Video: ಪ್ರಾಮಾಣಿಕತೆಗೆ ಈ ಹಳ್ಳಿ ಹೆಸರುವಾಸಿ, ಇಲ್ಲಿ ಅಂಗಡಿಗಳಿಗೆ ಮಾಲೀಕರೇ ಇಲ್ಲ
ಮನೆಗಳಿಗೆ ಹಾಗೂ ಅಂಗಡಿಗಳಿಗೆ ಸಿಸಿಟಿವಿ ಅಳವಡಿಸುವ ಮೂಲಕ ಎಷ್ಟೇ ಬಿಗಿ ಭದ್ರತೆ ಒದಗಿಸಿದರೂ ಕೂಡ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಇಂತಹ ಸುದ್ದಿಗಳನ್ನು ಆಗಾಗ ಕೇಳುತ್ತಿರುತ್ತೀರಿ. ಆದರೆ ಭಾರತದ ಈ ಗ್ರಾಮದಲ್ಲಿ ಅಂಗಡಿಗೆ ಬಿಗಿ ಭದ್ರತೆಯಿಲ್ಲ, ಮಾಲೀಕರು ಇರುವುದೇ ಇಲ್ಲವಂತೆ. ಆದರೂ ಕೂಡ ಇಲ್ಲಿಯವರೆಗೆ ಒಂದೇ ಒಂದು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎನ್ನಲಾಗಿದೆ. ಈ ಕುರಿತಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಾಗಾದ್ರೆ ಗ್ರಾಮ ಇರುವುದು ಎಲ್ಲಿ, ಈ ಗ್ರಾಮದ ವಿಶೇಷತೆಯೇನು? ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

ನಾಗಾಲ್ಯಾಂಡ್, ಜೂನ್ 12: ಈಗಿನ ಕಾಲದಲ್ಲಿ ನಮ್ಮ ಜೊತೆಗೆ ಇದ್ದವರನ್ನು ನಂಬುವುದಕ್ಕೆ ಸಾಧ್ಯವೇ ಇಲ್ಲ. ಯಾರು ಹೇಗೆ ಇರುತ್ತಾರೆ ಎಂದು ಹೇಳುವುದು ಇನ್ನೂ ಕಷ್ಟ. ಜೊತೆಗೆ ಇದ್ದವರು ಬೆನ್ನಿಗೆ ಚೂರಿ ಹಾಕುವ ಕಾಲವಿದು. ಆದರೆ ಭಾರತದಲ್ಲಿರುವ ಈ ಗ್ರಾಮದ ಬಗ್ಗೆ ತಿಳಿದರೆ ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತದೆ, ಪ್ರಾಮಾಣಿಕತೆ (honesty) ಗೆ ಮತ್ತೊಂದು ಹೆಸರೇ ಈ ಗ್ರಾಮ ಎನ್ನಬಹುದು. ಅಂಗಡಿಗೆ ಯಾವುದೇ ಭದ್ರತೆಯಿಲ್ಲ, ಮಾಲೀಕರು ಇಲ್ಲವೇ ಇಲ್ಲ, ಹೀಗಿದ್ದರೂ ಇಲ್ಲಿ ಕಳ್ಳತನ ನಡೆದೇ ಇಲ್ಲವಂತೆ. ಇಲ್ಲಿರುವ ಅಂಗಡಿಯಲ್ಲಿರುವ ನಿಮಗೆ ಬೇಕಾದ ವಸ್ತುಗಳನ್ನು ನೀವೇ ಖರೀದಿಸಬಹುದಂತೆ. ನಾಗಾಲ್ಯಾಂಡ್ ನಲ್ಲಿನ ಖೋನೋಮಾ ಗ್ರಾಮ (khonoma village of nagaland) ವು ಭಾರತದ ಮೊದಲ ಹಸಿರು ಗ್ರಾಮ (green village) ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಹೌದು, ಯುವತಿಯೂ ಶೇರ್ ಮಾಡಿಕೊಂಡ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದ್ದು, ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
wanderlust himani ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಟ್ರಾವೆಲ್ ವ್ಲಾಗರ್ ಹೆಮಾನಿ ಚಾವ್ಡಾ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯುವತಿಯೂ ಭಾರತದ ವಿಶಿಷ್ಟ ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿರುವ ನಾಗಾಲ್ಯಾಂಡ್ ನಲ್ಲಿನ ಖೋನೋಮಾ ಗ್ರಾಮದ ಬಗ್ಗೆ ವಿವರಿಸುವುದನ್ನು ಕಾಣಬಹುದು. ಅಂಗಡಿಯಲ್ಲಿ ಮಾಲೀಕರು ಇಲ್ಲದೇನೆ ಹೇಗೆ ವ್ಯಾಪಾರ ಮಾಡಲಾಗುತ್ತದೆ ಎನ್ನುವುದು ಇಲ್ಲಿ ವಿವರಿಸಲಾಗಿದೆ. ಈ ವಿಶಿಷ್ಟವಾದ ಗ್ರಾಮದ ಬಗ್ಗೆ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ.
ಈ ವಿಡಿಯೋದಲ್ಲಿ ಯುವತಿಯೂ ಈ ಗ್ರಾಮವು ಪ್ರಾಮಾಣಿಕತೆ ಹಾಗೂ ನಂಬಿಕೆಗೆ ಹೆಸರುವಾಸಿಯಾಗಿದ್ದು, ಭಾರತದ ಮೊದಲ ಹಸಿರು ಗ್ರಾಮವಾಗಿದ್ದು, ಅದುವೇ ನಾಗಾಲ್ಯಾಂಡ್‌ನ ಖೋನೋಮಾ ಗ್ರಾಮ. ಈ ಗ್ರಾಮದಲ್ಲಿರುವ ಅಂಗಡಿಗಳಲ್ಲಿ ಮಾಲೀಕರು ಇರುವುದಿಲ್ಲ. ಏನಾದರೂ ಖರೀದಿಸಬೇಕೆಂದರೆ, ನೀವೇ ಸ್ವತಃ ಅಂಗಡಿಗೆ ತೆರಳಿ ನಿಮಗೆ ಬೇಕಾದ ವಸ್ತುವನ್ನು ಆರಿಸಿಕೊಳ್ಳಬೇಕು. ಪುಸ್ತಕದ ಅಂಗಡಿಯಲ್ಲಿ ಪುಸ್ತಕ ಬೇಕಾದರೆ ಖರೀದಿಸಿ, ಬೆಲೆ ಎಷ್ಟಿದೆ ಎಂದು ನೋಡಿ ಮಾಲೀಕರು ಇಲ್ಲದ ಕಾರಣ, ಅಂಗಡಿಯಲ್ಲಿ ಇಟ್ಟಿರುವ ಕ್ಯಾಶ್ ಬಾಕ್ಸ್‌ನಲ್ಲಿ ಹಣವನ್ನು ಹಾಕಿ ಬರಬೇಕು ಎಂದು ಹೇಳಿರುವುದನ್ನು ಕಾಣಬಹುದು.
ಇದನ್ನೂ ಓದಿ : ನಿಮ್ಮ ಕಣ್ಣಿಗೊಂದು ಸವಾಲ್ : ಈ ಚಿತ್ರದಲ್ಲಿ ಬಾಲವಿಲ್ಲದ ಕುದುರೆಯನ್ನು ನೀವು ಹುಡುಕಬಲ್ಲಿರಾ?
ಪ್ರಾಮಾಣಿಕತೆಗೆ ಹೆಸರುವಾಸಿಯಾಗಿರುವ ಈ ಗ್ರಾಮದಲ್ಲಿ ಬುಡಕಟ್ಟು ಜನಾಂಗವು ಈ ರೀತಿ ವಿಶಿಷ್ಟ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಈ ಸಂಪ್ರದಾಯದ ಹೆಸರು ಕೆನ್ಯೂ. ಇದರಡಿಯಲ್ಲಿ ಕಳ್ಳತನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಾಮಾಣಿಕತೆ ಹೆಚ್ಚು ಬೆಲೆ ಕೊಡುವ ಕಾರಣ 154 ಕ್ಕೂ ಹೆಚ್ಚು ಕೆಟ್ಟ ಕೆಲಸಗಳನ್ನು ನಿಷೇಧಿಸಲಾಗಿದೆ. ಇಲ್ಲಿ ಮರ ಗಿಡಗಳನ್ನು ಕಡಿಯುವವಂತಿಲ್ಲ. ಹೀಗಾಗಿ ಇದು ಭಾರತದ ಮೊದಲ ಹಸಿರು ಗ್ರಾಮವಾಗಿದೆ. ಹಚ್ಚ ಹಸಿರಿನ ವಾತಾವರಣದ ನಡುವೆ ಸಾವಯವ ಕೃಷಿ, ಗಿಡ ನೆಟ್ಟು ಕಾಡನ್ನು ಬೆಳೆಸುವುದು, ಪ್ರಾಣಿಗಳ ರಕ್ಷಣೆ ಸೇರಿದಂತೆ ಇನ್ನಿತ್ತರ ಒಳ್ಳೆಯ ಕೆಲಸದಲ್ಲಿ ಇಲ್ಲಿನ ಜನರು ತೊಡಗಿಸಿಕೊಂಡಿದ್ದು, ನೀವು ಒಮ್ಮೆಯಾದ್ರೂ ಖೋನೋಮಾ ಗ್ರಾಮಕ್ಕೆ ಭೇಟಿ ನೀಡಿ ಎಂದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ವಿಡಿಯೋವೊಂದು 1.5 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ನಮ್ಮ ದೇಶ ವಿಭಿನ್ನ ಹಾಗೂ ಸುಂದರವಾಗಿದೆ ಎಂದಿದ್ದಾರೆ. ಮತ್ತೊಬ್ಬರು, ಇಲ್ಲಿ ಚೌಕಾಸಿ ಮಾಡಲು ಆಗಲ್ಲ ಎಂದು ತಮಾಷೆಯಾಗಿ ಹೇಳಿದ್ದಾರೆ. ಇನ್ನೊಬ್ಬರು, ಇಂತಹ ಗ್ರಾಮವಿರುವುದು ನಮಗೆ ಹೆಮ್ಮೆ ಅನಿಸುತ್ತದೆ. ಪ್ರಾಮಾಣಿಕತೆ ಇದ್ದರೆ ಆ ಸ್ಥಳ ನಿಜಕ್ಕೂ ಅಷ್ಟೇ ಸುಂದರವಾಗಿರುತ್ತದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ