Viral: ಪ್ರೇಮಾನಂದ ಮಹಾರಾಜರಿಗೆ ಕಿಡ್ನಿ ದಾನ ಮಾಡಲು ಮುಂದೆ ಬಂದ ಮುಸ್ಲಿಂ ಯುವಕ
ಹಿಂದೂ ಸ್ವಾಮೀಜಿ ಪ್ರೇಮಾನಂದ ಮಹಾರಾಜ್ ಅವರ ಎರಡು ಮೂತ್ರ ಪಿಂಡಗಳು ವಿಫಲವಾಗಿದ್ದು, ಕಳೆದ ಕೆಲವು ವರ್ಷಗಳಿಂದ ಡಯಾಲಿಸಿಸ್‌ನಲ್ಲಿದ್ದಾರೆ. ಹೀಗಿರುವಾಗ ಮುಸ್ಲಿಂ ಯುವಕನು ತನ್ನ ಒಂದು ಮೂತ್ರಪಿಂಡವನ್ನು ಅವರಿಗೆ ದಾನ ಮಾಡಲು ಮುಂದೆ ಬಂದಿದ್ದಾನೆ. ಸ್ವಾಮೀಜಿಗೆ ಬರೆದ ಈ ಕುರಿತಾದ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಭೋಪಾಲ್, ಆಗಸ್ಟ್ 24: ಹಿಂದೂ ಸಂತ ಪ್ರೇಮಾನಂದ ಮಹಾರಾಜ (Premananda Maharaj) ಅವರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಜನ ಸಾಮಾನ್ಯರಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಪ್ರೇಮಾನಂದ ಮಹಾರಾಜ ಸ್ವಾಮೀಜಿಯವರನ್ನು ಅನುಸರಿಸುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಚಟುವಟಿಕೆಗಳಲ್ಲಿ ತೊಡಗಿರುವ ಅವರು, ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಇದೀಗ ಸ್ವಾಮೀಜಿಗೆ ಮಧ್ಯಪ್ರದೇಶದ 26 ವರ್ಷದ ಯುವಕ ಆರಿಫ್ ಖಾನ್ ಚಿಷ್ತಿ (Arif Khan Chishti) ತನ್ನ ಒಂದು ಕಿಡ್ನಿಯನ್ನು ನೀಡಲು ಮುಂದಾಗಿದ್ದಾನೆ. ಜಿಲ್ಲಾಧಿಕಾರಿ ಹಾಗೂ ಪ್ರೇಮಾನಂದ ಜಿ ಮಹಾರಾಜ್ ಪತ್ರ ಬರೆದು ಈ ಮೂಲಕ ತಾನು ತನ್ನ ಒಂದು ಕಿಡ್ನಿಯನ್ನು ದಾನ ಮಾಡುವುದಾಗಿ ತಿಳಿಸಿದ್ದಾನೆ. ಸ್ವಾಮೀಜಿಯ ಜೀವನ ಕ್ರಮ ಹಾಗೂ ಸಂದೇಶಗಳಿಂದ ಪ್ರೇರಿತರಾಗಿರುವುದು ಯುವಕನ ಈ ನಿರ್ಧಾರದ ಹಿಂದಿನ ಪ್ರಮುಖ ಕಾರಣ ಎನ್ನಲಾಗಿದೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಸ್ವಾಮೀಜಿ
ಹಿಂದೂ ಸಂತ ಪ್ರೇಮಾನಂದ ಮಹಾರಾಜರವರು ಕಿಡ್ನಿ ಸಮಸ್ಯೆಯಿರುವುದು ಎಲ್ಲರಿಗೂ ತಿಳಿದೇ ಇದೆ. ಕಳೆದ 20 ವರ್ಷಗಳಿಂದ ಪಾಲಿಸಿಸ್ಟಿಕ್ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದು, ಎರಡು ಕಿಡ್ನಿ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಹೀಗಾಗಿ ಡಯಾಲಿಸಿಸ್‌ನಲ್ಲಿದ್ದಾರೆ ಎನ್ನಲಾಗಿದೆ.
ಪತ್ರದಲ್ಲಿ ಪ್ರೇಮಾನಂದ ಅವರನ್ನು ಹೊಗಳಿದ ಯುವಕ
ಕಳೆದ ವರ್ಷ ಆರಿಫ್ ಖಾನ್ ಚಿಷ್ತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ. ಮೂವರು ಹಿರಿಯ ಸಹೋದರರು ಹಾಗೂ ತಂದೆಯ ಜೊತೆಗೆ ವಾಸವಿದ್ದು, ಸಲಹೆಗಾರರಾಗಿ ಆನ್‌ಲೈನ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಸ್ವಾಮೀಜಿಯವರಿಗೆ ಪತ್ರದಲ್ಲಿ ಕೆಲವು ವಿಚಾರಗಳನ್ನು ತಿಳಿಸಿದ್ದು, ಅವರನ್ನು ಹಾಡಿ ಹೊಗಳಿದ್ದಾನೆ. ನಾನು ಆನ್ಲೈನ್ ನಲ್ಲಿ ಭಾಷಣಗಳನ್ನು ಕೇಳಿ ಪ್ರಭಾವಿತನಾಗಿದ್ದೇನೆ. ನಾನು ರೀಲ್‌ನಲ್ಲಿ ಮಹಾರಾಜ್ ಜಿ ಅವರು ಅಜ್ಮೀರ್‌ನ ಖ್ವಾಜಾ ಮೊಯಿನುದ್ದೀನ್ ಚಿಷ್ತಿ ಮತ್ತು ಅಮೀರ್ ಖುಸ್ರೋ ಬಗ್ಗೆ ಆಡುವ ಮಾತುಗಳು ಬಹಳ ಗೌರವಯುತವಾಗಿ ಇರುತ್ತದೆ. ಅವರು ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ದ್ವೇಷದಲ್ಲೇ ಮುಳುಗಿರುವ ಜನರ ನಡುವೆ ಅವರು ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದಾರೆ. ಅವರ ಈ ಕೆಲಸ ಕಾರ್ಯಗಳನ್ನು ಇನ್ನು ಹೆಚ್ಚು ಮಾಡಲು ಅವರು ಇನ್ನಷ್ಟು ಕಾಲ ಬದುಕುವುದು ಬಹಳ ಮುಖ್ಯ. ಅವರು ಭಾರತದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಯ ಸಂಕೇತ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ; ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ
ಪತ್ನಿಯೊಂದಿಗೆ ಚರ್ಚಿಸಿ ಕಿಡ್ನಿ ದಾನಕ್ಕೆ ಮುಂದಾದ ಯುವಕ
2023ರಲ್ಲಿ ತಾಯಿಯನ್ನು ಕಳೆದುಕೊಂಡ ಯುವಕನಿಗೆ ಈ ಘಟನೆಯೂ ತೀರಾ ಕುಗ್ಗಿಸುವಂತೆ ಮಾಡಿತ್ತು. ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕನು ಇದೀಗ ಪತ್ನಿಯ ಒಪ್ಪಿಗೆ ಪಡೆದು ಅಧಿಕಾರಿಗಳಿಗೆ ಪತ್ರ ಬರೆದು ಕಿಡ್ನಿ ದಾನ ಮಾಡಲು ಮುಂದಾದೆ ಎಂದು ತಿಳಿಸಿದ್ದಾನೆ. ನಾನು ಬದುಕಿರಲಿ, ಇಲ್ಲದಿರಲಿ, ನಿಮ್ಮ ಚಿಂತನೆಗಳು ನಿಮ್ಮ ಕೆಲಸಗಳು ಈ ಜಗತ್ತಿಗೆ ಅಗತ್ಯವಾಗಿ ಬೇಕು. ಹೀಗಾಗಿ ನಾನು ನನ್ನ ಒಂದು ಮೂತ್ರಪಿಂಡವನ್ನು ಸ್ವಇಚ್ಛೆಯಿಂದ ನಿಮಗೆ ನೀಡುತ್ತೇನೆ. ದಯವಿಟ್ಟು ನನ್ನ ಈ ಸಣ್ಣ ಉಡುಗೊರೆಯನ್ನು ಸ್ವೀಕರಿಸಿ ಎಂದು ಹೇಳಿದ್ದಾನೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








