Gold Loan: ಚಿನ್ನದ ಸಾಲ ಮರುಪಾವತಿ ವಿವಿಧ ವಿಧಾನಗಳ ಬಗ್ಗೆ ಗ್ರಾಹಕರಿಗೆ ಗೊತ್ತಿರಲೇಬೇಕಾದ ಮಾಹಿತಿ ಇಲ್ಲಿದೆ
ಚಿನ್ನದ ಸಾಲದ ಮರುಪಾವತಿಯ ವಿವಿಧ ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ. ಈ ಸಾಲವನ್ನು ಪಡೆಯುವವರು ಮರುಪಾವತಿ ವಿಧಾನಗಳ ಬಗ್ಗೆಯೂ ಕಡ್ಡಾಯವಾಗಿ ತಿಳಿದಿರಬೇಕು.
ಚಿನ್ನದ ಮೇಲೆ ಸಾಲ ಪಡೆಯುವುದಕ್ಕೆ ಆದ್ಯತೆ ಜಾಸ್ತಿ ಆಗುತ್ತದೆ. ಅದಕ್ಕೆ ಪ್ರಮುಖ ಕಾರಣಗಳು ಏನೆಂದರೆ, ಬಡ್ಡಿ ದರ ಕಡಿಮೆ, ಬಹಳ ವೇಗವಾಗಿ ಪ್ರೊಸೆಸ್ ಆಗುತ್ತದೆ, ಅದರ ಜತೆಗೆ ಮರುಪಾವತಿಯು ಕೂಡ ಹೆಚ್ಚಿನ ತಲೆ ಬೇನೆ ಏನಲ್ಲ. ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಲೋನ್ ಟು ವ್ಯಾಲ್ಯೂ ಅನುಪಾತವನ್ನು ಶೇ 90ಕ್ಕೆ ಹೆಚ್ಚಿಸಲಾಯಿತು. ಅದಕ್ಕೂ ಮುಂಚೆ ಇದ್ದದ್ದು ಶೇ 75ರಷ್ಟು. ಅಂದರೆ ಅಡಮಾನ ಮಾಡಬೇಕು ಅಂದುಕೊಂಡಿರುವ ಚಿನ್ನದ ಮೌಲ್ಯಮಾಪನವನ್ನು ಮಾಡಿ, ಅದರ ಮೌಲ್ಯದ ಶೇ 90ರಷ್ಟನ್ನು ಸಾಲವಾಗಿ ನೀಡಲಾಗುತ್ತದೆ. ಉದಾಹರಣೆಗೆ, ಅಡಮಾನ ಮಾಡಬೇಕು ಅಂದುಕೊಂಡಿರುವ ಚಿನ್ನವನ್ನು 1 ಲಕ್ಷ ರೂಪಾಯಿಗೆ ಮೌಲ್ಯಮಾಪನ ಮಾಡಿದಲ್ಲಿ ಅದಕ್ಕೆ 90 ಸಾವಿರ ರೂಪಾಯಿ ಸಾಲವಾಗಿ ದೊರೆಯುತ್ತದೆ.
ಚಿನ್ನದ ಮೇಲೆ ಸಾಲ ತೆಗೆದುಕೊಳ್ಳುವ ಪ್ರಮಾಣ 2020ರ ಮಾರ್ಚ್ನಿಂದ 2021ರ ಮಾರ್ಚ್ ಮಧ್ಯೆ ಶೇ 82ರಷ್ಟು ಹೆಚ್ಚಳವಾಗಿ 60,464 ಕೋಟಿ ರೂಪಾಯಿ ಆಗಿದೆ. ಇವೆಲ್ಲ ಗೋಲ್ಡ್ ಲೋನ್ ಬಗೆಯ ಪ್ರಾಥಮಿಕ ಮಾಹಿತಿ ಆಯಿತು. ಆದರೆ ಸಾಲ ದೊರೆತ ಮೇಲಿನ ಮುಖ್ಯ ವಿಚಾರವನ್ನೇ ಪ್ರಸ್ತಾಪ ಮಾಡದಿದ್ದರೆ ಹೇಗೆ? ಅದು ಮರುಪಾವತಿ ಆಯ್ಕೆ. ಚಿನ್ನದ ಸಾಲವನ್ನು ಎರಡು ಬಗೆಯಲ್ಲಿ ನೀಡಲಾಗುತ್ತದೆ. ಸಾಮಾನ್ಯ ಇಎಂಐ ಜತೆಗೆ ಚಿನ್ನದ ಸಾಲ ಹಾಗೂ ಓವರ್ಡ್ರಾಫ್ಟ್ ವ್ಯವಸ್ಥೆ ಜತೆಗೆ ಚಿನ್ನದ ಸಾಲ. ಆದರೆ ಕೆಲವು ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳು ಮತ್ತೂ ಒಂದು ಬಗೆಯ ಸಾಲ ಮರುಪಾವತಿ ಆಯ್ಕೆಯನ್ನು ನೀಡುತ್ತವೆ. ಅದೇನೆಂದರೆ, ಬಡ್ಡಿಯ ಭಾಗವನ್ನು ಮಾತ್ರ ಪಾವತಿಸಲಾಗುತ್ತದೆ. ಆದ್ದರಿಂದ ಸಾಲ ತೆಗೆದುಕೊಳ್ಳುವ ಮುಂಚೆ ಈ ಮೂರು ಆಯ್ಕೆಗಳನ್ನು ತಿಳಿದುಕೊಂಡಿರಬೇಕು.
1) ಸಾಮಾನ್ಯ ಇಎಂಐ ಚಿನ್ನದ ಮೇಲಿನ ಸಾಲಕ್ಕೆ ಇಎಂಐ ಆಯ್ಕೆಯೊಂದಿಗೆ ಬರುವುದು ತೀರಾ ಸಾಮನ್ಯ. ಇದರಲ್ಲಿ ಚಿನ್ನವನ್ನು ಅಡಮಾನ ಮಾಡುವುದಕ್ಕೆ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು ಅಥವಾ ಎನ್ಬಿಎಫ್ಸಿಗಳಿಗೆ ತೆರಳಬೇಕು. ನಿಯಮಾವಳಿ ಪ್ರಕಾರ, ನಿಗದಿತವಾದ ಇಎಂಐನೊಂದಿಗೆ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಾ ಹೋಗುತ್ತಾರೆ. ಮೊದಲೇ ಹೇಳಿದಂತೆ ಚಿನ್ನದ ಒಟ್ಟು ಮೌಲ್ಯದ ಶೇ 90ರಷ್ಟು ಮೊತ್ತ ಸಾಲವಾಗಿ ದೊರೆಯುತ್ತದೆ.
ಬಡ್ಡಿ ದರ ಬ್ಯಾಂಕ್ಗಳ ಪೈಕಿ ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ನಿಂದ 10 ಲಕ್ಷ ರೂಪಾಯಿ ತನಕದ ಸಾಲಕ್ಕೆ ಅತ್ಯಂತ ಕಡಿಮೆ ಶೇ 7ರ ಬಡ್ಡಿ ದರ ಇದೆ. ಮರುಪಾವತಿ ಅವಧಿ 36 ತಿಂಗಳ ಅವಧಿಯದಾಗಿರುತ್ತದೆ.
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಚಿನ್ನದ ಮೇಲಿನ ಬಡ್ಡಿ ವಾರ್ಷಿಕ ಶೇ 7.30 ಇದ್ದರೆ, ಇನ್ನು ಕೆನರಾ ಬ್ಯಾಂಕ್ನಿಂದ ಬಡ್ಡಿ ದರ ಶೇ 7.35ರಲ್ಲಿ ನೀಡಲಾಗುತ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸದ್ಯಕ್ಕೆ ಚಿನ್ನದ ಮೇಲಿನ ಸಾಲಕ್ಕೆ ವಾರ್ಷಿಕ ಬಡ್ಡಿ ದರ ಶೇ 7.5ರಷ್ಟಿದೆ.
ಎನ್ಬಿಎಫ್ಸಿಗಳಲ್ಲಿ ಸ್ವಲ್ಪ ಮಟ್ಟಿಗೆ ದುಬಾರಿ ದರವೇ ಇದೆ. ಶೇ 9.24ರಿಂದ ಶೇ 12ರ ತನಕ ವಾರ್ಷಿಕ ಬಡ್ಡಿ ದರ ಇದೆ.
2) ಓವರ್ಡ್ರಾಫ್ಟ್ ವ್ಯವಸ್ಥೆ ಓವರ್ಡ್ರಾಫ್ಟ್ ವ್ಯವಸ್ಥೆಯೊಂದಿಗೆ ಬರುವ ಚಿನ್ನದ ಸಾಲಗಳು ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಕೆಲಸ ಮಾಡುತ್ತವೆ. ಬ್ಯಾಂಕ್ ಅಥವಾ ಎನ್ಬಿಎಫ್ಸಿಗೆ ಚಿನ್ನವನ್ನು ಅಡಮಾನ ಮಾಡಿದಾಗ ಸಾಲದ ಮಿತಿಯೊಂಂದಿಗೆ ಓವರ್ಡ್ರಾಫ್ಟ್ ಖಾತೆಯನ್ನು ತೆರೆಯುತ್ತಾರೆ. ಸಾಲ ಪಡೆದವರಿಗೆ ಯಾವಾಗೆಲ್ಲ ಅಗತ್ಯ ಬರುತ್ತದೋ ಆಗೆಲ್ಲ ಬಳಸಿಕೊಳ್ಳಬಹುದು. ಯಾವಾಗ ಹಣವನ್ನು ಬಳಸಲಾಗುತ್ತದೋ ಮತ್ತು ಎಷ್ಟು ಮೊತ್ತವನ್ನು ಉಪಯೋಗಿಸಲಾಗುತ್ತದೋ ಅಷ್ಟಕ್ಕೆ ಮಾತ್ರ ಬಡ್ಡಿ ಆಗುತ್ತದೆ. ಎಲ್ಲ ಪ್ರಮುಖ ಬ್ಯಾಂಕ್ಗಳು ಓವರ್ಡ್ರಾಫ್ಟ್ ವ್ಯವಸ್ಥೆಯೊಂದಿಗೆ ಗ್ರಾಹಕರಿಗೆ ಸಾಲವನ್ನು ಒದಗಿಸುತ್ತವೆ.
ಚಿನ್ನದ ಸಾಲದ ಸಾಮಾನ್ಯ ಇಎಂಐ ಆಯ್ಕೆಯಲ್ಲಿ ಸಾಲದ ಮೊತ್ತಕ್ಕೆ ಪೂರ್ಣಾವಾಗಿ ಬಡ್ಡಿಯನ್ನು ತಕ್ಷಣದಿಂದಲೇ ಹಾಕಲಾಗುತ್ತದೆ. ಆದರೆ ಓವರ್ಡ್ರಾಫ್ಟ್ ವ್ಯವಸ್ಥೆಯಲ್ಲಿ ಬಳಸಿಕೊಂಡ ಮೊತ್ತಕ್ಕೆ ಮಾತ್ರ ಬಡ್ಡಿ ದರವು ಅನ್ವಯ ಆಗುತ್ತದೆ. ಓವರ್ಡ್ರಾಫ್ಟ್ ವ್ಯವಸ್ಥೆಯೊಂದಿಗೆ ಬರುವ ಚಿನ್ನದ ಮೇಲಿನ ಸಾಲವು ಹೆಚ್ಚು ಅನುಕೂಲಕರ. ಆದರೆ ಈ ಬಗೆಯ ಸಾಲಕ್ಕೆ ಬಡ್ಡಿ ದರವು ಸ್ವಲ್ಪ ಜಾಸ್ತಿ. ಇಎಂಐ ಸಾಲಕ್ಕೆ ಹೋಲಿಸಿದರೆ 50 ಬೇಸಿಸ್ ಪಾಯಿಂಟ್ಸ್ ಹೆಚ್ಚು.
3) ಬಡ್ಡಿಯನ್ನು ಮಾತ್ರ ಪಾವತಿಸುವುದು ಐಸಿಐಸಿಐ ಬ್ಯಾಂಕ್ ಮತ್ತು ಎನ್ಬಿಎಫ್ಸಿಗಳಾದ ಮುತ್ತೂಟ್ ಫೈನಾನ್ಸ್ ಮತ್ತು ಮಣಪ್ಪುರಂ ಫೈನಾನ್ಸ್ ಇಂಥವು ಮತ್ತೊಂದು ಬಗೆಯ ಮರುಪಾವತಿಯನ್ನು ಮಾಡಿಸಿಕೊಳ್ಳುತ್ತವೆ. ವರ್ಷದ ಕೊನೆಗೆ ಗ್ರಾಹಕರು ಬಡ್ಡಿಯ ಭಾಗವನ್ನು ಮಾತ್ರ ಪಾವತಿಸಿ, ಸಾಲವನ್ನು ಮತ್ತೊಂದು ಅವಧಿಗೆ ನವೀಕರಣ ಮಾಡಿಸಿಕೊಳ್ಳಬಹುದು. ಇಎಂಐ ಕೂಡ ಪಾವತಿಸಬೇಕು ಅಂತಿಲ್ಲ. ಈ ವಿಧಾನದಲ್ಲಿ ಸಾಲದ ಮೇಲಿನ ಬಡ್ಡಿ ತೀರುತ್ತದೆ. ಆದರೆ ಅಸಲು ಮೊತ್ತ ಹಾಗೇ ಉಳಿದುಕೊಂಡಿರುತ್ತದೆ.
ಇದನ್ನೂ ಓದಿ: Gold Loan: ಕಡಿಮೆ ಬಡ್ಡಿ ದರಕ್ಕೆ ಚಿನ್ನದ ಮೇಲೆ ಸಾಲ ನೀಡುವ ಬ್ಯಾಂಕ್ಗಳು, ಎನ್ಬಿಎಫ್ಸಿಗಳಿವು
(Here Is The Various Method Of Gold Loan Repayment Customers Must Know Before Availing)