
ನವದೆಹಲಿ: ಬ್ಯಾಂಕ್ ಗ್ರಾಹಕರ ಹಣಕ್ಕೆ ಕನ್ನ ಹಾಕಲು (Banking Frauds) ಇತ್ತೀಚಿನ ದಿನಗಳಲ್ಲಿ ವಂಚಕರು ಆನ್ಲೈನ್ ತಾಣಗಳ (Online Frauds) ಮೂಲಕ ಹೊಸ ಹೊಸ ಹಾದಿಗಳನ್ನು ಹುಡುಕುತ್ತಿರುತ್ತಾರೆ. ಎಸ್ಬಿಐ ಯೊನೊ ಖಾತೆಗೆ (SBI YONO Account) ಸಂಬಂಧಿಸಿದ ಸಂದೇಶವೊಂದು ಇತ್ತೀಚೆಗೆ ಹರಿದಾಡಿದ್ದು, ಅದು ಸುಳ್ಳು ಮಾಹಿತಿ ಎಂಬುದನ್ನು ಸರ್ಕಾರದ ಅಧಿಕೃತ ಫ್ಯಾಕ್ಟ್ ಚೆಕರ್ ತಾಣ ‘ಪಿಐಬಿ ಫ್ಯಾಕ್ಟ್ಚೆಕ್’ ಬಯಲಿಗೆಳೆದಿದೆ. ಸುಳ್ಳು ಹಾಗೂ ನಕಲಿ ಸಂದೇಶಗಳ ಬಗ್ಗೆ ಗ್ರಾಹಕರು ಎಚ್ಚರದಿಂದ ಇರಬೇಕು. ಅಪರಿಚಿತ ಮೂಲಗಳಿಂದ ಬಂದ ಸಂದೇಶಗಳನ್ನು ನಂಬಬಾರದು ಮತ್ತು ಲಿಂಕ್ಗಳನ್ನು ಕ್ಲಿಕ್ ಮಾಡಬಾರದು. ಇದರಿಂದ ಹಣ ಕಳೆದುಕೊಳ್ಳುವ ಅಪಾಯವಿದೆ ಎಂದು ‘ಪಿಐಬಿ ಫ್ಯಾಕ್ಟ್ಚೆಕ್’ ಎಚ್ಚರಿಕೆ ನೀಡಿದೆ.
‘ಪ್ಯಾನ್ ಕಾರ್ಡ್ ವಿವರ ಅಪ್ಡೇಟ್ ಮಾಡದಿದ್ದರೆ ಎಸ್ಬಿಐ ಯೊನೊ ಖಾತೆ ಬ್ಲಾಕ್ ಆಗುತ್ತದೆ. ಎಸ್ಬಿಐ ಯೊನೊ ಖಾತೆಯನ್ನು ಮರಳಿ ಆ್ಯಕ್ಟಿವೇಟ್ ಮಾಡಲು ಪ್ಯಾನ್ ವಿವರಗಳನ್ನು ಅಪ್ಡೇಟ್ ಮಾಡಿ’ ಎಂಬ ಸಂದೇಶ ಇತ್ತೀಚೆಗೆ ಅನೇಕರ ಮೊಬೈಲ್ಗೆ ಬಂದಿತ್ತು. ಇದು ಸುಳ್ಳು ಸಂದೇಶ ಎಂದು ‘ಪಿಐಬಿ ಫ್ಯಾಕ್ಟ್ಚೆಕ್’ ತಿಳಿಸಿದೆ. ಇಂಥ ಸ್ಕ್ಯಾಮ್ ಲಿಂಕ್ಗಳನ್ನು ಕ್ಲಿಕ್ ಮಾಡುವುದರಿಂದ ಬ್ಯಾಂಕ್ ಖಾತೆಯಿಂದ ಹಣ ಕಳವಾಗಬಹುದು. ವೈಯಕ್ತಿಕ ದತ್ತಾಂಶಗಳೂ ಸೋರಿಕೆಯಾಗಬಹುದು ಎಂದು ಅದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: Online Fraud Awareness: ಆನ್ಲೈನ್ ಶಾಪಿಂಗ್ ವೇಳೆ ವಂಚನೆಗಳಿಂದ ರಕ್ಷಣೆಗೆ ಈ ವಿಧಾನಗಳನ್ನು ಅನುಸರಿಸಿ
‘ಯೊನೊ ಖಾತೆ ಬ್ಲಾಕ್ ಆಗಿದೆ ಎಂಬ ಸಂದೇಶ ಎಸ್ಬಿಐ ಕಚೇರಿ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಬರುತ್ತದೆ. ಇ-ಮೇಲ್ ಅಥವಾ ಎಸ್ಎಂಎಸ್ ಮೂಲಕ ಇಂಥ ಸಂದೇಶದ ಬಂದಲ್ಲಿ ಪ್ರತಿಕ್ರಿಯಿಸಬೇಡಿ. ಬ್ಯಾಂಕಿಂಗ್ ಮಾಹಿತಿಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಇಂಥ ಸಂದೇಶ ನಿಮಗೆ ಬಂದಲ್ಲಿ ತಕ್ಷಣವೇ report.phishing@sbi.co.in ಗೆ ಮೇಲ್ ಮಾಡಿ’ ಎಂದು ‘ಪಿಐಬಿ ಫ್ಯಾಕ್ಟ್ಚೆಕ್’ ಸಲಹೆ ನೀಡಿದೆ.