Amazon: ಅಮೆಜಾನ್​ನಿಂದ ಎರಡು ವರ್ಷಗಳಲ್ಲಿ ಕಾನೂನು ವ್ಯಾಜ್ಯಗಳಿಗೆ 8546 ಕೋಟಿ ರೂ. ಖರ್ಚು ಎನ್ನುತ್ತಿದೆ ವರದಿ

ಇ ಕಾಮರ್ಸ್​ ಕಂಪೆನಿ ಅಮೆಜಾನ್​ನಿಂದ ಎರಡು ವರ್ಷದಲ್ಲಿ ಕಾನೂನು ವೆಚ್ಚಕ್ಕಾಗಿ ರೂ, 8546 ಕೋಟಿ ಖರ್ಚು ಮಾಡಲಾಗಿದೆ ಎಂದು ವರದಿಯೊಂದು ಹೇಳಿದೆ.

Amazon: ಅಮೆಜಾನ್​ನಿಂದ ಎರಡು ವರ್ಷಗಳಲ್ಲಿ ಕಾನೂನು ವ್ಯಾಜ್ಯಗಳಿಗೆ 8546 ಕೋಟಿ ರೂ. ಖರ್ಚು ಎನ್ನುತ್ತಿದೆ ವರದಿ
ಸಾಂದರ್ಭಿಕ ಚಿತ್ರ

ಅಮೆರಿಕದ ಇ-ಕಾಮರ್ಸ್ ಕಂಪೆನಿಯಾದ ಅಮೆಜಾನ್ ತನ್ನ ಕಾನೂನು ಪ್ರತಿನಿಧಿಗಳು ಭಾರತದಲ್ಲಿ ಪಾವತಿಸಿದ ಲಂಚದ ಆರೋಪದ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಲಾಗಿದೆ. 2018-20ರ ಅವಧಿಯಲ್ಲಿ ದೇಶದಲ್ಲಿ ಅಸ್ತಿತ್ವವನ್ನು ಕಾಯ್ದುಕೊಳ್ಳಲು 8,546 ಕೋಟಿ ರೂಪಾಯಿ ಅಥವಾ 1.2 ಬಿಲಿಯನ್ ಅಮೆರಿಕನ್ ಡಾಲರ್​ ಕಾನೂನು ವೆಚ್ಚಗಳನ್ನು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕ ಲೆಕ್ಕಪತ್ರಗಳ ಫೈಲಿಂಗ್​ ಬಗ್ಗೆ ಮಾಹಿತಿ ಇರುವ ಮೂಲಗಳು ತಿಳಿಸಿರುವಂತೆ, ಅಮೆಜಾನ್​ಗೆ ಸೇರಿದ – ಅಮೆಜಾನ್ ಇಂಡಿಯಾ ಲಿಮಿಟೆಡ್ (ಹೋಲ್ಡಿಂಗ್ ಕಂಪನಿ), ಅಮೆಜಾನ್ ರೀಟೇಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಅಮೆಜಾನ್ ಸೆಲ್ಲರ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಅಮೆಜಾನ್ ಟ್ರಾನ್ಸ್​ಪೋರ್ಟೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಅಮೆಜಾನ್ ಹೋಲ್ ಸೇಲ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಇಂಟರ್​ನೆಟ್ ಸೇವೆಗಳು ಪ್ರೈವೇಟ್ ಲಿಮಿಟೆಡ್ (AWS)- 2018-19ರ ಅವಧಿಯಲ್ಲಿ ಭಾರತದಲ್ಲಿ 3,420 ಕೋಟಿ ರೂಪಾಯಿ ಮತ್ತು 2019-20ರ ಅವಧಿಯಲ್ಲಿ 5,126 ಕೋಟಿ ರೂಪಾಯಿಗಳನ್ನು ಕಾನೂನು ಶುಲ್ಕಕ್ಕಾಗಿ ಪಾವತಿಸಿದೆ.

ಕಾನೂನು ಸಮರ
ಫ್ಯೂಚರ್ ಸಮೂಹದ ಸ್ವಾಧೀನಕ್ಕೆ ಸಂಬಂಧಿಸಿದಂತೆ ಅಮೆಜಾನ್ ಕಾನೂನು ಸಮರದಲ್ಲಿ ಸಿಲುಕಿಕೊಂಡಿದೆ ಮತ್ತು ಭಾರತದ ಸ್ಪರ್ಧಾ ಆಯೋಗದ (ಸಿಸಿಐ) ತನಿಖೆಯನ್ನು ಎದುರಿಸುತ್ತಿದೆ. ಕಾನೂನು ಶುಲ್ಕದ ಬಗ್ಗೆ ಪ್ರತಿಕ್ರಿಯಿಸಲು ಕಂಪೆನಿಯು ನಿರಾಕರಿಸಿದಾಗ, ವ್ಯಾಪಾರಿಗಳ ಸಂಸ್ಥೆ CAIT ತನ್ನ ಆದಾಯದ ಶೇಕಡಾ 20ರಷ್ಟನ್ನು ವಕೀಲರ ಮೇಲೆ ಖರ್ಚು ಮಾಡುವುದು ಪ್ರಶ್ನಾರ್ಹ ಎಂದು ಹೇಳಿದೆ. “ಕಾನೂನು ವೃತ್ತಿಪರ ಶುಲ್ಕಗಳ ಅಡಿಯಲ್ಲಿ ಖರ್ಚು ಮಾಡಿದ ದೊಡ್ಡ ಮೊತ್ತವು ಅಮೆಜಾನ್ ಮತ್ತು ಅದರ ಅಂಗಸಂಸ್ಥೆಗಳು ತಮ್ಮ ಹಣಕಾಸಿನ ವಿಭಾಗಗಳನ್ನು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವುದಕ್ಕೆ ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ,” ಎಂದು CAIT ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್​ವಾಲ್ ಅವರು ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಅವರಿಗೆ ಪತ್ರ ಬರೆದಿದ್ದಾರೆ.

ಅವರು ತಮ್ಮ ವಾದಕ್ಕೆ ಯಾವುದೇ ಪುರಾವೆ ನೀಡದೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಸೋಮವಾರದ ವರದಿಯ ಪ್ರಕಾರ, ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಮೇಲೆ ತನ್ನ ಕೆಲವು ಕಾನೂನು ಪ್ರತಿನಿಧಿಗಳ ವಿರುದ್ಧ ಅಮೆಜಾನ್ ತನಿಖೆಯನ್ನು ಆರಂಭಿಸಿದೆ ಎಂದು ಹೇಳಿದೆ. ಈ ವಿಷಯದಲ್ಲಿ ಅದರ ಹಿರಿಯ ಕಾರ್ಪೊರೇಟ್ ವಕೀಲರನ್ನು ರಜೆ ಮೇಲೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಅಸಮರ್ಪಕ ಕ್ರಮಗಳ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಲು ಅವುಗಳನ್ನು ಸಂಪೂರ್ಣವಾಗಿ ತನಿಖೆ ಮಾಡುತ್ತದೆ ಎಂದು ಕಂಪನಿ ಹೇಳಿತ್ತು. ಅದು ಆರೋಪಗಳನ್ನು ದೃಢೀಕರಿಸಲಿಲ್ಲ ಅಥವಾ ನಿರಾಕರಿಸದಿದ್ದರೂ ಅಮೆಜಾನ್ “ಭ್ರಷ್ಟಾಚಾರವನ್ನು ಯಾವ ರೀತಿಯೂ ಸಹಿಸುವುದಿಲ್ಲ” (ಝೀರೋ ಟಾಲರೆನ್ಸ್) ಎಂದು ಹೇಳಿತ್ತು.

ಶೇಕಡಾ 20ಕ್ಕಿಂತಲೂ ಹೆಚ್ಚು ಹಣ ವಕೀಲರಿಗೆ
“ಪ್ರಪಂಚದಾದ್ಯಂತ ಯಾವ ಕಂಪೆನಿಯು ತನ್ನ ಸಂಚಿತ ಆದಾಯದ ಶೇಕಡಾ 20ಕ್ಕಿಂತಲೂ ಹೆಚ್ಚು ಹಣವನ್ನು ವಕೀಲರಿಗೆ ಪಾವತಿಸುವುದಕ್ಕಾಗಿ ಖರ್ಚು ಮಾಡುತ್ತಿದೆ ಮತ್ತು ಅದು ವರ್ಷದಿಂದ ವರ್ಷಕ್ಕೆ ನಷ್ಟವನ್ನು ಉಂಟು ಮಾಡುತ್ತದೆ. ಆದರೆ ಹೌದು, ಇದು ಭಾರತದಲ್ಲಿ ಜಾಗತಿಕ ಇ-ಟೇಲರ್ ಅಮೆಜಾನ್​ನಿಂದ ಆಗಿದೆ,” ಎಂದು ಸಿಎಐಟಿ ಮಂಗಳವಾರ ಆರೋಪಿಸಿದೆ. ಎರಡು ವರ್ಷಗಳಲ್ಲಿ (2018-20) ಸುಮಾರು 45,000 ಕೋಟಿ ರೂಪಾಯಿಗಳ ವಹಿವಾಟು ನಡೆಸಿದ್ದು, ಕಾನೂನು ಮತ್ತು ವೃತ್ತಿಪರ ಶುಲ್ಕಗಳಿಗಾಗಿ ಅಮೆಜಾನ್ ಸುಮಾರು 8,500 ಕೋಟಿ ಖರ್ಚು ಮಾಡಿದೆ ಎಂದು ಖಂಡೇಲ್​ವಾಲ್ ಹೇಳಿಕೆಯಲ್ಲಿ ಹೇಳಿದ್ದಾರೆ.

ಭಾರತದ ಸಿಸಿಐನಿಂದ ವಿವಿಧ ತನಿಖೆಯನ್ನು ಅಮೆಜಾನ್ ಎದುರಿಸುತ್ತಿದೆ. ಯುಎಸ್ ಮೂಲದ ಸಂಸ್ಥೆಯು ಫ್ಯೂಚರ್ ಸಮೂಹದೊಂದಿಗೆ ಕಾನೂನು ವ್ಯಾಜ್ಯ ನಡೆಸುತ್ತಿದೆ. ಫ್ಯೂಚರ್ ಸಮೂಹ ಮತ್ತು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ಮಧ್ಯೆ 24,713 ಕೋಟಿ ರೂಪಾಯಿ ಒಪ್ಪಂದಕ್ಕೆ ಅಮೆಜಾನ್ ಆಕ್ಷೇಪ ವ್ಯಕ್ತಪಡಿಸಿದೆ. ಸಿಂಗಾಪೂರ್ ಇಂಟರ್​ನ್ಯಾಷನಲ್ ಆರ್ಬಿಟ್ರೇಷನ್ ಸೆಂಟರ್ (SIAC)ಗೆ ಫ್ಯೂಚರ್​ ರೀಟೇಲ್​ ಅನ್ನು ಎಳೆದಿತ್ತು. ಪ್ರತಿಸ್ಪರ್ಧಿ ರಿಲಯನ್ಸ್ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಮೂಲಕ ಫ್ಯೂಚರ್ ನಿಯಮವನ್ನು ಉಲ್ಲಂಘಿಸಿದೆ ಎಂದು ಅದು ವಾದಿಸಿದೆ. ಅಮೆಜಾನ್ ಮತ್ತು ಫ್ಯೂಚರ್ ಗ್ರೂಪ್ ಕೂಡ ಈ ವಿಷಯದ ಕುರಿತು ಸುಪ್ರೀಂ ಕೋರ್ಟ್ ಸೇರಿದಂತೆ ಭಾರತದ ನ್ಯಾಯಾಲಯಗಳಲ್ಲಿ ದಾವೆ ಹೂಡಿದ್ದವು. ಅಮೆಜಾನ್ ಕಂಪೆನಿಯು ಫ್ಯೂಚರ್​ ಕೂಪನ್‌ಗಳಲ್ಲಿ ಹೂಡಿಕೆದಾರನಾಗಿದ್ದು, ಅದು ಫ್ಯೂಚರ್ ರಿಟೇಲ್ ಲಿಮಿಟೆಡ್‌ನಲ್ಲಿ ಷೇರುದಾರ ಆಗಿದೆ.

ಇದನ್ನೂ ಓದಿ: Supreme Court: ಫ್ಲಿಪ್​ಕಾರ್ಟ್​, ಅಮೆಜಾನ್​ ವಿರುದ್ಧ ಸಿಸಿಐ ವಿಚಾರಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

(E Commerce Giant Amazon Spent Rs 8546 Crore For Legal Expenses According To Report)

Read Full Article

Click on your DTH Provider to Add TV9 Kannada