ಸ್ವಿಟ್ಜರ್ಲ್ಯಾಂಡ್: ಅಮೇಜಾನ್, ಗೂಗಲ್ ಇತ್ಯಾದಿ ಕಂಪನಿಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿದೆ ಸ್ವಿಟ್ಜರ್ಲ್ಯಾಂಡ್ನ ಯುಬಿಎಸ್ ಬ್ಯಾಂಕ್. ದಿವಾಳಿಯಾಗಿದ್ದ ಕ್ರೆಡಿಟ್ ಸ್ವೀಸ್ ಬ್ಯಾಂಕನ್ನು ಖರೀದಿಸಿರುವ ಯುಬಿಎಸ್ಗೆ ಈಗ ಲೇ ಆಫ್ (Layoffs) ಕ್ರಮ ಅನಿವಾರ್ಯ ಎನ್ನಲಾಗುತ್ತಿದೆ. ಇವೆರಡು ಬೃಹತ್ ಬ್ಯಾಂಕುಗಳು ವಿಲೀನಗೊಳ್ಳುವಾಗಲೇ ಬಹಳಷ್ಟು ವಿಶ್ಲೇಷಕರು ದೊಡ್ಡ ಮಟ್ಟದಲ್ಲಿ ಉದ್ಯೋಗನಷ್ಟವಾಗುವ ಸಾಧ್ಯತೆಯನ್ನು ಅಂದಾಜಿಸಿದ್ದರು. ಬ್ಲೂಮ್ಬರ್ಗ್ ನ್ಯೂಸ್ ವರದಿ ಪ್ರಕಾರ ಯುಬಿಎಸ್ ಗ್ರೂಪ್ (UBS Group) 35,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಬಹುದು ಎಂದಿದೆ.
ಈ ಎರಡು ಬ್ಯಾಂಕುಗಳ ಕಾರ್ಯವ್ಯಾಪ್ತಿ ಒಂದಕ್ಕೊಂದು ಜೋಡಿತಗೊಳ್ಳುವುದರಿಂದ ಉದ್ಯೋಗಕಡಿತ ಅನಿವಾರ್ಯ ಎಂಬುದು ವಿಶ್ಲೇಷಕರ ಅನಿಸಿಕೆ. ಕ್ರೆಡಿಟ್ ಸ್ವೀಸ್ನಲ್ಲಿ 45,000 ಉದ್ಯೋಗಿಗಳಿದ್ದಾರೆ. ಯುಬಿಎಸ್ ಮತ್ತು ಕ್ರೆಡಿಟ್ ಸ್ವೀಸ್ ಎರಡೂ ಸೇರಿ 1,20,00 ಮಂದಿ ಉದ್ಯೋಗಿಗಳಾಗುತ್ತಾರೆ. ಇದರಲ್ಲಿ ಶೇ. 30ರಷ್ಟು ಉದ್ಯೋಗಕಡಿತ ಮಾಡುವುದು ಯುಬಿಎಸ್ನ ಆಲೋಚನೆ. ಅದರ ಪ್ರಕಾರ ಒಟ್ಟು 35,000 ಮಂದಿಗೆ ಕೆಲಸ ಹೋಗುವ ಸಾಧ್ಯತೆ ಇದೆ. ವರದಿ ಪ್ರಕಾರ, ಕ್ರೆಡಿಟ್ ಸ್ವೀಸ್ನ 45,000 ಮಂದಿ ಪೈಕಿ ಅರ್ಧದಷ್ಟು ಉದ್ಯೋಗಿಗಳಿಗೆ ಗೇಟ್ಪಾಸ್ ಕೊಡುವ ಸಾಧ್ಯತೆ ಇದೆ.
ಇದನ್ನೂ ಓದಿ:
ಲಂಡನ್, ನ್ಯೂಯಾರ್ಕ್, ಹಾಗೂ ಏಷ್ಯಾದ ಕೆಲ ಭಾಗಗಳಲ್ಲಿ ಕ್ರೆಡಿಟ್ ಸ್ವೀಸ್ನ ಬ್ಯಾಂಕ್ ಉದ್ಯೋಗಿಗಳು, ಟ್ರೇಡರ್ಗಳು ಮತ್ತು ಸಪೋರ್ಟಿಂಗ್ ಸಿಬ್ಬಂದಿ ಅವರಿಗೆ ಹೆಚ್ಚು ಪರಿಣಾಮವಾಗುವ ಸಾಧ್ಯತೆ ಇದೆ ಎಂದು ಬ್ಲೂಂಬರ್ಗ್ ನ್ಯೂಸ್ ವರದಿಯಲ್ಲಿ ತಿಳಿಸಲಾಗಿದೆ.
ಕ್ರೆಡಿಟ್ ಸ್ವೀಸ್ ಸ್ವಾಧೀನದ ಬಳಿಕ ಉದ್ಯೋಗಕಡಿತದ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು ಎಂದು ಯುಬಿಎಸ್ ಮುಖ್ಯಸ್ಥ ಸೆರ್ಗಿಯೋ ಎರ್ಮೋಟ್ಟಿ ಅವರು ಜೂನ್ ಮೊದಲ ವಾರದಲ್ಲೇ ಸುಳಿವು ನೀಡಿದ್ದರು. ಆದರೆ, ಯಾವ್ಯಾವಾಗ, ಎಲ್ಲೆಲ್ಲಿ ಉದ್ಯೋಗಕಡಿತ ಎಂಬ ವಿವರ ಲಭ್ಯವಾಗಿಲ್ಲ. ಯುಬಿಎಸ್ ಅಥವಾ ಕ್ರೆಡಿಟ್ ಸ್ವೀಸ್ ವತಿಯಿಂದ ಈ ಬಗ್ಗೆ ಮತ್ತೆ ಸ್ಪಷ್ಟನೆ ಬಂದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ