
ಇಡೀ ದೇಶವು ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದು, ಅನೇಕ ಜನರು ಕೊವಿಡ್ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಕೊರೊನಾ ಸೋಂಕನ್ನು ದೂರವಾಗಿಸಲು ನಾನಾ ಪ್ರಯತ್ನಗಳು ನಡೆಯುತ್ತಿವೆ. ಅದರಲ್ಲೂ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಲ್ಲಿ ಜನರು ಈಗಲೂ ಕೂಡ ಹಿಂದೇಟು ಹಾಕುತ್ತಿದ್ದಾರೆ. ಈ ರೀತಿಯಾಗಿ ಸರ್ಕಾರದ ನಿಯಮವನ್ನು ಗಾಳಿಗೆ ತೂರಿದವರಿಗೆ ತಕ್ಕ ಪಾಠ ಕಲಿಸುವಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಎಷ್ಟೇ ಬುದ್ಧಿವಾದ ಹೇಳಿದರು ಕೇಳದ ಜನರಿಗೆ ಪೊಲೀಸರು ವಿಭಿನ್ನ ರೀತಿಯಲ್ಲಿ ಎಚ್ಚರಿಕೆ ನೀಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡುಗರನ್ನು ನಗಿಸುವುದರ ಜೊತೆಗೆ ಆಶ್ಚರ್ಯಚಕಿತರನ್ನಾಗಿ ಮಾಡಿದೆ.
ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಮಾಸ್ಕ್ ಕಡ್ಡಾಯ. ಆದರೆ ಇದನ್ನು ಮರೆತ ಇಬ್ಬರು ಪುರುಷರು ಮಾಸ್ಕ್ ಧರಿಸದೆ ರಸ್ತೆಯಲ್ಲಿ ಓಡಾಡುತ್ತಿದ್ದರು. ಹೀಗೆ ಮಾಸ್ಕ್ ಧರಿಸದೆ ಓಡಾಡುವಾಗ ಮಹಿಳಾ ಪೊಲೀಸ್ ಅಧಿಕಾರಿಗಳ ಕೈಗೆ ಇಬ್ಬರು ಸಿಕ್ಕಿಹಾಕಿಕೊಂಡಿದ್ದಾರೆ. ಈ ಇಬ್ಬರನ್ನು ನಿಲ್ಲಿಸಿಕೊಂಡ ಮಹಿಳಾ ಪೊಲೀಸ್ ಅಧಿಕಾರಿ ಮಂಗಳಾರತಿ ತಟ್ಟೆ ಹಿಡಿದು ಆರತಿ ಬೆಳಗಿದ್ದಾರೆ. ಅಷ್ಟೇ ಅಲ್ಲದೆ ಮಾಸ್ಕ್ ಹಾಕಿಕೊಳ್ಳಿ ಮಹಾರಾಜರೇ ಎಂದು ಹಾಡು ಕೂಡ ಹೇಳಿದ್ದಾರೆ. ಈ ಸನ್ನಿವೇಶ ಆಶ್ಚರ್ಯಕರವಾಗಿದ್ದಷ್ಟೇ ಅಲ್ಲದೆ ದೊಡ್ಡ ಪಾಠವನ್ನು ಕೂಡ ಕಲಿಸಿದೆ. ಹಾಸ್ಯಮಯವಾದ ಈ ವಿಡಿಯೋ ಸದ್ಯ ವೈರಲ್ ಆಗಿದೆ.
ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೀವೂ ಈ ವಿಡಿಯೋ ನೋಡಿ ಆನಂದಿಸಿರಬೇಕು. ಈ ವಿಡಿಯೋವನ್ನು ಭಾರತೀಯ ಪೊಲೀಸ್ ಸೇವಾ ಅಧಿಕಾರಿ ‘ಬಿಶಮ್ ಸಿಂಗ್’ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಳ್ಳುವಾಗ, ‘ಮಾಸ್ಕ್ ಹಾಕಿಕೊಳ್ಳಿ ಪ್ರಭು’ ಎಂದು ಅವರು ಬರೆದಿದ್ದಾರೆ. ಈ ಸುದ್ದಿ ಬರೆಯುವವರೆಗೆ, 60 ಸಾವಿರ ಜನರು ಈ ವೀಡಿಯೊವನ್ನು ನೋಡಿದ್ದಾರೆ. ಅಲ್ಲದೆ ಇದನ್ನು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಅತಿ ಹೆಚ್ಚು ವೇಗದಲ್ಲಿ ಗ್ರೀಸ್ ಹಚ್ಚಿದ ಕಂಬವನ್ನು ದಾಟುವವರು ಯಾರು? ವಿಡಿಯೋ ವೈರಲ್
Published On - 3:54 pm, Sat, 12 June 21