ಬೆಂಗಳೂರಿನಲ್ಲಿ ಜೊಮಾಟೊ ಡೆಲಿವರಿ ಬಾಯ್ ಆಗಿದ್ದ ಸೂರಜ್ ಈಗ ಎಐ ಸ್ಟಾರ್ಟಪ್ ಫೌಂಡರ್
Zomato Delivery Boy to AI Startup CEO: ಸೂರಜ್ ಬಿಸ್ವಾಸ್, ಬೆಂಗಳೂರಿನ ಜೊಮ್ಯಾಟೊ ಡೆಲಿವರಿ ಬಾಯ್‌ನಿಂದ ಜಾಗತಿಕ AI ಸ್ಟಾರ್ಟ್‌ಅಪ್ 'ಅಸೆಸ್ಲಿ'ಯ CEO ಆದ ಅಸಾಮಾನ್ಯ ಯುವ ಉದ್ಯಮಿ. ಬಡತನ, ವೈದ್ಯನಾಗಬೇಕೆಂಬ ತಂದೆಯ ಕನಸುಗಳ ನಡುವೆ, ಗಿಗ್ ಕೆಲಸದ ಸಮಯವನ್ನು ಉಪಯೋಗಿಸಿಕೊಂಡು ಕೋಡಿಂಗ್ ಕಲಿತು, ತಮ್ಮದೇ ಆದ ಡೀಪ್-ಟೆಕ್ AI ಸಂಸ್ಥೆಯನ್ನು ಹುಟ್ಟುಹಾಕಿದರು. ಇಂದು ಅವರ ಸಂಸ್ಥೆ ಜಾಗತಿಕ ಮನ್ನಣೆ ಪಡೆದಿದೆ, ಇದು ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ.

ಕೆಲವೇ ವರ್ಷಗಳ ಹಿಂದೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ, ಕೈಯಲ್ಲೊಂದು ಝೊಮ್ಯಾಟೊ (Zomato) ಬ್ಯಾಗ್ ಇಟ್ಟುಕೊಂಡು ಬೈಕ್ ಓಡಿಸುತ್ತಿದ್ದ ಒಬ್ಬ ಹುಡುಗ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸ್ಟಾರ್ಟ್‌ಅಪ್‌ನ ಮಾಲೀಕನಾಗಿದ್ದಾನೆ. ಇದು ಯಾವುದೋ ಸಿನಿಮಾ ಸ್ಟೋರಿ ಅಲ್ಲ, ಬೆಂಗಳೂರಿನಲ್ಲೇ ನೆಲೆಸಿ ಯಶಸ್ಸು ಕಂಡ ಯುವ ಉದ್ಯಮಿ ಸೂರಜ್ ಬಿಸ್ವಾಸ್ (Suraj Biswas) ಅವರ ನಿಜ ಜೀವನದ ಸಾಹಸಗಾಥೆ.
ವೈದ್ಯನಾಗಬೇಕೆಂಬ ತಂದೆಯ ಕನಸು ಮತ್ತು ಬಡತನದ ಸವಾಲು
ಸೂರಜ್ ಅವರ ತಂದೆ ಒಬ್ಬ ಸಾಮಾನ್ಯ ದಿನಗೂಲಿ ಕಾರ್ಮಿಕರಾಗಿದ್ದರು. ಮಗನನ್ನು ದೊಡ್ಡ ಡಾಕ್ಟರ್ ಮಾಡಬೇಕೆಂಬ ಹಠದ ಕನಸು ಅವರದ್ದಾಗಿತ್ತು. ಆದರೆ ಉನ್ನತ ಶಿಕ್ಷಣದ ದಾರಿ ಅಷ್ಟು ಸುಲಭವಾಗಿರಲಿಲ್ಲ. ಕಾಲೇಜು ಫೀಸು, ಬೆಂಗಳೂರಿನ ಮನೆ ಬಾಡಿಗೆ, ಊಟ, ಪ್ರಯಾಣದ ಖರ್ಚುಗಳು ಹೆಚ್ಚಾಗುತ್ತಾ ಹೋದಾಗ, ಸೂರಜ್ ಪರಿಸ್ಥಿತಿಗೆ ಶರಣಾಗದೆ ತಾವೇ ಏನಾದರೂ ಮಾಡಲು ನಿರ್ಧರಿಸಿದರು.
ಜೊಮ್ಯಾಟೊ ಡೆಲಿವರಿ ಪಾರ್ಟ್ನರ್ ಆಗಿ ಹೆಜ್ಜೆ
ಹಣದ ಅಗತ್ಯಕ್ಕಾಗಿ ಸೂರಜ್ 2020-21ರ ಅವಧಿಯಲ್ಲಿ ಜೊಮ್ಯಾಟೊ ಕಂಪನಿಗೆ ಡೆಲಿವರಿ ಬಾಯ್ ಆಗಿ ಸೇರಿಕೊಂಡರು. ಅಲ್ಲಿ ಅವರು ತಿಂಗಳಿಗೆ 40,000 ದಿಂದ 50,000 ರೂಗಳವರೆಗೆ ಸಂಪಾದಿಸುತ್ತಿದ್ದರು. ಆದರೆ ಅವರಿಗೆ ಸಿಕ್ಕ ದೊಡ್ಡ ಲಾಭ ಎಂದರೆ ಹಣ ಮಾತ್ರವಲ್ಲ, ‘ಸಮಯದ ಲಭ್ಯತ’ (Flexibility). ಈ ಗಿಗ್ ಕೆಲಸದ (Gig Work) ಕಾರಣದಿಂದಾಗಿ ಅವರಿಗೆ ಬೇಕಾದ ಸಮಯದಲ್ಲಿ ಡೆಲಿವರಿ ಮಾಡಿ, ಉಳಿದ ಸಮಯದಲ್ಲಿ ಕಾಲೇಜು ತರಗತಿಗಳಿಗೆ ಹಾಜರಾಗಲು ಮತ್ತು ಸ್ವಂತವಾಗಿ ಕಲಿಯಲು ಸಾಧ್ಯವಾಯಿತು.
ಇದನ್ನೂ ಓದಿ: ನಿಜವಾದ ಶ್ರೀಮಂತಿಕೆ ಲಕ್ಷುರಿ ಕಾರು, ಬಂಗಲೆಗಳಲ್ಲ; ಏನೆಲ್ಲಾ ಅಂಶಗಳಲ್ಲಿ ನೀವು ಪಾಸಾಗಬೇಕು?
ಆರ್ಡರ್‌ಗಳ ನಡುವೆ ಕೋಡಿಂಗ್ ಕಲಿಕೆ
ಸೂರಜ್ ಅವರ ಬಳಿ ಇದ್ದದ್ದು ಒಂದು ಸ್ಮಾರ್ಟ್‌ಫೋನ್, ಒಂದು ಲ್ಯಾಪ್‌ಟಾಪ್ ಮತ್ತು ಇಂಟರ್ನೆಟ್ ಸಂಪರ್ಕ ಅಷ್ಟೇ. ಊಟದ ಆರ್ಡರ್ ಕೊಟ್ಟು ಕಾಯುವ ಮಧ್ಯದ ಬಿಡುವಿನ ಅವಧಿಯಲ್ಲಿ ಅವರು ಇಂಟರ್ನೆಟ್‌ನಲ್ಲಿ ಆನ್‌ಲೈನ್ ಟ್ಯುಟೋರಿಯಲ್ಸ್, ಓಪನ್ ಸೋರ್ಸ್ ಫೋರಂಗಳನ್ನು ನೋಡುತ್ತಾ ಸ್ವಂತವಾಗಿ ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಕರಗತ ಮಾಡಿಕೊಂಡರು. ಅರ್ಧರಾತ್ರಿಯವರೆಗೂ ಇಂಟರ್ನೆಟ್‌ನಲ್ಲಿ ತಜ್ಞರ ಜೊತೆ ಚರ್ಚಿಸಿ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದರು.
‘ಅಸೆಸ್ಲಿ’ (Assessli) ಎಐ ಸ್ಟಾರ್ಟ್‌ಅಪ್ ಉದಯ
ತಮ್ಮ ಈ ಕಠಿಣ ಪರಿಶ್ರಮ ಮತ್ತು ಎಐ ತಂತ್ರಜ್ಞಾನದ ಮೇಲಿನ ಜ್ಞಾನದಿಂದ ಸೂರಜ್ ‘ಅಸೆಸ್ಲಿ’ (Assessli) ಎಂಬ ಡೀಪ್-ಟೆಕ್ ಎಐ ಸ್ಟಾರ್ಟ್‌ಅಪ್ ಅನ್ನು ಸ್ಥಾಪಿಸಿದರು. ಇವರ ಕಂಪನಿಯು ಕೇವಲ ಕೃತಕ ಬುದ್ಧಿಮತ್ತೆಯನ್ನು ಮುನ್ಸೂಚನೆಗೆ ಬಳಸದೆ, “ಮಾನವನ ವರ್ತನೆ ಮತ್ತು ಬುದ್ಧಿಶಕ್ತಿಯನ್ನು ಅರ್ಥಮಾಡಿಕೊಳ್ಳುವ” ವಿಶಿಷ್ಟ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತದೆ.
“ನನ್ನ ಗುರಿ ಮಾರುಕಟ್ಟೆಯಲ್ಲಿ ದೊಡ್ಡ ಧ್ವನಿ ಮಾಡುವುದಲ್ಲ. ನನ್ನ ನಂತರವೂ ಉಳಿಯುವಂತಹ, ಕೇವಲ ಊಹೆ ಮಾಡುವುದರ ಬದಲಾಗಿ ಮನುಷ್ಯರನ್ನು ನಿಜವಾಗಿ ಅರ್ಥಮಾಡಿಕೊಳ್ಳುವ ತಂತ್ರಜ್ಞಾನವನ್ನು ಬಿಟ್ಟು ಹೋಗುವುದು” ಎಂದು ಸೂರಜ್ ಹೆಮ್ಮೆಯಿಂದ ಹೇಳುತ್ತಾರೆ.
ಜಾಗತಿಕ ಮಟ್ಟದ ಮನ್ನಣೆ
ಬೆಂಗಳೂರಿನ ರಸ್ತೆಗಳಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ ಸೂರಜ್ ಇಂದು 40 ಕ್ಕೂ ಹೆಚ್ಚು ತಾಂತ್ರಿಕ ತಜ್ಞರನ್ನು ಹೊಂದಿರುವ ಕಂಪನಿಯ ಸಿಇಒ. ಇವರ ‘ಅಸೆಸ್ಲಿ’ ಸಂಸ್ಥೆಯು ಜಾಗತಿಕ ಸ್ಟಾರ್ಟ್‌ಅಪ್ ಪ್ಲಾಟ್‌ಫಾರ್ಮ್ ಆದ F6S ನಲ್ಲಿ ವಿಶ್ವದ ‘ಟಾಪ್ 2 ಎಐ ಸ್ಟಾರ್ಟ್‌ಅಪ್‌ಗಳ’ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಭಾರತದ ಅತಿ ದೊಡ್ಡ ಶಾಲಾ ನೆಟ್‌ವರ್ಕ್‌ಗಳ ಜೊತೆಗೂ ಇವರ ಕಂಪನಿ ಈಗ ಕೈಜೋಡಿಸಿದೆ.
ಇದನ್ನೂ ಓದಿ: ಎಐ ಅಬ್ಬರದಲ್ಲಿ ಮುಂದೋಡಿದ್ದ ದೇಶಗಳಿಗೆ ಅದೇ ಎಐ ಹೊಡೆತ; ಭಾರತದಕ್ಕಿಂತ ಕೆಳಗೆ ಕುಸಿದ ತೈವಾನ್, ಕೊರಿಯನ್ ಮಾರುಕಟ್ಟೆ
ಸೂರಜ್ ನೀಡುವ ಸಂದೇಶ
ಇತ್ತೀಚೆಗೆ ಗಿಗ್ ಕೆಲಸಗಾರರ (ಡೆಲಿವರಿ ಬಾಯ್ಸ್) ಹಕ್ಕುಗಳ ಬಗ್ಗೆ ಅಂತರ್ಜಾಲದಲ್ಲಿ ಭಾರಿ ಚರ್ಚೆ ನಡೆದಾಗ ಸೂರಜ್ ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಜೊಮ್ಯಾಟೊ ಸಂಸ್ಥೆಗೆ ಬೆಂಬಲ ಸೂಚಿಸಿ ಬರೆದುಕೊಂಡಿದ್ದರು. “ಯಾರೂ ನಮಗೆ ಭವಿಷ್ಯವನ್ನು ಕಟ್ಟಲು ಅನುಮತಿ ನೀಡಬೇಕಾಗಿಲ್ಲ. ನಾವು ಕಾಯುವುದನ್ನು ನಿಲ್ಲಿಸಿ, ಶ್ರಮ ಪಟ್ಟು ನಮ್ಮ ಭವಿಷ್ಯವನ್ನು ನಾವೇ ಗಳಿಸಿಕೊಳ್ಳಬೇಕು. ಆದರೆ, ನಾವು ಎಲ್ಲಿಂದ ಬಂದೆವು ಎಂಬುದನ್ನು ಎಂದಿಗೂ ಮರೆಯಬಾರದು” ಎನ್ನುತ್ತಾರೆ ಸೂರಜ್.
ಡಿಜಿಟಲ್ ಭಾರತದಲ್ಲಿ ಪ್ರತಿಭೆ ಮತ್ತು ಇಂಟರ್ನೆಟ್ ಇದ್ದರೆ ಒಬ್ಬ ಸಾಮಾನ್ಯ ಡೆಲಿವರಿ ಬಾಯ್ ಕೂಡ ಜಾಗತಿಕ ಮಟ್ಟದ ಟೆಕ್ ಉದ್ಯಮಿಯಾಗಬಹುದು ಎಂಬುದಕ್ಕೆ ಸೂರಜ್ ಬಿಸ್ವಾಸ್ ಅವರೇ ಅತ್ಯುತ್ತಮ ಉದಾಹರಣೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




