ಭಾರತ್ಪೇ ಸಹ ಸಂಸ್ಥಾಪಕ ಅಶ್ನೀರ್ ಗ್ರೋವರ್ ದಂಪತಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕೊಟಕ್ ಮಹೀಂದ್ರಾ ಬ್ಯಾಂಕ್
ಭಾರತ್ಪೇ ಸಹಸಂಸ್ಥಾಪಕ ಅಶ್ನೀರ್ ಗ್ರೋವರ್ ಮತ್ತು ಅವರ ಹೆಂಡತಿ ಮಾಧುರಿ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಕೊಟಕ್ ಮಹೀಂದ್ರಾ ಬ್ಯಾಂಕ್ ಹೇಳಿದೆ. ಯಾವುದರ ಹಿನ್ನೆಲೆಯಲ್ಲಿ ಹೀಗೆ ಹೇಳಿದೆ ಎಂಬ ವಿವರ ಇಲ್ಲಿದೆ.
ಕೊಟಕ್ ಮಹೀಂದ್ರಾ ಬ್ಯಾಂಕ್ ಭಾನುವಾರದಂದು ಹೇಳಿರುವ ಪ್ರಕಾರ, ಫಿನ್ಟೆಕ್ ಭಾರತ್ಪೇ ಸಹ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆದ ಅಶ್ನೀರ್ ಗ್ರೋವರ್ ಮತ್ತು ಅವರ ಪತ್ನಿ ಮಾಧುರಿ ವಿರುದ್ಧ “ಕಾನೂನು ಕ್ರಮ” ಕೈಗೊಳ್ಳಲು ಮುಂದಾಗಿದೆ. ನಿಂದನೆಯ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ಈ ನಿರ್ಧಾರಕ್ಕೆ ಬರಲಾಗಿದೆ. ವಿಸ್ತೃತವಾಗಿ ಕಾರಣಗಳನ್ನು ತಿಳಿಸದೆ ಇದೇ ವಿಚಾರವಾಗಿ ಅಕ್ಟೋಬರ್ 30ನೇ ತಾರೀಕಿನಂದು ದಂಪತಿಗೆ ನೋಟಿಸ್ ಕಳಿಸಿದ್ದರ ಬಗ್ಗೆ ಕೊಟಕ್ ಮಹೀಂದ್ರಾ ಬ್ಯಾಂಕ್ ಹೇಳಿದೆ. ಮಾಧ್ಯಮಗಳ ವರದಿ ಮಾಡಿರುವಂತೆ, ನೈಕಾ ಐಪಿಒದಲ್ಲಿ ಷೇರು ವಿತರಣೆ ಮತ್ತು ಹಣಕಾಸು ನೆರವು ಪಡೆಯುವುದಕ್ಕೆ ವಿಫಲವಾಗಿರುವುದಕ್ಕೆ ಈ ದಂಪತಿ ಬ್ಯಾಂಕ್ ಮೇಲೆ ಆರೋಪ ಮಾಡಿದ್ದು, ಹಾನಿಗೆ ಪರಿಹಾರವಾಗಿ 500 ಕೋಟಿ ರೂಪಾಯಿ ಕೇಳಿದ್ದಾರೆ.
“ಆ ನೋಟಿಸ್ ನಮಗೆ ತಲುಪಿದೆ. ಆ ಸಮಯದಲ್ಲಿ ಸೂಕ್ತವಾಗಿ ಉತ್ತರಿಸಿದ್ದೇವೆ. ಗ್ರೋವರ್ ಅಸಂಬದ್ಧ ಭಾಷೆ ಬಳಕೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ದಾಖಲೆಗಳನ್ನು ಮುಂದಿಟ್ಟಿದ್ದೇವೆ. ಸೂಕ್ತ ಕಾನೂನು ಕ್ರಮವನ್ನು ಜರುಗಿಸಲಾಗುವುದು,” ಎಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಬ್ಯಾಂಕ್ ತಿಳಿಸಿದೆ. ನಿರ್ದಿಷ್ಟವಾಗಿ ಯಾವ ಅಂಶದ ಮೇಲೆ ಕಾನೂನು ಕ್ರಮ ಜರುಗಿಸುವುದಕ್ಕೆ ಮುಂದಾಗಿರುವುದು ಎಂಬ ಬಗ್ಗೆ ವಿವರಣೆ ಇಲ್ಲ. ಮಾಧ್ಯಮಗಳು ಭಾರತ್ಪೇ ವಕ್ತಾರರನ್ನು ಈ ಬಗ್ಗೆ ಸಂಪರ್ಕಿಸಲು ಯತ್ನಿಸಿದಾಗ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಕಳೆದ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ಆಡಿಯೋ ಕ್ಲಿಪ್ವೊಂದು ಕಾಣಿಸಿಕೊಂಡಿತ್ತು. ಅದರ ಪ್ರಕಾರವಾಗಿ, ಈ ದಂಪತಿ ಬ್ಯಾಂಕ್ನ ರಿಲೇಷನ್ಷಿಪ್ ಮ್ಯಾನೇಜರ್ ಜತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಅದಾಗಿತ್ತು. ಒಬ್ಬ ಪುರುಷರ ಧ್ವನಿ ಬೈಗುಳ ಮೂಲಕ ನಿಂದಿಸಿದರೆ, ಮತ್ತೊಂದು ಪುರುಷರ ಧ್ವನಿ ಸಮಾಧಾನ ಮಾಡಲು ಯತ್ನಿಸಿದೆ. ಅಲ್ಲಿರುವುದು ಅಶ್ನೀರ್ ಗ್ರೋವರ್ ದಂಪತಿಯ ಕ್ಲಿಪ್ ಎನ್ನಲಾಗುತ್ತಿದೆ. ಆದರೆ ಆ ಟೇಪ್ “ನಕಲಿ” ಎನ್ನುತ್ತಿದ್ದಾರೆ ಗ್ರೋವರ್.
ನನ್ನಿಂದ 2,40,000 ಯುಎಸ್ಡಿ ಬಿಟ್ಕಾಯಿನ್ ವಸೂಲಿ ಮಾಡಿಕೊಳ್ಳುವ ಸಲುವಾಗಿ ಕೆಲವು ವಂಚಕರು ಈ ನಕಲಿ ಆಡಿಯೋ ಬಿಟ್ಟಿದ್ದಾರೆ. ಆದರೆ ಅದಕ್ಕೆ ನಾನು ನಿರಾಕರಿಸಿದ್ದೇ. “ನನ್ನ ನಡವಳಿಕೆ ಉತ್ತಮವಾಗಿ, ಮತ್ತು ಇಂಟರ್ನೆಟ್ನಲ್ಲಿ ಸಾಕಷ್ಟು ವಂಚಕರಿದ್ದಾರೆ,” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭಾರತ್ ಪೇ 150 ನಗರಗಳಲ್ಲಿ 75 ಲಕ್ಷ ವರ್ತಕರಿಗೆ ಸೇವೆ ಒದಗಿಸುತ್ತಿದೆ. ಕಂಪೆನಿಯ ಆರಂಭದಿಂದ ಇಲ್ಲಿಯ ತನಕ ವರ್ತಕರಿಗೆ 3000 ಕೋಟಿ ರೂಪಾಯಿಯಷ್ಟು ಸಾಲವನ್ನು ವಿತರಣೆ ಮಾಡಿದೆ. ಸಾಲ ಹಾಗೂ ಈಕ್ವಿಟಿಯಾಗಿ ಕಂಪೆನಿಯು ಇಲ್ಲಿಯ ತನಕ 650 ಮಿಲಿಯನ್ ಯುಎಸ್ಡಿ ಸಂಗ್ರಹ ಮಾಡಿದೆ. ಅದರ ಹೂಡಿಕೆದಾರರಲ್ಲಿ ಟೈಗರ್ ಗ್ಲೋಬಲ್, ಡ್ರಾಗೊನೀರ್ ಇನ್ವೆಸ್ಟ್ಮೆಂಟ್ ಗ್ರೂಪ್, ಸ್ಟೆಡ್ಫಾಸ್ಟ್ ಕ್ಯಾಪಿಟಲ್, ಕೋಟ್ಯೂ ಮ್ಯಾನೇಜ್ಮೆಂಟ್, ರಿಬಿಟ್ ಕ್ಯಾಪಿಟಲ್ ಇತರರು ಒಳಗೊಂಡಿದ್ದಾರೆ.
ಇದನ್ನೂ ಓದಿ: Kotak Mahindra Bank: ಕೊಟಕ್ ಮಹೀಂದ್ರಾ ಬ್ಯಾಂಕ್ನಿಂದ ಕನಿಷ್ಠ ಮಟ್ಟದ ಬಡ್ಡಿ ದರಕ್ಕೆ ಗೃಹ ಸಾಲ; ಇಲ್ಲಿದೆ ವಿವರ