Sovereign Gold Bond: ಸವರನ್ ಗೋಲ್ಡ್ ಬಾಂಡ್‌ನ ಬಾಕಿ ನಾಲ್ಕು ಕಂತುಗಳ ವಿತರಣೆ ಅಕ್ಟೋಬರ್ 25ರಿಂದ ಶುರು
ಸವರನ್ ಗೋಲ್ಡ್ ಬಾಂಡ್ ಬಾಕಿ ಕಂತುಗಳ ವಿತರಣೆ ಅಕ್ಟೋಬರ್ 25, 2021ರಿಂದ ಶುರುವಾಗುತ್ತದೆ. ಆ ಬಗ್ಗೆ ಹೂಡಿಕೆದಾರರಿಗೆ ಪ್ರಮುಖ ಮಾಹಿತಿಗಳು ಇಲ್ಲಿವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದೊಂದಿಗೆ ಸಮಾಲೋಚನೆ ನಡೆಸಿದ ಕೇಂದ್ರ ಸರ್ಕಾರವು 2021-22ನೇ ಅಕ್ಟೋಬರ್ ಮತ್ತು 2022ರ ಮಾರ್ಚ್ ನಡುವೆ ನಾಲ್ಕು ಕಂತುಗಳ ಸವರನ್ ಗೋಲ್ಡ್ ಬಾಂಡ್ (ಎಸ್‌ಜಿಬಿ) ವಿತರಿಸಲು ನಿರ್ಧರಿಸಿದೆ. ಇದರೊಂದಿಗೆ ಒಟ್ಟು ಕಂತುಗಳ ಸಂಖ್ಯೆ 10 ಮುಟ್ಟಲಿದೆ. ಸರಣಿಯ ಅಡಿಯಲ್ಲಿ ಈಗಾಗಲೇ 2021ರ ಮೇ ತಿಂಗಳಿಂದ 2021ರ ಸೆಪ್ಟೆಂಬರ್ ತನಕ ಬಾಂಡ್‌ಗಳನ್ನು ಆರು ಕಂತುಗಳಲ್ಲಿ ವಿತರಿಸಲಾಗಿದೆ. ಯಾವುದೇ ವ್ಯಕ್ತಿ, ಟ್ರಸ್ಟ್, ದತ್ತಿ ಸಂಸ್ಥೆಗಳು ಮತ್ತು ಇತರರು ಈ ಬಾಂಡ್‌ಗಳಿಗೆ ಅರ್ಜಿ ಸಲ್ಲಿಸಬಹುದು.
VII-X ಕಂತುಗಳು 2021-22ರಲ್ಲಿ ಸರಣಿ VIIಕ್ಕೆ ಸಬ್ಸ್ಕ್ರಿಪ್ಷನ್ ಅವಧಿ ಅಕ್ಟೋಬರ್ 25ರಿಂದ ಅಕ್ಟೋಬರ್ 29ರವರೆಗೆ ಇರುತ್ತದೆ. ಬಾಂಡ್‌ಗಳನ್ನು ನವೆಂಬರ್ 2ರಂದು ನೀಡಲಾಗುವುದು ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಮುಂದಿನ ಸೋಮವಾರದಿಂದ (ಅಕ್ಟೋಬರ್ 25, 2021) ಯಾವುದೇ ವ್ಯಕ್ತಿಯು ತನ್ನ ಆಯ್ಕೆಯಂತೆ ಗೋಲ್ಡ್ ಬಾಂಡ್ ಖರೀದಿಸಬಹುದು. ಬಾಂಡ್‌ಗಳ ದರವನ್ನು ಶನಿವಾರ ನಿಗದಿಪಡಿಸಲಾಗುವುದು. ಉಳಿದ ಮೂರು ಸರಣಿಗಳನ್ನು ನವೆಂಬರ್ 29- ಡಿಸೆಂಬರ್ 3, ಜನವರಿ 10-14 ಮತ್ತು ಫೆಬ್ರವರಿ 28- ಮಾರ್ಚ್ 4ರಂದು ಬಿಡುಗಡೆ ಮಾಡಲಾಗುತ್ತದೆ. ಕಂತು VIIರಿಂದ ಕಂತು X ವಿತರಿಸುವ ದಿನಾಂಕ ಕ್ರಮವಾಗಿ ನವೆಂಬರ್ 2, ಡಿಸೆಂಬರ್ 7, ಜನವರಿ 18 ಮತ್ತು ಮಾರ್ಚ್ 8 ರಂದು ಇರುತ್ತದೆ.
ಹಿಂದಿನ ಪರ್ಫಾರ್ಮೆನ್ಸ್ ಸವರನ್ ಗೋಲ್ಡ್ ಬಾಂಡ್ ಮೂಲಕ ನವೆಂಬರ್ 25, 2015ರಿಂದ ಮಾರ್ಚ್, 2021ರವರೆಗೆ ಒಟ್ಟು 25,702 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಭೌತಿಕ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು 2015ರ ನವೆಂಬರ್ನಲ್ಲಿ ಆರಂಭಿಸಲಾಯಿತು. ಇತ್ತೀಚಿನ ಲಭ್ಯವಿರುವ ದತ್ತಾಂಶಗಳ ಪ್ರಕಾರ, ಸರ್ಕಾರವು FY2022ರಲ್ಲಿ ಮೊದಲ ಎರಡು ಕಂತುಗಳ ಮೂಲಕ 5,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಪಡೆದುಕೊಂಡಿದೆ.
ಬಾಂಡ್ ಬೆಲೆ, ಅವಧಿ ಬಾಂಡ್‌ನ ಬೆಲೆಯನ್ನು ಭಾರತೀಯ ರೂಪಾಯಿಗಳಲ್ಲಿ ನಿಗದಿಪಡಿಸಲಾಗುತ್ತದೆ. ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್ (ಐಬಿಜೆಎ) ಪ್ರಕಟಿಸಿದ ಚಂದಾದಾರಿಕೆ ಅವಧಿ ವಾರದ ಕೊನೆಯ ಮೂರು ವರ್ಕಿಂಗ್ ಡೇಸ್ನಲ್ಲಿ 999 ಶುದ್ಧತೆಯ ಚಿನ್ನದ ಮುಕ್ತಾಯದ ಬೆಲೆಯ ಸರಾಸರಿ ಆಧಾರದ ಮೇಲೆ ಬೆಲೆ ನಿರ್ಧರಿಸಲಾಗುತ್ತದೆ. ಬಾಂಡ್‌ಗಳನ್ನು 1 ಗ್ರಾಂ ಮೂಲ ಘಟಕದೊಂದಿಗೆ ಗ್ರಾಂ ಚಿನ್ನದಲ್ಲಿ ಗುರುತಿಸಲಾಗುತ್ತದೆ. ಬಾಂಡ್‌ನ ಅವಧಿಯು ಎಂಟು ವರ್ಷಗಳಾಗಿದ್ದು, ಐದನೇ ವರ್ಷದ ನಂತರ ನಿರ್ಗಮನದ ಆಯ್ಕೆ ಇರುತ್ತದೆ. ಅದು ಮುಂದಿನ ಬಡ್ಡಿ ಪಾವತಿ ದಿನಾಂಕಗಳಾಗಿರುತ್ತವೆ.
ಮೆಚ್ಯೂರಿಟಿ ಅವಧಿಯ ನಂತರ ಹೂಡಿಕೆದಾರರಿಗೆ ಪ್ರಸ್ತುತ ಚಿನ್ನದ ಬೆಲೆಗೆ ಸಮನಾದ ಮೊತ್ತವನ್ನು ವಿತರಣಾ ಪ್ರಾಧಿಕಾರದಿಂದ ಪಾವತಿಸಲಾಗುತ್ತದೆ. ಸಬ್ಸ್ಕ್ರಿಪ್ಷನ್ನ ಗರಿಷ್ಠ ಮಿತಿಯು ವ್ಯಕ್ತಿಗೆ 4 ಕೇಜಿ, ಹಿಂದೂ ಅವಿಭಕ್ತ ಕುಟುಂಬಕ್ಕೆ 4 ಕೇಜಿ ಮತ್ತು ಟ್ರಸ್ಟ್‌ಗಳು ಹಾಗೂ ಹಣಕಾಸು ಸಂಸ್ಥೆಗೆ 20 ಕೇಜಿ ಆಗಿದೆ. ಹೂಡಿಕೆದಾರರಿಗೆ ಹೂಡಿಕೆ ಮೌಲ್ಯದ ಮೇಲೆ ವಾರ್ಷಿಕ ಶೇ 2.50ರಷ್ಟು ನಿಗದಿತ ದರದಲ್ಲಿ ಪಾವತಿಸಲಾಗುತ್ತದೆ
ಸಾಲ ಸೌಲಭ್ಯ SGBಗಳನ್ನು ಸಾಲಗಳಿಗೆ ಆಧಾರವಾಗಿ ಬಳಸಬಹುದು. ಲೋನ್-ಟು-ವ್ಯಾಲ್ಯೂ (ಎಲ್‌ಟಿವಿ) ಅನುಪಾತವು ಕಾಲಕಾಲಕ್ಕೆ ಆರ್‌ಬಿಐ ಆದೇಶಿಸಿದ ಸಾಮಾನ್ಯ ಚಿನ್ನದ ಸಾಲಕ್ಕೆ ಸಮನಾಗಿರುತ್ತದೆ, ಅಂದರೆ ಒಟ್ಟು ಚಿನ್ನದ ಮೌಲ್ಯದ ಗರಿಷ್ಠ ಶೇ 75ರಿಂದ ಶೇ 80ರಷ್ಟಿರುತ್ತದೆ. ಎಸ್‌ಜಿಬಿ ಸ್ಕೀಮ್ ಅಡಿಯಲ್ಲಿ ಚಿನ್ನವನ್ನು ಹೋಲ್ಡ್ ಮಾಡುವುದು ಸಂಪೂರ್ಣವಾಗಿ ಕಾಗದದ ರೂಪದಲ್ಲಿರುತ್ತದೆ.
ಎಲ್ಲಿ ಖರೀದಿಸಬೇಕು? ಬಾಂಡ್‌ಗಳನ್ನು ನಿಗದಿತ ವಾಣಿಜ್ಯ ಬ್ಯಾಂಕ್ಗಳು (ಸಣ್ಣ ಹಣಕಾಸು ಬ್ಯಾಂಕ್ಗಳು ಮತ್ತು ಪಾವತಿ ಬ್ಯಾಂಕ್ಗಳು ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಆಯ್ದ ಅಂಚೆ ಕಚೇರಿಗಳು ಮತ್ತು NSE ಮತ್ತು BSE ಮೂಲಕ ಮಾರಾಟ ಮಾಡಲಾಗುತ್ತದೆ.
ಇದನ್ನೂ ಓದಿ: ಪ್ರತಿ ಶೇ 1ರಷ್ಟು ಹಣದುಬ್ಬರ ಹೆಚ್ಚಳದಿಂದ ಚಿನ್ನದ ಬೇಡಿಕೆ ಶೇ 2.6ರಷ್ಟು ಹೆಚ್ಚಳ: ವಿಶ್ವ ಚಿನ್ನ ಮಂಡಳಿ ವರದಿ