Viral: ಮುಂದಿನ ಜನ್ಮದಲ್ಲಿ ಸಿಗೋಣ… ವರನಿಗೆ ಮೆಸೇಜ್ ಮಾಡಿ ಮದುವೆ ಹಿಂದಿನ ದಿನ ನಾಪತ್ತೆಯಾದ ವಧು
ಹಲವಾರು ಕಾರಣಗಳಿಂದಾಗಿ ಆಗಬೇಕಿದ್ದ ಮದುವೆ ಕಾರ್ಯಕ್ರಮಗಳು ನಿಂತು ಹೋದಂತಹ ಸುದ್ದಿಗಳನ್ನು ಕೇಳಿರುತ್ತೀರಿ ಅಲ್ವಾ. ಅದೇ ರೀತಿ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಮದುವೆಯ ಹಿಂದಿನ ದಿನವೇ ವಧು ನಿಗೂಡವಾಗಿ ನಾಪತ್ತೆಯಾಗಿದ್ದಾಳೆ. ಪ್ರೇಮ ವಿವಾಹವಾಗಬೇಕಿದ್ದ ಆಕೆ ತನ್ನ ಭಾವಿ ಪತಿಗೆ ಮುಂದಿನ ಜನ್ಮದಲ್ಲಿ ಸಿಗೋಣ ಎಂಬ ವಾಟ್ಸಾಪ್ ಸಂದೇಶವನ್ನು ಕಳುಹಿಸಿ ನಿಗೂಢವಾಗಿ ಕಣ್ಮರೆಯಾಗಿದ್ದಾಳೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶ, ಮಾ. 11: ಮದುವೆ (Wedding) ಮನೆಗಳಲ್ಲಿ ನಡೆಯುವ ಹೈ ಡ್ರಾಮಾಗಳಿಗೆ ಸಂಬಂಧಪಟ್ಟ ಒಂದಷ್ಟು ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ವರದಕ್ಷಿಣೆಯ (Dowry) ಕಾರಣದಿಂದ ಮದುವೆ ನಿಂತು ಹೋದ, ಊಟದ ವಿಚಾರಕ್ಕೆ ವಧು-ವರರ ಕುಟುಂಬಸ್ಥರ ನಡುವೆ ಮನಸ್ತಾಪ ಏರ್ಪಟ್ಟ ಸಾಕಷ್ಟು ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಮದುವೆ ಹಿಂದಿನ ದಿನ ಮದುವೆ ಮನೆಯಿಂದ ವಧುವೇ ನಾಪತ್ತೆಯಾಗಿದ್ದಾಳೆ. ಹೌದು ಪ್ರೇಮ ವಿವಾಹವಾಗಬೇಕಿದ್ದ ಆಕೆ ತನ್ನ ಭಾವಿ ಪತಿಗೆ ಮುಂದಿನ ಜನ್ಮದಲ್ಲಿ ಸಿಗೋಣ ಎಂಬ ವಾಟ್ಸಾಪ್ ಸಂದೇಶವನ್ನು ಕಳುಹಿಸಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಕುಶಿನಗರ ಎಂಬಲ್ಲಿ ಈ ಘಟನೆ ನಡೆದಿದ್ದು, ಪ್ರೇಮ ವಿವಾಹವಾಗಬೇಕಿದ್ದ ವಧುವೇ ಮದುವೆಯ ಹಿಂದಿನ ದಿನ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಇಲ್ಲಿನ ಖಡ್ಡಾ ಎಂಬಲ್ಲಿನ ಹಳ್ಳಿಯ ಹುಡುಗಿ ಪುಷ್ಪಾ ಮತ್ತು ನೆಬುವಾ ನೌರಂಗಿಯಾ ಪೊಲೀಸ್ ಠಾಣೆ ಪ್ರದೇಶದ ಮುಖೇಶ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮೊದ ಮೊದಲು ಮನೆಯವರು ವಿರೋಧಿಸಿದರೂ ಇವರಿಬ್ಬರೂ ಎರಡೂ ಕುಟುಂಬವನ್ನು ಒಪ್ಪಿಸಿ ಮದುವೆಗೆ ಸಜ್ಜಾಗಿದ್ದರು. ಮಾರ್ಚ್ 6 ಕ್ಕೆ ಮದುವೆಯೂ ನಿಗದಿಯಾಗಿತ್ತು. ಮದುವೆ ಸಂಬಂಧಿ ಶಾಸ್ತ್ರ, ಕಾರ್ಯಗಳು ಕೂಡಾ ನಡೆಯುತ್ತಿತ್ತು. ಈ ಮದುವೆಯ ಸಿದ್ಧತೆಗಳ ನಡುವೆಯೇ, ಪುಷ್ಪಾ ವರ ಮುಖೇಶ್‌ಗೆ ʼನಾನು ಮುಂದಿನ ಜನ್ಮದಲ್ಲಿ ಭೇಟಿಯಾಗುತ್ತೇನೆʼ ಎಂಬ ವಾಟ್ಸಾಪ್ ಸಂದೇಶವನ್ನು ಕಳುಹಿಸುತ್ತಾಳೆ. ಈ ಮೆಸೇಜ್ ನೋಡಿ ಮುಖೇಶ್ ಶಾಕ್ ಆಗಿದ್ದು, ಇದಾದ ಸ್ಪಲ್ಪ ಹೊತ್ತಿನ ಬಳಿಕ ವಧು ನಾಪತ್ತೆಯಾಗಿದ್ದಾಳೆ ಎಂಬ ಸುದ್ದಿ ಕೇಳಿ ಬರುತ್ತೆ. ತಕ್ಷಣ ಕುಟುಂಬಸ್ಥರು ಖಡ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ವಧುವನ್ನು ಆದಷ್ಟು ಬೇಗ ಹುಡುಕಿ ಕೊಡುವಂತೆ ಪೊಲೀಸರಲ್ಲಿ ಕೇಳಿ ಕೊಂಡಿದ್ದಾರೆ.
ವರದಕ್ಷಿಣೆ ವಿವಾದ, ಮನಸ್ತಾಪ:
ಮುಖೇಶ್ ಮತ್ತು ಪುಷ್ಪಾ ಇಬ್ಬರೂ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು ಮತ್ತು ಬಹಳ ಕಷ್ಟಪಟ್ಟು ಈ ಮದುವೆಗೆ ಮನೆಯವರನ್ನು ಒಪ್ಪಿಸಿದ್ದರು. ಹೀಗೆ ಮನೆಯವರನ್ನು ಒಪ್ಪಿಸಿ 8 ತಿಂಗಳ ಹಿಂದೆಯೇ ಮದುವೆ ನಿಶ್ಚಯಿಸಿದ್ದರು. ಆದರೆ ವರದಕ್ಷಿಣೆ ವಿಚಾರದಲ್ಲಿ ಎರಡೂ ಕುಟುಂಬದ ನಡುವೆ ಒಂದಷ್ಟು ಮನಸ್ತಾಪ ಏರ್ಪಟ್ಟಿತ್ತು. ಹುಡುಗನ ಮನೆಯವರು ವರದಕ್ಷಿಣೆ ಬೇಡಿಕೆ ಹೆಚ್ಚಿಸಿದ್ದರಿಂದ ಎರಡು ತಿಂಗಳ ಹಿಂದೆ ಮದುವೆ ರದ್ದಾಗಿತ್ತು. ಆದರೆ ನಂತರ ಹುಡುಗಿಯ ಕುಟುಂಬವು ರಾಜಿ ಸಂದಾನ ಮಾಡಿ ನಂತರ ಪುನಃ ಮದುವೆ ನಿಶ್ಚಯಿಸಿದ್ದರು, ಮದುವೆ ಮಾರ್ಚ್ 6 ಕ್ಕೆ ನಿಗದಿಯಾಗಿತ್ತು. ಆದ್ರೆ ಮದುವೆ ಸಂಭ್ರಮದಲ್ಲಿದ್ದ ಸಂದರ್ಭದಲ್ಲಿಯೇ ವಧು ನಾಪತ್ತೆಯಾಗಿದ್ದಾಳೆ.
ಇದನ್ನೂ ಓದಿ: ಮರಿಗೆ ಜನ್ಮ ನೀಡಿದ ಆನೆ; ಹೊಸ ಅತಿಥಿಯನ್ನು ಕಂಡು ಸಂಭ್ರಮಿಸಿದ ಗಜ ಕುಟುಂಬ
ವಧುವಿನ ಸಹೋದರಿ, ಮದುವೆಯ ಸಮಯದಲ್ಲಿ ವರದಕ್ಷಿಣೆ ವಿವಾದದಿಂದಾಗಿ ಆಕೆ ತುಂಬಾ ಅಸಮಾಧಾನಗೊಂಡಿದ್ದಳು, ಇದು ಆಕೆಯ ಮಾನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು ಎಂದು ಹೇಳಿದ್ದಾಳೆ. ಇದೀಗ ಪುಷ್ಪಾಗಾಗಿ ಹುಡುಕಾಟ ಮುಂದುವರೆದಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ದುಃಖದ ವಾತಾವರಣ ಮಡುಗಟ್ಟಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ