ಆಕ್ಸ್​ಫರ್ಡ್ ಆಸ್ಟ್ರಾಜೆನೆಕಾ ಲಸಿಕೆ ಪಡೆದ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ; ಇಂಗ್ಲಂಡ್​ನಲ್ಲಿ 7 ಸಾವು

ಆಕ್ಸ್​ಫರ್ಡ್-ಆಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸಿರುವ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆ ಅಡ್ಡಪರಿಣಾಮ ಇದೆ ಎಂಬ ವಿಚಾರ ಈ ಮೊದಲು ಕೂಡ ಕೇಳಿಬಂದಿತ್ತು.

  • TV9 Web Team
  • Published On - 20:09 PM, 3 Apr 2021
ಆಕ್ಸ್​ಫರ್ಡ್ ಆಸ್ಟ್ರಾಜೆನೆಕಾ ಲಸಿಕೆ ಪಡೆದ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ; ಇಂಗ್ಲಂಡ್​ನಲ್ಲಿ 7 ಸಾವು
ಆಸ್ಟ್ರಾಜೆನೆಕಾ ಲಸಿಕೆ

ಲಂಡನ್: ಆಕ್ಸ್​ಫರ್ಡ್- ಆಸ್ಟ್ರಾಜೆನೆಕಾ ಲಸಿಕೆ ಪಡೆದ ಬಳಿಕ ಸಮಸ್ಯೆ ಅನುಭವಿಸಿದ್ದ 30 ಜನರ ಪೈಕಿ, ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಯುನೈಟೆಡ್ ಕಿಂಗ್ಡಮ್​ನ (ಯು.ಕೆ.) ವೈದ್ಯಕೀಯ ನಿಯಂತ್ರಕರು ಮಾಹಿತಿ ನೀಡಿದ್ದಾರೆ. ಕೊರೊನಾ ವಿರುದ್ಧದ ಆಕ್ಸ್​ಫರ್ಡ್ ಆಸ್ಟ್ರಾಜೆನೆಕಾ ಲಸಿಕೆ ಪಡೆದ 30 ಮಂದಿಯಲ್ಲಿ, ಮಾರ್ಚ್ 24ರ ವರೆಗೆ 7 ಜನರು ಸಾವನ್ನಪ್ಪಿದ್ದಾರೆ ಎಂದು ಔಷಧ ಮತ್ತು ಆರೋಗ್ಯ ಸೇವಾ ಉತ್ಪನ್ನಗಳ ನಿಯಂತ್ರಕ ಸಂಸ್ಥೆ ತನ್ನ ಹೇಳಿಕೆಯಲ್ಲಿ ಬಹಿರಂಗಪಡಿಸಿದೆ. ಈ ಬಗ್ಗೆ ಎಎಫ್​ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಆಕ್ಸ್​ಫರ್ಡ್-ಆಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸಿರುವ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆ ಅಡ್ಡಪರಿಣಾಮ ಇದೆ ಎಂಬ ವಿಚಾರ ಈ ಮೊದಲು ಕೂಡ ಕೇಳಿಬಂದಿತ್ತು.

ಕೊರೊನಾ ವಿರುದ್ಧದ ಆಕ್ಸ್​ಫರ್ಡ್ ಆಸ್ಟ್ರಾಜೆನೆಕಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ (World Health Organization- WHO) ತನ್ನ ಬೆಂಬಲವನ್ನು ನೀಡಿದ್ದು, ಆಸ್ಟ್ರಾಜೆನೆಕಾ ಲಸಿಕೆಯ ಬಳಕೆ ಮಾಡಬಹುದು ಎಂದು ಅನುಮೋದನೆ ಸೂಚಿಸಿತ್ತು. ಫ್ರಾನ್ಸ್, ಜರ್ಮನಿ, ಇಟಲಿ ಸಹಿತ ಆರಕ್ಕೂ ಹೆಚ್ಚು ಯುರೋಪಿಯನ್ ದೇಶಗಳು ಆಕ್ಸ್​ಫರ್ಡ್ ಆಸ್ಟ್ರಾಜೆನೆಕಾ ಲಸಿಕೆ ಬಳಕೆಯನ್ನು ನಿಲ್ಲಿಸಿದ್ದವು. ಲಸಿಕೆ ಪಡೆದ ಸುಮಾರು 30 ಮಂದಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಉಂಟಾದ ಹಾಗೂ ಎರಡು ಸಾವು ಸಂಭವಿಸಿದ ಕಾರಣ ಕೆಲವು ರಾಷ್ಟ್ರಗಳು ಆಸ್ಟ್ರಾಜೆನೆಕಾ ಲಸಿಕೆ ಬಳಸದಿರಲು ತೀರ್ಮಾನಿಸಿದ್ದವು.

ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾರ್ಚ್ 17ರಂದು ತನ್ನ ಪ್ರತಿಕ್ರಿಯೆ ತಿಳಿಸಿತ್ತು. ಈ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಆಸ್ಟ್ರಾಜೆನೆಕಾ ಲಸಿಕೆಯ ಲಾಭಗಳು ಅಥವಾ ಧನಾತ್ಮಕ ಅಂಶಗಳು ಅದರ ಅಪಾಯದ ಪ್ರಮಾಣವನ್ನು ಮೀರಿಸುತ್ತವೆ ಎಂದು ಹೇಳಿರುವ ಆರೋಗ್ಯ ಸಂಸ್ಥೆ ಲಸಿಕೆ ಬಳಕೆಯನ್ನು ಮುಂದುವರಿಸಲು ಸೂಚಿಸಿತ್ತು.

ಕೊವಿಡ್-19 ವಿರುದ್ಧದ ಲಸಿಕೆಯು ಇತರೆ ಕಾರಣಗಳಿಂದ ಉಂಟಾಗುವ ಸಾವು ಅಥವಾ ಅನಾರೋಗ್ಯವನ್ನು ತಡೆಗಟ್ಟುವುದಿಲ್ಲ. ರಕ್ತ ಹೆಪ್ಪುಗಟ್ಟಿದಂಥ ಘಟನೆಗಳು ನಿಯಮಿತವಾಗಿ ಉಂಟಾಗುತ್ತಿತ್ತು. ದೊಡ್ಡ ಮಟ್ಟದ ಲಸಿಕೆ ವಿತರಣಾ ಅಭಿಯಾನದ ಸಂದರ್ಭ ಕೆಲವು ಪ್ರತಿಕೂಲ ಘಟನೆಗಳು ನಡೆಯುವುದು, ಅವುಗಳ ವಿರುದ್ಧ ಪರಿಣಾಮಕಾರಿಯಾಗಿ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳುವುದು ಅನಿವಾರ್ಯ. ಇಂಥಾ ಘಟನೆಗಳು ಲಸಿಕೆಗೆ ಸಂಬಂಧಪಟ್ಟವು ಎಂದು ಅರ್ಥವಲ್ಲ. ಆದರೆ, ಅವುಗಳನ್ನು ತನಿಖೆ ನಡೆಸುವುದು ಒಳ್ಳೆಯ ನಡೆಯೇ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪತ್ರದಲ್ಲಿ ಉಲ್ಲೇಖಿಸಿತ್ತು.

ಆಸ್ಟ್ರಾಜೆನೆಕಾ ಲಸಿಕೆಯು ಫೈಜರ್-ಬಯೋಎನ್​ಟೆಕ್ ಮತ್ತು ಮಾಡರ್ನಾ ಲಸಿಕೆಯಂತಲ್ಲ. ಆಕ್ಸ್​ಫರ್ಡ್ ಆಸ್ಟ್ರಾಜೆನೆಕಾ ಲಸಿಕೆಗೆ ಕೋಲ್ಡ್ ಸ್ಟೋರೇಜ್ ಬೇಕಾಗಿರುವುದಿಲ್ಲ. ಜೊತೆಗೆ, ಲಸಿಕೆ ಕಡಿಮೆ ಖರ್ಚಿನದ್ದಾಗಿದೆ. ಹಾಗಾಗಿ, ಆಕ್ಸ್​ಫರ್ಡ್ ಆಸ್ಟ್ರಾಜೆನೆಕಾ ಲಸಿಕೆಯು ಯುರೋಪಿಯನ್ ದೇಶಗಳಲ್ಲಿ ಲಸಿಕೆ ಅಭಿಯಾನದ ಬೆನ್ನೆಲುಬಾಗಿ ಇರಬೇಕಿತ್ತು.

ಇದನ್ನೂ ಓದಿ: ರಕ್ತ ಹೆಪ್ಪುಗಟ್ಟುವ ಭಯವಿಲ್ಲ! ಕೊವಿಶೀಲ್ಡ್​ ಚುಚ್ಚುಮದ್ದಿಗೆ ಸಿಕ್ತು ಅಮೆರಿಕದ ಹಸಿರು ನಿಶಾನೆ..

ಇದನ್ನೂ ಓದಿ: AstraZeneca Side Effects: ಆಸ್ಟ್ರಾಜೆನಿಕಾ ಲಸಿಕೆಯ ಅಡ್ಡಪರಿಣಾಮಗಳನ್ನು ಪರಿಶೀಲನೆ ನಡೆಸಲು ನಿರ್ಧರಿಸಿದ ಭಾರತ