Post Office FD: ಪೋಸ್ಟ್ ಆಫೀಸ್ನಲ್ಲಿ ಎಫ್ಡಿ ಇಡುವುದರ ಫಾಯಿದೆಗಳು ಏನು? ಇಲ್ಲಿದೆ ವಿವರಣೆ
ಫಿಕ್ಸೆಡ್ ಡೆಪಾಸಿಟ್ ಎಂಬುದು ಸುರಕ್ಷಿತ ಹಾಗೂ ನಿಶ್ಚಿತ ಆದಾಯ ತರುತ್ತದೆ. ಅದರಲ್ಲೂ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಉತ್ತಮ ಆಯ್ಕೆ ಆಗುತ್ತದೆ. ಅದು ಹೇಗೆ ಎಂಬುದರ ವಿವರ ಇಲ್ಲಿದೆ.
ಬಹಳ ಸುರಕ್ಷಿತವಾದ ಹಾಗೂ ಅದೇ ರೀತಿಯಲ್ಲಿ ನಿಶ್ಚಿತವಾದ ರಿಟರ್ನ್ಸ್ ನೀಡುವಂತಹ ಅತ್ಯುತ್ತಮ ಹೂಡಿಕೆ ಯಾವುದು ಅಂತ ಯಾರಾದರೂ ಪ್ರಶ್ನೆ ಮಾಡಿದರೆಮ ಅರೆ ಕ್ಷಣವೂ ಆಲೋಚಿಸದೆ ಫಿಕ್ಸೆಡ್ ಡೆಪಾಸಿಟ್ಸ್ ಅಂತ ಹೇಳಬಹುದು. ನಿಮಗೆ ಗೊತ್ತಿರಲಿ, ಅಂಚೆ ಇಲಾಖೆಯವರು ಫಿಕ್ಸೆಡ್ ಡೆಪಾಸಿಟ್ಸ್ ಮೇಲೆ ಉತ್ತಮ ಬಡ್ಡಿ ದರವನ್ನು ನೀಡುವುದರ ಜತೆಗೆ ಹಲವು ಉಳಿತಾಯ ಯೋಜನೆಗಳನ್ನು ಸಹ ತಂದಿದೆ. ಸರ್ಕಾರದಿಂದಲೇ ಈ ಯೋಜನೆಗಳಿಗೆ ಖಾತ್ರಿ ಇರುವುದರಿಂದ ಹಣಕ್ಕೆ ಮೋಸವಾಗಲ್ಲ. ಅಂಚೆ ಕಚೇರಿಯಲ್ಲಿ ಎಫ್ಡಿ ಇಡುವುದು ಬಲು ಸಲೀಸಿನ ಕೆಲಸ. ಅಂಚೆ ಇಲಾಖೆಯ ಮಾಹಿತಿ ಅನುಸಾರವಾಗಿ, 1, 2, 3 ಮತ್ತು 5 ವರ್ಷಗಳ ಮೆಚ್ಯೂರಿಟಿ ಅವಧಿಗೆ ಎಫ್ಡಿ ಮಾಡಿಸಬಹುದು. ಅಂಚೆ ಕಚೇರಿಯಲ್ಲಿ ಎಫ್ಡಿ ಇಡುವುದರಿಂದ ಆಗುವ ಅನುಕೂಲಗಳೇನು ಎಂಬುದರ ವಿವರ ಇಲ್ಲಿದೆ:
– ಅಂಚೆ ಕಚೇರಿಯಲ್ಲಿನ ಎಫ್ಡಿ ಮೊತ್ತಕ್ಕೆ ಭಾರತ ಸರ್ಕಾರವೇ ಗ್ಯಾರಂಟಿ
– ಎಫ್ಡಿ ಪಡೆಯವ ನಿಯಮ ಮತ್ತು ನಿಬಂಧನೆಗಳು ಸರ್ಕಾರದ ಯೋಜನೆಗಳಿಗೆ ತಕ್ಕಂತೆಯೇ ಇದೆ. ಈ ಕಾರಣಕ್ಕೆ ಹೂಡಿಕೆದಾರರ ಮೊತ್ತ ಸಂಪೂರ್ಣ ಸುರಕ್ಷಿತ.
– ಎಫ್ಡಿ ಅನ್ನು ಆಫ್ಲೈನ್ (ಕ್ಯಾಶ್, ಚೆಕ್) ಮೂಲಕ ಪೋಸ್ಟ್ ಆಫೀಸ್ನಲ್ಲಿ ಅಥವಾ ಆನ್ಲೈನ್ (ನೆಟ್ ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್) ಮೂಲಕವೂ ಆಗಬಹುದು.
– ಅಂಚೆಕಚೇರಿಯಲ್ಲಿ ಒಂದಕ್ಕಿಂತ ಹೆಚ್ಚು ಎಫ್ಡಿಯನ್ನು ಪಡೆಯಬಹುದು.
-5 ವರ್ಷಗಳ ಅವಧಿಗೆ ಎಫ್ಡಿ ಮಾಡಿದಲ್ಲಿ ಐಟಿ ರಿಟರ್ನ್ ಫೈಲ್ ಮಾಡುವಾಗ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ.
– ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ಎಫ್ಡಿಯನ್ನು ಸುಲಭವಾಗಿ ವರ್ಗಾವಣೆ ಮಾಡಬಹುದು.
– ಎಫ್ಡಿಗೆ ನಾಮಿನಿ ವ್ಯವಸ್ಥೆ ಲಭ್ಯ ಇದೆ.
– ಎಫ್ಡಿ ವ್ಯವಸ್ಥೆಗೆ ಪೋಸ್ಟ್ ಆಫೀಸ್ನಲ್ಲಿ ಬ್ಯಾಂಕ್ ಅಕೌಂಟ್ ಇರಬೇಕು. ಚೆಕ್ ಅಥವಾ ಕ್ಯಾಶ್ ಪಾವತಿಸುವ ಮೂಲಕ ಖಾತೆಯನ್ನು ತೆರೆಯಬಹುದು. ಖಾತೆಯನ್ನು ತೆರೆಯುವುದಕ್ಕೆ ಕನಿಷ್ಠ ರೂ. 1000 ಅಗತ್ಯ. ಈ ಖಾತೆಗೆ ಗರಿಷ್ಠ ಮಿತಿ ಅನ್ನೋದು ಇಲ್ಲ.
– 7 ದಿನದಿಂದ ಒಂದು ವರ್ಷದ ಅವಧಿಗೆ ಎಫ್ಡಿ ಮೇಲೆ ಪೋಸ್ಟ್ ಆಫೀಸ್ನಲ್ಲಿ ಶೇ 5.50ರಷ್ಟು ಬಡ್ಡಿ ಸಿಗುತ್ತದೆ. 1 ವರ್ಷ, 2 ವರ್ಷ ಮತ್ತು 3 ವರ್ಷದ ಅವಧಿಗೆ ಇದೇ ಬಡ್ಡಿ ದರ ಇರಲಿದೆ. 3ರಿಂದ 5 ವರ್ಷದ ಅವಧಿಗೆ ಪೋಸ್ಟ್ ಆಫೀಸ್ ಬ್ಯಾಂಕ್ನಲ್ಲಿ ಶೇ 6.70 ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: ಕೊವಿಡ್ 19 ಲಸಿಕೆ ಹಾಕಿಸಿಕೊಂಡವರಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ ಎಫ್ಡಿ ಮೇಲೆ ಹೆಚ್ಚುವರಿ ಬಡ್ಡಿ
(Personal Finance: Here is the benefits of fixed deposits of post office account)