ನವೆಂಬರ್ನಲ್ಲಿ 14 ಲಕ್ಷದಷ್ಟು ಹೆಚ್ಚಿದ ಇಪಿಎಫ್ ಸದಸ್ಯರ ಸಂಖ್ಯೆ; ಉದ್ಯೋಗಾವಕಾಶವೂ ಹೆಚ್ಚಳ
Latest Payroll Data: 2024ರ ನವೆಂಬರ್ ತಿಂಗಳಲ್ಲಿ ಇಪಿಎಫ್ಒ ಸದಸ್ಯರ ಸೇರ್ಪಡೆಯ ನಿವ್ವಳ ಸಂಖ್ಯೆ 14.63 ಲಕ್ಷದಷ್ಟು ಏರಿದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ಇದರಲ್ಲಿ ಶೇ. 4.88ರಷ್ಟು, ಮತ್ತು ಹಿಂದಿನ ತಿಮಗಳಿಗೆ ಹೋಲಿಸಿದರೆ ಶೇ. 9.07ರಷ್ಟು ಏರಿಕೆ ಆಗಿದೆ. ಸೇರ್ಪಡೆಯಾಗಿರುವ ಹೊಸ ಸದಸ್ಯರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ 18ರಿಂದ 25 ವರ್ಷ ವಯೋಮಾನದವರಾಗಿದ್ದಾರೆ.
ನವದೆಹಲಿ, ಜನವರಿ 23: ನವೆಂಬರ್ ತಿಂಗಳಲ್ಲಿ ಇಪಿಎಫ್ ಸದಸ್ಯರ ಸಂಖ್ಯೆ 14.63 ಲಕ್ಷದಷ್ಟು ಹೆಚ್ಚಳವಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್ಒದಲ್ಲಿ 2023ರ ನವೆಂಬರ್ಗೆ ಹೋಲಿಸಿದರೆ 2024ರ ನವೆಂಬರ್ನಲ್ಲಿ ಇಪಿಎಫ್ ಸದಸ್ಯರ ಸಂಖ್ಯೆಯಲ್ಲಿ ಶೇ. 4.88ರಷ್ಟು ಏರಿಕೆ ಆಗಿದೆ. ಇನ್ನು, ಹಿಂದಿನ ತಿಂಗಳಿಗೆ ಹೋಲಿಸಿದರೆ (2024ರ ಅಕ್ಟೋಬರ್) ಇಪಿಎಫ್ ಸದಸ್ಯತ್ವತ್ವ ಸಂಖ್ಯೆಯಲ್ಲಿ ಶೇ. 9.07ರಷ್ಟು ಹೆಚ್ಚಳವಾಗಿದೆ. ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ದತ್ತಾಂಶದಿಂದ ಈ ಮಾಹಿತಿ ತಿಳಿದುಬಂದಿದೆ.
ಮೇಲೆ ಹೇಳಿದ ಇಪಿಎಫ್ ಸದಸ್ಯರ ಸೇರ್ಪಡೆ ಅಂಕಿ ಅಂಶವು ನಿವ್ವಳ ಸಂಖ್ಯೆಯಾಗಿದೆ. ದತ್ತಾಂಶದ ಪ್ರಕಾರ 2024ರ ನವೆಂಬರ್ನಲ್ಲಿ ಇಪಿಎಫ್ಒಗೆ 8.75 ಲಕ್ಷ ಹೊಸ ಸದಸ್ಯರ ಸೇರ್ಪಡೆಯಾಗಿದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ಈ ಸಂಖ್ಯೆಯಲ್ಲಿ ಶೇ. 18.80ಯಷ್ಟು ಹೆಚ್ಚಳವಾಗಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ. 16.58ರಷ್ಟು ಏರಿಕೆ ಆಗಿದೆ.
ಇದನ್ನೂ ಓದಿ: ಸೆಣಬಿಗೆ ಬೆಂಬಲ ಬೆಲೆ ಹೆಚ್ಚಳ; ಕ್ವಿಂಟಾಲ್ಗೆ ಈಗ 5,650 ರೂ; ಬೇರೆ ಬೆಳೆಗಳಿಗಿರುವ ಬೆಲೆಪಟ್ಟಿ
ಕುತೂಹಲಕಾರಿ ಸಂಗತಿ ಎಂದರೆ, ನವೆಂಬರ್ನಲ್ಲಿ ಬಂದ ಹೊಸ ಇಪಿಎಫ್ ಸದಸ್ಯರಲ್ಲಿ 18ರಿಂದ 25 ವರ್ಷ ವಯೋಮಾನದವರ ಗುಂಪಿನ ಸಂಖ್ಯೆ ಹೆಚ್ಚಿದೆ. ಅರ್ಧದಷ್ಟು ಹೊಸ ಸದಸ್ಯರು ಈ ಗುಂಪಿನವರೇ ಆಗಿದ್ದಾರೆ. 4.81 ಲಕ್ಷ ಹೊಸ ಸದಸ್ಯರು 18ರಿಂದ 25 ವರ್ಷ ವಯೋಮಾನದವರಾಗಿದ್ದಾರೆ.
ಇಪಿಎಫ್ಒಗೆ ಹೊಸ ಸದಸ್ಯರ ಸೇರ್ಪಡೆ ಎಂದರೆ ಮೊದಲ ಬಾರಿಗೆ ಇಪಿಎಫ್ ಅಕೌಂಟ್ಗಳನ್ನು ತೆರೆಯಲಾಗಿರುವುದು. 18ರಿಂದ 25 ವರ್ಷ ವಯೋಮಾನದವರು ಇಪಿಎಫ್ ಖಾತೆಯನ್ನು ಮೊದಲ ಬಾರಿಗೆ ತೆರೆಯುತ್ತಿದ್ದಾರೆಂದರೆ ಅವರಿಗದು ಮೊದಲ ಉದ್ಯೋಗಾವಕಾಶ ಆಗಿರುವ ಸಾಧ್ಯತೆ ಇದೆ. ಈ ಕಾರಣಕ್ಕೆ ಇದು ಉದ್ಯೋಗಸೃಷ್ಟಿ ಆಗಿರುವ ನಿದರ್ಶನವೆಂದು ಭಾವಿಸಬಹುದು.
ನವೆಂಬರ್ನಲ್ಲಿ ಇಪಿಎಫ್ಒದಲ್ಲಿ ದಾಖಲಾದ 8.74 ಲಕ್ಷ ಹೊಸ ಸದಸ್ಯರಲ್ಲಿ ಮಹಿಳೆಯರ ಸಂಖ್ಯೆ 2.40 ಲಕ್ಷ ಇದೆ. ಮತ್ತೊಂದು ಪ್ರಮುಖ ಸಂಗತಿ ಎಂದರೆ, ಆ ಒಂದು ತಿಂಗಳಲ್ಲಿ ಇಪಿಎಫ್ಒದಿಂದ ನಿರ್ಗಮಿಸಿದ 14.39 ಲಕ್ಷ ಸದಸ್ಯರು ಮತ್ತೆ ಸೇರ್ಪಡೆಯಾಗಿದ್ದಾರೆ. ಇದು ಇವರು ಉದ್ಯೋಗ ಬದಲಾವಣೆ ಮಾಡಿರುವುದನ್ನು ತೋರಿಸುತ್ತದೆ.
ಇದನ್ನೂ ಓದಿ: ಭಾರತೀಯ ಜಿನೋಮ್ ಡಾಟಾಬೇಸ್, ಐಬಿಡಿಸಿ ಪೋರ್ಟಲ್ ಆರಂಭ; ಬಯೋಟೆಕ್ ಸೂಪರ್ಪವರ್ ದೇಶವಾಗುವತ್ತ ಭಾರತದ ಹೆಜ್ಜೆ
2024ರ ನವೆಂಬರ್ನಲ್ಲಿ ಹೊಸ ಇಪಿಎಫ್ಒ ಸದಸ್ಯರ ಸೇರ್ಪಡೆಯ ನಿವ್ವಳ ಸಂಖ್ಯೆಯಲ್ಲಿ ರಾಜ್ಯಗಳ ಪಾಲನ್ನು ನೋಡುವುದಾದರೆ, ಮಹಾರಾಷ್ಟ್ರ ಅಗ್ರಸ್ಥಾನ ಪಡೆಯುತ್ತದೆ. ಶೇ. 20.86ರಷ್ಟು ಮಂದಿ ಈ ರಾಜ್ಯದವರಾಗಿದ್ದಾರೆ. ಕರ್ನಾಟಕ ಎರಡನೇ ಸ್ಥಾನ ಪಡೆಯುತ್ತದೆ. ಇವಲ್ಲದೇ ತಮಿಳುನಾಡು, ಹರ್ಯಾಣ, ಗುಜರಾತ್, ದೆಹಲಿ, ತೆಲಂಗಾಣ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಶೇ. 7ಕ್ಕಿಂತಲೂ ಹೆಚ್ಚು ಹೊಸ ಸದಸ್ಯರು ನವೆಂಬರ್ನಲ್ಲಿ ಸೇರ್ಪಡೆಯಾಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ