Adani Group: ಹೋಲ್ಸಿಮ್ 81,602 ಕೋಟಿ ರೂ. ಸ್ವಾಧೀನದ ನಂತರ ದೇಶದ ಎರಡನೇ ದೊಡ್ಡ ಸಿಮೆಂಟ್ ಉತ್ಪಾದಕ ಆಗಲಿರುವ ಗೌತಮ್ ಅದಾನಿ
ಹೋಲ್ಸಿಮ್ ಎಜಿ ಲಿಮಿಟೆಡ್ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಗೌತಮ್ ಅದಾನಿ ಭಾರತದ ಎರಡನೇ ಅತಿದೊಡ್ಡ ಸಿಮೆಂಟ್ ಉತ್ಪಾದಕರಾಗಲಿದ್ದಾರೆ.
ಅದಾನಿ ಸಮೂಹ ಹೋಲ್ಸಿಮ್ ಎಜಿಯ ಸಿಮೆಂಟ್ ವ್ಯವಹಾರವನ್ನು ಭಾರತದಲ್ಲಿ 10.5 ಬಿಲಿಯನ್ (1050 ಕೋಟಿ ಅಮೆರಿಕನ್ ಡಾಲರ್) ಡಾಲರ್ಗೆ ಸ್ವಾಧೀನಪಡಿಸಿಕೊಂಡಿದೆ. ಆ ಕಂಪೆನಿಯನ್ನು ಹತೋಟಿ ಮಾಡುವಷ್ಟು ಷೇರಿನ ಪಾಲನ್ನು ಪಡೆದುಕೊಳ್ಳುವ ಮೂಲಕ ದೇಶದಲ್ಲಿ ಎರಡನೇ ಅತಿ ದೊಡ್ಡ ಸಿಮೆಂಟ್ ಉತ್ಪಾದಕ ಆಗಿದೆ ಎಂದು ಭಾನುವಾರದಂದು ಅದಾನಿ ಸಮೂಹ ಹೇಳಿಕೆಯಲ್ಲಿ ತಿಳಿಸಿದೆ. ಏಷ್ಯಾದ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿಗೆ (Gautam Adani) ಸೇರಿದ ಸಮೂಹವು ಅಂಬುಜಾ ಸಿಮೆಂಟ್ಸ್ ಲಿಮಿಟೆಡ್ ಮತ್ತು ಅದರ ಅಂಗ ಸಂಸ್ಥೆ ಎಸಿಸಿಯಲ್ಲಿ ಶೇ 63.19ರಷ್ಟು ಸ್ವಾಧೀನ ಮಾಡಿಕೊಂಡಿದೆ. ಈಗಿನ ಹೋಲ್ಸಿಮ್ ಹೂಡಿಕೆ ಹಿಂತೆಗೆತ ನಡೆಯ ಮೂಲಕ ಆ ಕಂಪೆನಿಯು ಸಿಮೆಂಟ್ ಉತ್ಪಾದನೆ ಮೇಲೆ ಅವಲಂಬನೆ ಕಡಿಮೆ ಮಾಡಿಕೊಳ್ಳುವುದಕ್ಕೆ ಮುಂದಾಗಿದೆ. ಆದರೆ ಸಿಮೆಂಟ್ ಉತ್ಪಾದನೆ ವೇಳೆ ವಾತಾವರಣಕ್ಕೆ ಭಾರೀ ಪ್ರಮಾಣದಲ್ಲಿ ಕಾರ್ಬನ್ ಬಿಡುಗಡೆ ಆಗುತ್ತದೆ. ಆದ್ದರಿಂದ ಪರಿಸರದ ಬಗ್ಗೆ ಕಾಳಜಿ ಇರುವ ಹಲವು ಹೂಡಿಕೆದಾರರು ಖರೀದಿ ವ್ಯವಹಾರ ಮುಂದೂಡಿದ್ದಾರೆ.
ಸ್ವಿಟ್ಜರ್ಲೆಂಡ್ ಮೂಲದ ಸಿಮೆಂಟ್ ಕಂಪೆನಿಯಾದ ಹೋಲ್ಸಿಮ್ ಇತ್ತೀಚಿನ ವರ್ಷಗಳಲ್ಲಿ ಕಾರ್ಬನ್ ಹೆಚ್ಚಿನ ಪ್ರಮಾಣದಲ್ಲಿ ಹೊರಸೂಸುವ ಸಿಮೆಂಟ್ ಉತ್ಪಾದನೆಯಿಂದ ಹೊರಬರುವ ಪ್ರಯತ್ನ ಆರಂಭಿಸಿದೆ. ಅಂಬುಜಾ ಹಾಗೂ ಎಸಿಸಿ ಸಿಮೆಂಟ್ಗಳಿಗೆ ಒಂದು ವರ್ಷದಲ್ಲಿ ಕನಿಷ್ಠ 70 ಮಿಲಿಯನ್ ಟನ್ಗಳಷ್ಟು ಸಿಮೆಂಟ್ ಉತ್ಪಾದಿಸುವ ಸಾಮರ್ಥ್ಯ ಇದೆ. ಇನ್ನು ಭಾರತದಲ್ಲಿ ಸಿಮೆಂಟ್ ಉತ್ಪಾದನೆಗೆ ಮೊದಲ ಸ್ಥಾನದಲ್ಲಿ ಇರುವ ಅಲ್ಟ್ರಾಟೆಕ್ 120 ಮಿಲಿಯನ್ ಟನ್ಗಳಷ್ಟು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಅದಾನಿ ಕುಟುಂಬವು ವಿದೇಶೀ ಸ್ಪೆಷಲ್ ಪರ್ಪಸ್ ವೆಹಿಕಲ್ (SPV) ಮೂಲಕ ಅಂಬುಜಾ ಮತ್ತು ಎಸಿಸಿಯಲ್ಲಿನ ಹೋಲ್ಸಿಮ್ ಲಿಮಿಟೆಡ್ನ ಸಂಪೂರ್ಣ ಷೇರಿನ ಪಾಲನ್ನು ಸ್ವಾಧೀನಕ್ಕೆ ಪಡೆಯಲು ನಿರ್ದಿಷ್ಟ ಒಪ್ಪಂದ ಮಾಡಿಕೊಂಡಿದೆ ಎಂಬುದಾಗಿ ಅದಾನಿ ಸಮೂಹ ಹೇಳಿಕೆಯಲ್ಲಿ ತಿಳಿಸಿದೆ. ಹೋಲ್ಸಿಮ್ ಈ ಬಗ್ಗೆ ಹೇಳಿಕೆ ನೀಡಿದ್ದು, ಅಂಬುಜಾ ಸಿಮೆಂಟ್ ಮತ್ತು ಎಸಿಸಿ ಸಿಮೆಂಟ್ ಸೇರಿ 6.4 ಬಿಲಿಯನ್ ಡಾಲರ್ನಷ್ಟು ಪಾಲನ್ನು ಪಡೆಯಲಿದ್ದು, ಅದಾನಿ ಸಮೂಹವು ಅವುಗಳನ್ನು ಖರೀದಿಸುವುದಕ್ಕೆ ಒಪ್ಪಂದ ಸಹಿ ಮಾಡಿರುವುದಾಗಿ ತಿಳಿಸಿದೆ. ಓಪನ್ ಆಫರ್ ಮೂಲಕ ಹೆಚ್ಚಿನ ಷೇರನ್ನು ಸ್ವಾಧೀನ ಮಾಡಿಕೊಳ್ಳುವುದಾಗಿ ಅದಾನಿ ಸಮೂಹ ಹೇಳಿದೆ.
ಈ ವ್ಯವಹಾರ 2022ರ ದ್ವಿತೀಯಾರ್ಧದಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆ ಎಂದು ಹೋಲ್ಸಿಮ್ ಹೇಳಿದೆ. ಅದಾನಿ ಸಮೂಹದಲ್ಲಿ ಈಗ ಎರಡು ಸಿಮೆಂಟ್ ಅಂಗಸಂಸ್ಥೆಗಳಿವೆ. ಅದಾನಿ ಸಿಮೆಂಟೇಷನ್ ಲಿಮಿಟೆಡ್ನಿಂದ ಪಶ್ಚಿಮ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಸಮಗ್ರ ಕೇಂದ್ರವೊಂದನ್ನು ರೂಪಿಸುವ ಯೋಜನೆ ಇದೆ ಎಂದು ಅದಾನಿ ಸಮೂಹದ ಅಧಿಕಾರಿಗಳು ತಿಳಿಸಿದ್ದಾರೆ.
ಅಂಬುಜಾ ಸಿಮೆಂಟ್ 14 ಸಿಮೆಂಟ್ ಘಟಕ, 4700 ಸಿಬ್ಬಂದಿಯನ್ನು ಹೊಂದಿದೆ. ಇನ್ನು ಎಸಿಸಿ 17 ಸಿಮೆಂಟ್ ಘಟಕ, 78 ಸಿದ್ಧ ಮಿಶ್ರಣ ಕಾಂಕ್ರೀಟ್ ಫ್ಯಾಕ್ಟರಿಗಳು ಮತ್ತು 6 ಸಾವಿರ ಸಿಬ್ಬಂದಿಯನ್ನು ಹೊಂದಿದೆ. ಅಧಿಕೃತ ಮಾಹಿತಿಗಳು ತಿಳಿಸುವ ಪ್ರಕಾರ, 2015ರಲ್ಲಿ ಫ್ರೆಂಚ್ ಪ್ರತಿಸ್ಪರ್ಧಿ ಲಾಫಾರ್ಗೆ ಜತೆ ಹೋಲ್ಸಿಮ್ ವಿಲೀನ ಆದ ನಂತರದ ಅತಿ ದೊಡ್ಡ ವ್ಯವಹಾರ ಇದಾಗಿದೆ. ಉತ್ತರ ಅಮೆರಿಕ ಮತ್ತು ಯುರೋಪ್ ವ್ಯವಹಾರದ ಮೇಲೆ ಗಮನ ಕೇಂದ್ರೀಕರಿಸಬೇಕು ಎಂಬ ಕಾರಣಕ್ಕೆ ವಿವಿಧ ಭಾಗದ ವ್ಯವಹಾರವನ್ನು ಕಂಪೆನಿ ಮಾರಾಟ ಮಾಡುತ್ತಾ ಬಂದಿದೆ. ಕಳೆದ ವರ್ಷ ಬ್ರೆಜಿಲ್ನಲ್ಲಿ 1.025 ಬಿಲಿಯನ್ ಡಾಲರ್ಗೆ ಮಾರಾಟ ಮಾಡಿದ್ದರೆ, ಫಿಲಿಪ್ಪೈನ್ಸ್ ಮತ್ತು ಇಂಡೋನೇಷ್ಯಾದಿಂದ ಹೊರಬಂದಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Gautam Adani: ವಾರೆನ್ ಬಫೆಟ್ರನ್ನು ಹಿಂದಿಕ್ಕಿ ವಿಶ್ವದ ಐದನೇ ಶ್ರೀಮಂತರಾದ ಗೌತಮ್ ಅದಾನಿ