Lottery: ಮಕ್ಕಳ ಜನ್ಮದಿನ ಸಂಖ್ಯೆಗಳಿದ್ದ ಲಾಟರಿಗೆ 33 ಕೋಟಿ ರೂ ಜಾಕ್ಪಾಟ್; 19 ಮಂದಿ ಜೊತೆ ಹಣ ಹಂಚಿಕೊಂಡ ನಿಸ್ವಾರ್ಥಿ
Big Ticket Abu Dhabi Lottery: ಯುಎಇಯಲ್ಲಿರುವ ಭಾರತ ಮೂಲದ ರಾಜೀವ್ ಆರಿಕ್ಕಟ್ಟ ಎಂಬ ವ್ಯಕ್ತಿ ಬಿಗ್ ಟಿಕೆಟ್ ಅಬುಧಾಬಿ ಲಕ್ಕಿ ಡ್ರಾನಲ್ಲಿ 33 ಕೋಟಿ ರೂ ಜಾಕ್ಪಾಟ್ ಹೊಡೆದಿದ್ದಾರೆ. ಅವರ ಇಬ್ಬರು ಮಕ್ಕಳ ಜನ್ಮದಿನಗಳ ಸಂಖ್ಯೆ ಇರುವ ಲಾಟರಿ ಟಕೆಟ್ಗೆ ಬಹುಮಾನ ಸಿಕ್ಕಿದೆ. ಈ ಲಾಟರಿ ಹಣವನ್ನು ತಾವೊಬ್ಬರೇ ಪಡೆದುಕೊಳ್ಳದೇ ತಮ್ಮ ಗುಂಪಿನ ಎಲ್ಲಾ 19 ಮಂದಿ ಜೊತೆ ಸಮಾನವಾಗಿ ಹಂಚಿಕೊಳ್ಳಲು ರಾಜೀವ್ ನಿರ್ಧರಿಸಿದ್ದಾರೆ.

ಹಣ ಎಂದರೆ ಹೆಣವೂ ಬಾಯಿ ಬಿಡುತ್ತೆ ಅಂತಾರೆ. ಆದರೆ, ಅರಬ್ ನಾಡಿನಲ್ಲಿ ವಾಸ ಇರುವ ಭಾರತ ಮೂಲದ ವ್ಯಕ್ತಿಯೊಬ್ಬರು ತಮಗೆ ಬಂದ 33 ಕೋಟಿ ರೂ ಲಾಟರಿ ಜಾಕ್ಪಾಟ್ ಹಣವನ್ನು ತನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಗುಂಪಿನೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ಈ ವ್ಯಕ್ತಿಯ ಹೆಸರು ರಾಜೀವ್ ಆರಿಕ್ಕಟ್ಟ (Rajeev Arikkatt). ಬಿಗ್ ಟಿಕೆಟ್ ಅಬುಧಾಬಿ ವಾರದ ಲಾಟರಿ ಡ್ರಾನಲ್ಲಿ (Big Ticket Abu Dhabi Weekly Draw) 15 ಮಿಲಿಯನ್ ಡಿರ್ಹಮ್ (ಸುಮಾರು 33 ಕೋಟಿ ರೂ) ಮೊತ್ತದ ಜಾಕ್ಪಾಟ್ ಗೆದ್ದಿದ್ದಾರೆ. ಖರೀದಿಸಿದ ಟಿಕೆಟ್ಗಳಿಗೆ ಉಚಿತವಾಗಿ ಸಿಕ್ಕ ಹೆಚ್ಚುವರಿ ಟಿಕೆಟ್ ಇವರಿಗೆ ಈ ದೊಡ್ಡ ಗೆಲುವು ತಂದುಕೊಟ್ಟಿದೆ. ಆರ್ಕಿಟೆಕ್ಚರ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ರಾಜೀವ್ ತಮ್ಮ ಜೀವನದಲ್ಲಿ ಲಾಟರಿ ಗೆದ್ದದ್ದು ಇದೇ ಮೊದಲು.
ಇಬ್ಬರು ಮಕ್ಕಳ ಜನ್ಮದಿನದ ಸಂಖ್ಯೆಗಳಿದ್ದ ಲಾಟರಿ ಟಿಕೆಟ್…
ರಾಜೀವ್ ಆರಿಕ್ಕಟ್ಟ ಅವರಿಗೆ ಬಿಗ್ ಟಿಕೆಟ್ ಲಾಟರಿ ಗೆಲುವು ತಂದುಕೊಟ್ಟ ಟಿಕೆಟ್ನ ಸಂಖ್ಯೆ 037130. ರಾಜೀವ್ ಅವರ ಐದು ಮತ್ತು ಎಂಟು ವರ್ಷದ ಇಬ್ಬರು ಮಕ್ಕಳ ಜನ್ಮದಿನಾಂಕಗಳಾದ 7 ಮತ್ತು 13 ಅಂಕಿ ಈ ಸಂಖ್ಯೆಯಲ್ಲಿ ಒಳಗೊಂಡಿವೆ.
ಇದನ್ನೂ ಓದಿ: ಈ ದೇಶದಲ್ಲಿ ಮಗು ಮಾಡಿಕೊಂಡ್ರೆ ಸರ್ಕಾರದಿಂದ ಸಿಗುತ್ತೆ ಲಕ್ಷ ಲಕ್ಷ ದುಡ್ಡು
ಮಕ್ಕಳ ಜನ್ಮ ದಿನಾಂಕಗಳಿರುವ ಸಂಯೋಜನೆಯ ನಂಬರ್ ಇರುವ ಟಿಕೆಟ್ನ ಪ್ರಯೋಗ ಮಾಡಿದ್ದು ಇದೇ ಮೊದಲಲ್ಲ. ಎರಡು ತಿಂಗಳ ಹಿಂದೆ ಅವರು ಮಾಡಿದ ಇಂಥ ಪ್ರಯೋಗವೊಂದರಲ್ಲಿ ಲಾಟರಿ ಗೆಲುವು ಸ್ವಲ್ಪದರಲ್ಲಿ ತಪ್ಪಿ ಹೋಗಿತ್ತು.
19 ಮಂದಿ ಜೊತೆ ಹಣ ಹಂಚಿಕೊಳ್ಳುವ ಪ್ರಾಮಾಣಿಕ ರಾಜೀವ್
ರಾಜೀವ್ ಆರಿಕ್ಕಟ್ಟ ಅವರು ತಾವೊಬ್ಬರೇ ಟಿಕೆಟ್ ಕೊಂಡಿದ್ದಲ್ಲ. ಇವರದ್ದೇ ಒಂದು ಗುಂಪು ಇದೆ. ಆಫೀಸ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುವವರು, ಕಾರ್ಮಿಕರು ಮೊದಲಾದ ಭಿನ್ನಭಿನ್ನ ಹಿನ್ನೆಲೆಯವರು ಈ ಗುಂಪಿನಲ್ಲಿದ್ದಾರೆ. 19 ಮಂದಿಯ ಈ ಗುಂಪಿನ ವತಿಯಿಂದ ರಾಜೀವ್ ಮತ್ತು ಅವರ ಪತ್ನಿ ಇಬ್ಬರೂ ಸೇರಿ ಎರಡು ಲಾಟರಿ ಟಿಕೆಟ್ ಖರೀದಿಸಿದ್ದರು. ಬಿಗ್ ಟಿಕೆಟ್ನಿಂದ ಇದಕ್ಕೆ ಹೆಚ್ಚುವರಿಯಾಗಿ ನಾಲ್ಕು ಉಚಿತ ಟಿಕೆಟ್ಗಳು ಗಿಫ್ಟ್ ಆಗಿ ಸಿಕ್ಕವು.
ಇದನ್ನೂ ಓದಿ: ಪ್ರೇಯಸಿಯ ನಿರ್ಧಾರದಿಂದ 78 ಕೋಟಿ ರೂ. ಕಳೆದುಕೊಂಡ ಯುವಕ
ಈ ನಾಲ್ಕು ಉಚಿತ ಟಿಕೆಟ್ಗಳ ಪೈಕಿ ಒಂದಕ್ಕೆ 33 ಕೋಟಿ ರೂ ಜಾಕ್ಪಾಟ್ ಹೊಡೆದಿದೆ. ಈ ಹಣವನ್ನು ತಾನೊಬ್ಬ ಮಾತ್ರವಲ್ಲ, ಗುಂಪಿನ ಎಲ್ಲಾ 19 ಜನರೊಂದಿಗೆ ಸಮಾನವಾಗಿ ಹಂಚಿಕೊಳ್ಳುತ್ತೇನೆ ಎಂದು ರಾಜೀವ್ ಆರಕ್ಕಟ್ಟ ಹೇಳುತ್ತಾರೆ. ಕೆಲ ಮಧ್ಯಮ ಕುಟುಂಬದವರೇ ಈ ಗುಂಪಿನಲ್ಲಿ ಹೆಚ್ಚಿದ್ದು, ಲಾಟರಿ ಗೆಲುವು ಅವರ ಅದೃಷ್ಟ ಬದಲಾಯಿಸಬಹುದು. ರಾಜೀವ್ ಕೂಡ 33 ಕೋಟಿ ರೂನಷ್ಟು ದೊಡ್ಡ ಮೊತ್ತ ಕಂಡು ಸ್ವಾರ್ಥಕ್ಕೆ ಬೀಳದೇ ಇತರರೊಂದಿಗೆ ಹಂಚಿಕೊಳ್ಳಲು ಮುಂದಾಗಿರುವುದು ನಿಜಕ್ಕೂ ಪ್ರಾಮಾಣಿಕತೆಗೆ ಮಾದರಿವ್ಯಕ್ತಿ ಎನಿಸಿದ್ದಾರೆ.
(ಗಮನಿಸಿ: ಲಾಟರಿ ಸೇರಿದಂತೆ ಯಾವುದೇ ರೀತಿಯ ಜೂಜು ಸಾಮಾಜಿಕ ಸ್ವಾಸ್ಥ್ಯಕ್ಕೆ ಸರಿಯಾದುದಲ್ಲ. ಲಾಟರಿಯಲ್ಲಿ ಗೆಲುವಿನ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಲಾಟರಿಯಿಂದ ಹಣ ಮಾಡಿದವರ ಸಂಖ್ಯೆಗಿಂತ, ಇದ್ದಬದ್ದ ಆಸ್ತಿ ಕಳೆದುಕೊಂಡವರ ಸಂಖ್ಯೆ ಬಹಳ ಹೆಚ್ಚು.)
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




