Viral : ಮನೆಕೆಲಸದಾಕೆಯ ಕುಟುಂಬದ ಆದಾಯ 1 ಲಕ್ಷಕ್ಕೂ ಅಧಿಕ, ಆದ್ರೂ ಟ್ಯಾಕ್ಸ್ ಕಟ್ಟಲ್ಲ ಎಂದ ಮಹಿಳೆ
ದೊಡ್ಡ ದೊಡ್ಡ ನಗರಗಳಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮನೆಕೆಲಸ ಹಾಗೂ ಆಫೀಸಿನ ಕೆಲಸ ನಿಭಾಯಿಸಿಕೊಂಡು ಹೋಗುವುದು ತುಂಬಾನೇ ಕಷ್ಟ. ಹೀಗಾಗಿ ಹೆಚ್ಚಿನವರು ಮನೆಕೆಲಸದವರನ್ನು ನೇಮಿಸಿಕೊಳ್ಳುತ್ತಾರೆ. ಇದೀಗ ನಾನಾ ಡಿಗ್ರಿ ಪಡೆದು ಕಂಪನಿಗಳಲ್ಲಿ ದುಡಿಯುತ್ತಿರುವವರ ಸಂಬಳಕ್ಕಿಂತ ಮನೆ ಕೆಲಸದಾಕೆಯ ಸಂಬಳವೇ ಹೆಚ್ಚು ಎಂದು ಮಹಿಳೆಯೊಬ್ಬರು ಮಾಡಿದ ಪೋಸ್ಟ್ ವೈರಲ್ ಆಗುತ್ತಿದ್ದು ಚರ್ಚೆಗೆ ನಾಂದಿಯಾಗಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಈ ಮಾತನ್ನು ಸತ್ಯವೆಂದು ಒಪ್ಪಿಕೊಂಡಿದ್ದಾರೆ.

ದೊಡ್ಡ ದೊಡ್ಡ ಪಟ್ಟಣ ಹಾಗೂ ನಗರಗಳಲ್ಲಿ ವಾಸಿಸುತ್ತಿರುವ ಜನರು ಎಷ್ಟು ದುಡಿದರೂ ಸಾಲುವುದಿಲ್ಲ. ಮನೆ ಖರ್ಚು, ಮಕ್ಕಳ ಶಿಕ್ಷಣ ಸೇರಿದಂತೆ ಖರ್ಚುಗಳು ಹೆಚ್ಚೇ ಹೊರತು ಕಡಿಮೆಯಂತೂ ಆಗಲ್ಲ. ಇನ್ನು ಮನೆಕೆಲಸದಾಕೆಯನ್ನು (domestic worker) ನೇಮಿಸಿಕೊಂಡಿದ್ದರೆ ತಿಂಗಳ ಸಂಬಳದಲ್ಲಿ ಅರ್ಧದಷ್ಟು ಹಣವನ್ನು ಆಕೆಗೆಂದೇ ಎತ್ತಿಡಬೇಕು. ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಿಂತ ಹೆಚ್ಚು ಈ ಮನೆಕೆಲಸ ಮಾಡುವ ಮಹಿಳೆಯರು ದುಡಿಯುತ್ತಾರೆ. ಯಾವುದೇ ಟ್ಯಾಕ್ಸ್ (tax) ಕಟ್ಟದೆ ವಾರ್ಷಿಕವಾಗಿ ಲಕ್ಷ ಲಕ್ಷ ದುಡಿಯುವ ಮನೆಕೆಲಸದಾಕೆ ಸಂಬಳದ ಕುರಿತಾದ ಅಸಲಿ ಸತ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ (social media) ಮಹಿಳೆಯೊಬ್ಬರು ಬಹಿರಂಗ ಪಡಿಸಿದ್ದಾರೆ. ನಮಗಿಂತ ಅವರೇ ಬೆಸ್ಟ್, ಯಾವುದೇ ಟೆನ್ಶನ್ ಇಲ್ಲದೇ ಇಡೀ ಕುಟುಂಬ ಮಾಸಿಕವಾಗಿ ಒಂದು ಲಕ್ಷಕ್ಕೂ ಹೆಚ್ಚು ಸಂಪಾದನೆ ಮಾಡುತ್ತಾರೆ ಎನ್ನುವ ಕಟುವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.
ರೆಡ್ಡಿಟ್ ಖಾತೆಯಲ್ಲಿ ಟಯರ್ ಸಿಟಿ 3ರಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು ಮನೆಕೆಲಸದಾಕೆಯ ಸಂಬಳದ ಬಗ್ಗೆ ಚರ್ಚಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಮಹಿಳೆಯೊಬ್ಬರು, ನಮ್ಮ ಮನೆಯಲ್ಲಿ ಕೆಲಸ ಮಾಡುವ ಕೆಲಸದಾಕೆ ಸೇರಿ ಅವರ ಮನೆಯ ಒಟ್ಟು ಆದಾಯ 1.3 ಲಕ್ಷ ರೂ. ಆಗಿದೆ. ಅದೂ ಕೂಡ ತೆರಿಗೆ ಇಲ್ಲದೆ ಟ್ಯಾಕ್ಸ್ ಫ್ರೀ. ಬೆಳಗ್ಗೆ 9 ರಿಂದ 5ರವರೆಗೆ ಶಿಫ್ಟ್ಗಳಂತೆ ಮೂರು ಮನೆ ಕೆಲಸ ಮಾಡುತ್ತಾರೆ. ಒಂದು ತಿಂಗಳಿಗೆ 30,000 ಸಂಪಾದನೆ ಮಾಡುತ್ತಾರೆ. ಮನೆಕೆಲಸದಾಕೆಯ ಗಂಡ ತಿಂಗಳಿಗೆ 30 ಸಾವಿರ ರೂಪಾಯಿ ಸಂಬಳವಿದ್ದು, ದೊಡ್ಡ ಮಗ ಸೀರೆ ಅಂಗಡಿಯಲ್ಲಿ ಕೆಲಸದಲ್ಲಿದ್ದು ಆತನ ಸಂಬಳವು 30,000. ಹಿರಿಯ ಮಗಳು ಟೈಲರ್, ಆಕೆ ಕೂಡ ತಿಂಗಳಿಗೆ 20 ಸಾವಿರ ಸಂಪಾದಿಸುತ್ತಾಳೆ. ಇನ್ನು ಕಿರಿಯ ಮಗ ಪ್ಲಂಬರ್, ಆತನ ತಿಂಗಳ ಸಂಪಾದನೆ 20 ಸಾವಿರ ರೂಪಾಯಿ. ಈ ಕುಟುಂಬದ ತಿಂಗಳ ಸಂಪಾದನೆ ಬರೋಬ್ಬರಿ 1.35 ಲಕ್ಷ ಆಗಿದ್ದು, ಆದರೆ ತೆರಿಗೆ ಮುಕ್ತವಾಗಿದೆ ಎಂದಿದ್ದಾರೆ.
ಈ ಕುಟುಂಬವು ತಮ್ಮ ಅನುವಂಶಿಕ ಭೂಮಿಯನ್ನು ಕೃಷಿಗಾಗಿ ಗುತ್ತಿಗೆ ನೀಡಲು ಯೋಜಿಸುತ್ತಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ 30,000 ರಿಂದ 40,000 ರೂ.ಗಳನ್ನು ಗಳಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ. ಆದರೆ ನಾನು ಹೀಗೆ ಪೋಸ್ಟ್ ಮಾಡಿದ್ದಕ್ಕೆ ನನ್ನನ್ನು ತಪ್ಪು ತಿಳಿದುಕೊಳ್ಳಬೇಡಿ. ನನಗೆ ಆಕೆ ಹಾಗೂ ಆಕೆಯ ಕುಟುಂಬದ ಬಗ್ಗೆ ನಿಜಕ್ಕೂ ಖುಷಿಯಿದೆ. ಕಷ್ಟ ಪಟ್ಟು ದುಡಿಯುವ ಈ ಕುಟುಂಬವು ಇಷ್ಟು ಸಂಬಳವನ್ನು ಪಡೆಯಲು ಖಂಡಿತ ಅರ್ಹರಾಗಿದ್ದಾರೆ. ಆದರೆ ಇಲ್ಲಿ ಮಧ್ಯಮ ವರ್ಗಕ್ಕೆ ಸೇರಿದ್ದು ಯಾರು? ಬಡವ ಹಾಗೂ ಶ್ರೀಮಂತ ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ : ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರಲ್ಲಿ ಕೆಲವರು ಈ ಮಹಿಳೆಯ ಮಾತನ್ನು ಒಪ್ಪಿಕೊಂಡಿದ್ದಾರೆ. ಬಳಕೆದಾರರು, ಡಿಗ್ರಿ ಪಡೆದುಕೊಂಡು ಕಂಪನಿಯಲ್ಲಿ ದುಡಿಯುವ ನಮ್ಮ ಸಂಬಳವು ಇಷ್ಟು ಇಲ್ಲ ಎಂದಿದ್ದಾರೆ. ಇನ್ನೊಬ್ಬರು ಟ್ಯಾಕ್ಸ್ ಯಾಕೆ ಪಾವತಿಸಬೇಕು. ಐವರ ಸಂಬಳ ಸೇರಿದರೆ ಮಾತ್ರ ಒಂದು ಲಕ್ಷ ದಾಟುವುದು, ಒಬ್ಬರ ಸಂಬಳ ಮೂವತ್ತು ಸಾವಿರ ಮಾತ್ರ, ಹೀಗಾಗಿ ಟ್ಯಾಕ್ಸ್ ಪಾವತಿಸುವ ಅಗತ್ಯವಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಕಷ್ಟಪಟ್ಟು ದುಡಿಯುವವರಿಗೆ ಮಾತ್ರ ಒಂದೊಂದು ರೂಪಾಯಿಯ ಬೆಲೆ ಗೊತ್ತು, ಬಡವರು ತೆರಿಗೆ ಕಟ್ಟಬಾರದು, ನಿಯತ್ತಿನಿಂದ ದುಡಿಯುವವರನ್ನು ಕಂಡು ಖುಷಿ ಪಡಿ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ