ರಫ್ತು ಭಾರೀ ಏರಿಕೆ, ಆಮದು ಅಲ್ಪ ಏರಿಕೆ; ಭಾರತದ ವ್ಯಾಪಾರ ಕೊರತೆ 30 ಬಿಲಿಯನ್ ಡಾಲರ್ಗೆ ಇಳಿಕೆ
2026ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ರಫ್ತು ಶೇ 23ರಷ್ಟು ಹೆಚ್ಚಿದೆ. ಆಮದು ಶೇ. 8 ಹೆಚ್ಚಿದೆ. ಆಮದು ಮತ್ತು ರಫ್ತು ನಡುವಿನ ಅಂತರ ಅಥವಾ ಟ್ರೇಡ್ ಡೆಫಿಸಿಟ್ 30.21 ಬಿಲಿಯನ್ ಡಾಲರ್ಗೆ ಇಳಿದಿದೆ. ಸೆಪ್ಟೆಂಬರ್ನಲ್ಲಿ ಭಾರತದಿಂದ ಸರಕುಗಳ ರಫ್ತು ಹೆಚ್ಚಳದಲ್ಲಿ ಅಮೆರಿಕ ಮತ್ತು ಯುಎಇ ಪಾಲು ಹೆಚ್ಚು. ಈ ಹಣಕಾಸು ವರ್ಷದಲ್ಲಿ ಭಾರತದ ರಫ್ತು ನಿರೀಕ್ಷೆಮೀರಿ ಹೆಚ್ಚುವ ಸಾಧ್ಯತೆ ಇದೆ.

ನವದೆಹಲಿ, ಅಕ್ಟೋಬರ್ 16: ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ರಫ್ತು ಗಣನೀಯವಾಗಿ ಹೆಚ್ಚಾಗಿದೆ. ಅದೇ ವೇಳೆ, ಆಮದು ಬಹಳ ಅಲ್ಪ ಮೊತ್ತದಷ್ಟು ಮಾತ್ರ ಏರಿಕೆ ಆಗಿದೆ. ಇದರಿಂದಾಗಿ, ಒಟ್ಟಾರೆ ವ್ಯಾಪಾರ ಅಂತರ ಅಥವಾ ಟ್ರೇಡ್ ಡೆಫಿಸಿಟ್ ತಗ್ಗಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಸೆಪ್ಟೆಂಬರ್ನಲ್ಲಿ ರಫ್ತು ಶೇ. 23ರಷ್ಟು ಹೆಚ್ಚಾಗಿ 44.40 ಬಿಲಿಯನ್ ಡಾಲರ್ ಆಗಿದೆ. ಆಮದು ಶೇ. 8ರಷ್ಟು ಹೆಚ್ಚಳಗೊಂಡು 74.61 ಬಿಲಿಯನ್ ಡಾಲರ್ ಮುಟ್ಟಿದೆ. ಆಗಸ್ಟ್ ತಿಂಗಳಲ್ಲಿ 33 ಬಿಲಿಯನ್ ಡಾಲರ್ನಷ್ಟು ಇದ್ದ ವ್ಯಾಪಾರ ಕೊರತೆ ಸೆಪ್ಟೆಂಬರ್ನಲ್ಲಿ 30.21 ಬಿಲಿಯನ್ ಡಾಲರ್ಗೆ ಇಳಿದಿದೆ.
ಆಗಸ್ಟ್ ತಿಂಗಳಲ್ಲೂ ಭಾರತದ ಅಂತಾರಾಷ್ಟ್ರೀಯ ವ್ಯಾಪಾರ ನೋಟ ಇದೇ ರೀತಿ ಇತ್ತು. ಆಮದು ಶೇ. 14ರಷ್ಟು ಹೆಚ್ಚಾದರೂ ಸರಕುಗಳ ರಫ್ತು ಶೇ. 26ರಷ್ಟು ಹೆಚ್ಚಿತ್ತು. ಇದರಿಂದ ಸರಕುಗಳ ವ್ಯಾಪಾರ ಅಂತರ ಗಣನೀಯವಾಗಿ ತಗ್ಗಿತ್ತು.
ಇದನ್ನೂ ಓದಿ: 2027ರಲ್ಲಿ ಭಾರತದ್ದು 4.52 ಟ್ರಿಲಿಯನ್ ಡಾಲರ್ ಜಿಡಿಪಿ; ಜಪಾನ್ ಹಿಂದಿಕ್ಕಿ 4ನೇ ಸ್ಥಾನಕ್ಕೇರಲಿದೆ: ಐಎಂಎಫ್ ವರದಿ
ಸರಕು ಮತ್ತು ಸೇವೆಗಳು ಸೇರಿ ಒಟ್ಟು ರಫ್ತು ಈ ಹಣಕಾಸು ವರ್ಷ 476 ಬಿಲಿಯನ್ ಡಾಲರ್ಗಿಂತ ಹೆಚ್ಚಿದೆ. ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ 233.60 ಬಿಲಿಯನ್ ಡಾಲರ್ ಒಟ್ಟು ರಫ್ತು ದಾಖಲಾಗಿದೆ. ಜುಲೈನಿಂದ ಸೆಪ್ಟೆಂಬರ್ವರೆಗಿನ ಎರಡನೇ ಕ್ವಾರ್ಟರ್ ಅವಧಿಯಲ್ಲಿ ಇದು 242.60 ಬಿಲಿಯನ್ ಡಾಲರ್ಗೆ ಏರಿದೆ. ಈವರೆಗೆ ಯಾವುದೇ ವರ್ಷದಲ್ಲೂ ಎರಡನೇ ಕ್ವಾರ್ಟರ್ನಲ್ಲಿ ಇಷ್ಟು ರಫ್ತು ದಾಖಲಾಗಿದ್ದನ್ನು ಭಾರತ ಕಂಡಿದ್ದಿಲ್ಲ. ಈ ವರ್ಷ ಸರಕುಗಳ ರಫ್ತೇ 550 ಬಿಲಿಯನ್ ಡಾಲರ್ ಮುಟ್ಟುವ ನಿರೀಕ್ಷೆ ಬಂದಿದೆ.
ಅಮೆರಿಕಕ್ಕೆ ಸಿಕ್ಕಾಪಟ್ಟೆ ಹೆಚ್ಚಿದ ರಫ್ತು; ಕಾರಣ ಏನು ಗೊತ್ತಾ?
ಸೆಪ್ಟೆಂಬರ್ ತಿಂಗಳಲ್ಲಿ ಭಾರತದಿಂದ ಅಮೆರಿಕಕ್ಕೆ ಆಗಿರುವ ರಫ್ತಿನಲ್ಲಿ ಶೇ. 48ರಷ್ಟು ಹೆಚ್ಚಳವಾಗಿದೆ. ವರದಿಗಳ ಪ್ರಕಾರ 8 ಬಿಲಿಯನ್ ಡಾಲರ್ ರಫ್ತು ಆಗಿದೆ. ಭಾರತದ ಮೇಲೆ ಅಮೆರಿಕ ನೂರಕ್ಕೆ ನೂರು ಟ್ಯಾರಿಫ್ ಕ್ರಮ ಜಾರಿಗೊಳಿಸುವ ಸಾಧ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ರಫ್ತುದಾರರು ತರಾತುರಿಯಲ್ಲಿ ಸರಕುಗಳನ್ನು ಅಮೆರಿಕಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪೆಟ್ರೋಲ್ ಮೇಲೆ ರಫ್ತು ಸುಂಕ ಹೆಚ್ಚಳ; ಡೀಸಲ್ ಮೇಲಿನ ರಫ್ತು ಸುಂಕ ಇಳಿಕೆ
ಚೀನಾಗೆ ಭಾರತದ ರಫ್ತು ಶೇ. 40 ಹೆಚ್ಚಳ
ಇದೇ ವೇಳೆ, 2026ರ ಕ್ಯಾಲೆಂಡರ್ ವರ್ಷದ ಮೊದಲ 9 ತಿಂಗಳಲ್ಲಿ ಚೀನಾಗೆ ಭಾರತ ಮಾಡಿದ ರಫ್ತಿನಲ್ಲಿ ಶೇ. 40ರಷ್ಟು ಜಿಗಿತವಾಗಿದೆ. ವಿಪರ್ಯಾಸವೆಂದರೆ ಟ್ರೇಡ್ ಡೆಫಿಸಿಟ್ ಕೂಡ 105.93 ಬಿಲಿಯನ್ ಡಾಲರ್ಗೆ ಹಿಗ್ಗಿದೆ. ಇದಕ್ಕೆ ಕಾರಣ ಆಮದು ಗಣನೀಯವಾಗಿ ಹೆಚ್ಚಳವಾಗಿರುವುದು.
ಎಫ್ಟಿಎಗಳಿಂದ ಭಾರತಕ್ಕೆ ಮಿಶ್ರ ಫಲ
ಭಾರತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ವಿವಿಧ ದೇಶಗಳಿಂದ ಮಿಶ್ರ ಫಲ ಸಿಕ್ಕಿದೆ. ಯುಎಇಗೆ ಭಾರತದ ರಫ್ತಿನಲ್ಲಿ ಶೇ. 27ರಷ್ಟು ಏರಿಕೆ ಆಗಿದೆ. ಆಸ್ಟ್ರೇಲಿಯಾಗೆ ಆಗಿರುವ ರಫ್ತು ಏರಿಕೆ ಬಹಳ ಅಲ್ಪ. ಮಾರಿಷಸ್ ದೇಶಕ್ಕೆ ಭಾರತದ ರಫ್ತು ಇಳಿಕೆ ಆಗಿದೆ. ಇತರ ದೇಶಗಳೊಂದಿಗೂ ಹೆಚ್ಚಿನ ವ್ಯತ್ಯಯ ಆಗಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




