Forex Rise: ಭಾರತದ ಫಾರೆಕ್ಸ್ ರಿಸರ್ವ್ಸ್ 616 ಬಿಲಿಯನ್ ಡಾಲರ್ಗೆ ಏರಿಕೆ; ಕಳೆದ 20 ತಿಂಗಳ ಗರಿಷ್ಠ ಮಟ್ಟ
Foreign Exchange Reserves: ಭಾರತದ ಫಾರೆಕ್ಸ್ ರಿಸರ್ವ್ಸ್ ಡಿಸೆಂಬರ್ 15ಕ್ಕೆ ಅಂತ್ಯಗೊಂಡ ವಾರದಲ್ಲಿ 9.11 ಬಿಲಿಯನ್ ಡಾಲರ್ನಷ್ಟು ಏರಿ 615.97 ಡಾಲರ್ ಮಟ್ಟ ತಲುಪಿದೆ. ದೇಶದ ವಿದೇಶೀ ವಿನಿಮಯ ಮೀಸಲು ನಿಧಿ ಸತತ 5 ವಾರ ಕಾಲ ಏರಿಕೆ ಕಂಡಂತಾಗಿದೆ. ಹಿಂದಿನ ವಾರದಲ್ಲಿ 2.816 ಬಿಲಿಯನ್ ಡಾಲರ್ನಷ್ಟು ಹೆಚ್ಚಿತ್ತು. 2021ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 645 ಬಿಲಿಯನ್ ಡಾಲರ್ನಷ್ಟು ಇತ್ತು. ಅದು ಸಾರ್ವಕಾಲಿಕ ಗರಿಷ್ಠ ಮಟ್ಟ ಎನಿಸಿದೆ.

ನವದೆಹಲಿ, ಡಿಸೆಂಬರ್ 24: ಭಾರತದ ಫಾರೀನ್ ಎಕ್ಸ್ಚೇಂಜ್ ರಿಸರ್ವ್ಸ್ (Forex Reserves of India) ಮೊತ್ತ ಸತತ ಐದನೇ ವಾರವೂ ಹೆಚ್ಚಳವಾಗಿದೆ. ಡಿಸೆಂಬರ್ 15ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ಮೀಸಲು ನಿಧಿ 9.11 ಬಿಲಿಯನ್ ಡಾಲರ್ನಷ್ಟು ಏರಿದೆ. ಇದರೊಂದಿಗೆ ದೇಶದ ಒಟ್ಟಾರೆ ವಿದೇಶ ವಿನಿಮಯ ಮೀಸಲು ನಿಧಿ 615.97 ಬಿಲಿಯನ್ ಡಾಲರ್ನಷ್ಟಾಗಿದೆ. ಅದರ ಹಿಂದಿನ ವಾರದಲ್ಲಿ ಮೀಸಲು ನಿಧಿ 606.859 ಬಿಲಿಯನ್ ಡಾಲರ್ನಷ್ಟು ಇತ್ತು. ಹಿಂದಿನ ನಾಲ್ಕು ವಾರ ಕೂಡ ಫಾರೆಕ್ಸ್ ರಿಸರ್ವ್ಸ್ನಲ್ಲಿ ಏರಿಕೆ ಆಗಿತ್ತು. ಡಿಸೆಂಬರ್ 8ಕ್ಕೆ ಅಂತ್ಯಗೊಂಡ ವಾರದಲ್ಲಿ 2.816 ಬಿಲಿಯನ್ ಡಾಲರ್ನಷ್ಟು ಏರಿತ್ತು.
ನಿನ್ನೆ (ಡಿ. 23) ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಡಿಸೆಂಬರ್ 15ಕ್ಕೆ ಅಂತ್ಯಗೊಂಡ ವಾರದಲ್ಲಿ ಹೆಚ್ಚಳವಾದ 9.11 ಬಿಲಿಯನ್ ಮೊತ್ತದ ಫಾರೆಕ್ಸ್ ಮೀಸಲು ನಿಧಿಯಲ್ಲಿ ಎಲ್ಲಾ ಭಾಗಗಳೂ ಹೆಚ್ಚಳ ಕಂಡಿವೆ. ಫಾರೆಕ್ಸ್ನ ಪ್ರಮುಖ ಭಾಗವಾಗಿರುವ ವಿದೇಶೀ ಕರೆನ್ಸಿ ಆಸ್ತಿ 8.349 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿದೆ.
ಚಿನ್ನದ ಮೀಸಲು ನಿಧಿ 446 ಮಿಲಿಯನ್ ಡಾಲರ್ನಷ್ಟು ಹೆಚ್ಚಾಗಿದೆ. ಎಸ್ಡಿಆರ್ಗಳು (SDR- Special Drawing Rights) 135 ಬಿಲಿಯನ್ ಡಾಲರ್ ಏರಿಕೆ ಆಗಿವೆ. ಐಎಂಎಫ್ನಲ್ಲಿ ಇರಿಸಿರುವ ನಿಧಿ (Reserve position with RBI) 181 ಮಿಲಿಯನ್ನಷ್ಟು ಏರಿರುವುದು ಆರ್ಬಿಐ ದತ್ತಾಂಶ ವರದಿಯಿಂದ ತಿಳಿದಬರುತ್ತದೆ.
ಇದನ್ನೂ ಓದಿ: IMF vs India: ವಿಪರೀತ ಸಾಲ ಹುಷಾರ್..! ಭಾರತವನ್ನು ಎಚ್ಚರಿಸಿದ ಐಎಂಎಫ್; ಈ ಸಾಲದಿಂದ ಅಪಾಯ ಇಲ್ಲ ಎನ್ನುವ ಸರ್ಕಾರ
ಡಿಸೆಂಬರ್ 15ಕ್ಕೆ ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ ಏರಿಕೆ ವಿವರ
- ಭಾರತದ ಫಾರೆಕ್ಸ್ ರಿಸರ್ವ್ಸ್ ಮೊತ್ತ: 615.97 ಬಿಲಿಯನ್ ಡಾಲರ್
- ಒಂದು ವಾರದಲ್ಲಿ ಏರಿಕೆ ಆಗಿದ್ದು: 9.11 ಬಿಲಿಯನ್ ಡಾಲರ್
- ಫಾರೀನ್ ಕರೆನ್ಸಿ ಆಸ್ತಿ: 545.048 ಬಿಲಿಯನ್ ಡಾಲರ್ (ಏರಿಕೆ ಆಗಿದ್ದು 8.349 ಬಿಲಿಯನ್ ಡಾಲರ್)
- ಗೋಲ್ಡ್ ರಿಸರ್ವ್ಸ್: 47.577 ಬಿಲಿಯನ್ ಡಾಲರ್ (ಏರಿಕೆ ಆಗಿದ್ದು 47.577 ಮಿಲಿಯನ್)
- ಎಸ್ಡಿಆರ್: 18.323 ಬಿಲಿಯನ್ ಡಾಲರ್ (ಏರಿಕೆ ಆಗಿದ್ದು 135 ಮಿಲಿಯನ್)
- ಐಎಂಎಂಫ್ನಲ್ಲಿ ಇರಿಸಿರುವ ನಿಧಿ: 5.023 ಬಿಲಿಯನ್ ಡಾಲರ್ (ಏರಿಕೆ ಆಗಿದ್ದು 181 ಮಿಲಿಯನ್ ಡಾಲರ್).
ವಿದೇಶೀ ಕರೆನ್ಸಿಗಳ ಆಸ್ತಿ
ಇನ್ನು, ಫಾರೀನ್ ಕರೆನ್ಸಿಗಳ ಬುಟ್ಟಿಯಲ್ಲಿ ಅಮೆರಿಕನ್ ಡಾಲರ್ ಅಲ್ಲದ ಇತರ ವಿದೇಶೀ ಕರೆನ್ಸಿ ಯೂನಿಟ್ಗಳೆನಿಸಿದ ಯೂರೋ, ಪೌಂಡ್, ಯೆನ್ ಇತ್ಯಾದಿಗಳ ಮೌಲ್ಯಗಳಲ್ಲಿ ಆಗುವ ವ್ಯತ್ಯಯವು ವಿದೇಶೀ ಕರೆನ್ಸಿ ಆಸ್ತಿಯ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ. ಕಳೆದ ವಾರದಲ್ಲಿ ಈ ಕರೆನ್ಸಿಗಳ ಮೌಲ್ಯ ಹೆಚ್ಚಾಗಿದ್ದು, ಭಾರತದ ವಿದೇಶೀ ಕರೆನ್ಸಿ ಆಸ್ತಿಯ ತೂಕ ಹೆಚ್ಚಲು ಕಾರಣವಾಗಿತ್ತು.
ಇದನ್ನೂ ಓದಿ: Poll Promises: ರಾಜಕೀಯ ಪಕ್ಷಗಳ ಚುನಾವಣಾ ಭರವಸೆ, ರಾಜ್ಯಗಳ ಆರೋಗ್ಯದ ಮೇಲೆ ಬೀರುವ ಪರಿಣಾಮವೇನು?
ಸಾರ್ವಕಾಲಿಕ ಗರಿಷ್ಠ ಮಟ್ಟದತ್ತ ಫಾರೆಕ್ಸ್ ನಿಧಿ
2021ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಫಾರೆಕ್ಸ್ ಮೀಸಲು ನಿಧಿ 645 ಬಿಲಿಯನ್ ಡಾಲರ್ನಷ್ಟಿತ್ತು. ಅದು ಭಾರತದ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಜಾಗತಿಕ ಹಿಂಜರಿತ ಇತ್ಯಾದಿ ವಿದ್ಯಮಾನಗಳ ಹಿನ್ನೆಲೆಯಲ್ಲಿ ರುಪಾಯಿ ಮೌಲ್ಯ ಗಣನೀಯವಾಗಿ ಕುಸಿಯುವುದನ್ನು ತಡೆಯಲು ಆರ್ಬಿಐ ಒಂದಷ್ಟು ಕರೆನ್ಸಿ ಆಸ್ತಿಗಳನ್ನು ಮಾರಿತ್ತು. ಅದರ ಪರಿಣಾಮವಾಗಿ ಪಾರೆಕ್ಸ್ ನಿಧಿ 600 ಬಿಲಿಯನ್ ಡಾಲರ್ಗಿಂತ ಕೆಳಗೆ ಇಳಿದುಹೋಗಿತ್ತು. ಈಗ ಸತತ ಐದು ವಾರ ಕಾಲ ನಿಧಿಯಲ್ಲಿ ಹೆಚ್ಚಳ ಕಂಡುಬರುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:12 am, Sun, 24 December 23