ಪೆಟ್ರೋಲ್ ಬಂಕ್ಗಳಲ್ಲಿ ಒಬ್ಬ ವ್ಯಕ್ತಿ ಅಥವಾ ವಾಹನಕ್ಕೆ ಎಷ್ಟು ಪೆಟ್ರೋಲ್, ಡೀಸಲ್ ನೀಡಲಾಗುತ್ತದೆ? ಇಲ್ಲಿದೆ ಡೀಟೇಲ್ಸ್
Petrol and Diesel supply at fuel outlets: ಇಂಧನ ಬಿಕ್ಕಟ್ಟು ಇರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸಲ್ ಸಿಗುತ್ತಿಲ್ಲ ಎನ್ನುವ ವದಂತಿ ಎಲ್ಲೆಡೆ ಸುಲಭವಾಗಿ ಹಬ್ಬುತ್ತಿದೆ. ಆದರೆ, ಸದ್ಯ ಅಂಥ ಪರಿಸ್ಥಿತಿ ಉದ್ಭವವಾಗಿಲ್ಲ. ಪೆಟ್ರೋಲ್, ಡೀಸಲ್ ಪೂರೈಕೆ ಸರಾಗವಾಗಿ ಆಗುತ್ತಿದೆ. ಆದರೆ, ಈಗಾಗಲೇ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಪೆಟ್ರೋಲ್ ಮತ್ತು ಡೀಸಲ್ ಖರೀದಿಗೆ ಕೆಲ ಮಿತಿಗಳು, ನಿರ್ಬಂಧಗಳು ಇವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ನವದೆಹಲಿ, ಮೇ 21: ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದಾಗಿ ಕಳೆದ ಎರಡ್ಮೂರು ತಿಂಗಳಿಂದಲೂ ಜಾಗತಿಕ ಇಂಧನ ಬಿಕ್ಕಟ್ಟು ಉದ್ಭವವಾಗಿದೆ. ತೈಲ ಪೂರೈಕೆಯಲ್ಲಿ ಗಣನೀಯವಾಗಿ ವ್ಯತ್ಯಯ ಆಗಿದೆ. ಭಾರತಕ್ಕೆ ಎಲ್ಪಿಜಿ ಸಮಸ್ಯೆ ಅಧಿಕಗೊಂಡಿದೆ. ಪೆಟ್ರೋಲ್ ಮತ್ತು ಡೀಸಲ್ ಹೊಂದಿಸಲೂ ಕೂಡ ಶ್ರಮ ಹಾಕಲಾಗುತ್ತಿದೆ. ಬೇರೆ ಹಲವು ರಾಷ್ಟ್ರಗಳಲ್ಲಿ ಇಂಧನ ಪರಿಸ್ಥಿತಿ ಭಾರತದಕ್ಕಿಂತಲೂ ತೀವ್ರ ಮಟ್ಟದಲ್ಲಿದೆ. ಅನೇಕ ಕಡೆ ಇಂಧನ ಖರೀದಿ ಮಿತಿ (ಫುಯಲ್ ರೇಶನಿಂಗ್) ಹಾಕಲಾಗಿದೆ. ಭಾರತದಲ್ಲೂ ಫುಯಲ್ ರೇಶನಿಂಗ್ ವ್ಯವಸ್ಥೆ ಹಲವೆಡೆ ತರಲಾಗಿದೆ ಎನ್ನುವ ವದಂತಿ ಹಬ್ಬಿತ್ತು. ಆದರೆ, ಅದು ನಿಜವಲ್ಲ ಎಂದು ಸರ್ಕಾರ ಹೇಳಿದೆ. ಆದರೂ ಕೂಡ ರೀಟೇಲ್ ಔಟ್ಲೆಟ್ಗಳಲ್ಲಿ ಪೆಟ್ರೋಲ್ ಮತ್ತು ಡೀಸಲ್ ವಿತರಣೆಗೆ ನಿರ್ಬಂಧ ತರುವ ನಿಯಮಗಳಂತೂ ಇವೆ. ಇಷ್ಟಬಂದಷ್ಟು ಪೆಟ್ರೋಲ್, ಡೀಸಲ್ ಕೊಡೋದಿಲ್ಲ.
ಜಾಗತಿಕ ತೈಲ ಬಿಕ್ಕಟ್ಟು ಶಮನವಾಗದೇ ಇರುವುದು ಮತ್ತು ತೈಲ ಕಂಪನಿಗಳು ಪೆಟ್ರೋಲ್, ಡೀಸಲ್ ಬೆಲೆ ಸಾಕಷ್ಟು ಏರಿಸಲೇಬೇಕಾದ ಅನಿವಾರ್ಯತೆ ಇದೆ ಎನ್ನಲಾಗುತ್ತಿರುವುದು, ಈ ಅಂಶಗಳು ಜನರಲ್ಲಿ ಆತಂಕ ತಂದಿರಬಹುದು. ಹೀಗಾಗಿ, ದೇಶದ ಹಲವು ಪ್ರದೇಶಗಳಲ್ಲಿ ಜನರು ದೊಡ್ಡ ದೊಡ್ಡ ಕ್ಯಾನ್ಗಳನ್ನು ಹಿಡಿದು ಪೆಟ್ರೋಲ್ ಬಂಕ್ಗಳಲ್ಲಿ ಸರದಿ ನಿಂತಿರುವ ದೃಶ್ಯ ಕಾಣಸಿಗುತ್ತದೆ. ಈಗಾಗಲೇ ಇಂಧನ ಪರಿಸ್ಥಿತಿ ಸೂಕ್ಷ್ಮವಿರುವುದರಿಂದ, ಜನರು ಹೆಚ್ಚಿನ ಪೆಟ್ರೋಲ್, ಡೀಸಲ್ ದಾಸ್ತಾನು ಮಾಡಿಕೊಳ್ಳಲು ಮುಂದಾಗಿರುವುದರಿಂದ ಇಲ್ಲದ ಸಮಸ್ಯೆ ಸೃಷ್ಟಿಯಾಗುತ್ತದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಪೆಟ್ರೋಲ್-ಡೀಸೆಲ್, ಗ್ಯಾಸ್ ಬಗ್ಗೆ ಎದ್ದಿರುವ ಅಂತೆ ಕಂತೆಗಳಿಗೆ ತೆರೆ
ಪೆಟ್ರೋಲ್, ಡೀಸಲ್ ಖರೀದಿಗೆ ನಿರ್ಬಂಧ ಏನಿದೆ?
2002ರ ಮಾರ್ಗಸೂಚಿ ಪ್ರಕಾರ, ಪೆಟ್ರೋಲ್ ಬಂಕ್ಗಳಲ್ಲಿ ಒಬ್ಬರಿಗೆ 200 ಲೀಟರ್ಗಿಂತ ಹೆಚ್ಚಿನ ಪೆಟ್ರೋಲ್ ಅಥವಾ ಡೀಸಲ್ ಹಾಕುವಂತಿಲ್ಲ. ಅದೂ ವಾಹನದ ಫುಯಲ್ ಟ್ಯಾಂಕ್ ಮತ್ತು ಮಾನ್ಯ ಕಂಟೇನರ್ಗೆ ಮಾತ್ರ ಇಂಧನ ತುಂಬಿಸಬಹುದು.
ಬಾಟಲ್ಗಳಲ್ಲಿ, ಪ್ಲಾಸ್ಟಿಕ್ ಕ್ಯಾನ್ಗಳಲ್ಲಿ ಅಥವಾ ಅನಧಿಕೃತ ಕಂಟೇನರ್ಗಳಿಗೆ ಪೆಟ್ರೋಲ್ ಅಥವಾ ಡೀಸಲ್ ತುಂಬಿಸಬಾರದು. ಹಾಗೊಂದು ವೇಳೆ, ಇಂಧನ ತುಂಬಿಸಿದರೆ ಪೆಟ್ರೋಲ್ ಬಂಕ್ನ ಲೈಸೆನ್ಸ್ ಅನ್ನೇ ರದ್ದು ಮಾಡುವ ಸಾಧ್ಯತೆ ಇರುತ್ತದೆ.
ಕರ್ನಾಟಕದ ಕೆಲವೆಡೆ ವಾಹನಗಳ ಫುಯಲ್ ಟ್ಯಾಂಕ್ಗಳಿಗೂ ಪೆಟ್ರೋಲ್ ತುಂಬಿಸಲು ಮಿತಿ ಹಾಕಲಾಗಿದೆ ಎನ್ನುವ ಸುದ್ದಿ ಇದೆ. ಹುಬ್ಬಳ್ಳಿಯ ಕೆಲ ಬಂಕ್ಗಳಲ್ಲಿ ಒಂದು ಕಾರಿಗೆ 25 ಲೀಟರ್ಗಿಂತ ಹೆಚ್ಚು ಪೆಟ್ರೋಲ್ ಕೊಡಲ್ಲ, ಟ್ರಕ್ಗಳಿಗೆ 150 ಲೀಟರ್ ಮಿತಿ ಇದೆ ಎನ್ನಲಾಗಿದೆ. ಆದರೆ, ಸರ್ಕಾರ ಅದನ್ನು ಅಲ್ಲಗಳೆದಿದೆ. ನಿಯಮಗಳ ಪ್ರಕಾರ 200 ಲೀಟರ್ವರೆಗೂ ಪೆಟ್ರೋಲ್ ಅಥವಾ ಡೀಸಲ್ ಅನ್ನು ಪಡೆಯಬಹುದು. ಅದೂ ಫುಯಲ್ ಟ್ಯಾಂಕ್ಗಳಲ್ಲಿ ಹಿಡಿಸಿದರೆ ಮಾತ್ರ.
ಇದನ್ನೂ ಓದಿ: ಮೋದಿ ಅವರ ಪಂಚ ರಾಷ್ಟ್ರ ಪ್ರವಾಸದ ಪರಿಣಾಮ ಭಾರತಕ್ಕೆ ಹರಿದುಬರಲಿರುವ ಹೂಡಿಕೆ ಎಷ್ಟು ಗೊತ್ತಾ?
ಅನುಮತಿ ಪಡೆದು ಪೆಟ್ರೋಲ್, ಡೀಸಲ್ ಎಷ್ಟು ಖರೀದಿಸಬಹುದು?
ವಾಹನದ ಫುಯಲ್ ಟ್ಯಾಂಕ್ ಬಿಟ್ಟು ಬೇರೆ ಕಂಟೇನರ್ಗಳಲ್ಲಿ ಪೆಟ್ರೋಲ್ ತುಂಬಿಸಲು ನಿರ್ಬಂಧಗಳಿವೆ. ಕ್ಯಾನ್ಗಳಲ್ಲಿ 200 ಲೀಟರ್ವರೆಗೂ ಪೆಟ್ರೋಲ್, ಡೀಸಲ್ ತುಂಬಿಸಿಕೊಳ್ಳಬಹುದು. ಆದರೆ, ಅದನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ತಿಳಿಸಿ ಪೆಟ್ರೋಲ್ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯಿಂದ ವಿಶೇಷ ಅನುಮತಿ ಪಡೆಯಬೇಕಾಗುತ್ತದೆ.
ಯಾವುದೇ ಅನುಮತಿ ಇಲ್ಲದೇ 5 ಲೀಟರ್ವರೆಗೂ ಪೆಟ್ರೋಲ್ ಪಡೆಯಬಹುದು. ಕೆಲ ಬಂಕ್ಗಳು 5-10 ಲೀಟರ್ಗಳಷ್ಟು ಪೆಟ್ರೋಲ್ ನೀಡಲು ಒಪ್ಪುತ್ತವೆ. ಆದರೆ, ಸಾಮಾನ್ಯ ಪ್ಲಾಸ್ಟಿಕ್ ಬಾಟಲ್ನಲ್ಲಿ ನೀಡುವುದಿಲ್ಲ. ಸ್ಟೀಲ್ ಅಥವಾ ಹೆವಿ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಅದನ್ನು ತುಂಬಿಸಿಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





