ಅತಿ ಶ್ರೀಮಂತರಿಗೆ ತೆರಿಗೆ ವಿನಾಯ್ತಿ ಘೋಷಣೆ ಹಿಂಪಡೆದ ಬ್ರಿಟನ್ ಸರ್ಕಾರ: ವಿವಾದದಲ್ಲಿ ನೂತನ ಪ್ರಧಾನಿ ಲಿಜ್ ಟ್ರಸ್
ತೆರಿಗೆ ಕಡಿತ ಪ್ರಸ್ತಾವವನ್ನು ಪ್ರಕಟಿಸಿ, ಅದರ ಬಗ್ಗೆ ಸರ್ಕಾರವು ತನ್ನ ಖಚಿತ ನಿಲುವು ಬಹಿರಂಗಪಡಿಸುವ ನಡುವಣ ಅವಧಿಯಲ್ಲಿ ಬ್ರಿಟನ್ ಕರೆನ್ಸಿಯು ಅಮೆರಿಕದ ಡಾಲರ್ ಎದುರು ದಾಖಲೆ ಮಟ್ಟದಲ್ಲಿ ಮೌಲ್ಯ ಕಳೆದುಕೊಂಡಿದೆ.
ಇಂಗ್ಲೆಂಡ್: ಬ್ರಿಟನ್ ಸರ್ಕಾರದ ನೂತನ ಪ್ರಧಾನಿ ಲಿಜ್ ಟ್ರಸ್ ತಮ್ಮ ಮಹತ್ವಾಕಾಂಕ್ಷಿ ಘೋಷಣೆಯಿಂದ ಹಿಂದೆ ಸರಿದಿದ್ದಾರೆ. ಅತಿಶ್ರೀಮಂತರಿಗೆ ಹೆಚ್ಚು ತೆರಿಗೆ ವಿಧಿಸುವ ನೀತಿಯಿಂದ ಹಿಂದೆ ಸರಿಯುವುದಾಗಿ ಟ್ರಸ್ ಸರ್ಕಾರ ಘೋಷಿಸಿದೆ. ಕೇವಲ 10 ದಿನಗಳ ಹಿಂದಷ್ಟೇ ಬ್ರಿಟನ್ ಸರ್ಕಾರ ಪ್ರಸ್ತಾಪಿಸಿದ್ದ ನೂತನ ತೆರಿಗೆ ನೀತಿಯು ದೊಡ್ಡಮಟ್ಟದ ವಿವಾದ ಹುಟ್ಟುಹಾಕಿತ್ತು. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿತ್ತು. ಇದೀಗ ವಿವಾದಕ್ಕೆ ಮಂಗಳ ಹಾಡಿರುವ ಹಣಕಾಸು ಸಚಿವ ವಾಸಿ ಕ್ವಾರ್ಟೆಂಗ್ (Kwasi Kwarteng) ಅಧಿಕೃತವಾಗಿ ಟ್ವೀಟ್ ಮಾಡಿದ್ದಾರೆ. ‘ನಾವು ಕೇಳಿಸಿಕೊಂಡಿದ್ದೇವೆ, ನಮಗೆ ಅರ್ಥವಾಗಿದೆ. ಅತಿಹೆಚ್ಚು ಆದಾಯ ಗಳಿಸುವವರಿಗೆ ಶೇ 45ರಷ್ಟು ತೆರಿಗೆ ವಿಧಿಸುವ ಪ್ರಸ್ತಾವವನ್ನು ಹಿಂಪಡೆಯುತ್ತಿದ್ದೇವೆ’ ಎಂದು ಕ್ವಾರ್ಟೆಂಗ್ ಹೇಳಿದ್ದಾರೆ.
ಪ್ರಧಾನಿಯಾಗಿ ಲಿಜ್ ಟ್ರಸ್ ಅಧಿಕಾರ ಸ್ವೀಕರಿಸಿದ ನಂತರ ನೀತಿ ನಿರೂಪಣೆಯ ಹಂತದಲ್ಲಿ ನಡೆದಿರುವ ಮೊದಲ ಗಮನಾರ್ಹ ಬದಲಾವಣೆ ಎನಿಸಿದೆ. ಆದರೆ ಈ ಪ್ರಸ್ತಾವವನ್ನು ಪ್ರಕಟಿಸಿ, ಅದರ ಬಗ್ಗೆ ಸರ್ಕಾರವು ತನ್ನ ಖಚಿತ ನಿಲುವು ಪ್ರಕಟಿಸುವ ನಡುವಣ ಅವಧಿಯಲ್ಲಿ ಬ್ರಿಟನ್ ಕರೆನ್ಸಿಯು ಅಮೆರಿಕದ ಡಾಲರ್ ಎದುರು ದಾಖಲೆ ಮಟ್ಟದಲ್ಲಿ ಮೌಲ್ಯ ಕಳೆದುಕೊಂಡಿದೆ. ಮೊದಲೇ ತೆವಳುತ್ತಿದ್ದ ಆರ್ಥಿಕತೆಗೆ ಇದು ಮತ್ತೊಂದು ಪೆಟ್ಟಾಗಿ ಪರಿಣಮಿಸಿದೆ. ತೆರಿಗೆ ಕಡಿತ ನಿರ್ಧಾರವನ್ನು ಸಚಿವರಾದ ಗ್ರಾಂಟ್ ಶಾಪ್ಸ್ ಮತ್ತು ಮೈಕೆಲ್ ಗೋವ್ ವಿರೋಧಿಸಿದ್ದರು. ಕಳೆದ ಸೆ 23ರಂದು ಮಂಡಿಸಿದ ವಿವಾದಾತ್ಮಕ ಮಿನಿ ಬಜೆಟ್ನಲ್ಲಿ ಹಣಕಾಸು ಸಚಿವ ಕ್ವಾರ್ಟೆಂಗ್ ತೆರಿಗೆ ಕಡಿತದ ಬಗ್ಗೆ ಪ್ರಸ್ತಾಪಿಸಿದ್ದರು.
ತೆರಿಗೆ ಪ್ರಸ್ತಾವವನ್ನು ಹಿಂಪಡೆಯುವ ಮೂಲಕ ಟ್ರಸ್ ಮತ್ತು ಕ್ವಾರ್ಟೆಂಗ್ ಬ್ರಿಟನ್ನ ಆರ್ಥಿಕತೆಯಲ್ಲಿ ಭರವಸೆ ತುಂಬಲು, ಸ್ಥಿರತೆ ತರಲು ಯತ್ನಿಸುತ್ತಿದ್ದಾರೆ. ಸೆ 23ರ ಮಿನಿ ಬಜೆಟ್ನಲ್ಲಿ ಅರ್ಥ ಸಚಿವರು ವಿಶೇಷ ಹಣಕಾಸು ಪ್ಯಾಕೇಜ್ ಘೋಷಿಸಿದ್ದರೂ ಬ್ರಿಟನ್ನ ಉದ್ಯಮ ವಲಯದಲ್ಲಿ ಭರವಸೆ ಮೂಡಿರಲಿಲ್ಲ. ಹೀಗಾಗಿ ಇಂಥ ಮಹತ್ವದ ಕ್ರಮಕ್ಕೆ ಮುಂದಾಗುವುದು ಸರ್ಕಾರಕ್ಕೆ ಅನಿವಾರ್ಯವಾಯಿತು ಎಂದು ಹೇಳಲಾಗಿದೆ. ಆದರೆ ಹಲವು ತಿಂಗಳುಗಳಿಂದ ಇಂಥದ್ದೊಂದು ಕಠಿಣ ಕ್ರಮದ ಅಗತ್ಯವನ್ನು ಪ್ರತಿಪಾದಿಸುತ್ತಿದ್ದ ಬ್ರಿಟನ್ನ ನೂತನ ಸರ್ಕಾರವು ಅಧಿಕಾರಕ್ಕೆ ಬಂದ ಒಂದು ವರ್ಷದ ಒಳಗೆ ನೀತಿ ನಿರೂಪಣೆಯಲ್ಲಿ ಉಲ್ಟಾ ಹೊಡೆದಿರುವುದು ಸಹ ಹೂಡಿಕೆದಾರರಲ್ಲಿ ಸರ್ಕಾರದ ಮೇಲಿನ ಭರವಸೆ ಕಡಿಮೆಯಾಗುವಂತೆ ಮಾಡಿದೆ.
ಅತಿ ಶ್ರೀಮಂತರಿಗೆ ತೆರಿಗೆ ಹಾಕುವ ಪ್ರಸ್ತಾವದಿಂದ ಹಿಂದೆ ಸರಿದ ತಮ್ಮ ನಿಲುವು ಸಮರ್ಥಿಸಿಕೊಂಡಿದ್ದ ಪ್ರಧಾನಿ ಲಿಜ್ ಟ್ರಸ್, ‘ವಿಶ್ವಮಟ್ಟದ ಸಾರ್ವಜನಿಕ ಸೇವೆ, ಅತ್ಯುತ್ತಮ ಸಂಬಳ ಮತ್ತು ದೇಶವ್ಯಾಪಿ ಅವಕಾಶಗಳನ್ನು ತೆರೆಯುವ ಉತ್ತಮ ಬೆಳವಣಿಗೆಯ ಆರ್ಥಿಕತೆ ರೂಪಿಸುವುದು ನಮ್ಮ ಉದ್ದೇಶ’ ಎಂದು ಹೇಳಿದ್ದರು. ಅದರ ಬೆನ್ನಿಗೇ ‘ನಮಗೆ ಅರ್ಥವಾಯಿತು, ನಾವು ಕೇಳಿಸಿಕೊಂಡೆವು’ ಎಂಬ ಒಕ್ಕಣೆಯೊಂದಿಗೆ ಅತಿಶ್ರೀಮಂತರಿಗೆ ತೆರಿಗೆ ವಿಧಿಸುವ ಪ್ರಸ್ತಾವ ಹಿಂಪಡೆಯುವ ಅರ್ಥ ಸಚಿವ ಕ್ವಾಸಿ ಕ್ವಾರ್ಟೆಂಗ್ರ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದರು.
ಒಂದು ವರ್ಷಕ್ಕೆ 1,50,000 ಪೌಂಡ್ (ಸುಮಾರು 1.46 ಕೋಟಿ ರೂಪಾಯಿ) ಆದಾಯ ಹೊಂದಿರುವವರ ಆದಾಯದ ಮೇಲೆ ಇರುವ ಶೇ 45 ರ ತೆರಿಗೆಯನ್ನು ಹಿಂಪಡೆಯುವ ಪ್ರಸ್ತಾವವನ್ನು ಕ್ವಾರ್ಟೆಂಗ್ ಮುಂದಿಟ್ಟಿದ್ದರು. ಈ ಪ್ರಸ್ತಾವದ ಬೆನ್ನಿಗೆ ಬ್ರಿಟನ್ನ ಕರೆನ್ಸಿ ಪೌಂಡ್ ಅಮೆರಿಕದ ಡಾಲರ್ ಎದುರು ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಒಂದು ಹಂತದಲ್ಲಿ ಬ್ರಿಟನ್ನ ಕೇಂದ್ರೀಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಇಂಗ್ಲೆಂಡ್ ಮಧ್ಯ ಪ್ರವೇಶಿಸಿ ಬಾಂಡ್ಗಳ ಖರೀದಿ ಆರಂಭಿಸಿ, ಕರೆನ್ಸಿಗೆ ಸ್ಥಿರತೆ ತರಲು ಯತ್ನಿಸಿತ್ತು. ಇಷ್ಟಾದ ನಂತರವೂ ಪ್ರಧಾನಿ ಲಿಜ್ ತಮ್ಮ ತೆರಿಗೆ ಪ್ರಸ್ತಾವವನ್ನು ಸಮರ್ಥಿಸಿಕೊಂಡಿದ್ದರು. ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಅಚ್ಚರಿ ಮೂಡಿಸಿದರು.