
ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ವ್ಯಾಪಾರಸ್ಥರು ಹೊಸ ಹೊಸ ಬ್ಯುಸಿನೆಸ್ (Business) ಐಡಿಯಾಗಳನ್ನು (Ideas) ಪ್ರಯೋಗಿಸುತ್ತಿರುತ್ತಾರೆ. ಹೀಗೆ ಯೂನಿಕ್ ಹಾಗೂ ವಿಚಿತ್ರ ಹೆಸರುಗಳನ್ನು ಇಡುವ ಮೂಲಕ ಅದೆಷ್ಟೋ ಸಣ್ಣ ಪುಟ್ಟ ಸ್ಟಾಲ್, ಅಂಗಡಿಗಳು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾವೆ. ಈ ಹಿಂದೆ ಶೆಡ್ ಟೀ ಸ್ಟಾಲ್ (Tea Stall) ಎಂಬ ಹೆಸರಿನ ಟೀ ಅಂಗಡಿಯೊಂದು ತನ್ನ ವಿಶಿಷ್ಟ ಹೆಸರಿನ ಮೂಲಕವೇ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಇಲ್ಲೊಂದು ಟೀ ಸ್ಟಾಲ್ ಮನೆಯಲ್ಲಿ ಸಮಸ್ಯೆ, ಅಶಾಂತಿ, ಸಾಲಭಾದೆ ಇನ್ನು ಮುಂತಾದ ಹಲವಾರು ಸಮಸ್ಯೆಗಳಿಗೆ ಚಹಾ (Tea) ಒಂದೇ ಪರಿಹಾರ ಎಂಬ ಬೋರ್ಡ್ (Board) ಅಳವಡಿಸುವ ಮೂಲಕ ಗಮನ ಸೆಳೆದಿದೆ. ಈ ಬೋರ್ಡ್ ನೋಡಿ ಇದೇನು ಟೀ ಅಂಗಡಿಯೋ ಅಥವಾ ಜ್ಯೋತಿಷ್ಯ ಕೇಂದ್ರವೋ ಒಂದು ಗೊತ್ತಾಗ್ತಿಲ್ಲ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಜ್ಯೋತಿಷ್ಯ ಕೇಂದ್ರಗಳಲ್ಲಿ ಅಥವಾ ಜ್ಯೋತಿಷ್ಯ ಸಂಬಂಧಿ ಜಾಹಿರಾತುಗಳಲ್ಲಿ ನಿಮ್ಮ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ ಎಂದು ಬರೆದಿರುವುದನ್ನು ನೋಡಿರುತ್ತೀರಿ ಅಲ್ವಾ. ಅದೇ ರೀತಿ ಮೈಸೂರಿನ ಟೀ ಅಂಗಡಿ ಓನರ್ ತಮ್ಮ ಅಂಗಡಿ ಮುಂದೆ “ಮನೆಯಲ್ಲಿ ಸಮಸ್ಯೆ, ಅಶಾಂತಿ, ಸಾಲಭಾದೆ ಇನ್ನು ಮುಂತಾದ ಹಲವಾರು ಸಮಸ್ಯೆಗಳಿಗೆ ಚಹಾ ಒಂದೇ ಪರಿಹಾರ” ಎಂಬ ಬೋರ್ಡ್ ಅಳವಡಿಸಿದ್ದಾರೆ.
kaanada_kadalige_45 ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್ ಮಾಡಲಾಗಿದ್ದು, “ಮೈಸೂರಿನ ಚಹಾ ಅಂಗಡಿಯಲ್ಲಿ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಚಹಾ ಅಂಗಡಿಯ ಬೋರ್ಡ್‌ನಲ್ಲಿ “ನಾವು ನಿಮಗೆ ತಾಜಾ ಚಹಾವನ್ನು ಮಾಡಿ ನೀಡುತ್ತೇವೆ; ಮನೆಯಲ್ಲಿ ಸಮಸ್ಯೆ, ಅಶಾಂತಿ, ಸಾಲಭಾದೆ ಇನ್ನು ಮುಂತಾದ ಹಲವಾರು ಸಮಸ್ಯೆಗಳಿಗೆ ಚಹಾ ಒಂದೇ ಪರಿಹಾರ” ಎಂದು ಬರೆದಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಜೀವಕ್ಕೆ ಕುತ್ತು ತಂದ ಡಯಟ್; ಸ್ಲಿಮ್ ಆಗಿ ಕಾಣಲು ತೂಕ ಇಳಿಸಿಕೊಳ್ಳುವ ಭರದಲ್ಲಿ ಯುವತಿಯ ಪ್ರಾಣವೇ ಹೋಯ್ತು
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಘು ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಜ್ಯೋತಿಷಿ ಆಗೋನು ಟೀ ಅಂಗಡಿ ಇಟ್ಟಾಗʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹಾಗಾದ್ರೆ ನನ್ಗೂ ಒಂದು ಟೀ ಕೊಡಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಹಲವರು ಟೀ ಅಂಗಡಿಯ ಈ ವಿಚಿತ್ರ ಬೋರ್ಡ್ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ