Pakistan In Debt Trap: ಅತಿ ಹೆಚ್ಚು ಬಾಹ್ಯ ಸಾಲ ಬಾಕಿ ಉಳಿಸಿಕೊಂಡ ಟಾಪ್ 10 ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ
ಬಾಹ್ಯ ಸಾಲವನ್ನು ಬಾಕಿ ಉಳಿಸಿಕೊಂಡ ಟಾಪ್ 10 ದೇಶಗಳಲ್ಲಿ ಪಾಕಿಸ್ತಾನ ಕೂಡ ಇದೆ. ಹಾಗಿದ್ದರೆ ಇತರ ದೇಶಗಳು ಯಾವುವು ಹಾಗೂ ಒಟ್ಟು ಎಷ್ಟು ಸಾಲವನ್ನು ಬಾಕಿ ಉಳಿಸಿಕೊಂಡಿವೆ ಎಂಬ ವಿವರ ಈ ಲೇಖನದಲ್ಲಿದೆ.
ಅತಿದೊಡ್ಡ ಪ್ರಮಾಣದಲ್ಲಿ ಬಾಹ್ಯ ಸಾಲ ಬಾಕಿ ಉಳಿಸಿಕೊಂಡಿರುವ ಟಾಪ್ 10 ದೇಶಗಳಲ್ಲಿ ಪಾಕಿಸ್ತಾನವು ಒಂದಾಗಿದೆ ಮತ್ತು ಕೊವಿಡ್-19 ಬಿಕ್ಕಟ್ಟಿನ ನಂತರ ಸಾಲ ಸೇವೆ ಅಮಾನತು ಉಪಕ್ರಮಕ್ಕೆ (DSSI) ಅರ್ಹತೆ ಪಡೆದಿದೆ ಎಂದು ವಿಶ್ವ ಬ್ಯಾಂಕ್ ವರದಿ ಹೇಳಿದೆ. ವಿಶ್ವಬ್ಯಾಂಕ್ನಿಂದ ಸೋಮವಾರ ಬಿಡುಗಡೆ ಮಾಡಿದ 2022ರಲ್ಲಿನ ಅಂತಾರಾಷ್ಟ್ರೀಯ ಸಾಲ ಅಂಕಿಅಂಶಗಳನ್ನು ಉಲ್ಲೇಖಿಸಿ, ನ್ಯೂಸ್ ಇಂಟರ್‌ನ್ಯಾಷನಲ್ ಮಾಡಿದ ವರದಿ ಪ್ರಕಾರ, ಗುಂಪಿನ ಅತಿದೊಡ್ಡ ಸಾಲಗಾರರು ಸೇರಿದಂತೆ ವಯಕ್ತಿಕ ಡಿಎಸ್‌ಎಸ್‌ಐ-ಅರ್ಹ ದೇಶಗಳಲ್ಲಿ ಬಾಹ್ಯ ಸಾಲ ಸಂಗ್ರಹವಾಗುವ ದರದಲ್ಲಿ ವ್ಯಾಪಕ ವ್ಯತ್ಯಾಸವಿದೆ. 10 ಅತಿದೊಡ್ಡ ಡಿಎಸ್‌ಎಸ್‌ಐ-ಅರ್ಹ ಸಾಲಗಾರರು (ಅಂಗೋಲಾ, ಬಾಂಗ್ಲಾದೇಶ, ಇಥಿಯೋಪಿಯಾ, ಘಾನಾ, ಕೀನ್ಯಾ, ಮಂಗೋಲಿಯಾ, ನೈಜೀರಿಯಾ, ಪಾಕಿಸ್ತಾನ, ಉಜ್ಬೇಕಿಸ್ತಾನ್ ಮತ್ತು ಜಾಂಬಿಯಾ) ಇವೆಲ್ಲ ದೇಶಗಳ ಒಟ್ಟು ಬಾಹ್ಯ ಸಾಲದ ಬಾಕಿ 2020ರ ಅಂತ್ಯದ ವೇಳೆಗೆ 509 ಬಿಲಿಯನ್ ಡಾಲರ್‌ಗಳು (50,900 ಕೋಟಿ ಅಮೆರಿಕನ್ ಡಾಲರ್- ಭಾರತದ ರೂಪಾಯಿ ಲೆಕ್ಕದಲ್ಲಿ 38,39,361.55 ಕೋಟಿ ಆಗುತ್ತದೆ). 2019 ರ ಕೊನೆಯಲ್ಲಿ ಹೋಲಿಸಬಹುದಾದ ಅಂಕಿ-ಅಂಶಕ್ಕಿಂತ ಶೇ 12ರಷ್ಟು ಜಾಸ್ತಿಯಾಗಿದ್ದು ಮತ್ತು ಎಲ್ಲ ಡಿಎಸ್‌ಎಸ್‌ಐ-ಅರ್ಹ ದೇಶಗಳ ಒಟ್ಟಾರೆ ಬಾಹ್ಯ ಸಾಲ ಬಾಧ್ಯತೆಗಳ ಶೇ 59ರಷ್ಟಕ್ಕೆ ಸಮನಾಗಿದೆ.
2020ರ ಅಂತ್ಯಕ್ಕೆ ಡಿಎಸ್‌ಎಸ್‌ಐ-ಅರ್ಹ ದೇಶಗಳು ಖಾಸಗಿ ಖಾತ್ರಿಯಿಲ್ಲದ ಬಾಹ್ಯ ಸಾಲದ ಶೇಕಡಾ 65ರಷ್ಟನ್ನು ಹೊಂದಿವೆ. ಆಯಾ ದೇಶಗಳಲ್ಲಿ ಸಾಲ ಸಂಗ್ರಹವಾಗುವ ದರವು ಗಣನೀಯವಾಗಿ ಬದಲಾಗುತ್ತದೆ. ವಿಶ್ವ ಬ್ಯಾಂಕ್ ವರದಿಯಲ್ಲಿ ತಿಳಿಸಿರುವಂತೆ, ಪಾಕಿಸ್ತಾನಕ್ಕೆ ಶೇ 8ರಷ್ಟು ಬಾಹ್ಯ ಸಾಲದ ಹೆಚ್ಚಳ ಆಗಿರುವುದು ಅಧಿಕೃತ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಾಲಗಾರರಿಂದ ಬಜೆಟ್ ಬೆಂಬಲದ ಒಳಹರಿವು ಮತ್ತು ವಾಣಿಜ್ಯ ಬ್ಯಾಂಕ್ಗಳಿಂದ ಪಡೆದ ಹೊಸ ಸಾಲಗಳಿಂದ ಎಂದು ನ್ಯೂಸ್ ಇಂಟರ್‌ನ್ಯಾಷನಲ್ ಹೇಳಿದೆ. ಇತರ ಖಾಸಗಿ ಸಾಲಗಾರರಿಂದ ನಿವ್ವಳ ಒಳಹರಿವು 2020ರಲ್ಲಿ ಶೇ 15ರಷ್ಟು ಹೆಚ್ಚಾಗಿ, 14 ಬಿಲಿಯನ್ ಡಾಲರ್‌ಗಳಿಗೆ ಏರಿದೆ. ಇದರಲ್ಲಿ ಹೆಚ್ಚಿನ ಭಾಗವು ಐಎಂಎಫ್ ಕಾರ್ಯಕ್ರಮದ ಭಾಗವಾಗಿ ವಾಣಿಜ್ಯ ಬ್ಯಾಂಕ್ಗಳು ಪಾಕಿಸ್ತಾನಕ್ಕೆ ಸಾಲ ನೀಡಿರುವುದು ಮತ್ತು ಹೊಸ ಸಾಲಗಳ ವಿಸ್ತರಣೆಯನ್ನು ಪ್ರತಿಬಿಂಬಿಸುತ್ತದೆ.
ಪಾಕಿಸ್ತಾನಕ್ಕೆ ಎಫ್‌ಡಿಐ (ವಿದೇಶೀ ನೇರ ಬಂಡವಾಳ) ಒಳಹರಿವು 1.9 ಬಿಲಿಯನ್ ಡಾಲರ್‌ಗಳಿಗೆ ಕುಸಿದಿದೆ. ಇದು 2019ರ ಮಟ್ಟಕ್ಕಿಂತ ಶೇ 5ರಷ್ಟು ಕಡಿಮೆಯಾಗಿದೆ. ಅದು ಕೂಡ ಬ್ರಿಟಿಷ್ ಮತ್ತು ಚೀನೀ ಹೂಡಿಕೆದಾರರಿಂದ ವಿದ್ಯುತ್ ಉತ್ಪಾದನೆ ಮತ್ತು ಟೆಲಿಕಾಂ ವಲಯದಲ್ಲಿ ನಿರಂತರ ಹೂಡಿಕೆ ಮಾಡಿದ್ದರಿಂದಾಗಿ ಈ ಹಂತಕ್ಕೆ ಬಂದಿದೆ. ದಕ್ಷಿಣ ಏಷ್ಯಾದಲ್ಲಿ, ಚೀನಾದ ಸಾಲವು 2011ರಲ್ಲಿ 4.7 ಬಿಲಿಯನ್ ಡಾಲರ್‌ಗಳಿಂದ 2020ರಲ್ಲಿ 36.3 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ ಎಂದು ದಿ ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.
ಇದನ್ನೂ ಓದಿ: ಸೌದಿ ಅರೇಬಿಯಾದ ಹಳೇ ಸಾಲ ತೀರಿಸಲು ಚೀನಾದಿಂದ ದೊಡ್ಡ ಮೊತ್ತದ ಹೊಸ ಸಾಲ ಪಡೆದ ಪಾಕಿಸ್ತಾನ