Video : ಪುಟಾಣಿಯ ಕೈಗೆ ಹಗ್ಗ ಕಟ್ಟಿ ಟ್ರಿಪ್ ಎಂಜಾಯ್ ಮಾಡಿದ ಭಾರತೀಯ ಕುಟುಂಬ
ಪುಟ್ಟ ಮಕ್ಕಳನ್ನು ಸಂಭಾಳಿಸುವುದೇ ಕಷ್ಟದ ಕೆಲಸ. ಹೊರಗೆ ಸುತ್ತಾಡಲು ಹೋದ ಸಂದರ್ಭದಲ್ಲಿ ಮಕ್ಕಳು ತಪ್ಪಿಸಿಕೊಂಡು ಹೋಗುವುದೇ ಹೆಚ್ಚು. ಹೀಗಾಗಿ ಈ ಪುಟಾಣಿಗಳ ಮೇಲೆ ಒಂದು ಕಣ್ಣು ಇಟ್ಟಿರಬೇಕಾಗುತ್ತದೆ. ಇದೀಗ ರಜೆಯ ವೇಳೆಯಲ್ಲಿ ಭಾರತೀಯ ಕುಟುಂಬವೊಂದು ನ್ಯೂಯಾರ್ಕ್ ನಗರಕ್ಕೆ ಟ್ರಿಪ್‌ಗೆ ಹೋಗಿದೆ. ಈ ವೇಳೆಯಲ್ಲಿ ಮೂರು ವರ್ಷದ ಮಗುವಿನ ಕೈಗೆ ಪ್ಲಾಸ್ಟಿಕ್ ಸ್ಪ್ರಿಂಗ್‌ನಂತಿರುವ ಹಗ್ಗವನ್ನು ಕಟ್ಟಿದ್ದು, ಮಗು ತಪ್ಪಿಸಿಕೊಂಡು ಹೋಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಈ ವಿಡಿಯೋ ಭಾರತೀಯ ತಾಯಿಯೊಬ್ಬಳು ಶೇರ್ ಮಾಡಿಕೊಳ್ಳುತ್ತಿದ್ದಂತೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಪುಟಾಣಿ ಮಕ್ಕಳು (little kids) ನಿಂತಲ್ಲಿ ನಿಲ್ಲಲ್ಲ, ಕುಳಿತಲ್ಲಿ ಕೂರುವುದೇ ಇಲ್ಲ. ಅತ್ತಿಂದ ಇತ್ತ ಜಿಗಿಯುತ್ತಾ, ಓಡುತ್ತ ತಾಯಂದಿರಿಗೆ ತ್ರಾಸು ಕೊಡುತ್ತಾರೆ. ಈ ಮಕ್ಕಳ ಸಹವಾಸ ಬೇಡವೇ ಬೇಡ ಎನ್ನುವಷ್ಟರ ಮಟ್ಟಿಗೆ ಈ ಪುಟಾಣಿಗಳು ಗೋಳಾಡಿಸಿ ಬಿಡುತ್ತಾರೆ. ಹೀಗಿರುವಾಗ ತಾಯಂದಿರು ಪುಟಾಣಿಗಳು ಮನೆಯಿಂದ ಹೊರಗಡೆ ಹೋಗಬಾರದು ಎನ್ನುವ ಕಾರಣಕ್ಕೆ ಕಾಲಿಗೆ ಹಗ್ಗ ಹಾಕಿ ಸೋಫಾ ಅಥವಾ ಕಂಬಕ್ಕೆ ಕಟ್ಟಿ ಹಾಕುವುದನ್ನು ನೀವು ನೋಡಿರಬಹುದು. ಆದರೆ ಬೇಸಿಗೆ ರಜೆಯಲ್ಲಿ ನ್ಯೂಯಾರ್ಕ್‌ಗೆ (Newyork) ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಮಗುವು ತಮ್ಮ ಕೈಯಿಂದ ತಪ್ಪಿಸಿಕೊಂಡು ಹೋಗದಂತೆ ತಾಯಿಯೊಬ್ಬಳು ಯಾವ ರೀತಿ ಪ್ಲ್ಯಾನ್ ಮಾಡಿಕೊಂಡಿದ್ದಾಳೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಮೂರುವರೆ ವರ್ಷದ ಪುಟಾಣಿಯ ಕೈಗೆ ಪ್ಲಾಸ್ಟಿಕ್ ಸ್ಪ್ರಿಂಗ್‌ನಂತಿರುವ ಹಗ್ಗವನ್ನು ಕಟ್ಟಿದ್ದು, ಹಗ್ಗದ ಮತ್ತೊಂದು ತುದಿಯೂ ಪುಟಾಣಿಯ ತಂದೆಯ ಕೈಯಲ್ಲಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗುತ್ತಿದ್ದಂತೆ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆನಡಾದಲ್ಲಿ ನೆಲೆಸಿರುವ ಭಾರತೀಯ ಮಹಿಳೆ ಶುಭಾಂಗಿ ಜಗೋಟಾ ಅವರು ತಮ್ಮ katchmyparty and houseeor ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ನನ್ನ ಮಗನಿಗೆ ಮೂರುವರೆ ವರ್ಷ, ನಾವು ಅವನನ್ನು ಕಟ್ಟಿಹಾಕಿದ್ದೇವೆ ಎಂದು ಹೇಳಲು ನಾಚಿಕೆ ಇಲ್ಲ. ನ್ಯೂಯಾರ್ಕ್‌ನಂತಹ ನಗರದಲ್ಲಿ ಇದು ನಮ್ಮ ಪ್ರವಾಸದ ಉತ್ತಮ ನಿರ್ಧಾರವಾಗಿತ್ತು. ನನ್ನ ಪುಟ್ಟ ಕಂದಮ್ಮ ಯಾವಾಗಲೂ ಸ್ವಾತಂತ್ರ್ಯವನ್ನು ಬಯಸುತ್ತಿದ್ದನು. ನಾವು ಅವನಿಗೆ ಆ ಸ್ವಾತಂತ್ರ್ಯವನ್ನು ನೀಡಿದೆವು. ಅವನು ಪ್ರತಿ ಐದು ನಿಮಿಷಕ್ಕೊಮ್ಮೆ ಜನಸಂದಣಿಯಲ್ಲಿ ಕಳೆದುಹೋಗುತ್ತಾನೆ. ಆದರೆ ಈಗ ನಾವು ಯಾವುದೇ ಆತಂಕಕ್ಕೆ ಒಳಗಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ :Video : ಮಹಿಳೆಯ ಕೈಯಲ್ಲಿ ಕಲ್ಲಂಗಡಿ ಹಣ್ಣು ಕಂಡೊಡನೆ ಓಡೋಡಿ ಬಂದ ಮರಿಯಾನೆ, ಮಾಡಿದ್ದೇನು ನೋಡಿ
ನ್ಯೂಯಾರ್ಕ್ ನಗರಕ್ಕೆ ಕುಟುಂಬದೊಂದಿಗೆ ಟ್ರಿಪ್‌ಗೆ ತೆರಳಿದ್ದ ವೇಳೆಯ ವಿಡಿಯೋ ಇದಾಗಿದ್ದು, ತನ್ನ ಮೂರುವರೆ ವರ್ಷದ ಮಗುವಿನ ಕೈಗೆ ಪ್ಲಾಸ್ಟಿಕ್ ಸ್ಪ್ರಿಂಗ್‌ನಂತಿರುವ ಹಗ್ಗವನ್ನು ಕಟ್ಟಿ ತಪ್ಪಿಸಿಕೊಂಡು ಹೋಗದಂತೆ ಈ ರೀತಿ ಮಾಡಿರುವುದನ್ನು ನೀವಿಲ್ಲಿ ನೋಡಬಹುದು. ಈ ಮಗುವು ಟೈಮ್ಸ್ ಸ್ಕ್ವೇರ್‌ನಲ್ಲಿ ಓಡುವುದು ಹಾಗೂ ಜಿಗಿಯುವುದನ್ನು ಕಾಣಬಹುದು. ಆದರೆ ಮಗುವಿನ ಕೈಗೆ ಪ್ಲಾಸ್ಟಿಕ್ ಸ್ಪ್ರಿಂಗ್‌ನಂತಿರುವ ಹಗ್ಗವನ್ನು ಹಾಕಲಾಗಿದ್ದು ಮತ್ತೊಂದು ತುದಿಯೂ ಮಗುವಿನ ತಂದೆಯ ಕೈಯಲ್ಲಿದೆ. ಈ ಹಗ್ಗವು ನಿಯಂತ್ರಣದ ಸಂಕೇತವಲ್ಲ, ಸುರಕ್ಷತೆ ಹಾಗೂ ಸ್ವಾತಂತ್ರ್ಯದ ಸಂಕೇತ. ನ್ಯೂಯಾರ್ಕ್‌ನ ಜನನಿಬಿಡ ಬೀದಿಗಳಲ್ಲಿ ಯಾವುದೇ ಟೆನ್ಶನ್ ಇಲ್ಲದೇ ಅವನನ್ನು ಅವನ ಪಾಡಿಗೆ ಬಿಡಲು ಸಾಧ್ಯವಾಯಿತು ಎಂದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋ ಹದಿನೆಂಟು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಜನದಟ್ಟಣೆಯ ಸ್ಥಳಗಳಲ್ಲಿ ಸಣ್ಣ ಮಕ್ಕಳನ್ನು ನಿಭಾಯಿಸುವುದು ಸುಲಭವಲ್ಲ, ಈ ರೀತಿ ಮಕ್ಕಳ ಕೈಗೆ ಹಗ್ಗವನ್ನು ಹಾಕುವುದು ಉತ್ತಮ ನಿರ್ಧಾರ ಎಂದಿದ್ದಾರೆ. ಇನ್ನೊಬ್ಬರು, ವಿಮಾನ ನಿಲ್ದಾಣದಲ್ಲಿ ಅತಿಯಾದ ಉತ್ಸಾಹದಿಂದ ಓಡಾಡುವ ಮಗುವಿಗೆ ನಾನು ಹೀಗೆ ಹಗ್ಗ ಬಳಸಿದ್ದೇನೆ. ಇದು ನಾಚಿಕೆಗೇಡಿನ ಸಂಗತಿಯಲ್ಲ, ಇದು ಸುರಕ್ಷತೆ ಎಂದಿದ್ದಾರೆ. ಮತ್ತೊಬ್ಬರು, ನಿಮಗೆ ನಾಚಿಕೆಯಾಗಬೇಕು, ನಿಮ್ಮ ಮಗುವಿಗೆ ನಿಯಮಗಳ ಬಗ್ಗೆ ಕಲಿಸಿ ಕೊಡಿ, ಮಕ್ಕಳನ್ನು ಹಗ್ಗದಿಂದ ಕಟ್ಟಿಹಾಕಬೇಡಿ, ನಿಮ್ಮ ಮಗುವು ಓಡಲು ಬಯಸಿದರೆ ಓಡಲು ಬಿಡಿ, ಅವರ ಹಿಂದೆ ನೀವು ಓಡಿ ಎಂದು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








