ಸಿ.ಎಸ್.ಸುಧೀರ್ ಬರಹ | ಹೂಡಿಕೆಗೆ ಚಿನ್ನ ಸರಿಯಾದ ಆಯ್ಕೆಯಲ್ಲ, ನೀವು ಬಂಗಾರ ಖರೀದಿಗೆ ಮುಂದಾದಷ್ಟೂ ದೇಶಕ್ಕೆ ಆರ್ಥಿಕ ಸಂಕಷ್ಟ ಹೆಚ್ಚು

ಭೌತಿಕ ಚಿನ್ನ ಖರೀದಿಯನ್ನು ಕಡಿಮೆ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ನಾವು ಸಹಾಯ ಮಾಡಬಹುದು. ಚಿನ್ನವನ್ನು ಅಲಂಕಾರಕ್ಕೆ ಕೊಳ್ಳಬಹುದೇ ಹೊರತು ಹೂಡಿಕೆಗಾಗಿ ಅಲ್ಲ..!

  • TV9 Web Team
  • Published On - 20:31 PM, 18 Jan 2021
ಸಿ.ಎಸ್.ಸುಧೀರ್ ಬರಹ | ಹೂಡಿಕೆಗೆ ಚಿನ್ನ ಸರಿಯಾದ ಆಯ್ಕೆಯಲ್ಲ, ನೀವು ಬಂಗಾರ ಖರೀದಿಗೆ ಮುಂದಾದಷ್ಟೂ ದೇಶಕ್ಕೆ ಆರ್ಥಿಕ ಸಂಕಷ್ಟ ಹೆಚ್ಚು
ಪ್ರಾತಿನಿಧಿಕ ಚಿತ್ರ

ಭಾರತೀಯರಿಗೆ ಚಿನ್ನ ಎಂದರೆ ಪ್ರೀತಿ. ಅದರಲ್ಲೂ ಹಿಂದೂಗಳು ಬಂಗಾರವನ್ನು ಅಲಂಕಾರಿಕ ವಸ್ತು, ಹೂಡಿಕೆಯ ಮಾರ್ಗ ಎಂದಷ್ಟೇ ಪರಿಗಣಿಸದೆ ದೇವರಾಗಿಯೂ ಪೂಜಿಸುತ್ತಾರೆ. ಪ್ರತಿ ಕುಟುಂಬ ನಮ್ಮಲ್ಲೂ ಒಂದಿಷ್ಟಾದರೂ ಚಿನ್ನ ಇರಲಿ ಎಂದು ಭಾವಿಸುವುದು ತೀರ ಸಾಮಾನ್ಯ. ಶೃಂಗಾರಕ್ಕೂ ಆಯಿತು, ಆಪತ್ಕಾಲಕ್ಕೂ ಆಯಿತು ಎಂಬುದು ಸಹಜ ಭಾವನೆ. ಅಂದರೆ ಹಣ ಇಟ್ಟುಕೊಂಡರೆ ಖಾಲಿಯಾಗಿಬಿಡುತ್ತದೆ. ಅದರ ಬದಲು ಒಂದಷ್ಟು ಬಂಗಾರ ಮಾಡಿಸಿಟ್ಟುಕೊಂಡರೆ ಕಷ್ಟ ಬಂದಾಗ ಅದನ್ನು ಮಾರಿಯೋ, ಅಡವಿಟ್ಟೋ ಹಣ ಪಡೆಯುಬಹುದು ಎಂಬುದು ಅದೆಷ್ಟೋ ಜನರ ಅನಿಸಿಕೆ.

ಆದರೆ ಚಿನ್ನ ಖರೀದಿ ಯಾಕೆ? ಹೂಡಿಕೆಯ ದೃಷ್ಟಿಯಿಂದ ಚಿನ್ನ ಖರೀದಿ ಮಾಡುವುದು ನಿಜಕ್ಕೂ ಲಾಭವಾ? ಅನುಕೂಲ ಹೌದಾ? ಎಂಬಿತ್ಯಾದಿ ವಿಷಯಗಳ ಬಗ್ಗೆ ಇಂಡಿಯನ್ ಮನಿ ಡಾಟ್​.ಕಾಂ ಸಂಸ್ಥಾಪಕ ಸಿ.ಎಸ್.ಸುಧೀರ್ ಸವಿಸ್ತಾರವಾಗಿ ವಿವರಿಸಿದ್ದಾರೆ.

ಜನರು ಚಿನ್ನ ಯಾಕೆ ನಮ್ಮ ಬಳಿ ಇರಬೇಕು ಎಂದು ಬಯಸುತ್ತಾರೆ. ಅದರಲ್ಲಿ ಹೂಡಿಕೆಗೆ ಮುಂದಾಗಲು ಕಾರಣವೇನು ಎಂಬುದು ಅರ್ಥವಾಗಬೇಕೆಂದರೆ ಮೊದಲು ಈ ಚಿನ್ನದ ಬೆಲೆಯ ಇತಿಹಾಸವನ್ನು ನೋಡಬೇಕು. 1964ರಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಕೇವಲ 63 ರೂ. ಇತ್ತು. 2001ರಲ್ಲಿ 4300 ಆಗಿತ್ತು. ಅಂದರೆ 63 ರೂ.ದಿಂದ 4000 ರೂ. ದಾಟಲು ಬರೋಬ್ಬರಿ 37 ವರ್ಷ ತೆಗೆದುಕೊಳ್ಳುತ್ತದೆ. ಅದೇ 2011ರ ಹೊತ್ತಿಗೆ 26000ದ ಗಡಿ ದಾಟಿಬಿಡುತ್ತದೆ. ಅದೇ ಇವತ್ತು 50,000 ರೂ.ದಾಟಿ, 55  ಸಾವಿರ ರೂ. ದವರೆಗೂ ಹೋಗಿ ಬಂದಿದೆ..

ಇದು ಒಂದೆಡೆಯಾದರೆ, ಇನ್ನೊಂದೆಡೆ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ಗೂ​ (ಮುಂಬೈ ಷೇರು ಮಾರುಕಟ್ಟೆ) ಇದೇ ಇತಿಹಾಸ ಇದೆ. ಅಲ್ಲಿ 1979ರಲ್ಲಿ ಸೆನ್ಸೆಕ್ಸ್ ​100ರೂ.ಗೆ ಶುರುವಾಯಿತು. ಈಗ ಅದೂ ಕೂಡ 50,000ದ ಆಸುಪಾಸಿನಲ್ಲಿಯೇ ಇದೆ. ಹೋಲಿಕೆ ಮಾಡಿದರೆ ಚಿನ್ನ ಮತ್ತು ಷೇರು ಮಾರುಕಟ್ಟೆಯ ಬೆಲೆ ಏರಿಕೆಗಳು ಒಂದೇ ತೆರನಾಗಿ ಬಂದವು. ಇದೇ ಕಾರಣಕ್ಕೆ ಮೊದಲಿನಿಂದಲೂ ಜನರಲ್ಲಿ ಷೇರು ಮಾರುಕಟ್ಟೆ ಬಿಟ್ಟರೆ, ಚಿನ್ನವೇ ಹೂಡಿಕೆಗೆ ಇನ್ನೊಂದು ಸುಲಭ ಹಾಗೂ ಉತ್ತಮ ಮಾರ್ಗ ಎಂಬ ಅನಿಸಿಕೆ ಇದೆ. ಹಾಗಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗದವರು ಅದಕ್ಕೆ ಪರ್ಯಾಯವಾಗಿ ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ.

ಹೂಡಿಕೆಗಾಗಿ ಆಭರಣ ಕೊಳ್ಳುವುದು ಮೂರ್ಖತನ
ನಾವು ಸಾಮಾನ್ಯವಾಗಿ ಚಿನ್ನ ಎಂದ ತಕ್ಷಣ ಆಭರಣವನ್ನೇ ಪರಿಗಣಿಸುತ್ತೇವೆ. ಅದೇ ಕಾರಣಕ್ಕೆ ಚಿನ್ನಕ್ಕೂ ಅತ್ಯಂತ ಹೆಚ್ಚು ಬೇಡಿಕೆಯಿದೆ ಎಂದೇ ಭಾವಿಸುತ್ತೇವೆ. ಒಬ್ಬ ಸಾಮಾನ್ಯ ವ್ಯಕ್ತಿ ಚಿನ್ನವನ್ನು ಖರೀದಿಸಿ, ಅದರಲ್ಲಿ ಹೂಡಿಕೆ ಮಾಡಿದರೆ ಖಂಡಿತ ಲಾಭ ಇದೆ. ಆದರೆ ಚಿನ್ನ ಎಂದರೆ ಬರೀ ಆಭರಣವಲ್ಲ. ಚಿನ್ನ ಎಂದು ಆಭರಣ ಖರೀದಿಸಿದರೆ ನಿಶ್ಚಿತವಾಗಿಯೂ ಯಾವುದೇ ಲಾಭವೂ ಇಲ್ಲ. ಖಂಡಿತ ನಷ್ಟ. ಆಭರಣ ಕೊಳ್ಳುವುದನ್ನೇ ಹೂಡಿಕೆ ಎಂದುಕೊಂಡಿದ್ದರೆ ಅದು ಮೂರ್ಖತನ.

ಅದಕ್ಕೆ ಕಾರಣವೂ ಇದೆ. ನೀವು ಇಂದು 10 ಲಕ್ಷ ರೂ.ಮೌಲ್ಯದ ಆಭರಣಗಳನ್ನು ಖರೀದಿಸಿ, ನಾಳೆ ಏನೋ ಕಷ್ಟವಿದೆ ಎಂದು ಮಾರಾಟ ಮಾಡಲು ಹೋದರೆ ನಿಮಗೆ ಬರುವುದು ಕೇವಲ 7.5ರಿಂದ 8 ಲಕ್ಷ ರೂ. ಯಾಕೆಂದರೆ ನೀವು ಕೊಂಡ ಆಭರಣದ ಬೆಲೆ ನಿಜಕ್ಕೂ ಎಂಟು ಲಕ್ಷ ರೂ. ಆಗಿರುತ್ತದೆ. ಮೇಕಿಂಗ್​ ಚಾರ್ಜ್​, ವೇಸ್ಟೇಜ್ ಚಾರ್ಜ್ ಎಂದು ನೀವು ಹೆಚ್ಚುವರಿ 2 ಲಕ್ಷ ರೂ. ಕೊಟ್ಟಿರುತ್ತೀರಿ. ಹಾಗಾಗಿ 10 ಲಕ್ಷ ರೂ.ಮೌಲ್ಯದ ಚಿನ್ನವನ್ನು ಖರೀದಿಸಿ ನೀವದನ್ನು ಮಾರಲು ಹೋದರೆ ನಿಮಗೆ ನಷ್ಟ ತಪ್ಪಿದ್ದಲ್ಲ. ಇದರಿಂದ ನೀವು ಶೇ.20-25ರಷ್ಟು ಕಳೆದುಕೊಳ್ಳುತ್ತೀರಿ. ಆ ನಷ್ಟವನ್ನು ಭರಿಸಲು ಮತ್ತೆರಡು ವರ್ಷ ಬೇಕಾಗುತ್ತದೆ. ಚಿನ್ನದ ಬೆಲೆ ಆ ಮಟ್ಟಕ್ಕೆ ಏರಿಕೆಯಾದರೆ ಮಾತ್ರ ನಿಮಗೆ ಲಾಭ ಬರುತ್ತದೆ.

ಇನ್ನು ಚಿನ್ನದ ಕಾಯಿನ್​, ಗೋಲ್ಡ್ ಬಾರ್​ಗಳನ್ನು (ಚಿನ್ನದ ಗಟ್ಟಿ) ಖರೀದಿಸುವ ಮೂಲಕ ಹೂಡಿಕೆ ಮಾಡುವ ಯೋಚನೆಯನ್ನು ಕೆಲವರು ಮಾಡಬಹುದು. ಅದಕ್ಕೆ ತಕ್ಕ ಬೆಲೆ ಸಿಗುತ್ತದೆ ಎಂದೂ ಹೇಳಬಹುದು. ಆದರೂ ಜನರು ಚಿನ್ನದ ಕಾಯಿನ್​, ಗಟ್ಟಿಗಳನ್ನು ಖರೀದಿ ಮಾಡಬಾರದು. ಇದರಿಂದ ನಮ್ಮ ಸರ್ಕಾರಕ್ಕೆ, ದೇಶಕ್ಕೆ ಹೊರೆಯಾಗುತ್ತದೆ. ನಾವು ಹೂಡಿಕೆಗಾಗಿ ಚಿನ್ನದ ಕಾಯಿನ್​, ಗಟ್ಟಿಗಳನ್ನು ಖರೀದಿ ಮಾಡುವ ಪ್ರಮಾಣ ಹೆಚ್ಚಾದಂತೆ ನಮ್ಮ ದೇಶ ಇನ್ನೊಂದು ದೇಶದಿಂದ ಚಿನ್ನವನ್ನು ಆಮದು ಮಾಡಿಕೊಳ್ಳುವ ಪ್ರಮಾಣವೂ ಹೆಚ್ಚುತ್ತದೆ. ಈಗಲೇ ಜನರ ಬೇಡಿಕೆಯಷ್ಟು ಚಿನ್ನವನ್ನು ಭಾರತದಲ್ಲಿ ತಯಾರು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೇರೆ ದೇಶಗಳಿಂದ ಸುಮಾರು 35 ಬಿಲಿಯನ್​ ಡಾಲರ್​ ಮೌಲ್ಯದ ಅಂದರೆ ಸುಮಾರು ಎರಡೂವರೆ ಲಕ್ಷ ಕೋಟಿ ರೂ.ಬೆಲೆಯ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇನ್ನೂ ಖರೀದಿ ಪ್ರಮಾಣ ಹೆಚ್ಚಾದರೆ ಆಮದು ಪ್ರಮಾಣವೂ ಹೆಚ್ಚಾಗುತ್ತದೆ. ಇಷ್ಟೆಲ್ಲ ಹಣವನ್ನು ಬರೀ ಚಿನ್ನಕ್ಕಾಗಿ ಬೇರೆ ದೇಶಕ್ಕೆ ಕೊಡುತ್ತಿದ್ದೇವೆ. ಯಾಕೆ ಕೊಡಬೇಕು? ಅದರ ಬದಲು ಸೇನಾ ಶಸ್ತ್ರಾಸ್ತ್ರಗಳಿಗೂ, ದೇಶದ ಮೂಲ ಸೌಕರ್ಯ ಹೆಚ್ಚಿಸುವ ಸಲುವಾಗಿಯೋ ಬಳಕೆ ಮಾಡಿದರೆ ಅದರಲ್ಲೊಂದು ಅರ್ಥವಿರುತ್ತದೆ. ಎರಡೂವರೆ ಲಕ್ಷ ಕೋಟಿ ಎಂದರೆ ಕಡಿಮೆ ಅಲ್ಲ. ಹಾಗಾಗಿ ಚಿನ್ನದ ಆಮದು ಕಡಿಮೆ ಮಾಡಿದರೆ ದೇಶದ ವಿದೇಶಿ ಮೀಸಲು ನಿಧಿ (Foreign exchange reserves) ಕೂಡ ಕಡಿಮೆ ಆಗುತ್ತದೆ.

ಇದೆಲ್ಲ ದೃಷ್ಟಿಯಿಂದ ನೋಡಿದರೆ, ನೀವು ನಿಮ್ಮ ಹೂಡಿಕೆಗಾಗಿ ಆಭರಣವನ್ನೇ ಕೊಂಡರೂ, ನಾಣ್ಯವನ್ನೇ ಕೊಂಡರೂ ದೇಶಕ್ಕೆ ನಷ್ಟವಂತೂ ನಿಶ್ಚಿತ. ಹಾಗಾಗಿ ನನ್ನ ಪ್ರಕಾರ ಭೌತಿಕ ಚಿನ್ನ ಕೊಳ್ಳುವುದು ಯಾವ ಕಾರಣಕ್ಕೂ ಸರಿಯಲ್ಲ. ಅದು ಹೂಡಿಕೆಯ ಮಾರ್ಗವೂ ಅಲ್ಲ. ಆದರೆ ಚಿನ್ನದೊಂದಿಗೆ ದೇಶದಲ್ಲಿ ಭಾವನಾತ್ಮಕ ಬೆಸುಗೆ ಇರುವ ಕಾರಣ ಕೇಂದ್ರ ಸರ್ಕಾರ ಒಂದು ಮಹತ್ತರ ಯೋಜನೆಯನ್ನು ಹೊರತರುವ ಮೂಲಕ ಚಿನ್ನದಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಿದೆ. ಅದು ಸಾವರಿನ್​ ಗೋಲ್ಡ್​ ಬಾಂಡ್​ ! ​

ಸಾವರಿನ್​ ಗೋಲ್ಡ್ ಬಾಂಡ್​ನಿಂದೇನು ಉಪಯೋಗ?
ಭೌತಿಕವಾಗಿ ಚಿನ್ನ ಖರೀದಿ ಮಾಡುವುದಕ್ಕೂ, ಸಾವರಿನ್​ ಗೋಲ್ಡ್ ಬಾಂಡ್​ನಲ್ಲಿ ಹೂಡಿಕೆ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಸಾವರಿನ್​ ಗೋಲ್ಡ್ ಬಾಂಡ್​ನಲ್ಲಿ ಇನ್ವೆಸ್ಟ್​ ಮಾಡುವುದರಿಂದ ದೇಶಕ್ಕೆ ಚಿನ್ನದ ಆಮದು ಮಾಡಿಕೊಳ್ಳುವುದು ತಪ್ಪುತ್ತದೆ. ಇಲ್ಲಿ ಚಿನ್ನದ ಬೆಲೆಯೇ ಪ್ರಮುಖವಾಗಿರುತ್ತದೆ. ನೀವು ಗೋಲ್ಡ್ ಬಾಂಡ್ ಖರೀದಿ ಮಾಡಿದರೆ, ಅಂದಿನ ಒಂದು ಗ್ರಾಂ ಬಂಗಾರದ ಬೆಲೆಯನ್ನು ಆಧಾರವಾಗಿಟ್ಟುಕೊಂಡು ರಿಸರ್ವ್ ಬ್ಯಾಂಕ್​​ ನಿಗದಿಪಡಿಸಿದ ದರಕ್ಕೆ ಬಾಂಡ್ ಕೊಡಲಾಗುತ್ತದೆ. ಇದಕ್ಕೆ ವರ್ಷಕ್ಕೆ ಶೇ 2.5ರಷ್ಟು ಬಡ್ಡಿಯೂ ಸಿಗುತ್ತದೆ.

ಚಿನ್ನದ ಮೇಲೆ 10 ಲಕ್ಷ ರೂ. ಹೂಡಿಕೆ ಮಾಡಬೇಕು ಎಂಬ ಅಭಿಪ್ರಾಯ ನಿಮಗಿದೆ ಎಂದಿಟ್ಟುಕೊಳ್ಳೋಣ. ನೀವು ಹತ್ತು ಲಕ್ಷ ರೂಪಾಯಿಯಲ್ಲಿ ಚಿನ್ನದ ಆಭರಣ, ಗಟ್ಟಿಯನ್ನು ಖರೀದಿಸುವ ಬದಲು, ಅದೇ ಹಣವನ್ನು ಸಾವರಿನ್​ ಬಾಂಡ್​ ಮೇಲೆ ಹೂಡಿಕೆ ಮಾಡಬಹುದು. ಆ ಹತ್ತು 10 ಲಕ್ಷ ರೂ.ಗೆ ವರ್ಷಕ್ಕೆ ಎರಡೂವರೆ ಪರ್ಸೆಂಟ್ ಅಂದರೆ 25,000 ರೂ.ಬಡ್ಡಿ ಸಿಗುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ತಲಾ 5 ಸಾವಿರ ರೂ.ಮುಖಬೆಲೆಯ 2 ಸಾವರಿನ್​ ಬಾಂಡ್ ಖರೀದಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಅಂದರೆ ಚಿನ್ನದ ಬಾಂಡ್​ ಮೇಲೆ ನೀವು 10,000 ರೂ.ಹೂಡಿಕೆ ಮಾಡಿದಂತಾಯಿತು. ಈ ಹೂಡಿಕೆಗೆ ಸರ್ಕಾರ ವರ್ಷಕ್ಕೆ 250 ರೂ.ಬಡ್ಡಿ ಕೊಡುತ್ತದೆ. ಚಿನ್ನದ ಬೆಲೆ ಏರಿದಂತೆ ನಿಮ್ಮ ಹೂಡಿಕೆಯೂ ಬೆಳೆಯುತ್ತ ಹೋಗುತ್ತದೆ. ಸಾವರಿನ್​ ಗೋಲ್ಡ್ ಬಾಂಡ್​ನಲ್ಲಿ ಒಬ್ಬ ವ್ಯಕ್ತಿ 1 ಗ್ರಾಂ.ನಿಂದ 4 ಕೆಜಿ ಚಿನ್ನಕ್ಕೆ ಸರಿಸಮನಾದ ಬಾಂಡ್​ ಕೊಂಡುಕೊಳ್ಳಬಹುದು. ಮನೆಯಲ್ಲಿ ನಾಲ್ಕು ಜನ ಇದ್ದರೆ ನಾಲ್ಕೂ ಮಂದಿಯೂ ವೈಯಕ್ತಿಕವಾಗಿ ಕೊಳ್ಳಬಹುದು. 4 ಕೆಜಿ ಎಂದರೆ ಬರೋಬ್ಬರಿ 2 ಕೋಟಿ ರೂ.ಮೌಲ್ಯದ್ದು. ಅದೇ ನೀವು ಇಷ್ಟು ಬಂಗಾರ ಮನೆಯಲ್ಲಿ ತಂದಿಟ್ಟುಕೊಂಡರೆ ಯಾರಾದರೂ ಬಡ್ಡಿ ಕೊಡುತ್ತಾರಾ? ಅದೂ ಅಲ್ಲದೆ ಚಿನ್ನದ ಆಭರಣಗಳನ್ನಾಗಲಿ, ಗಟ್ಟಿಯನ್ನಾಗಲೀ ಖರೀದಿಸಿ ತಂದು ಮನೆಯಲ್ಲಿ ಇಟ್ಟುಕೊಳ್ಳಲು ಭಯ ಎಂದು ಬ್ಯಾಂಕ್​ನಲ್ಲಿ ಇಟ್ಟರೆ ಬ್ಯಾಂಕ್ ಲಾಕರ್​ ಶುಲ್ಕವೂ ನಿಮ್ಮದೇ ಹೊಣೆಯಾಗುತ್ತದೆ. ಅದೇ ಬಾಂಡ್ ಆದರೆ ಮನೆಯಲ್ಲೇ ಇಡಬಹುದು..ಯಾರಾದರೂ ಕದಿಯುತ್ತಾರೆಂಬ ಭಯವೂ ಇರುವುದಿಲ್ಲ.

ಸರ್ಕಾರದಿಂದ ಖರೀದಿಸುವ ಗೋಲ್ಡ್ ಬಾಂಡ್​ಗೆ 5 ವರ್ಷಗಳ ಲಾಕ್​ ಇನ್​ ಇರುತ್ತದೆ. ಅದರ ಅವಧಿ ಮುಗಿದ ಬಳಿಕ ಸರ್ಕಾರಕ್ಕೆ ನೀವು ಮಾರಾಟ ಮಾಡಬಹುದು. ಆದರೆ ಅದರ ಮಧ್ಯೆಯೇ ಹಣ ಬೇಕು ಎಂದರೆ ETF ಪ್ರಕ್ರಿಯೆ ಮೂಲಕ ಇನ್ನೊಬ್ಬರಿಗೆ ಮಾರಾಟ ಮಾಡಬಹುದು. ಇನ್ನೊಂದು ಅನುಕೂಲವೆಂದರೆ ಬಾಂಡ್ ಖರೀದಿ ಮಾಡುವಾಗ ಮೇಕಿಂಗ್ ಚಾರ್ಜಸ್​, ವೇಸ್ಟೇಜ್​ ಚಾರ್ಜಸ್​ ಇರುವುದಿಲ್ಲ. ಹಾಗಾಗಿ ನಿಮಗೆ  ಬಾಂಡ್ ಮಾರಾಟದ ವೇಳೆ  ನಷ್ಟವಾಗುವುದಿಲ್ಲ. ಒಮ್ಮೆ 10 ಲಕ್ಷಕ್ಕೆ ನೀವು ಕೊಂಡ ಬಾಂಡ್​ನ ಬೆಲೆ  ಎರಡು ವರ್ಷಗಳ ನಂತರ  12 ಲಕ್ಷ ರೂ.ಆದರೆ  ಆ 12 ಲಕ್ಷವೂ ನಿಮ್ಮದೇ ಆಗಿರುತ್ತದೆ.

ಗೋಲ್ಡ್​ ಬಾಂಡ್ ಮೇಲೆ ಬ್ಯಾಂಕ್​ಗಳಲ್ಲಿ ಸಾಲ ತೆಗೆದುಕೊಳ್ಳಲು ಅವಕಾಶವೂ ಇದೆ.  ಅದರ ಪ್ರಕ್ರಿಯೆಗಳು ತೀರ ಸರಳವಾಗಿರುತ್ತದೆ.. ಇದರಿಂದಾಗಿ ಒಬ್ಬ ಹೂಡಿಕೆದಾರನಾಗಿ ನನಗೂ ಲಾಭವಾಗುತ್ತದೆ. ದೇಶಕ್ಕೆ ಚಿನ್ನ ಆಮದಿನ ಹೊರೆ ತಪ್ಪಿ, ಆರ್ಥಿಕ ನಷ್ಟವಾಗುವುದು ತಪ್ಪುತ್ತದೆ. ಈ ಮೂಲಕವೂ, ಅಂದರೆ ಹೂಡಿಕೆಯ ಮೂಲಕವೂ ನಾವು ದೇಶಸೇವೆ ಮಾಡಬಹುದು. ಆದರೆ ದುರದೃಷ್ಟವೆಂದರೆ ನಾವು ಇದರ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿಲ್ಲ. ಗೋಲ್ಡ್​ಬಾಂಡ್ ನಿಜಕ್ಕೂ ಒಳ್ಳೆಯ ಹೂಡಿಕೆ ಹೌದಾ ಎಂದೇ ಯೋಚಿಸುತ್ತಿದ್ದೇವೆ. ಸಾವರಿನ್​ ಗೋಲ್ಡ್ ಬಾಂಡ್​ ಬಗ್ಗೆ ಜನರಿಗೆ ಹೆಚ್ಚೆಚ್ಚು ಅರಿವು ಮೂಡಿಸುವ ಅಗತ್ಯವಿದೆ.

ಒಟ್ಟಾರೆ ಹೇಳಬೇಕು ಎಂದರೆ ಭೌತಿಕ ಚಿನ್ನ ಖರೀದಿಯನ್ನು ಕಡಿಮೆ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ನಾವು ಸಹಾಯ ಮಾಡಬಹುದು. ಚಿನ್ನವನ್ನು ಅಲಂಕಾರಕ್ಕೆ ಕೊಳ್ಳಬಹುದೇ ಹೊರತು ಹೂಡಿಕೆಗಾಗಿ ಅಲ್ಲ !

ಸಾವರಿನ್​ ಗೋಲ್ಡ್ ಬಗ್ಗೆ ಹೆಚ್ಚಿನ ಮಾಹಿತಿಗೆ  ಇಲ್ಲಿ ಕ್ಲಿಕ್​ ಮಾಡಿ

ಸಿಎಸ್​ ಸುಧೀರ್​

ಸಿ.ಎಸ್.​ ಸುಧೀರ್ ಪರಿಚಯ
ಸಮಾಜದಲ್ಲಿ ಆರ್ಥಿಕ ಸಾಕ್ಷರತೆ ಬೆಳೆಸಲು ಶ್ರಮಿಸುತ್ತಿರುವ ಸಿ.ಎಸ್.​ ಸುಧೀರ್ IndianMoney.com ಸಂಸ್ಥೆಯ ಸಂಸ್ಥಾಪಕ ಸಿಇಒ. ಸಣ್ಣ ಉಳಿತಾಯ, ಮ್ಯೂಚುವಲ್ ಫಂಡ್ ಮತ್ತು ಷೇರುಮಾರುಕಟ್ಟೆ ಸೇರಿದಂತೆ ಹಲವು ವಿಚಾರಗಳನ್ನು ಸಾಮಾನ್ಯ ಜನರ ಮನಮುಟ್ಟುವಂತೆ ವಿವರಿಸುವುದು ಅವರ ಹೆಗ್ಗಳಿಕೆ.

ಕಾಸಿದ್ರೆ ಕೈಲಾಸ | 15 ಸಾವಿರ ಸಂಬಳದಲ್ಲಿ 12 ಸಾವಿರದ ಮೊಬೈಲ್ ಕೊಳ್ಳೋದು ಹೇಗೆ?

ನೀವು ಈಗಷ್ಟೇ ಕೆಲಸಕ್ಕೆ ಸೇರಿ ಹಣ ಉಳಿಸುವ ಕುರಿತು ಯೋಚಿಸುತ್ತಿದ್ದರೆ ಈ ಲೇಖನ ಓದಿ ಬಿಡಿ..