Hanumagiri: ರಾಮಾಯಣದಲ್ಲಿ ಸಂಜೀವಿನಿ ಪರ್ವತ ಹೊತ್ತ ಆಂಜನೇಯನಿಗೆ ಸಾಕ್ಷಿ ಈ ಹನುಮಗಿರಿ
ಪುತ್ತೂರು ತಾಲೂಕಿನ ಈಶ್ವರಮಂಗಲ ಎಂಬ ಪ್ರದೇಶದಲ್ಲಿ ಇಂತಹ ಒಂದು ನಿಸರ್ಗಮಯವಾದ ಪ್ರದೇಶವನ್ನು ನಾವು ಕಾಣಬಹುದು. ಅದುವೇ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿ. ಈ ಸ್ಥಳಕ್ಕೆ ಒಂದು ಇತಿಹಾಸ ಇದೆ. ಆಂಜನೇಯ ನೆಲೆ ನಿಂತ ಪುಣ್ಯ ಕ್ಷೇತ್ರವೇ ಹನುಮಗಿರಿ.
ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಗಾದೆ ಉತ್ತಮ ಸಂದೇಶವನ್ನು ಕೊಡುತ್ತದೆ, ದೇಶ ಸುತ್ತುದರಿಂದ ಅನೇಕ ವಿಚಾರವನ್ನು ತಿಳಿಯಲು ಸಾಧ್ಯವಾಗುತ್ತದೆ. ಅದು ಮಾತ್ರವಲ್ಲವೇ ನಾವು ಅನೇಕ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ ನಿಸರ್ಗವು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲ ಎಂಬ ಪ್ರದೇಶದಲ್ಲಿ ಇಂತಹ ಒಂದು ನಿಸರ್ಗಮಯವಾದ ಪ್ರದೇಶವನ್ನು ನಾವು ಕಾಣಬಹುದು. ಅದುವೇ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿ. ಈ ಸ್ಥಳಕ್ಕೆ ಒಂದು ಇತಿಹಾಸ ಇದೆ. ಆಂಜನೇಯ ನೆಲೆ ನಿಂತ ಪುಣ್ಯ ಕ್ಷೇತ್ರವೇ ಹನುಮಗಿರಿ. ವಿಶ್ವದಲ್ಲೇ ಅತೀ ದೊಡ್ಡ ಆಂಜನೇಯ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ದೇವಾಲಯ ಇದಾಗಿದೆ. ಇದು 13 ಅಡಿ ಎತ್ತರದ ಕೃಷ್ಣ ಶಿಲೆಯಲ್ಲಿ ಕೆತ್ತಿದ ಪಂಚಮುಖಿ ಆಂಜನೇಯನ ಏಕ ಶಿಲಾ ವಿಗ್ರಹ ಎಂಬ ಹಿರಿಮೆ ಈ ಆಂಜನೇಯ ಕ್ಷೇತ್ರಕ್ಕೆ ಇದೆ.
ರಾಮಾಯಣ ಕಾಲದಲ್ಲಿ ಆಂಜನೇಯ ಸಂಜೀವಿನಿ ಪರ್ವತವನ್ನು ಹೊತ್ತುಕೊಂಡು ಹೋಗುವಾಗ ಅದರ ಸಣ್ಣ ತುಂಡೊಂದು ಈ ಪ್ರದೇಶದಲ್ಲಿ ಬೀಳುತ್ತದೆ, ಅದೇ ಈ ಬೆಟ್ಟ ಎಂಬ ಪ್ರತೀತಿ ಇದೆ. ಇಲ್ಲಿ ಬಹು ದೊಡ್ಡ ಆಂಜನೇಯ ದೇವಾಲಯವಿದ್ದು ಕಾಲಾಂತರದಲ್ಲಿ ಅದು ಕೊಚ್ಚಿ ಹೋಯಿತು, ಹಾಗೆ ಮತ್ತೆ ಇಲ್ಲಿ ಪಂಚಮುಖಿ ಆಂಜನೇಯನ ಪ್ರತಿಷ್ಠೆ ಮಾಡಿ ಪೂಜೆ, ಜಾತ್ರೆಗಳು ನಡೆಯುತ್ತಿದೆ ಎಂದು ಹೇಳುತ್ತಾರೆ. ಇಲ್ಲಿರುವ ಆಂಜನೇಯ ವಿಗ್ರಹವು ನರಸಿಂಹ, ವರಾಹ, ಹಯ ಸುಗ್ರೀವ ಮತ್ತು ಗರುಡ ಹೀಗೆ ವಿಶೇಷ ರೂಪವನ್ನು ಹೊಂದಿದೆ. ಇದು ಮಾತ್ರವಲ್ಲದೇ ವಿಶ್ವದಲ್ಲೇ ಅತಿ ದೊಡ್ಡ 22 ಅಡಿ ಎತ್ತರದ ಕೃಷ್ಣ ಶಿಲೆಯಲ್ಲಿ ರಚಿಸಲಾಗಿರುವ ಕೋದಂಡರಾಮ ವಿಗ್ರಹವನ್ನು ಇಲ್ಲಿ ಪ್ರತಿಷ್ಠೆ ಮಾಡಲಾಗಿದೆ .
ಮಳೆಗಾಲ ಬಂದರೆ ಸಾಕು ಪ್ರಕೃತಿಯ ರಮಣೀಯ ದೃಶ್ಯ ಹಾಗೂ ಕ್ಷೇತ್ರದ ಸೌಂದಯವನ್ನು ಕಾಣಲು ಎರಡು ಕಣ್ಣುಗಳೇ ಸಾಲದು . ಇಲ್ಲಿಯ ಉದ್ಯಾನವನ ಜನರನ್ನು ಒಂದು ಬಾರಿ ಸೆಳೆಯುವುದು ಖಂಡಿತ. ಇದು ಮಾತ್ರವಲ್ಲದೇ ಇಲ್ಲಿ ವಿಶೇಷವಾದ ರಾಮಾಯಣದ ಕಥೆಯನ್ನು ಸಾರುವ ಅನೇಕ ಕಲ್ಲಿನ ಕೆತ್ತನೆಗಳು ಇದೆ. ರಾಮಾಯಣದ ಭಾಗದಲ್ಲಿ ಈ ಕ್ಷೇತ್ರವು ಒಂದು ಎಂದು ಎನ್ನಲಾಗುತ್ತದೆ.
ಈ ಕಥೆಗಳು ಇಲ್ಲಿನ ಪಾವಿತ್ರತೆಯನ್ನು ಸಾರುವಂತೆ ಮಾಡಿರುವುದು ನಿಜಕ್ಕೂ ಸತ್ಯ. ಇದರ ಜೊತೆಗೆ ಇಲ್ಲಿ ಜೀವ ಸಂರಕ್ಷಣೆಯ ಗಿಡಮೂಲಿಕೆಗಳು ಔಷಧಿ ಸಸ್ಯಗಳು ಹೀಗೆ ಅನೇಕ ರೀತಿಯ ಗಿಡಗಳನ್ನು ಕಾಣಬಹುದು. ತುಳುನಾಡಿನ ಸಂಸ್ಕ್ರತಿಯನ್ನು ಬಿಂಬಿಸುವ ಯಕ್ಷಗಾನ, ಜನಪದ ಕಲೆ ಹೀಗೆ ಅನೇಕ ವಿಚಾರಗಳನ್ನು ಜನರಿಗೆ ಪರಿಚಯಿಸಲು ವಸ್ತು ಸಂಗ್ರಹಾಲ ವನ್ನು ಇಲ್ಲಿ ನಿರ್ಮಿಸಿದ್ದಾರೆ. ಇತಿಹಾಸ ಪ್ರಸಿದ್ದ ಈ ಹನುಮಗಿರಿಯನ್ನು ನೋಡುವುದೇ ಚಂದ. ಹನುಮಗಿರಿಯ ಆಂಜನೇಯನ ಮುಂದೆ ಭಕ್ತಿಯಿಂದ ಪ್ರಾರ್ಥಿಸಿದರೆ ಯಾವುದೇ ಸಮಸ್ಯೆ, ಕಾಯಿಲೆಗಳು ಪರಿಹಾರವಾಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ . ಈ ಹನುಮಗಿರಿಯ ವೀಕ್ಷಣೆಗಾಗಿ ಅನೇಕರು ಬೇರೆ ಬೇರೆ ಊರಿನಿಂದ ಇಲ್ಲಿ ಬರುತ್ತಾರೆ. ಶಕ್ತಿಶಾಲಿ ದೇವಾಲಯವಾಗಿರುವ ಹನುಮಾಗಿರಿ ಪ್ರವಾಸಿಗರ ಹಾಗೂ ಭಕ್ತಾದಿಗಳಿಗೆ ಮನಸ್ಸಿಗೆ ನಿರಾಳತೆಯನ್ನು ತಂದು ಕೊಡುತ್ತದೆ.
ಕವಿತಾ
ಆಳ್ವಾಸ್ ಕಾಲೇಜ್ ಮೂಡುಬಿದಿರೆ