ಜನಪ್ರಿಯ ಷೇರುಗಳ ಹಿಂದೆ ಬೀಳುವುದು ಸೇರಿದಂತೆ ಹೂಡಿಕೆದಾರರು ಮಾಡುವ ಕೆಲ ಪ್ರಮುಖ ತಪ್ಪುಗಳನ್ನು ತಿಳಿದಿರಿ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ರಿಟೇಲ್ ಹೂಡಿಕೆದಾರರು ಹಲವು ತಪ್ಪುಗಳನ್ನು ಎಸಗುತ್ತಾರೆ. ಸಾಮಾನ್ಯವಾಗಿ ಮಾಡಲಾಗುವ ಮತ್ತು ಬಹಳ ಮುಖ್ಯವೆನಿಸುವ 10 ತಪ್ಪುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ತಪ್ಪುಗಳ್ಯಾವುದು ಎನ್ನುವುದು ಗೊತ್ತಾದರೆ, ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ವರದಿಯಲ್ಲಿ ಉಪಯುಕ್ತ ಮಾಹಿತಿ ಇದೆ.

ಜನಪ್ರಿಯ ಷೇರುಗಳ ಹಿಂದೆ ಬೀಳುವುದು ಸೇರಿದಂತೆ ಹೂಡಿಕೆದಾರರು ಮಾಡುವ ಕೆಲ ಪ್ರಮುಖ ತಪ್ಪುಗಳನ್ನು ತಿಳಿದಿರಿ
ಷೇರು ಮಾರುಕಟ್ಟೆ
Image Credit source: PTI

Updated on: Oct 18, 2026 | 4:54 PM

ನವದೆಹಲಿ, ಅಕ್ಟೋಬರ್ 18: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೂಲಕ ದೀರ್ಘಕಾಲಿಕ ಸಂಪತ್ತು ಗಳಿಸಬಹುದಾದರೂ, ಕೆಲವು ಸಾಮಾನ್ಯ ತಪ್ಪುಗಳು ಉತ್ತಮ ಮಾರುಕಟ್ಟೆಯಲ್ಲೂ ನಿಮ್ಮ ಗಳಿಕೆಯನ್ನು ಕುಂಠಿತಗೊಳಿಸಬಹುದು. ಹೂಡಿಕೆಗೆ ಷೇರುಗಳನ್ನು ಆಯ್ದುಕೊಳ್ಳುವಾಗ ಸಾಮಾನ್ಯವಾಗಿ ಯಾವ ತಪ್ಪುಗಳು ಆಗುತ್ತವೆ ಎನ್ನುವುದನ್ನು ಅರಿತರೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ರಿಟೇಲ್ ಹೂಡಿಕೆದಾರರು ಎಚ್ಚರದಿಂದಿರಬೇಕಾದ ಪ್ರಮುಖ 10 ಹೂಡಿಕೆ ತಪ್ಪುಗಳು ಇಲ್ಲಿವೆ:

ಖ್ಯಾತಿಪಡೆದ ಷೇರುಗಳ ಹಿಂದೆಬೀಳುವುದು

ಕೇವಲ ಟ್ರೆಂಡಿಂಗ್‌ನಲ್ಲಿದೆ ಅಥವಾ ಎಲ್ಲರೂ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಯಾವುದೇ ಷೇರನ್ನು ಖರೀದಿಸಬೇಡಿ. ಜನಪ್ರಿಯತೆಯು ಕಂಪನಿಯ ಬಲವಾದ ಆರ್ಥಿಕ ಮೂಲಭೂತ ಅಂಶಗಳನ್ನು ಸೂಚಿಸುವುದಿಲ್ಲ. ಹೂಡಿಕೆ ಮಾಡುವ ಮುನ್ನ ಕಂಪನಿಯ ವ್ಯವಹಾರ ಮಾದರಿ ಮತ್ತು ಆದಾಯದ ಸಾಮರ್ಥ್ಯವನ್ನು ಪರಿಶೀಲಿಸಿ.

Loading...

ವ್ಯಾಲುಯೇಶನ್ ನಿರ್ಲಕ್ಷಿಸುವುದು

ಒಂದು ಉತ್ತಮ ಕಂಪನಿಯು ಷೇರನ್ನು ಯಾವುದೇ ಬೆಲೆ ತೆತ್ತಾದರೂ ಖರೀದಿಸುತ್ತೇನೆ ಎನ್ನುವ ಧೋರಣೆ ತರವಲ್ಲ. ಕಂಪನಿಯ ವ್ಯವಹಾರ ಉತ್ತಮವಾಗಿದ್ದರೂ ಅದರ ಷೇರು ಓವರ್​ಪ್ರೈಸ್ ಆಗಿದ್ದರೆ ಹೂಡಿಕೆ ಮಾಡುವುದು ತಪ್ಪಾಗಬಹುದು. ಈ ಹಿನ್ನೆಲೆಯಲ್ಲಿ ಪಿ/ಇ ಅನುಪಾತಗಳಂತಹ (P/E ratios) ವ್ಯಾಲ್ಯುಯೇಶನ್​ ಮಾಪನಗಳನ್ನು ಗಮನಿಸುವುದು ಅಗತ್ಯ.

ಇದನ್ನೂ ಓದಿ: 20 ವರ್ಷಗಳ ದಾಖಲೆ ಮುರಿಯಲಿದೆ ಭಾರತದ ಜಿಡಿಪಿ ದರ; ಕೊರಿಯನ್ ಅರ್ಥಶಾಸ್ತ್ರಜ್ಞರ ವಿಶ್ಲೇಷಣೆ ಇಲ್ಲಿದೆ

ಆತುರದಿಂದ ಷೇರು ಮಾರಾಟ ಮಾಡುವುದು

ಮಾರುಕಟ್ಟೆಯಲ್ಲಿ ಏರಿಳಿತಗಳು ಸಹಜ. ಕೇವಲ ಬೆಲೆಗಳು ಇಳಿದಿವೆ ಎಂಬ ಕಾರಣಕ್ಕೆ ಆತುರದಿಂದ ಷೇರುಗಳನ್ನು ಮಾರಾಟ ಮಾಡುವುದು ತಾತ್ಕಾಲಿಕ ನಷ್ಟವನ್ನು ಶಾಶ್ವತ ನಷ್ಟವನ್ನಾಗಿ ಪರಿವರ್ತಿಸುತ್ತದೆ. ನಿರ್ಧಾರ ಕೈಗೊಳ್ಳುವ ಮುನ್ನ ಕಂಪನಿಯ ಮೂಲಭೂತ ಅಂಶಗಳನ್ನು ಮರುಪರಿಶೀಲಿಸಿ.

ಅತಿಯಾದ ಸಾಲವನ್ನು ಕಡೆಗಣಿಸುವುದು

ಬಡ್ಡಿ ದರಗಳು ಹೆಚ್ಚಾದಾಗ ಅಥವಾ ನಗದು ಹರಿವು (cash flow) ಕಡಿಮೆಯಾದಾಗ ಅಧಿಕ ಸಾಲವು ಒಂದು ಕಂಪನಿಗೆ ದೊಡ್ಡ ಹೊರೆಯಾಗುತ್ತದೆ. ಹೂಡಿಕೆಗೂ ಮುನ್ನ ಕಂಪನಿಯ ಸಾಲದ ಮಟ್ಟ ಮತ್ತು ಅದನ್ನು ತೀರಿಸುವ ಸಾಮರ್ಥ್ಯವನ್ನು ಗಮನಿಸಬೇಕು.

ನಗದು ಹರಿವನ್ನು ನಿರ್ಲಕ್ಷಿಸುವುದು

ವರದಿಯಾದ ಲಾಭವು ಯಾವಾಗಲೂ ಕಂಪನಿಯ ಕೈಯಲ್ಲಿರುವ ನಗದು ಹಣವಾಗಿರುವುದಿಲ್ಲ. ವರದಿಗಳಲ್ಲಿ ಲಾಭ ಹೆಚ್ಚಿದ್ದರೂ ಆಪರೇಟಿಂಗ್ ಕ್ಯಾಷ್ ಫ್ಲೋ ಕಳಪೆಯಾಗಿದ್ದರೆ ಎಚ್ಚರದಿಂದಿರಬೇಕು.

ಅರ್ಥವಾಗದ ವ್ಯವಹಾರಗಳಲ್ಲಿ ಹೂಡಿಕೆ

ತಮಗೆ ಸರಿಯಾಗಿ ಅರ್ಥವಾಗದ ವ್ಯವಹಾರಗಳ ಷೇರುಗಳನ್ನು ಖರೀದಿಸಿದಾಗ ಅಪಾಯವನ್ನು ಅಳೆಯುವುದು ಕಷ್ಟವಾಗುತ್ತದೆ. ವಾರ್ಷಿಕ ವರದಿಗಳನ್ನು ಓದುವುದು ಮತ್ತು ಕಂಪನಿಯ ಸ್ಪರ್ಧಾತ್ಮಕ ಶಕ್ತಿಯನ್ನು ಅರಿಯುವುದು ಮುಖ್ಯ.

ವೈವಿಧ್ಯೀಕರಣದ ಕಡೆ ಗಮನ ಕೊಡದೇ ಇರುವುದು

ನಿಮ್ಮ ಸಂಪೂರ್ಣ ಹಣವನ್ನು ಒಂದೇ ಒಂದು ಷೇರು ಅಥವಾ ಒಂದೇ ವಲಯದಲ್ಲಿ (Sector) ಹೂಡಿಕೆ ಮಾಡುವುದು ಅಪಾಯಕಾರಿ. ವಿವಿಧ ಕ್ಷೇತ್ರಗಳು ಮತ್ತು ಆಸ್ತಿ ವರ್ಗಗಳಲ್ಲಿ ಹೂಡಿಕೆಯನ್ನು ಹಂಚಿಕೆ ಮಾಡುವುದು (Diversification) ನಷ್ಟದ ಗಂಡಾಂತರವನ್ನು ತಗ್ಗಿಸುತ್ತದೆ.

ಇದನ್ನೂ ಓದಿ: ರಫ್ತು ಭಾರೀ ಏರಿಕೆ, ಆಮದು ಅಲ್ಪ ಏರಿಕೆ; ಭಾರತದ ವ್ಯಾಪಾರ ಕೊರತೆ 30 ಬಿಲಿಯನ್ ಡಾಲರ್​ಗೆ ಇಳಿಕೆ

ಮ್ಯಾನೇಜ್ಮೆಂಟ್ ಕಡೆ ಗಮನ ಕೊಡದೇ ಇರುವುದು

ಕಳಪೆ ಕಾರ್ಪೊರೇಟ್ ಆಡಳಿತ ಮತ್ತು ತಪ್ಪಾದ ಬಂಡವಾಳ ಹಂಚಿಕೆಯು ಷೇರುದಾರರ ಮೌಲ್ಯವನ್ನು ಕುಗ್ಗಿಸುತ್ತದೆ. ಕಂಪನಿಯ ಉನ್ನತ ಹಂತದ ನಾಯಕತ್ವದ ಹಿಂದಿನ ದಾಖಲೆ ಮತ್ತು ನಿರ್ಧಾರಗಳನ್ನು ಪರಾಮರ್ಶಿಸುವುದು ಅತ್ಯಗತ್ಯ. ನಾಯಕತ್ವ ಸಮರ್ಥವಾಗಿದ್ದರೆ ಕಂಪನಿ ದೂರಗಾಮಿಯಾಗಿ ಉತ್ತಮ ಹಾದಿ ಹೊಂದಿರುತ್ತದೆ.

ಮಾರುಕಟ್ಟೆ ಟೈಮಿಂಗ್ ಮಾಡಲು ಯತ್ನಿಸುವುದು

ಒಂದು ಷೇರಿನ ಬೆಲೆ ಕುಸಿದಾಗ ಖರೀದಿಸಬೇಕು ಎನ್ನುವುದು ಸಾಮಾನ್ಯ ನಿಯಮ. ಹಾಗಂತ, ಷೇರುಬೆಲೆ ಕನಿಷ್ಠ ಹಂತಕ್ಕೆ ಬರುವ ಸಮಯದವರೆಗೆ ಕಾಯುತ್ತೇನೆ ಎಂದರೆ ಅದು ಆಗದ ಕೆಲಸ. ಯಾರಿಗೂ ಕೂಡ ಮಾರ್ಕೆಟ್ ಟೈಮಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಇದು ಅನಗತ್ಯ ವಹಿವಾಟು ವೆಚ್ಚವನ್ನು ಹೆಚ್ಚಿಸುವುದಲ್ಲದೆ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

ಸ್ಪಷ್ಟ ಹೂಡಿಕೆ ತಂತ್ರವಿಲ್ಲದಿರುವುದು

ಯಾವುದೇ ಸ್ಪಷ್ಟ ಗುರಿ ಅಥವಾ ತಂತ್ರವಿಲ್ಲದೆ ಹೂಡಿಕೆ ಮಾಡುವುದು ದಾರಿತಪ್ಪಿದ ಹಾಗೆ. ವ್ಯವಹಾರದ ಮೂಲಭೂತ ಅಂಶಗಳನ್ನು ಅರಿತು, ಸಮಂಜಸವಾದ ಬೆಲೆಗೆ ಷೇರುಗಳನ್ನು ಪಡೆದು, ಭಾವನೆಗಳಿಗೆ ಒಳಗಾಗದೆ ದೀರ್ಘಕಾಲಿಕ ಗುರಿಯೊಂದಿಗೆ ಮುಂದುವರಿಯುವುದು ಯಶಸ್ವಿ ಹೂಡಿಕೆಯ ರಹಸ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us