AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವ್‌ಡುಂಗ್ರಿಯಿಂದ ದೆಹಲಿಯವರೆಗೆ: ಆರ್‌ಟಿಐ ಕಾಯ್ದೆಗೆ ಕಾರಣವಾದ ಒಂದು ಸಣ್ಣ ಹೆಜ್ಜೆ; ಯಾವುದೇ ದೊಡ್ಡ ನಿರ್ಧಾರದ ಶುರು ಹೀಗೆ

Santosh Nair's article in 'Your India' series: ರಾಜಸ್ಥಾನದ ದೇವ್‌ಡುಂಗ್ರಿಯ ಸಣ್ಣ ಗ್ರಾಮದಲ್ಲಿ ಆರಂಭವಾದ ಜನಪರ ಹೋರಾಟ, ಭಾರತದ ಮಾಹಿತಿ ಹಕ್ಕು ಕಾಯ್ದೆ (RTI) ರೂಪುಗೊಳ್ಳಲು ಕಾರಣವಾಯಿತು. ಸರ್ಕಾರಿ ಯೋಜನೆಗಳಲ್ಲಿನ ಭ್ರಷ್ಟಾಚಾರ ಮತ್ತು ವೇತನ ಅಕ್ರಮಗಳನ್ನು ಬಯಲಿಗೆ ತರಲು ಗ್ರಾಮಸ್ಥರು 'ಜನ ಸುನವಾಯಿ' ಮೂಲಕ ಪಾರದರ್ಶಕತೆ ಕೇಳಿದರು. ಈ grassroots ಚಳುವಳಿ 2005ರಲ್ಲಿ ರಾಷ್ಟ್ರೀಯ RTI ಕಾಯ್ದೆಗೆ ನಾಂದಿ ಹಾಡಿತು, ಸಾಮಾನ್ಯ ಜನರ ಪ್ರಶ್ನಿಸುವ ಹಕ್ಕನ್ನು ಎತ್ತಿಹಿಡಿಯಿತು.

ದೇವ್‌ಡುಂಗ್ರಿಯಿಂದ ದೆಹಲಿಯವರೆಗೆ: ಆರ್‌ಟಿಐ ಕಾಯ್ದೆಗೆ ಕಾರಣವಾದ ಒಂದು ಸಣ್ಣ ಹೆಜ್ಜೆ; ಯಾವುದೇ ದೊಡ್ಡ ನಿರ್ಧಾರದ ಶುರು ಹೀಗೆ
ಸಂಸತ್ ಕಲಾಪದ ಒಂದು ದೃಶ್ಯImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 01, 2026 | 3:01 PM

Share

ರಾಜಸ್ಥಾನದಲ್ಲಿ ದೇವ್‌ಡುಂಗ್ರಿ ಎಂಬ ಸಣ್ಣ ಹಳ್ಳಿ. ಅಲ್ಲಿ ಮಣ್ಣು ಮತ್ತು ಕಲ್ಲುಗಳಿಂದ ಕಟ್ಟಿದ ಒಂದು ಸರಳವಾದ ಜೋಪಡಿ. ಅದರಲ್ಲಿದ್ದುವು ಒಂದೆರಡು ಕೊಠಡಿಗಳು. ಅದಕ್ಕಿಂತ ಹೆಚ್ಚೇನೂ ಇಲ್ಲ.

1990ರ ದಶಕದ ಆರಂಭದಲ್ಲಿ, ಕೆಲವೇ ಕೆಲವು ಜನರು ಅಲ್ಲಿ ವಾಸಿಸುತ್ತಾ ಕೆಲಸ ಮಾಡಿಕೊಂಡು ಇದ್ದರು. ಬಾವಿ ತೋಡುವುದು, ರಸ್ತೆ ನಿರ್ಮಿಸುವುದು, ಜಾಗ ಸ್ವಚ್ಛಗೊಳಿಸುವಂತಹ ಸರ್ಕಾರದ ಪರಿಹಾರ ಯೋಜನೆಗಳಲ್ಲಿ ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿಯುವ ಗ್ರಾಮಸ್ಥರು ಅವರ ಸುತ್ತಲೂ ಇದ್ದರು. ಆ ಕೆಲಸಕ್ಕೆ ಅವರಿಗೆ ವೇತನದ ಭರವಸೆ ನೀಡಲಾಗಿತ್ತು. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಪೂರ್ಣ ಪ್ರಮಾಣದ ವೇತನ ಅವರಿಗೆ ತಲುಪುತ್ತಲೇ ಇರಲಿಲ್ಲ. ಸರ್ಕಾರದ ಕಚೇರಿಗಳ ಮಧ್ಯೆ ಎಲ್ಲೋ ದಾಖಲೆಗಳನ್ನು ನಿಶ್ಯಬ್ದವಾಗಿ ತಿದ್ದಲಾಗುತ್ತಿದೆ ಎಂಬುದು ಅವರ ಅನುಮಾನ. ಆದರೆ ಅದನ್ನು ಪರಿಶೀಲಿಸಲು ಅವರಿಗೆ ಯಾವುದೇ ಮಾರ್ಗವಿರಲಿಲ್ಲ. ಅವರದೇ ಶ್ರಮ, ಅವರದೇ ವೇತನವನ್ನು ದಾಖಲಿಸಿದ್ದ ಕಾಗದಪತ್ರಗಳು, ಅವರಿಗೆ ಪ್ರವೇಶದ ಅನುಮತಿಯೇ ಇಲ್ಲದ ಕಚೇರಿಯೊಂದರಲ್ಲಿ ಬೀಗಹಾಕಿ ಇಡಲ್ಪಟ್ಟಿದ್ದವು.

ಆದ್ದರಿಂದ, ಆ ಜೋಪಡಿಯಲ್ಲಿದ್ದ ಜನರು ಗ್ರಾಮಸ್ಥರೊಂದಿಗೆ ಸೇರಿ ತೀರಾ ಸರಳವಾದ ಪ್ರಯತ್ನವೊಂದನ್ನು ಮಾಡುತ್ತಾರೆ. ಅವರು ಲೆಕ್ಕದ ಪುಸ್ತಕಗಳನ್ನು ಹೊರತರಲು ಅಧಿಕಾರಿಗಳನ್ನು ಕೇಳಿಕೊಳ್ಳುತ್ತಾರೆ. ನಂತರ ಆ ದಾಖಲೆಗಳು ಯಾರಿಗೆ ಸಂಬಂಧಿಸಿದ್ದವೋ, ಅದೇ ಜನರ ಮುಂದೆ ಬಯಲಿನಲ್ಲಿ ಅವುಗಳನ್ನು ಗಟ್ಟಿಯಾಗಿ ಆ ಅಧಿಕಾರಿಗಳು ಓದುತ್ತಾರೆ. ಒಂದು ಪುಸ್ತಕದಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದು ಬರೆದಿದ್ದರೆ, ಆ ರಸ್ತೆಯಲ್ಲೇ ವಾಸಿಸುವ ಗ್ರಾಮಸ್ಥರು ಎದ್ದು ನಿಂತು ಆ ರಸ್ತೆ ನಿಜವಾಗಿಯೂ ಇದೆಯೇ ಅಥವಾ ಇಲ್ಲವೇ ಎಂದು ಹೇಳಬಹುದಿತ್ತು. ಒಬ್ಬ ಕಾರ್ಮಿಕನಿಗೆ ಹಣ ಪಾವತಿಸಲಾಗಿದೆ ಎಂದು ಬರೆದಿದ್ದರೆ, ಆ ಕಾರ್ಮಿಕನು ಎದ್ದು ನಿಂತು ತನಗೆ ಆ ಹಣ ತಲುಪಿದೆಯೋ ಇಲ್ಲವೋ ಎಂದು ತಿಳಿಸಬಹುದಿತ್ತು.

ಅವರು ಈ ಸಭೆಗಳನ್ನು ‘ಜನ ಸುನವಾಯಿ’ (ಸಾರ್ವಜನಿಕ ವಿಚಾರಣೆಗಳು) ಎಂದು ಕರೆದರು. ಮೊದಲ ಸಭೆಯು 1994ರ ಡಿಸೆಂಬರ್​ನಲ್ಲಿ ಕೋಟ ಕಿರಾನಾ ಎಂಬ ಹಳ್ಳಿಯಲ್ಲಿ ನಡೆಯಿತು. ನಂತರ ಅಂತಹ ಹಲವು ಸಭೆಗಳು ನಡೆದವು. ಆ ವಿಚಾರಣೆಗಳು ಪದೇ ಪದೇ ಬಹಿರಂಗಪಡಿಸಿದ ಸತ್ಯ ಸರಳವಾಗಿತ್ತು ಮತ್ತು ಅಷ್ಟೇ ಆಘಾತಕಾರಿಯಾಗಿತ್ತು. ದೇಶದ ಅತ್ಯಂತ ಬಡ ಕಾರ್ಮಿಕರಿಗೆ ತಲುಪಬೇಕಾಗಿದ್ದ ಹಣವು, ಸರ್ಕಾರಿ ಕಚೇರಿಯ ಹೊರಗಿನ ಯಾರಿಗೂ ಪರಿಶೀಲಿಸಲು ಅವಕಾಶವಿಲ್ಲದ ದಾಖಲೆಗಳ ಒಳಗೆ ಮಾಯವಾಗುತ್ತಿತ್ತು.

ಇದನ್ನೂ ಓದಿ: ನಗರ ಸಮಸ್ಯೆಗಳ ಪರಿಹಾರ: ಕೌನ್ಸಿಲರ್, ವಾರ್ಡ್ ಸಮಿತಿ ಮತ್ತು ನಿಮ್ಮ ಜವಾಬ್ದಾರಿಗಳು

ಇದರಿಂದಾಗಿ ಪ್ರತಿ ವರ್ಷವೂ ಮತ್ತಷ್ಟು ಗಟ್ಟಿಯಾಗಿ ಮತ್ತು ವ್ಯಾಪಕವಾಗಿ ಕೇಳಿಬಂದ ಒಂದು ಪ್ರಶ್ನೆ ಹುಟ್ಟಿಕೊಂಡಿತು: “ಇದು ಸಾರ್ವಜನಿಕರ ಹಣವಾಗಿದ್ದರೆ, ಆ ಹಣ ಎಲ್ಲಿಗೆ ಹೋಯಿತು ಎಂದು ಸಾರ್ವಜನಿಕರು ಯಾಕೆ ನೋಡಬಾರದು?”

ಆ ಪ್ರಶ್ನೆ ರಾಜಸ್ಥಾನಕ್ಕಷ್ಟೇ ಸೀಮಿತವಾಗಿ ಉಳಿಯಲಿಲ್ಲ. 1990ರ ದಶಕದ ಅಂತ್ಯದ ವೇಳೆಗೆ ಇತರ ರಾಜ್ಯಗಳು ತಮ್ಮದೇ ಆದ ಮಾಹಿತಿ ಹಕ್ಕು ಕಾನೂನುಗಳನ್ನು ಜಾರಿಗೆ ತರಲು ಪ್ರಾರಂಭಿಸಿದವು. ಆ ಬೇಡಿಕೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಯಿತು. ಅಂತಿಮವಾಗಿ 2005 ರಲ್ಲಿ, ಸಂಸತ್ತು ರಾಷ್ಟ್ರೀಯ ‘ಮಾಹಿತಿ ಹಕ್ಕು ಕಾಯ್ದೆ’ಯನ್ನು (RTI Act) ಅಂಗೀಕರಿಸಿತು. ಯಾವುದೇ ಭಾರತೀಯ ನಾಗರಿಕನು ಯಾವುದೇ ಸರ್ಕಾರಿ ಕಚೇರಿಯಿಂದ ದಾಖಲೆಗಳನ್ನು ತೋರಿಸುವಂತೆ ಕೇಳಬಹುದು. ಮತ್ತು ಮೂವತ್ತು ದಿನಗಳ ಒಳಗೆ ಉತ್ತರವನ್ನು ಪಡೆಯಲು ಅವಕಾಶ ನೀಡುವ ಕಾನೂನು ಇದಾಗಿದೆ.

ಇಂದು ಶತಕೋಟಿಗೂ ಹೆಚ್ಚು ಜನರ ಪ್ರಶ್ನೆ ಕೇಳುವ ಹಕ್ಕನ್ನು ರಕ್ಷಿಸುತ್ತಿರುವ ಕಾನೂನೊಂದು, ಅಕ್ಷರಶಃ ಒಂದು ಸಣ್ಣ ಜೋಪಡಿಯಲ್ಲಿದ್ದ ಕೆಲವು ಗ್ರಾಮಸ್ಥರು ತಮ್ಮ ಲೆಕ್ಕದ ಪುಸ್ತಕಗಳನ್ನು ಗಟ್ಟಿಯಾಗಿ ಓದುವಂತೆ ಅಧಿಕಾರಿಗಳನ್ನು ಕೇಳಿಕೊಳ್ಳುವುದರೊಂದಿಗೆ ಪ್ರಾರಂಭವಾಯಿತು.

ಈ ವಿಷಯದ ಕುರಿತು ಯೋಚಿಸುವುದು ಅಗತ್ಯ. ನಮ್ಮಲ್ಲಿ ಹೆಚ್ಚಿನವರು ಕೇಳುವ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ. ಆ ಪ್ರಶ್ನೆ: “ಒಂದು ಕಾನೂನು ನಿಜವಾಗಿ ಎಲ್ಲಿ ಪ್ರಾರಂಭವಾಗುತ್ತದೆ?”

ಸಂಸತ್ತಿನಲ್ಲಂತೂ ಅಲ್ಲ. ಕಾನೂನು ಅದರ ಕೊನೆಯ ದಿನಗಳನ್ನು ಎಣಿಸುವಾಗ ಸಂಸತ್ತಿಗೆ ಬರುತ್ತದೆ. ಅದರ ಮೇಲೆ ಚರ್ಚೆ ಮತ್ತು ಮತದಾನ ನಡೆಯುತ್ತದೆ. ಅದಕ್ಕೂ ಮೊದಲು, ಕಾನೂನು ಯಾವಾಗಲೂ ಸಾಮಾನ್ಯ ಜೀವನದ ಒಂದು ಸಮಸ್ಯೆಯಾಗಿ ಪ್ರಾರಂಭವಾಗುತ್ತದೆ; ಅದನ್ನು ಇನ್ನು ಮುಂದೆ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ ಎನ್ನುವ ಹಂತದವರೆಗೆ ಪದೇ ಪದೇ ತಲೆ ಎತ್ತುತ್ತಿರುತ್ತದೆ. ಪ್ರಸ್ತುತ ಇರುವ ಯಾವದೇ ಕಾನೂನು ವ್ಯಾಪಿಸದೇ ಇರುವ ಅಂಶವು ನ್ಯಾಯಾಲಯದ ಗಮನಕ್ಕೆ ಬಂದರೆ ಆಗ ಇದರ ಆರಂಭ ಬಿಂದುವಾಗಬಹುದು. ಕೆಲವೊಮ್ಮೆ ಸರ್ಕಾರಿ ಇಲಾಖೆಯು ತಾನಾಗಿಯೇ ಒಂದು ಸಮಸ್ಯೆಯನ್ನು ಗುರುತಿಸುವುದು ಇದರ ಆರಂಭಕ್ಕೆ ಎಡೆ ಮಾಡಿಕೊಡಬಹುದು. ಇನ್ನು ಕೆಲವೊಮ್ಮೆ, ಮಾಹಿತಿ ಹಕ್ಕು ಕಾಯ್ದೆಯ ವಿಷಯದಲ್ಲಿ ನಡೆದಂತೆ, ದೆಹಲಿಯ ಯಾರೊಬ್ಬರೂ ಹೆಸರು ಕೇಳಿರದ ಹಳ್ಳಿಯೊಂದರ ಸಣ್ಣ ಜನರ ಗುಂಪು, ಮೌನವನ್ನು ಉತ್ತರವಾಗಿ ಸ್ವೀಕರಿಸಲು ನಿರಾಕರಿಸುವುದೇ ಇದರ ನಿಜವಾದ ಆರಂಭವಾಗಿರುತ್ತದೆ.

ಇದನ್ನೂ ಓದಿ: ನಿಮ್ಮ ದೈನಂದಿನ ಬದುಕಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತಾರೆ ಶಾಸಕರು; ಇವರ ಅಧಿಕಾರ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ಮಾಹಿತಿ

ಅಲ್ಲಿಂದ ಮುಂದೆ, ಆ ಹಾದಿ ಒಂದು ರೀತಿಯಲ್ಲಿ ಸಾಗುತ್ತದೆ. ಒಂದು ಐಡಿಯಾವನ್ನು ಅಧಿಕೃತ ಪ್ರಸ್ತಾವನೆಯಾಗಿ ಬರೆಯಲಾಗುತ್ತದೆ. ಸಚಿವಾಲಯವೊಂದು ಅದನ್ನು ಕರಡು ವಿಧೇಯಕವನ್ನಾಗಿ (Draft Bill) ಪರಿವರ್ತಿಸುತ್ತದೆ. ಸಂಪುಟವು ಅದನ್ನು ಸಂಸತ್ತಿಗೆ ಕಳುಹಿಸಲು ಅನುಮೋದನೆ ನೀಡುತ್ತದೆ. ನಂತರ ಅದು ಸಂಸತ್ತಿನ ಚರ್ಚೆ ಮತ್ತು ಮತದಾನದ ಪ್ರಕ್ರಿಯೆಯ ಮೂಲಕ ಹಾದುಹೋಗುತ್ತದೆ, ಕೆಲವು ಬದಲಾವಣೆಗಳಿಗೆ ಒಳಪಡುತ್ತದೆ, ಮತ್ತು ಅಂತಿಮವಾಗಿ ಇಡೀ ದೇಶಕ್ಕೆ ಅನ್ವಯವಾಗುವ ಕಾನೂನಾಗಿ ಹೊರಹೊಮ್ಮುತ್ತದೆ.

ಆದರೆ ನಿಜವಾದ ಆರಂಭಿಕ ಬಿಂದು, ಅಥವಾ ಅದರ ಅಸಲಿ ಬೀಜವು ರಾಜಧಾನಿಯಲ್ಲಿರುವ ಭವ್ಯವಾದ ಕಟ್ಟಡವಾಗಿರುವುದು ತೀರಾ ವಿರಳ. ಅದು ತೀರಾ ಸಣ್ಣದು, ತೀರಾ ಶಾಂತವಾದದ್ದು ಮತ್ತು ನೆಲದ ವಾಸ್ತವಕ್ಕೆ ತೀರಾ ಹತ್ತಿರವಾದದ್ದಾಗಿರುತ್ತದೆ.

ಒಂದು ಮೂಲೆಯಲ್ಲಿ ಬೆಳಗಿದ ಸಣ್ಣ ದೀಪವು ಅತ್ಯಂತ ದೊಡ್ಡ ಕೋಣೆಯನ್ನೂ ಬೆಳಗಬಲ್ಲದು. ದೇವ್‌ಡುಂಗ್ರಿಯ ಜನರು ತಮ್ಮ ದೀಪವನ್ನು ಬೆಳಗಿಸಿದಾಗ ಯಾರೊಬ್ಬರೂ ಕಾನೂನು ರಚನೆಯ ಬಗ್ಗೆ ಯೋಚಿಸುತ್ತಿರಲಿಲ್ಲ. ಅವರು ತಮ್ಮ ವೇತನವನ್ನು ಸ್ಪಷ್ಟವಾಗಿ ನೋಡಲು ಪ್ರಯತ್ನಿಸುತ್ತಿದ್ದರಷ್ಟೇ. ಆದರೆ ಸಾಮಾನ್ಯವಾಗಿ ವಿಷಯಗಳು ಕೆಲಸ ಮಾಡುವುದು ಹೀಗೆಯೇ.

ನಿಮ್ಮ ಸ್ವಂತ ಜೀವನದಲ್ಲಿ ಅನ್ಯಾಯ, ಅಥವಾ ತಪ್ಪು ಅನಿಸುವ ಯಾವುದನ್ನಾದರೂ ಕ್ಷಣಕಾಲ ಯೋಚಿಸಿ. ನೀವು ನೋಡಲು ಅನುಮತಿಯಿಲ್ಲದ ದಾಖಲೆಗಳು; ತನಗೇ ಸ್ಪಷ್ಟವಿಲ್ಲದ ಕಾನೂನು; ಉತ್ತರವಿರಬೇಕಾದ ಜಾಗದಲ್ಲಿ ಆವರಿಸಿರುವ ಮೌನ.

ಒಮ್ಮೆ ರಾಜಸ್ಥಾನದ ಎಲ್ಲೋ ಒಂದು ಮೂಲೆಯಲ್ಲಿ, ಸಣ್ಣ ಜನರ ಗುಂಪೊಂದು ಅಂತಹದೇ ಮೌನವನ್ನು ನೋಡಿ, ಕಾಗದಪತ್ರಗಳನ್ನು ಗಟ್ಟಿಯಾಗಿ ಓದುವಂತೆ ಗಟ್ಟಿಯಾದ ಧ್ವನಿಯಲ್ಲಿ ಕೇಳಲು ನಿರ್ಧರಿಸಿತು.

ಅವರಿಗೆ ಅದು ಸಾಕಾರಗೊಳ್ಳಲು ದಶಕಕ್ಕೂ ಹೆಚ್ಚು ಸಮಯ ಬೇಕಾಯಿತು.

ಆದರೆ, ಅದು ಫಲ ನೀಡಿತು!

ಆಧಾರಗಳು: ಮಾಹಿತಿ ಹಕ್ಕು ಕಾಯ್ದೆ, 2005 (ಭಾರತದ ಸಂಸತ್ತು); ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್ (MKSS), ಅಧಿಕೃತ ಇತಿಹಾಸ, mkssindia.org; ಬ್ರಿಟಾನಿಕಾ, “ಅರುಣಾ ರಾಯ್”; ದಿ ಬೆಟರ್ ಇಂಡಿಯಾ, “ಹೌ ಒನ್ ರಾಜಸ್ಥಾನ್ ವಿಲೇಜ್ ಗೇವ್ ಇಂಡಿಯಾ ದಿ ರೈಟ್ ಟು ಇನ್ಫಾರ್ಮೇಷನ್ ಆಕ್ಟ್”.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More