ಕೊರೊನಾ ಲಸಿಕೆ ಬೌದ್ಧಿಕ ಆಸ್ತಿ ಹಕ್ಕು ವಿನಾಯಿತಿ ಬಗ್ಗೆ ಮಾತುಕತೆಗೆ ಸಮ್ಮತಿಸಿದ ವಿಶ್ವ ವ್ಯಾಪಾರ ಸಂಘಟನೆ
ನಿನ್ನೆ (ಜೂನ್ 9) ನಡೆದ ಸಭೆಯಲ್ಲಿ ಸದರಿ ವಿಷಯದ ತುರ್ತು ಅಗತ್ಯದ ಬಗ್ಗೆ ಎಲ್ಲಾ ಸದಸ್ಯ ರಾಷ್ಟ್ರಗಳೂ ದನಿಗೂಡಿಸಿದ್ದು, ಮಾತುಕತೆಗೆ ಸಿದ್ಧವಾಗಿವೆ. ಆದರೆ ಈ ಬಗ್ಗೆ ರಾಷ್ಟ್ರಗಳ ವೈಯಕ್ತಿಕ ಒಳನೋಟಗಳೇನು ಎನ್ನುವ ಬಗ್ಗೆ ಜುಲೈ ತಿಂಗಳಲ್ಲಿ ಲಿಖಿತ ರೂಪದ ವರದಿ ಸಿಗಲಿದ್ದು, ಅಲ್ಲಿಂದ ಮಾತುಕತೆ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.
ದೆಹಲಿ: ಬಹುಚರ್ಚಿತ ವಿಚಾರವಾಗಿರುವ ಕೊರೊನಾ ಲಸಿಕೆಯ ಬೌದ್ಧಿಕ ಆಸ್ತಿ ಹಕ್ಕು ವಿನಾಯಿತಿ ಬಗ್ಗೆ ಮಾತನಾಡಲು ವಿಶ್ವ ವ್ಯಾಪಾರ ಸಂಘಟನೆ ಬುಧವಾರದಂದು (ಜೂನ್ 9) ಸಮ್ಮತಿ ಸೂಚಿಸಿದೆ. ಕೊರೊನಾ ಲಸಿಕೆ, ಕೊರೊನಾಕ್ಕೆ ಸಂಬಂಧಿಸಿದ ಔಷಧ ಹಾಗೂ ಚಿಕಿತ್ಸಾ ಉಪಕರಣಗಳಿಗೆ ಬೌದ್ಧಿಕ ಆಸ್ತಿ ಹಕ್ಕು ರಕ್ಷಣೆಯಿಂದ ವಿನಾಯಿತಿ ನೀಡಬೇಕೆಂಬ ಆಗ್ರಹ ಅನೇಕ ತಿಂಗಳುಗಳಿಂದ ಕೇಳಿಬರುತ್ತಿದ್ದು, ಇಷ್ಟರಲ್ಲಾಗಲೇ ದೃಢ ನಿರ್ಧಾರವೊಂದನ್ನು ಸ್ಪಷ್ಟಪಡಿಸಬೇಕಿತ್ತಾದರೂ ನಿಧಾನಗತಿಯ ಬೆಳವಣಿಗೆಗಳಿಂದಾಗಿ ಈಗ ಮಾತುಕತೆಗೆ ಒಪ್ಪಿಗೆ ಸಿಕ್ಕಂತಾಗಿದೆ.
ವಿಶ್ವ ವ್ಯಾಪಾರ ಸಂಘಟನೆಯ ಎಲ್ಲಾ 164 ಸದಸ್ಯ ರಾಷ್ಟ್ರಗಳಿಗೂ ಇದರ ಉದ್ದೇಶ ಮನವರಿಕೆಯಾಗಬೇಕಿದ್ದು, ಬೌದ್ಧಿಕ ಆಸ್ತಿ ಹಕ್ಕು ವಿನಾಯಿತಿಯನ್ನು ಲಸಿಕೆಗಷ್ಟೇ ಸೀಮಿತಗೊಳಿಸಬೇಕೋ ಅಥವಾ ಕೊರೊನಾಕ್ಕೆ ಸಂಬಂಧಿಸಿದ ಔಷಧ ಹಾಗೂ ಚಿಕಿತ್ಸಾ ಉಪಕರಣಗಳಿಗೂ ವಿನಾಯಿತಿ ನೀಡಬೇಕೋ ಎನ್ನುವುದರ ಬಗ್ಗೆ ಸ್ಪಷ್ಟತೆಯೂ ಮೂಡಬೇಕಾಗಿದ್ದರಿಂದ ಈ ವಿಚಾರವನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ ಎನ್ನುವ ಅಭಿಪ್ರಾಯ ಕೇಳಿಬಂದಿದೆ.
ಆದರೆ, ನಿನ್ನೆ (ಜೂನ್ 9) ನಡೆದ ಸಭೆಯಲ್ಲಿ ಸದರಿ ವಿಷಯದ ತುರ್ತು ಅಗತ್ಯದ ಬಗ್ಗೆ ಎಲ್ಲಾ ಸದಸ್ಯ ರಾಷ್ಟ್ರಗಳೂ ದನಿಗೂಡಿಸಿದ್ದು, ಮಾತುಕತೆಗೆ ಸಿದ್ಧವಾಗಿವೆ. ಆದರೆ ಈ ಬಗ್ಗೆ ರಾಷ್ಟ್ರಗಳ ವೈಯಕ್ತಿಕ ಒಳನೋಟಗಳೇನು ಎನ್ನುವ ಬಗ್ಗೆ ಜುಲೈ ತಿಂಗಳಲ್ಲಿ ಲಿಖಿತ ರೂಪದ ವರದಿ ಸಿಗಲಿದ್ದು, ಅಲ್ಲಿಂದ ಮಾತುಕತೆ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ, ಸಣ್ಣಪುಟ್ಟ ಭಿನ್ನಾಭಿಪ್ರಾಯ ಹಾಗೂ ವೈರುಧ್ಯತೆಗಳನ್ನು ಎಲ್ಲಾ ಸದಸ್ಯ ರಾಷ್ಟ್ರಗಳೂ ಸರಿಪಡಿಸಿಕೊಳ್ಳುವ ನಿರೀಕ್ಷೆಯಿದ್ದು, ಮಾತುಕತೆ ಯಶಸ್ವಿಯಾಗಲಿದೆ ಎಂಬ ನಂಬಿಕೆಯಲ್ಲಿ ಅಧಿಕಾರಿಗಳಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಿಂದಲೂ ಭಾರತ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಕೊರೊನಾ ಲಸಿಕೆಯ ಬೌದ್ಧಿಕ ಆಸ್ತಿ ಹಕ್ಕು ವಿನಾಯಿತಿ ಅಗತ್ಯದ ಬಗ್ಗೆ ಮೇಲಿಂದ ಮೇಲೆ ಪ್ರಸ್ತಾಪಿಸುತ್ತಿದ್ದು, ಅಮೆರಿಕಾ ಕೂಡಾ ಭಾರತದ ಪರವಾಗಿ ದನಿ ಸೇರಿಸಿತ್ತು. ಇದೆಲ್ಲದರ ಪರಿಣಾಮವಾಗಿ ಪ್ರಸ್ತುತ ಮಾತುಕತೆಗೆ ಸಮ್ಮತಿ ಸಿಕ್ಕಿದ್ದು, ಜುಲೈ ತಿಂಗಳಲ್ಲಿ ಈ ಬಗ್ಗೆ ನಿರ್ಣಯ ಹೊರ ಬೀಳುವ ಸಾಧ್ಯತೆ ಇದೆ.
ಕೊವಿಡ್ ಲಸಿಕೆಗೆ ಬೌದ್ಧಿಕ ಆಸ್ತಿ ಹಕ್ಕಿನ ವಿನಾಯಿತಿ ಸಿಕ್ಕರೆ ಪೇಟೆಂಟ್ ಹೊಂದಿಲ್ಲದ ಕಂಪನಿಯೂ ಲಸಿಕೆ ಉತ್ಪಾದಿಸಬಹುದಾಗಿದ್ದು, ಅಮೆರಿಕದ ಫೈಜರ್, ಮಾಡೆರ್ನಾ, ರಷ್ಯಾದ ಸ್ಪುಟ್ನಿಕ್ ಸೇರಿದಂತೆ ಎಲ್ಲ ಕೊರೊನಾ ಲಸಿಕೆಗಳನ್ನೂ ಪೇಟೆಂಟ್ ಇಲ್ಲದೆ ತಯಾರಿಸಬಹುದಾಗಿದೆ. ಸದ್ಯ ಲಸಿಕೆ ಕೊರತೆ ಎದುರಿಸುತ್ತಿರುವ ಭಾರತಕ್ಕೆ ಇದರಿಂದಾಗಿ ಹೆಚ್ಚು ಅನುಕೂಲವಾಗಲಿದೆ. ಭಾರತದ ಜತೆಗೆ ದಕ್ಷಿಣ ಆಫ್ರಿಕಾ ದೇಶಗಳು ಸಹ ಬೌದ್ಧಿಕ ಆಸ್ತಿ ಹಕ್ಕಿನ ರಕ್ಷಣೆಯಿಂದ ಕೊವಿಡ್ ಲಸಿಕೆಗೆ ತಾತ್ಕಾಲಿಕ ವಿನಾಯಿತಿ ನೀಡಲು ಬೇಡಿಕೆ ಇಟ್ಟಿವೆ. ಬಹುಮುಖ್ಯವಾಗಿ ಭಾರತದ ಬೇಡಿಕೆಗೆ ಅಮೆರಿಕಾ ಬೆಂಬಲ ಸೂಚಿಸುತ್ತಿದ್ದಂತೆಯೇ ಫೈಜರ್, ಮಾಡೆರ್ನಾ ಕಂಪನಿಗಳ ಷೇರುಬೆಲೆ ಮಾರುಕಟ್ಟೆಯಲ್ಲಿ ಕುಸಿತ ಕಂಡಿತ್ತು ಎನ್ನುವುದು ಗಮನಾರ್ಹವಾಗಿದೆ.
ಈ ಹಿಂದೆ ಅಮೆರಿಕಾ ಅಭಿವೃದ್ಧಿಪಡಿಸಿದ ಔಷಧಿ ವಸ್ತು ರಕ್ಷಣಾ ತಂತ್ರಜ್ಞಾನವನ್ನು ಉಚಿತವಾಗಿ ವಿದೇಶಕ್ಕೆ ನೀಡಲಾಗುತ್ತಿರಲಿಲ್ಲ. ಈ ಬಗ್ಗೆ ವಿಶ್ವದ ಮೂಲೆ ಮೂಲೆಯ ಜನರು ಮತ್ತು ಸರ್ಕಾರಗಳು ಅಮೆರಿಕದ ನೀತಿಯನ್ನು ತೀವ್ರವಾಗಿ ಟೀಕಿಸಿದ ನಂತರ ಪೇಟೆಂಟ್ಗೆ ವಿನಾಯತಿ ನೀಡುವ ಯೋಚನೆಗೆ ಅಮೆರಿಕಾ ಬಂದಿತ್ತು. ಜತೆಗೆ, ಕೊರೊನಾ ವೈರಾಣುವನ್ನು ನಿಗ್ರಹಿಸುವಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೈಜೋಡಿಸಿದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗುತ್ತದೆ ಎಂಬ ಅನಿಸಿಕೆಯನ್ನು ಎಲ್ಲರೂ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಅಮೆರಿಕ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿತ್ತು.
ಇದನ್ನೂ ಓದಿ: ಕೊರೊನಾ ಲಸಿಕೆ ಖರೀದಿ ನೀತಿಯಲ್ಲಿ ಬದಲಾವಣೆ: ಸರ್ಕಾರಕ್ಕೆಷ್ಟು ವೆಚ್ಚ? ಕಂಪನಿಗಳ ಆದಾಯ ಎಷ್ಟು ಖೋತಾ? ಇಲ್ಲಿದೆ ಲೆಕ್ಕಾಚಾರ