ಪೆಟ್ರೋಲ್ ಮೇಲೆ ರಫ್ತು ಸುಂಕ ಹೆಚ್ಚಳ; ಡೀಸಲ್ ಮೇಲಿನ ರಫ್ತು ಸುಂಕ ಇಳಿಕೆ
ಪೆಟ್ರೋಲ್ ರಫ್ತು ಮೇಲಿನ ವಿಂಡ್ಫಾಲ್ ಟ್ಯಾಕ್ಸ್ ಅನ್ನು ಲೀಟರ್ಗೆ 50 ಪೈಸೆಯಿಂದ 2.50 ರುಪಾಯಿಗೆ ಸರ್ಕಾರ ಹೆಚ್ಚಿಸಿದೆ. ಅದೇ ವೇಳೆ, ಡೀಸಲ್ ಮೇಲಿನ ರಫ್ತು ಸುಂಕವನ್ನು 16 ರೂನಿಂದ 8.5 ರೂಗೆ ಇಳಿಸಿದೆ. ಎಟಿಎಫ್ ಇಂಧನದ ಮೇಲಿನ ರಫ್ತು ಸುಂಕವನ್ನು 10.50 ರೂನಲ್ಲೇ ಮುಂದುವರಿಸಲಾಗಿದೆ. ದೇಶೀಯವಾಗಿ ಪೂರೈಕೆಯಾಗುವ ಇಂಧನಗಳಿಗೆ ಬೇರೆಯೇ ಸುಂಕ ವ್ಯವಸ್ಥೆ ಇರುತ್ತದೆ.

ಮುಖ್ಯಾಂಶಗಳು
- ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು 2.50 ರುಪಾಯಿಗೆ ಹೆಚ್ಚಿಸಲಾಗಿದೆ
- ಡೀಸಲ್ ಮೇಲಿನ ರಫ್ತು ಸುಂಕವನ್ನು 16 ರೂನಿಂದ 8.5 ರೂಗೆ ಇಳಿಸಲಾಗಿದೆ.
- ಎಟಿಎಫ್ ಇಂಧನದ ಮೇಲಿನ ರಫ್ತು ಸುಂಕ 10.50 ರೂ ಇದೆ.
ನವದೆಹಲಿ, ಅಕ್ಟೋಬರ್ 16: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸಲ್ ಮತ್ತು ವಿಮಾನ ಇಂಧನಗಳ ಮೇಲಿನ ರಫ್ತು ಸುಂಕವನ್ನು ಪರಿಷ್ಕರಿಸಿದೆ. ಪೆಟ್ರೋಲ್ ಮೇಲಿನ ವಿಂಡ್ಫಾಲ್ ಟ್ಯಾಕ್ಸ್ ಅಥವಾ ಹೆಚ್ಚುವರಿ ಲಾಭ ತೆರಿಗೆ ಅಥವಾ ರಫ್ತು ಸುಂಕವನ್ನು ಹೆಚ್ಚಿಸಿದೆ. ಅದೇ ವೇಳೆ, ಡೀಸಲ್ ಮೇಲಿನ ರಫ್ತು ಸುಂಕವನ್ನು ಕಡಿಮೆ ಮಾಡಿದೆ. ಇನ್ನು, ವಿಮಾನ ಇಂಧನ ಅಥವಾ ಜೆಟ್ ಫೂಯೆಲ್ ಅಥವಾ ಎಟಿಎಫ್ ಮೇಲಿನ ರಫ್ತು ಸುಂಕವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಆದರೆ, ದೇಶೀಯವಾಗಿ ಪೂರೈಕೆಯಾಗುವ ಇಂಧನಗಳ ಮೇಲಿನ ಸುಂಕಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
ವರದಿಗಳ ಪ್ರಕಾರ, ಒಂದು ಲೀಟರ್ ಪೆಟ್ರೋಲ್ ಮೇಲೆ ರಫ್ತು ಸುಂಕ 50 ಪೈಸೆ ಮಾತ್ರ ಇತ್ತು. ಅದನ್ನು ಎರಡೂವರೆ ರುಪಾಯಿಗೆ ಏರಿಸಲಾಗಿದೆ.
ಇನ್ನೊಂದೆಡೆ, ಡೀಸಲ್ ಮೇಲಿನ ರಫ್ತು ಸುಂಕವನ್ನು ಲೀಟರ್ಗೆ 16 ರೂ ಇದ್ದದ್ದು 8.5 ರೂಗೆ ಇಳಿಸಲಾಗಿದೆ. ಎಟಿಎಫ್ ಇಂಧನದ ಮೇಲಿನ ಸುಂಕವು 10.5 ರೂನಲ್ಲಿ ಮುಂದುವರಿಯುತ್ತದೆ.
ಇದನ್ನೂ ಓದಿ: ವಿಮಾನವಲ್ಲ, ಡ್ರೋನ್ ಅಲ್ಲ, ಇದು ಜಿಗಿಯುವ ಕಾರು… ಫ್ಲೈಯಿಂಗ್ ಕಾರಿನತ್ತ ಟೆಸ್ಲಾ ಬಿಗ್ ಜಂಪ್
ವಿಂಡ್ಫಾಲ್ ಟ್ಯಾಕ್ಸ್ ಎಂದರೇನು?
ಒಂದು ಸರಕನ್ನು ಸಾಕಷ್ಟು ದಾಸ್ತಾನು ಮಾಡಿಕೊಂಡಿರುವ ಸಂದರ್ಭದಲ್ಲಿ, ಆ ಸರಕಿನ ಬೆಲೆ ದಿಢೀರನೇ ಬಹಳಷ್ಟು ಹೆಚ್ಚಾದಾಗ ಸಂಸ್ಥೆಗೆ ನಿರೀಕ್ಷೆಮೀರಿದ ಲಾಭ ಸಿಗುತ್ತದೆ. ಇದನ್ನೇ ವಿಂಡ್ಫಾಲ್ ಪ್ರಾಫಿಟ್ ಎನ್ನುವುದು. ಈ ಲಾಭದ ಮೇಲೆ ಹಾಕುವ ತೆರಿಗೆಯೇ ವಿಂಡ್ಫಾಲ್ ಟ್ಯಾಕ್ಸ್. ಸದ್ಯ ಪೆಟ್ರೋಲ್ ಮೇಲೆ ಹಾಕಲಾಗಿರುವುದು ಇದೇ ತೆರಿಗೆಯನ್ನು.
ಈಗ ಮಾಡಿರುವ ಪರಿಷ್ಕೃತ ತೆರಿಗೆಗಳು ಅಕ್ಟೋಬರ್ 16ರಿಂದ ಆರಂಭಗೊಂಡು 15 ದಿನಗಳವರೆಗೆ ಇರುತ್ತದೆ. ಅಥವಾ ತಿಂಗಳಾಂತ್ಯದವರೆಗೂ ಇರುತ್ತದೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧ ಶುರುದಾಗಿನಿಂದ ಸರ್ಕಾರ ತಿಂಗಳಲ್ಲಿ ಎರಡು ಬಾರಿ ಈ ಸುಂಕವನ್ನು ಪರಿಷ್ಕರಿಸುತ್ತದೆ.
ಇದನ್ನೂ ಓದಿ: ಇಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಭಾರತಕ್ಕೆ ಬರಲಿ, ಸ್ಪರ್ಧಿಸಲು ನಾವ್ ರೆಡಿ; ತೊಡೆ ತಟ್ಟಿದ ಜಿಯೋ ಮತ್ತು ಏರ್ಟೆಲ್
ಭಾರತದಿಂದ ಅತ್ತ ತೈಲ ಆಮದು, ಇತ್ತ ಪೆಟ್ರೋಲಿಯಂ ರಫ್ತು…
ಭಾರತ ಅತಿಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದು. ಅದನ್ನು ಸಂಸ್ಕರಿಸಿ ಸಾಕಷ್ಟು ಪೆಟ್ರೋಲ್, ಡೀಸಲ್, ಎಟಿಎಫ್ ಇತ್ಯಾದಿ ಇಂಧನಗಳನ್ನು ತಯಾರಿಸುತ್ತದೆ. ಇವುಗಳಲ್ಲಿ ಹೆಚ್ಚಿನವು ಆಂತರಿಕ ಅನುಭೋಗಕ್ಕೆ ಬಳಕೆಯಾಗುತ್ತದೆ. ಉಳಿದವನ್ನು ರಫ್ತು ಮಾಡಿಕೊಳ್ಳಲಾಗುತ್ತದೆ. ವಿಶ್ವದಲ್ಲಿ ಅತಿಹೆಚ್ಚು ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುವ ದೇಶಗಳಲ್ಲಿ ಭಾರತ ಇದೆ. ಯೂರೋಪ್ನ ಹೆಚ್ಚಿನ ದೇಶಗಳಿಗೆ ಭಾರತದಿಂದಲೇ ಪೆಟ್ರೋಲ್ ಪೂರೈಕೆಯಾಗುತ್ತದೆ. ತೈಲ ರಾಷ್ಟ್ರವಾದ ರಷ್ಯಾಗೂ ಕೂಡ ಭಾರತವೇ ಇತ್ತೀಚೆಗೆ ಪೆಟ್ರೋಲ್ ನೀಡುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Fri, 16 October 26




