ನೀಲಿ, ಬಿಳಿ, ಕೆಂಪು, ಕಿತ್ತಳೆ: ಭಾರತದಲ್ಲಿ ಲಭ್ಯವಿರುವ ಈ ಪಾಸ್ ಪೋರ್ಟ್ ಬಣ್ಣಗಳ ಅರ್ಥವೇನು ಗೊತ್ತಾ?
ನೀವು ವಿದೇಶ ಪ್ರಯಾಣ ಮಾಡುತ್ತೀರಿ ಅಂತಾದ್ರೆ ನಿಮ್ಮಲ್ಲಿ ಪಾಸ್ ಪೋರ್ಟ್ ಇರುವುದು ಕಡ್ಡಾಯ. ಆದರೆ ಭಾರತದಲ್ಲಿ ಇರುವ ಪಾಸ್ ಪೋರ್ಟ್ ಬಗ್ಗೆ ತಿಳಿದಿದ್ದರೂ, ಆದರೆ ವಿವಿಧ ಬಣ್ಣಗಳಲ್ಲಿ ಪಾಸ್‌ಪೋರ್ಟ್ ಲಭ್ಯವಿದೆ ಎನ್ನುವ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಭಾರತದಲ್ಲಿ ನೀಲಿ, ಬಿಳಿ, ಕೆಂಪು ಮತ್ತು ಕಿತ್ತಳೆ ಬಣ್ಣದ ಪಾಸ್‌ಪೋರ್ಟ್‌ಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ. ಹಾಗಾದ್ರೆ ಈ ಬಣ್ಣಗಳು ಏನನ್ನೂ ಪ್ರತಿನಿಧಿಸುತ್ತದೆ ಗೊತ್ತಾ? ಈ ಸ್ಟೋರಿ ಓದಿ.

ಅಂತಾರಾಷ್ಟ್ರೀಯ ಪ್ರಯಾಣ (International travel) ಮಾಡ್ತೀರಾ ಅಂತಾದ್ರೆ ನಿಮ್ಮಲ್ಲಿ ಪಾಸ್ ಪೋರ್ಟ್ (Passport) ಗುರುತಿನ ಪುರಾವೆ ಇರಲೇಬೇಕು. ಈ ಪಾಸ್ ಪೋರ್ಟ್ ಇಲ್ಲದೆ ಹೋದರೆ ವಿದೇಶ ಪ್ರಯಾಣ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ದೇಶವೂ ವಿಭಿನ್ನ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದು, ಆದರೆ ಈ ಪ್ರಯಾಣಿಕರನ್ನು ವರ್ಗೀಕರಿಸಲು ಭಾರತವು ನೀಲಿ, ಬಿಳಿ, ಕೆಂಪು ಮತ್ತು ಕಿತ್ತಳೆ ಹೀಗೆ ನಾಲ್ಕು ಬಣ್ಣದ ಪಾಸ್‌ಪೋರ್ಟ್‌ಗಳನ್ನು ಪ್ರಯಾಣಿಕರಿಗೆ ನೀಡುತ್ತವೆ. ಯಾವ ಬಣ್ಣದ ಪಾಸ್ ಪೋರ್ಟನ್ನು ಯಾರು ಪಡೆಯಲು ಅರ್ಹರಾಗಿರುತ್ತಾರೆ. ಈ ನಾಲ್ಕು ಬಣ್ಣಗಳು ಏನನ್ನು ಸೂಚಿಸುತ್ತದೆ ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.
ಪಾಸ್ ಪೋರ್ಟ್ ಬಣ್ಣಗಳು ಏಕೆ ಮುಖ್ಯ?
ಭಾರತದಲ್ಲಿ ವಿವಿಧ ಪಾಸ್‌ಪೋರ್ಟ್‌ಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಪ್ರತಿಯೊಂದು ಪಾಸ್‌ಪೋರ್ಟ್ ಮಾದರಿಗಳು ತಮ್ಮದೇ ಆದ ಉದ್ದೇಶಗಳನ್ನು ಹೊಂದಿವೆ. ಟ್ರಿಪ್, ವ್ಯವಹಾರ, ಅಧಿಕೃತ ಕರ್ತವ್ಯ ಅಥವಾ ಕೆಲಸಕ್ಕಾಗಿ ಪ್ರಯಾಣಿಸುತ್ತಿದ್ದಾರೆಯೇ, ಈ ಪಾಸ್‌ಪೋರ್ಟ್‌ಗಳ ಬಣ್ಣವು ಈ ಪ್ರಮುಖ ಮಾಹಿತಿಯನ್ನು ನೀಡುತ್ತದೆ. ಪಾಸ್‌ಪೋರ್ಟ್‌ನ ಬಣ್ಣಗಳು ಅಧಿಕಾರಿಗಳು, ರಾಜತಾಂತ್ರಿಕರು ಮತ್ತು ನಾಗರಿಕರನ್ನು ಗುರುತಿಸಲು ಸಹಾಯಕವಾಗಿದೆ. ನೀವು ಯಾವ ಬಣ್ಣದ ಪಾಸ್ ಪೋರ್ಟ್ ಹೊಂದಿದ್ದೀರಿ ಎನ್ನುವುದರ ಆಧಾರದ ಮೇಲೆ ಕಸ್ಟಮ್ಸ್ ಅಧಿಕಾರಿ ಅಥವಾ ವಿದೇಶದಲ್ಲಿರುವ ಪಾಸ್‌ಪೋರ್ಟ್ ಪರೀಕ್ಷಕರು ಈ ಬಗ್ಗೆ ತಿಳಿದುಕೊಳ್ಳಲು ಸಾಧ್ಯ.
ಭಾರತದಲ್ಲಿನ ಈ ನಾಲ್ಕು ಪಾಸ್ ಪೋರ್ಟ್ ಬಣ್ಣಗಳ ಅರ್ಥವಿದು
- ನೀಲಿ ಬಣ್ಣದ ಪಾಸ್ ಪೋರ್ಟ್ : ನೀವು ವಿದೇಶಕ್ಕೆ ಪ್ರಯಾಣ ಬೆಳೆಸುತ್ತಿದ್ದರೆ ಭಾರತದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ನೀಲಿ ಬಣ್ಣದ ಪಾಸ್‌ಪೋರ್ಟ್ ಬಗ್ಗೆ ನಿಮಗೆ ತಿಳಿದಿರುತ್ತದೆ. ಇದು ಸಾಮಾನ್ಯ ಭಾರತೀಯ ನಾಗರಿಕರಿಗೆ ಮೀಸಲಿಡಲಾಗಿದ್ದು, ಈ ಬಣ್ಣವು ಭಾರತವನ್ನು ಪ್ರತಿನಿಧಿಸುತ್ತದೆ. ಒಂದು ವೇಳೆ ನೀವು ವಿದೇಶಕ್ಕೆ ತೆರಳುತ್ತಿದ್ದರೆ ನಿಮ್ಮ ಬಳಿ ನೀಲಿ ಬಣ್ಣದ ಪಾಸ್ ಪೋರ್ಟ್ ಭಾರತೀಯ ಪ್ರಜೆ ಎನ್ನುವುದನ್ನು ತಿಳಿಸುತ್ತದೆ.
- ಬಿಳಿ ಪಾಸ್ ಪೋರ್ಟ್: ಭಾರತದಲ್ಲಿನ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುವ ಪಾಸ್ ಪೋರ್ಟ್ ಬಿಳಿ ಬಣ್ಣದ ಪಾಸ್ ಪೋರ್ಟ್. ಸರ್ಕಾರಿ ಕೆಲಸ ಕಾರ್ಯದ ನಿಮಿತ್ತ ವಿದೇಶಕ್ಕೆ ಹೋದರೆ ಅಂತಹ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಈ ಪಾಸ್ ಪೋರ್ಟ್ ನೀಡಲಾಗುತ್ತದೆ. ಈ ಬಣ್ಣದ ಪಾಸ್ ಪೋರ್ಟ್ ಆ ವ್ಯಕ್ತಿ ಸರ್ಕಾರಿ ಅಧಿಕಾರಿ ಎನ್ನುವುದನ್ನು ಸೂಚಿಸುತ್ತದೆ.
- ಕೆಂಪು ಪಾಸ್‌ಪೋರ್ಟ್: ಭಾರತೀಯ ರಾಜತಾಂತ್ರಿಕರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುವ ಪಾಸ್ ಪೋರ್ಟ್ ಈ ಬಣ್ಣದ್ದು. ಈ ಪಾಸ್ ಪೋರ್ಟ್ ಇದ್ದಲ್ಲಿ ವಿದೇಶಕ್ಕೆ ಪ್ರಯಾಣಿಸಲು ಯಾವುದೇ ವೀಸಾದ ಅಗತ್ಯವಿರುವುದಿಲ್ಲ. ಉತ್ತಮ ಗುಣಮಟ್ಟದ ಪಾಸ್ ಪೋರ್ಟ್ ಇದಾಗಿದ್ದು, ರಾಯಭಾರ ಕಚೇರಿಯಿಂದ ವಿದೇಶಗಳಿಗೆ ಪ್ರಯಾಣಿಸುವಾಗ ಅನೇಕ ಸೌಲಭ್ಯಗಳು ಇದರಡಿಯಲ್ಲಿ ಲಭ್ಯವಿದೆ.
ಇದನ್ನೂ ಓದಿ: Viral: ಲಕ್ಷ ಲಕ್ಷ ಸಂಬಳದ ಕೆಲಸ ಬಿಟ್ಟು ಜಾಲಿ ಟ್ರಿಪ್ ಹೋದ ಉದ್ಯೋಗಿ, ಮುಂದೇನಾಯ್ತು ನೋಡಿ
- ಕಿತ್ತಳೆ ಪಾಸ್ ಪೋರ್ಟ್ : ಕಿತ್ತಳೆ ಬಣ್ಣದ ಪಾಸ್‌ಪೋರ್ಟ್ ಭಾರತದಲ್ಲಿ ಹತ್ತು ವರ್ಷಕ್ಕಿಂತ ಕಡಿಮೆ ಔಪಚಾರಿಕ ಶಿಕ್ಷಣ ಹೊಂದಿರುವ ನಾಗರಿಕರಿಗೆ ಮಾತ್ರ ನೀಡಲಾಗುತ್ತದೆ. ಈ ಪಾಸ್ ಪೋರ್ಟ್ ವಿದೇಶದಲ್ಲಿ ಉದ್ಯೋಗ ಪಡೆಯಲು ಬಯಸುವವರಿಗೆ ಎಮಿಗ್ರೇಷನ್ ತಪಾಸಣೆಗಳ ಅವಶ್ಯಕತೆ ಇರುವುದನ್ನು ಇದು ಸೂಚಿಸುತ್ತದೆ. ಹೀಗಾಗಿ ಈ ಪಾಸ್ ಪೋರ್ಟ್ ಹೊಂದಿರುವವರು ವಿದೇಶಕ್ಕೆ ಪ್ರಯಾಣಿಸುವ ಮೊದಲು ಹೆಚ್ಚುವರಿ ವಲಸೆ ಕಾರ್ಯವಿಧಾನಗಳಿಗೆ ಒಳಗಾಗುವುದು ಕಡ್ಡಾಯ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








