದಾಯ ಹೇಳಿದರು ಎನ್ನಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಹುಟ್ಟೂರಿನಲ್ಲಿ ಅಬ್ದುಲ್ ಗಫೂರ್‌ಗೆ ಅದ್ದೂರಿ ಸ್ವಾಗತ
siyotechtravel by shihabu ಹೆಸರಿನ ಖಾತೆಯಲ್ಲಿ ಭವ್ಯ ಸ್ವಾಗತದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಅವರಿಗೆ ಭವ್ಯ ಸ್ವಾಗತವೊಂದು ಕಾದಿರುವುದನ್ನು ಕಾಣಬಹುದು. ಆತ್ಮೀಯರು ಘೋಷಣೆಗಳನ್ನು ಕೂಗುತ್ತಾ ಆತ್ಮೀಯವಾಗಿ ಅಬ್ದುಲ್ ಅವರನ್ನು ಭರ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರನ್ನು ಮಲಪ್ಪುರಂ ಜಿಲ್ಲೆಯ ಅವರ ಗ್ರಾಮವಾದ ಮಾರುತಿಂಚಿರಾಕ್ಕೆ ಕರೆದೊಯ್ಯಲು ಸರ್ಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ ಬಸ್ ಅನ್ನು ಬಾಡಿಗೆಗೆ ಪಡೆಯಲಾಗಿದೆ. ಗಫೂರ್ ಬಸ್ಸಿನಲ್ಲಿ ತಮ್ಮ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಧ್ವನಿವರ್ಧಕಗಳ ಮೂಲಕ ನಮ್ಮ ಗಫೂರ್ ಬಂದಿದ್ದಾರೆ ಎನ್ನುವ ಘೋಷಣೆಯೊಂದು ಕೇಳಿ ಬಂದಿದ್ದು, ಆ ಬಳಿಕ ಸ್ಥಳೀಯ ಅಧಿಕಾರಿಗಳು ಮತ್ತು ನಿವಾಸಿಗಳು ಭಾಗವಹಿಸಿದ್ದ ಸಾರ್ವಜನಿಕ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
ಗಲ್ಫ್ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ಭವ್ಯ ಸ್ವಾಗತದಿಂದ ತಾವು ಭಾವುಕರಾಗಿದ್ದೇವೆ. ಇದೆಲ್ಲವೂ ದುಬೈನಿಂದ. ದುಬೈನ ಈ ಔದಾರ್ಯದಿಂದಾಗಿ ನಾನು ಎಂದಿಗೂ ಊಹಿಸದ ಎತ್ತರವನ್ನು ತಲುಪಿದ್ದೇನೆ. ನನ್ನಿಂದಾಗಿ ಯಾರ ಜೀವನವಾದರೂ ಬದಲಾಗಿದ್ದರೆ, ಅದೆಲ್ಲವೂ ದುಬೈನಿಂದಾಗಿ. ನನಗೆ ಮಾತ್ರವಲ್ಲ, ಲಕ್ಷಾಂತರ ಭಾರತೀಯರಿಗೆ, ವಿಶೇಷವಾಗಿ ಕೇರಳದವರಿಗೆ ಜೀವನೋಪಾಯವನ್ನು ಒದಗಿಸಿದ್ದಕ್ಕಾಗಿ ದುಬೈ ಮತ್ತು ಯುಎಇಗೆ ನಾನು ಯಾವಾಗಲೂ ಕೃತಜ್ಞನಾಗಿದ್ದೇನೆ. ಯುಎಇಯನ್ನು ತಮ್ಮ ಮನೆ ಎಂದು ಕರೆಯುತ್ತಿರುವುದು ನಾಲ್ಕನೇ ತಲೆಮಾರಿನವರು. ನಾನು ಇಲ್ಲಿಯವರೆಗೆ ಇತರರಿಗೆ ಸಹಾಯ ಮಾಡಲು ತಮ್ಮ ಜೀವನವನ್ನು ಕಳೆದಿದ್ದೇನೆ. ಈಗ ಕೇರಳದ ಜೀವನ ಕಟ್ಟಿಕೊಳ್ಳುವ ಸಮಯ ಬಂದಿದೆ ಎಂದಿದ್ದಾರೆ.
ಇದನ್ನೂ ಓದಿ: Video: ಮೂರು ತಿಂಗಳು ಭಾರತದಲ್ಲಿ ಸುತ್ತಾಟ, ಇಲ್ಲಿಯೇ ಶಾಶ್ವತವಾಗಿ ಉಳಿದ ವಿದೇಶಿ ದಂಪತಿ
ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ನಿಮಗೊಂದು ನನ್ನ ಸಲಾಂ ಎಂದಿದ್ದಾರೆ. ಮತ್ತೊಬ್ಬರು ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಇರುವುದೇ ಅಪರೂಪ, ನಿಮ್ಮಿಂದ ಇನ್ನು ಅನೇಕ ಜನರಿಗೆ ಉಪಕಾರ ಆಗಲಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ಸ್ವಾಗತ ಈ ವ್ಯಕ್ತಿಗಳಿಗೆ ಸಿಗಲೇಬೇಕು. ಇದಕ್ಕೂ ಈ ವ್ಯಕ್ತಿಯು ಅರ್ಹನಾಗಿದ್ದಾರೆ ಎಂದು ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:59 am, Mon, 18 August 25








