ಬಿಸಿಸಿಐಗೆ ಬೈಜುಸ್ ಕೊಟ್ಟ 158 ಕೋಟಿ ರೂ ತಾತ್ಕಾಲಿಕ ಅಕೌಂಟ್ಗೆ ವರ್ಗಾವಣೆ; ಇನ್ಸಾಲ್ವೆನ್ಸಿ ಕೇಸ್ಗೆ ಮರುಜೀವ ಕೊಟ್ಟ ಸುಪ್ರೀಂ
BCCI vs Byjus vs Supreme Court vs Lenders: ಬೈಜುಸ್ ಮತ್ತು ಬಿಸಿಸಿಐ ಆಫ್ಕೋರ್ಟ್ ಸೆಟಲ್ಮೆಂಟ್ಗೆ ಅವಕಾಶ ಕೊಟ್ಟಿದ್ದ ಎನ್ಸಿಎಲ್ಎಟಿ ಆದೇಶಕ್ಕೆ ಸುಪ್ರೀಂ ನ್ಯಾಯಪೀಠ ತಡೆ ನೀಡಿದೆ. ಇದರೊಂದಿಗೆ ಬಿಸಿಸಿಐಗೆ ಬೈಜುಸ್ ಪಾವತಿಸಿದ್ದ 158 ಕೋಟಿ ರೂ ಹಣವನ್ನು ತಾತ್ಕಾಲಿಕ ಖಾತೆಯೊಂದಕ್ಕೆ ವರ್ಗಾವಣೆ ಮಾಡಲಾಗಿದೆ. ಬೈಜುಸ್ ವಿರುದ್ಧದ ಇನ್ಸಾಲ್ವೆನ್ಸಿ ಕ್ರಮ ರದ್ದುಗೊಳಿಸಿದ್ದ ನ್ಯಾಯಮಂಡಳಿ ಆದೇಶಕ್ಕೂ ಸರ್ವೋಚ್ಚ ನ್ಯಾಯಾಲಯ ತಡೆ ಕೊಟ್ಟಿದೆ.
ನವದೆಹಲಿ, ಆಗಸ್ಟ್ 14: ಬೈಜುಸ್ ಸಂಸ್ಥೆಯ ವಿರುದ್ಧ ಇನ್ಸಾಲ್ವೆನ್ಸಿ ಕೇಸ್ ಅಥವಾ ದಿವಾಳಿ ತಡೆ ಪ್ರಕ್ರಿಯೆ ರದ್ದುಗೊಳಿಸಿದ್ದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್ಸಿಎಲ್ಎಟಿ) ಆದೇಶಕ್ಕೆ ಸುಪ್ರೀಂಕೋರ್ಟ್ ಇಂದು ಬುಧವಾರ ತಡೆ ನೀಡಿದೆ. ಬಿಸಿಸಿಐಗೆ ಬೈಜುಸ್ ನೀಡಿರುವ 158 ಕೋಟಿ ರೂ ಬಾಕಿ ಹಣ ಪಾವತಿಗೂ ತಡೆ ಕೊಟ್ಟಿದೆ. ಇದರೊಂದಿಗೆ, ಬಿಸಿಸಿಐಗೆ ಬೈಜುಸ್ ನೀಡಿರುವ 158 ಕೋಟಿ ರೂ ಹಣವನ್ನು ಎಸ್ಕ್ರೂ ಅಕೌಂಟ್ ಅಥವಾ ತಾತ್ಕಾಲಿಕ ಖಾತೆಗೆ ವರ್ಗಾವಣೆ ಆಗಲಿದೆ. ಬಿಸಿಸಿಐಗೆ ಒಂದು ರೀತಿಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿಯಾಗಿದೆ.
ಬಿಸಿಸಿಐಗೆ ಬೈಜುಸ್ನ ಈ ಸೆಟಲ್ಮೆಂಟ್ ಹಣವನ್ನು ಆಗಸ್ಟ್ 23ರವರೆಗೆ ಪ್ರತ್ಯೇಕ ಖಾತೆಯಲ್ಲಿ ಇಟ್ಟಿರಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ನ್ಯಾಯಪೀಠ ಆದೇಶಿಸಿದೆ. ಆಗಸ್ಟ್ 23ರಂದು ಮುಂದಿನ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ತೆರಿಗೆ ಹೇರುವ ಆಸೆ ನಂಗೂ ಇಲ್ಲ, ಆದರೆ ಸರ್ಕಾರ ನಡೆಸಲು ಹಣ ಬೇಕಲ್ಲ: ನಿರ್ಮಲಾ ಸೀತಾರಾಮನ್
ಬೈಜುಸ್ಗೆ ಸಾಲ ನೀಡಿರುವ ಸಂಸ್ಥೆಗಳಲ್ಲಿ ಒಂದಾದ ಗ್ಲಾಸ್ ಟ್ರಸ್ಟ್ ಎನ್ಸಿಎಲ್ಎಟಿ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಹಾಕಿದ್ದರು. ಬೈಜುಸ್ ಮತ್ತು ಬಿಸಿಸಿಐ ನಡುವಿನ ಸೆಟಲ್ಮೆಂಟ್ ಅನ್ನು ಅದು ವಿರೋಧಿಸಿತ್ತು. ತಾವು ಸಲ್ಲಿಸಿದ್ದ ಇನ್ಸಾಲ್ವೆನ್ಸಿ ಪ್ರಕರಣ ಜೀವಂತ ಇರುವಾಗಲೇ ಬಿಸಿಸಿಐಗೆ ಹಣ ಪಾವತಿ ಮಾಡಲಾಗಿರುವುದನ್ನು ಅದು ಪ್ರಶ್ನಿಸಿತ್ತು. ಬಿಸಿಸಿಐ ಪರ ವಕಾಲತು ಮಾಡುತ್ತಿರುವ ತುಷಾರ್ ಮೆಹ್ತಾ ಅವರು ಎನ್ಸಿಎಲ್ಎಟಿ ಆದೇಶದ ವಿರುದ್ಧ ಸಲ್ಲಿಕೆಯಾದ ಅರ್ಜಿಯನ್ನು ವಿರೋಧಿಸಿದರು. ಆದರೆ, ನ್ಯಾಯಪೀಠ ಅಂತಿಮವಾಗಿ ಈ ಆದೇಶಕ್ಕೆ ತಡೆ ನೀಡಿದೆ.
ಈ ಹಿಂದೆ ಬೈಜೂಸ್ ಸಂಸ್ಥೆ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ಪಡೆದಿತ್ತು. ಆ ಗುತ್ತಿಗೆಯ ಹಣದಲ್ಲಿ 158 ಕೋಟಿ ರೂ ಹಣ ಪಾವತಿ ಬಾಕಿ ಇದೆ ಎಂದು ಬಿಸಿಸಿಐ ಹೇಳಿತ್ತು. ಬೈಜು ರವೀಂದ್ರನ್ ತಮ್ಮ ವೈಯಕ್ತಿಕ ಫಂಡಿಂಗ್ನಲ್ಲಿ ಈ ಹಣವನ್ನು ತಮ್ಮ ಸೋದರ ರಿಜು ರವೀಂದ್ರನ್ ಮೂಲಕ ಬಿಸಿಸಿಐಗೆ ಕೊಟ್ಟಿದ್ದರು.
ಇದನ್ನೂ ಓದಿ: ಸ್ವಾತಂತ್ರ್ಯ ಬಂದಾಗ ಭಾರತದ ಆರ್ಥಿಕತೆ ಹೇಗಿತ್ತು? ಬ್ರಿಟಿಷರು ಬರುವ ಮುನ್ನ ಹೇಗಿತ್ತು?
ಇದೇ ವೇಳೆ, ಬೈಜುಸ್ ಸಂಸ್ಥೆಗೆ ಸಾಲ ಕೊಟ್ಟಿರುವ ವಿವಿಧ ಸಾಲಗಾರರ ಗುಂಪು ಅಮೆರಿಕದ ಡೆಲಾವೇರ್ನ ಬ್ಯಾಂಕ್ರಪ್ಸಿ ಕೋರ್ಟ್ನಲ್ಲಿ ದಾಖಲಿಸಿದ ಪ್ರಕರಣ ತಿರಸ್ಕೃತಗೊಂಡಿದೆ. ಬೇರೆ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ತಾವು ಮಧ್ಯಪ್ರವೇಶಿಸುವುದಿಲ್ಲ ಎಂದು ಈ ಅಮೆರಿಕನ್ ಕೋರ್ಟ್ ಅಭಿಪ್ರಾಯಪಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ