ಇಪಿಎಫ್ ಸೌಲಭ್ಯ ಪಡೆಯುತ್ತಿರುವವರು ಕೆಲಸ ಬದಲಿಸಿದಾಗ ಹೊಸ ಇಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ಹಿಂದೆಲ್ಲಾ ಕೆಲಸ ಬದಲಿಸಿದಾಗ ಹಿಂದಿನ ಇಪಿಎಫ್ ಅಕೌಂಟ್ಗಳು ಪ್ರತ್ಯೇಕವಾಗಿ ಉಳಿಯುತ್ತಿದ್ದವು. ಅವುಗಳನ್ನು ಮ್ಯಾನುಯಲ್ ಆಗಿ ವಿಲೀನಗೊಳಿಸಬೇಕಿತ್ತು. ಆದರೆ, ಯುಎಎನ್ ವ್ಯವಸ್ಥೆ ಬಂದ ಮೇಲೆ ಇಪಿಎಫ್ ನಿರ್ವಹಣೆ ಸುಲಭಗೊಂಡಿದೆ. ಈಗ ಮತ್ತಷ್ಟು ಸುಧಾರಣೆ ಆಗಿದ್ದು, ಕೆಲಸ ಬದಲಿಸಿ ಹೊಸ ಖಾತೆ ಸೃಷ್ಟಿಯಾದಾಗ ಹಳೆಯ ಖಾತೆ ತನ್ನಂತಾನೆ ಹೊಸ ಖಾತೆಯೊಂದಿಗೆ ವಿಲೀನಗೊಳ್ಳುತ್ತದೆ. ಅರ್ಜಿ ಸಲ್ಲಿಸುವ, ದಾಖಲೆ ಸಲ್ಲಿಸುವ ತಲೆನೋವು ಇರುವುದಿಲ್ಲ.
ಯುಎಎನ್ ಅಥವಾ ಯೂನಿವರ್ಸಲ್ ಅಕೌಂಟ್ ನಂಬರ್ ಎನ್ನುವುದು ಹೂಹಾರದಲ್ಲಿನ ದಾರವಿದ್ದಂತೆ. ಒಬ್ಬ ವ್ಯಕ್ತಿಯ ವಿವಿಧ ಇಪಿಎಫ್ ಅಕೌಂಟ್ಗಳು ಒಂದೇ ಯುಎಎನ್ ಅಡಿ ಬರುತ್ತವೆ. ಇಪಿಎಫ್ ಖಾತೆಗಳು ಬದಲಾದರೂ ಯುಎಎನ್ ಒಂದೇ ಇರುತ್ತದೆ. ನೀವು ಕೆಲಸ ಬದಲಿಸಿ ಹೊಸ ಕೆಲಸಕ್ಕೆ ಸೇರಿದಾಗ ಹಳೆಯ ಇಪಿಎಫ್ ಅಕೌಂಟ್ ಬದಲು ಯುಎಎನ್ ನಂಬರ್ ಕೊಟ್ಟರೆ ಸಾಕು.
ಇದನ್ನೂ ಓದಿ: ಮೊಬೈಲ್ ನಂಬರ್ ರೀತಿ ನಿಮ್ಮ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯನ್ನೂ ಪೋರ್ಟ್ ಮಾಡಬಹುದಾ? ಇಲ್ಲಿದೆ ಡೀಟೇಲ್ಸ್
ಹೊಸ ಕಂಪನಿಯವರು ನಿಮ್ಮ ಯುಎಎನ್ ನಂಬರ್ ಅನ್ನು ಇಪಿಎಫ್ಒದಲ್ಲಿ ನೊಂದಾಯಿಸುತ್ತಾರೆ. ಅದರೊಂದಿಗೆ ಹಳೆಯ ಇಪಿಎಫ್ ಖಾತೆ ಮತ್ತು ಹೊಸ ಖಾತೆ ಎರಡೂ ಕೂಡ ಯುಎಎನ್ ಅಡಿಗೆ ಬರುತ್ತವೆ. ಹಳೆಯ ಇಪಿಎಫ್ ಖಾತೆಯಲ್ಲಿನ ಹಣವು ಹೊಸ ಖಾತೆಗೆ ತನ್ನಂತಾನೆ ರವಾನೆಯಾಗುತ್ತದೆ.
ಹಣ ರವಾನೆಯಾಗುತ್ತಿರುವ ಮಾಹಿತಿಯನ್ನು ಇಪಿಎಫ್ಒ ಸಂಸ್ಥೆಯು ನಿಮ್ಮ ನೊಂದಾಯಿತ ಇಮೇಲ್ ಮತ್ತು ಮೊಬೈಲ್ ನಂಬರ್ಗೆ ಕಳುಹಿಸುತ್ತದೆ. ನೀವು ಮ್ಯಾನುಯಲ್ ಆಗಿ ಹೋಗಿ ಖಾತೆಯ ಹಣ ಟ್ರಾನ್ಸ್ಫರ್ ಮಾಡುವ ಅವಶ್ಯಕತೆ ಇರುವುದಿಲ್ಲ.
ಇಪಿಎಫ್ ಖಾತೆಯಲ್ಲಿನ ಹಣ ಹೊಸ ಖಾತೆಗೆ ರವಾನೆಯಾಗಬೇಕೆಂದರೆ ನಿಮ್ಮ ಯುಎಎನ್ ನಂಬರ್ ಸಕ್ರಿಯವಾಗಿರಬೇಕು. ಹಳೆಯ ಇಪಿಎಫ್ ಖಾತೆ ಮತ್ತು ಹೊಸ ಖಾತೆಗೆ ಅದೇ ಯುಎಎನ್ ನಂಬರ್ ಇದ್ದಿರಬೇಕು.
ಇದನ್ನೂ ಓದಿ: ಎಷ್ಟು ಅವಧಿ ವಹಿವಾಟು ನಡೆಯದಿದ್ದರೆ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳ್ಳುತ್ತದೆ? ಅಕೌಂಟ್ ರೀಆ್ಯಕ್ಟಿವೇಟ್ ಮಾಡುವ ಕ್ರಮ
ಹಾಗೆಯೇ, ನಿಮ್ಮ ಯುಎಎನ್ ನಂಬರ್ಗೆ ಇಮೇಲ್ ಮತ್ತು ಮೊಬೈಲ್ ನಂಬರ್ ಲಿಂಕ್ ಆಗಿದ್ದರೆ ಮಾತ್ರ ಖಾತೆಯ ಅಪ್ಡೇಟ್ಗಳು ನಿಮಗೆ ಬರುತ್ತಿರುತ್ತದೆ.
ಒಂದು ವೇಳೆ ಇಪಿಎಫ್ ಹಣ ತನ್ನಂತಾನೆ ಹೊಸ ಖಾತೆಗೆ ರವಾನೆಯಾಗದೇ ಹೋದರೆ ಇಪಿಎಫ್ಒ ಪೋರ್ಟಲ್ಗೆ ಹೋಗಿ ಮ್ಯಾನುಯಲ್ ಆಗಿ ಟ್ರಾನ್ಸ್ಫರ್ ರಿಕ್ವೆಸ್ಟ್ ಸಲ್ಲಿಸಬೇಕಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ