ಹ್ಯಾಂಡ್ಸಮ್ ಹಂಕ್ ಆದ ವಿಕ್ಕಿ ಕೌಶಲ್
ಬೆಂಗಳೂರಿಗನ ಖಾತೆಯಿಂದ 90 ಲಕ್ಷ ಹಣ ಕಾಣದಂತೆ ಮಾಯ; ಖದೀಮರು 2 ವರ್ಷದಲ್ಲಿ5,000 ಬಾರಿ ಕನ್ನ ಹಾಕಿದರೂ ಗೊತ್ತಾಗದೇಹೋಯಿತಾ?
Bengalurean Lost Rs 90 Lakh to Cyber Fraud: ಬೆಂಗಳೂರಿನ ಸಗಟು ವ್ಯಾಪಾರಿಯೊಬ್ಬರ ಖಾತೆಯಿಂದ ದುಷ್ಕರ್ಮಿಗಳು ಒಂದೂವರೆ ವರ್ಷದ ಅಂತರದಲ್ಲಿ 90 ಲಕ್ಷ ರೂ ಹಣ ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ಐದು ಸಾವಿರ ಬಾರಿ ಹಣವನ್ನು ಹಿಂಪಡೆಯಲಾಗಿದ್ದರೂ ಒಮ್ಮೆಯೂ ಈ ವ್ಯಕ್ತಿಗೆ ಅಲರ್ಟ್ ಬಂದಿಲ್ಲದಿರುವುದು ಅಚ್ಚರಿ ಮೂಡಿಸಿದೆ.
ಬೆಂಗಳೂರು, ಆಗಸ್ಟ್ 18: ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಾಕಷ್ಟು ಬಲಿಷ್ಠಗೊಳಿಸಲಾಗಿದ್ದರೂ ಆನ್ಲೈನ್ ವಂಚನೆ (Online Fraud) ಮೂಲಕ ದುಷ್ಕರ್ಮಿಗಳು ಹಣ ಲಪಟಾಯಿಸುವ ಘಟನೆಗಳು ನಿಂತಿಲ್ಲ. ನೀವು ಎಷ್ಟೇ ಹುಷಾರಾಗಿದ್ದರೂ ದುಷ್ಕರ್ಮಿಗಳು ಯಾಮಾರಿಸುವ ಪ್ರಯತ್ನ ಬಿಡೋದಿಲ್ಲ. ಬೆಂಗಳೂರಿನಲ್ಲಿ ಸಣ್ಣ ಉದ್ಯಮಿಯೊಬ್ಬರು ತಮಗೇ ಅರಿವಿಲ್ಲದಂತೆ 90 ಲಕ್ಷ ರು ಹಣವನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಒಂದೂವರೆ ವರ್ಷದ ಅಂತರದಲ್ಲಿ ಈ ಉದ್ಯಮಿಯ ಬ್ಯಾಂಕ್ ಖಾತೆಯಿಂದ 5,000 ಬಾರಿ ದುಷ್ಕರ್ಮಿಗಳು ಹಣ ಪಡೆದಿದ್ದಾರೆ. ಇವೆಲ್ಲವೂ 2021ರಿಂದ 2023ರವರೆಗೆ 18 ತಿಂಗಳ ಅಂತರದಲ್ಲಿ ನಡೆದಿದೆ. ಇವ್ಯಾವುವೂ ಈ ವ್ಯಕ್ತಿಗೆ ಗೊತ್ತಾಗಿಲ್ಲ. ಇತ್ತೀಚೆಗೆ ಯಾರಿಗೂ ಹಣ ಪಾವತಿ ಮಾಡಬೇಕಾಗಿ ಬಂದು ಪ್ರಯತ್ನಿಸಿದಾಗ ಬ್ಯಾಲನ್ಸ್ ಇಲ್ಲದಿರುವುದು ತಿಳಿದು ಆಘಾತಗೊಂಡಿದ್ದಾರೆ. ಈಸ್ಟ್ ಸಿಇಎನ್ (Cyber Crime PS) ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಯಾರಿಗೂ ಕಾರ್ಡ್ ಕೊಟ್ಟಿಲ್ಲ, ಒಟಿಪಿ ಹೇಳಿಲ್ಲ, ಅಲರ್ಟ್ ಬಂದಿಲ್ಲ
ಬೆಂಗಳೂರಿನಲ್ಲಿ ಹೋಲ್ಸೇಲ್ ಅಂಗಡಿ ಇಟ್ಟುಕೊಂಡಿರುವ 62 ವರ್ಷದ ಈ ಉದ್ಯಮಿ ತನ್ನ ಬ್ಯಾಂಕ್ ಖಾತೆಯಲ್ಲಿದ್ದ 90 ಲಕ್ಷ ರೂ ಹಣ ಏನು ಆಯಿತು ಎಂದು ಚಿಂತಾಕ್ರಾಂತರಾಗಿದ್ದಾರೆ. ಸಾಲದ ಸುಳಿಗೆ ಸಿಲುಕಿರುವ ಅವರು ಈಗ ತಮ್ಮ ಅಂಗಡಿ ಮಾರುವ ಪರಿಸ್ಥಿತಿಗೆ ಬಂದಿದ್ದಾರೆ.
ಈ ವ್ಯಕ್ತಿ ತನ್ನ ಎಟಿಎಂ ಕಾರ್ಡನ್ನು ಮನೆಯಲ್ಲೇ ಇಟ್ಟಿದ್ದು ಯಾವತ್ತೂ ಬಳಸಿಲ್ಲ. ಹೀಗಾಗಿ, ಎಟಿಎಂ ಸೆಂಟರ್ಗಳಲ್ಲಿ ಕಾರ್ಡ್ ಸ್ಕಿಮಿಂಗ್ ಮೂಲಕ ದುಷ್ಕರ್ಮಿಗಳು ಮಾಹಿತಿ ಕದ್ದಿರುವ ಸಾಧ್ಯತೆ ಇಲ್ಲ. ಹಣ ವರ್ಗಾವಣೆ ಆಗಿದ್ದಕ್ಕೆ ಮೊಬೈಲ್ಗೆ ಮೆಸೇಜ್ಗಳೂ ಬಂದಿಲ್ಲ. ಯಾವುದೇ ಒಟಿಪಿಯೂ ಬಂದಿಲ್ಲ ಎಂದು ಇವರು ಹೇಳುತ್ತಾರೆ.
ಇದನ್ನೂ ಓದಿ: RBI UDGAM Portal: ಬ್ಯಾಂಕುಗಳಲ್ಲಿ ನಿಮ್ಮ ಅನ್ಕ್ಲೈಮ್ಡ್ ಡೆಪಾಸಿಟ್ ಹುಡುಕಲು ಆರ್ಬಿಐನಿಂದ ಉಡ್ಗಮ್; ಈ ಪೋರ್ಟಲ್ ಬಳಕೆ ಹೇಗೆ?
ಪೊಲೀಸರು ಮತ್ತು ಬ್ಯಾಂಕು ಹೇಳುವುದೇನು?
ಈ ವ್ಯಕ್ತಿಯ ಕಾರ್ಡನ್ನು ಸ್ಕಿಮಿಂಗ್ ಮಾಡಿ ದುಷ್ಕರ್ಮಿಗಳು ಹಣ ಲಪಟಾಯಿಸಿರಬಹುದು. ಅಥವಾ ಗೊತ್ತಿರುವ ವ್ಯಕ್ತಿಯಿಂದ ಈ ವಹಿವಾಟುಗಳು ನಡೆದಿರಬಹುದು ಎಂದು ಸೈಬರ್ ಪೊಲೀಸರು ಸದ್ಯಕ್ಕೆ ಶಂಕಿಸಿದ್ದಾರೆ.
ಬ್ಯಾಂಕ್ ಅನ್ನು ಸಂಪರ್ಕಿಸಿರುವ ಪೊಲೀಸರು, ಆ ಎಲ್ಲಾ ವಹಿವಾಟುಗಳು ಯಾವ್ಯಾವ ಸ್ಥಳಗಳಿಂದ ನಡೆದವು ಎಂಬ ವಿವರ ಕೇಳಿದ್ದಾರೆನ್ನಲಾಗಿದೆ.
ಇನ್ನು, ಐದು ಸಾವಿರ ಬಾರಿ ವಹಿವಾಟುಗಳು ನಡೆದರೂ ಬ್ಯಾಂಕ್ ವತಿಯಿಂದ ವ್ಯಕ್ತಿಗೆ ಯಾವುದೇ ಅಲರ್ಟ್ ಮೆಸೇಜ್ ಬಂದಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನು ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಿದ್ದು, ವ್ಯಕ್ತಿಯ ಮೊಬೈಲ್ ನಂಬರ್ ಬದಲಾಗಿರುವುದಾಗಲೀ, ಅಥವಾ ಟ್ರಾನ್ಸಾಕ್ಷನ್ ಅಲರ್ಟ್ ಅನ್ನು ಡಿಸೇಬಲ್ ಮಾಡಿರುವುದಾಗಲೀ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ