AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPI ಮೇಲಿನ MDR; ಶೇಕಡಾವಾರು ಆಧಾರಿತವಾಗಿ ಶುಲ್ಕ ಬೇಡ, ಗರಿಷ್ಠ ಮಿತಿ ಇರಲಿ: ದೀಪಕ್ ಶೆಣೈ

Deepak Shenoy opposes percentage based MDR charges on UPI payments: ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ ವಿಧಿಸಲು ಸರ್ಕಾರ ಆಲೋಚಿಸುತ್ತಿದ್ದು, ಈ ಸಂಬಂಧ ಕಾನೂನು ರೂಪಿಸಲು ಹೊರಟಿದೆ. ಯುಪಿಐ ಪಾವತಿ ಪ್ರಕ್ರಿಯೆಗೆ ಬ್ಯಾಂಕುಗಳು ಹಾಗೂ ಪೇಮೆಂಟ್ ಕಂಪನಿಗಳಿಗೆ ಆಗುವ ಹೊರೆಯನ್ನು ಇಳಿಸುವುದು ಇದರ ಉದ್ದೇಶ. ಆದರೆ, ಎಂಡಿಆರ್ ಕ್ರಮದಿಂದ ಜನರು ಡಿಜಿಟಲ್ ಪೇಮೆಂಟ್​ನಿಂದ ದೂರ ಉಳಿಯಬಹುದು ಎನ್ನುವ ಆತಂಕವನ್ನು ಕೆಲವರು ತೋಡಿಕೊಂಡಿದ್ದಾರೆ.

UPI ಮೇಲಿನ MDR; ಶೇಕಡಾವಾರು ಆಧಾರಿತವಾಗಿ ಶುಲ್ಕ ಬೇಡ, ಗರಿಷ್ಠ ಮಿತಿ ಇರಲಿ: ದೀಪಕ್ ಶೆಣೈ
ಕ್ಯಾಪಿಟಲ್‌ಮೈಂಡ್ ಸಿಇಒ ದೀಪಕ್ ಶೆಣೈImage Credit source: https://www.youtube.com/@mundhebanni
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 10, 2026 | 12:53 PM

Share

ಮುಖ್ಯಾಂಶಗಳು

  • ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ ವಿಧಿಸಲು ಸರ್ಕಾರ ಆಲೋಚಿಸುತ್ತಿದೆ.
  • ಬ್ಯಾಂಕುಗಳು ಹಾಗೂ ಪೇಮೆಂಟ್ ಕಂಪನಿಗಳಿಗೆ ಹೊರೆ ಇಳಿಸುವುದು ಉದ್ದೇಶ.
  • ಎಂಡಿಆರ್ ಕ್ರಮದಿಂದ ಜನರು ಡಿಜಿಟಲ್ ಪೇಮೆಂಟ್​ನಿಂದ ದೂರ ಉಳಿಯಬಹುದು ಎನ್ನುವ ಆತಂಕ.

ನವದೆಹಲಿ, ಆಗಸ್ಟ್ 10: ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಪೇಮೆಂಟ್​ಗಳಿಗೆ ಇರುವಂತೆ ಯುಪಿಐ ಪಾವತಿಗಳಿಗೂ ಎಂಡಿಆರ್ ಅಥವಾ ಮರ್ಚೆಂಟ್ ಡಿಸ್ಕೌಂಟ್ ರೇಟ್ ಶುಲ್ಕವನ್ನು ನಿಗದಿ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನುವ ಸುದ್ದಿ ಇದೆ. ಇದು ಯುಪಿಐ ಪೇಮೆಂಟ್ ಇಕೋಸಿಸ್ಟಂನಲ್ಲಿರುವ ಕಂಪನಿಗಳ ಮೇಲಿನ ಹೊರೆಯನ್ನು ತಗ್ಗಿಸಲು ಸರ್ಕಾರ ಕಂಡುಕೊಂಡಿರುವ ಉಪಾಯ ಎನ್ನಲಾಗಿದೆ. ಆದರೆ, ಯುಪಿಐ ಪೇಮೆಂಟ್​ಗೆ ಎಂಡಿಆರ್ ವಿಧಿಸುವ ಸರ್ಕಾರದ ಕ್ರಮದ ಬಗ್ಗೆ ಕೆಲ ವಲಯಗಳಿಂದ ವಿರೋಧವೂ ಬಂದಿದೆ. ಬೇರೆ ಬೇರೆ ಕಾರಣಗಳಿಗೆ ವಿರೋಧ ಬಂದಿದೆ. ಕ್ಯಾಪಿಟಲ್ ಮೈಂಡ್ (Capitalmind) ಸಂಸ್ಥಾಪಕ ಮತ್ತು ಸಿಇಒ ದೀಪಕ್ ಶೆಣೈ ಅವರು ಯುಪಿಐ ಪೆಮೆಂಟ್​ಗಳಿಗೆ ಪರ್ಸೆಂಟೇಜ್ ಆಧಾರಿತವಾಗಿ ಎಂಡಿಆರ್ ಹೇರುವುದನ್ನು ವಿರೋಧಿಸಿದ್ದಾರೆ. ಮತ್ತೊಬ್ಬ ಉದ್ಯಮಿ ಅಶ್ನೀರ್ ಗ್ರೋವರ್ ಅವರು ಎಂಡಿಆರ್ ಶುಲ್ಕ ವಿಧಿಸುವ ಕ್ರಮವೇ ತಪ್ಪು ಎಂದಿದ್ದಾರೆ.

ಶೇಕಡಾವಾರು MDR ಅನಗತ್ಯ, ಕ್ಯಾಪಿಂಗ್ ಇರಲಿ: ಶೆಣೈ

ಕ್ಯಾಪಿಟಲ್‌ಮೈಂಡ್ ಸಿಇಒ ದೀಪಕ್ ಶೆಣೈ ಅವರು UPI ವಹಿವಾಟುಗಳಿಗೆ ಶೇಕಡಾವಾರು ಆಧಾರಿತ MDR ಹೇರುವುದನ್ನು ವಿರೋಧಿಸಿದ್ದಾರೆ. NEFT ಮತ್ತು RTGS ಪಾವತಿಗಳಂತೆ UPI ಕೂಡ ಅಗ್ಗವಾಗಿರಬೇಕು. ಶೇಕಡಾವಾರು ಆಧಾರಿತ ಶುಲ್ಕ ನೀಡುವ ಬದಲು, ಪ್ರತಿ ವಹಿವಾಟಿಗೆ ಗರಿಷ್ಠ ₹5 ಅಥವಾ ಶೇ. 0.2 (ಯಾವುದು ಕಡಿಮೆಯೋ ಅದು) ನಷ್ಟು ಮಾತ್ರ ಪರಿಮಿತಿ (Cap) ಇರಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಶೇಕಡಾವಾರು ಆಧಾರದಲ್ಲಿ ಶುಲ್ಕ ಹೆಚ್ಚಾದರೆ ದೊಡ್ಡ ಮಟ್ಟದ ವಹಿವಾಟುಗಳಿಗೆ ತೊಂದರೆಯಾಗುತ್ತದೆ. ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಯಾವುದೇ ಅಡಚಣೆ ಇಲ್ಲದೆ ಹಣ ಹರಿಯಲು ಅವಕಾಶ ನೀಡಬೇಕು ಎಂಬುದು ಅವರ ಸ್ಪಷ್ಟ ನಿಲುವು.

ಇದನ್ನೂ ಓದಿ: ಯುಪಿಐ ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ

ಬ್ಯಾಂಕುಗಳ ಫ್ಲೋಟ್ ಇನ್ಕಮ್: ಗ್ರಾಹಕರು ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿ ಇರಿಸುವ ಹಣದಿಂದ ಬ್ಯಾಂಕುಗಳು ಭಾರಿ ಪ್ರಮಾಣದ ‘ಫ್ಲೋಟ್ ಆದಾಯ’ (Float Income- ಆಡ್ವಾನ್ಸ್ ಸೌಲಭ್ಯಗಳಿಂದ ಗಳಿಸುವ ಲಾಭ) ಗಳಿಸುತ್ತವೆ. ಈ ಆದಾಯವು UPI ನಿರ್ವಹಣೆಗೆ ತಗುಲುವ ವೆಚ್ಚಕ್ಕಿಂತ ಹತ್ತಾರು ಪಟ್ಟು ಹೆಚ್ಚಾಗಿರುತ್ತದೆ. ಹೀಗಾಗಿ ಪಾವತಿ ವ್ಯವಸ್ಥೆಯನ್ನು ಉಚಿತವಾಗಿ ಅಥವಾ ಅತಿ ಕಡಿಮೆ ವೆಚ್ಚದಲ್ಲಿ ನಿರ್ವಹಿಸಲು ಬ್ಯಾಂಕುಗಳಿಗೆ ಸಾಧ್ಯವಿದೆ ಎನ್ನುವ ವಾದ ಇದೆ.

“ಇದು ಹಿಮ್ಮುಖ ಹೆಜ್ಜೆ”: ಅಶ್ನೀರ್ ಗ್ರೋವರ್ ಎಚ್ಚರಿಕೆ

ಮತ್ತೊಂದೆಡೆ, ಭಾರತ್‌ಪೇ (BharatPe) ಮಾಜಿ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರು ಸರ್ಕಾರದ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು “ಹಿಮ್ಮುಖ ಹೆಜ್ಜೆ” (Regressive Step) ಎಂದು ಕರೆದಿದ್ದಾರೆ.

“ಭಾರತದಲ್ಲಿ ಪ್ರಸ್ತುತ ಗಡಿಯಾರದ ಮುಳ್ಳಿನಂತೆ ಕಂಟಕವಿಲ್ಲದೆ, ಸರಾಗವಾಗಿ ನಡೆಯುತ್ತಿರುವ ಏಕೈಕ ವ್ಯವಸ್ಥೆ ಎಂದರೆ ಅದು ಮೊಬೈಲ್ ಪಾವತಿ. UPI ಮೇಲೆ MDR ಹೇರುವುದು ಈ ಯಶಸ್ವಿ ವ್ಯವಸ್ಥೆಯನ್ನೇ ನಾಶಮಾಡಲಿದೆ” ಎಂದು ಗ್ರೋವರ್ ಎಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರವು ತನ್ನ ನಿರ್ಧಾರವನ್ನು ಪುನರ್ಪರಿಶೀಲಿಸಬೇಕು. ವ್ಯಾಪಾರಿಗಳ ಮೇಲೆ ಶುಲ್ಕ ವಿಧಿಸಿದರೆ, ಅವರು ಡಿಜಿಟಲ್ ಪಾವತಿ ಸ್ವೀಕರಿಸುವುದನ್ನು ನಿಲ್ಲಿಸಿ ಮತ್ತೆ ನಗದು (Cash) ವಹಿವಾಟಿಗೆ ಮರಳುವ ಅಪಾಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಯುಪಿಐ ಬಳಸಲು ಶುಲ್ಕ ಪಾವತಿಸಬೇಕೇ? ಹಲವು ವದಂತಿಗಳಿಗೆ ಇಲ್ಲಿದೆ ಸ್ಪಷ್ಟನೆ

ಗ್ರಾಹಕರಿಗೆ ಯಾವುದೇ ಶುಲ್ಕ ಇಲ್ಲ ಎನ್ನುವ ಸರ್ಕಾರ

ಕೇಂದ್ರ ಸರ್ಕಾರವು ‘ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ’ಗೆ ತಿದ್ದುಪಡಿ ತರಲು ಮಸೂದೆ ಮಂಡಿಸಿದ್ದು, ಭವಿಷ್ಯದಲ್ಲಿ ಅಗತ್ಯ ಬಿದ್ದರೆ ದೊಡ್ಡ ಮಟ್ಟದ ವ್ಯಾಪಾರಿಗಳಿಗೆ MDR ವಿಧಿಸುವ ಅಧಿಕಾರವನ್ನು ಪಡೆಯಲಿದೆ. ಸಾಮಾನ್ಯ ಗ್ರಾಹಕರಿಗೆ ಯಾವುದೇ ಎಂಡಿಆರ್ ಶುಲ್ಕ ಇರುವುದಿಲ್ಲ, ಅವರ ಯಾವುದೇ ಯುಪಿಐ ಪಾವತಿಗೂ ಶುಲ್ಕ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, ದೊಡ್ಡ ವ್ಯಾಪಾರಿಗಳಿಗೆ ಎಂಡಿಆರ್ ಶುಲ್ಕ ವಿಧಿಸಿದರೂ ಆ ಹೊರೆ ಅಂತಿಮವಾಗಿ ಗ್ರಾಹಕರಿಗೇ ವರ್ಗಾವಣೆ ಆಗುತ್ತದೆ ಎನ್ನುವ ವಾದವಿದೆ. ಸರ್ಕಾರವು ಎಂಡಿಆರ್ ಶುಲ್ಕಕ್ಕೆ ಗರಿಷ್ಠ ಮಿತಿಯನ್ನು ನಿಗದಿ ಮಾಡುವ ಬಗ್ಗೆ ಆಲೋಚಿಸಬಹುದು. ಆದರೆ, ಶೇಕಡಾವಾರುವಾಗಿ ಶುಲ್ಕ ವಿಧಿಸಲಾಗುತ್ತದೆ ಎಂದೂ ಸರ್ಕಾರ ಹೇಳಿಲ್ಲ. ಹೀಗಾಗಿ, ಸರ್ಕಾರದ ನಡೆ ಏನು ಎಂದು ಕಾದು ನೋಡಬೇಕಾಗಬಹುದು.

ಯುಪಿಐ ಎಂಡಿಆರ್ ಬಗ್ಗೆ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು (FAQs)

ಪ್ರಶ್ನೆ: ಯುಪಿಐ ಎಂಡಿಆರ್ ಶುಲ್ಕ ಎಂದರೇನು?

ಉತ್ತರ: ಯುಪಿಐ ಮೂಲಕ ಗ್ರಾಹಕರು ಮಾಡಲಾಗುವ ಪಾವತಿಗೆ ವರ್ತಕರು ನೀಡಬೇಕಾದ ಶುಲ್ಕ. ಬ್ಯಾಂಕು ಮತ್ತು ಪೇಮೆಂಟ್ ಕಂಪನಿಗಳು ಈ ಶುಲ್ಕ ಪಡೆಯುತ್ತವೆ.

ಪ್ರಶ್ನೆ: ಎಂಡಿಆರ್ ಶುಲ್ಕ ಗ್ರಾಹಕರಿಗೆ ಅನ್ವಯಿಸಲ್ಲವಾ?

ಉತ್ತರ: ಎಂಡಿಆರ್ ಎಂದರೆ ಮರ್ಚೆಂಟ್ ಡಿಸ್ಕೌಂಟ್ ರೇಟ್. ಇದು ಮರ್ಚೆಂಟ್, ಅಂದರೆ ವ್ಯಾಪಾರಿಗಳು ತೆರಬೇಕಾದ ಶುಲ್ಕವಾಗಿರುತ್ತದೆ. ಗ್ರಾಹಕರಿಗೆ ಇದು ನೇರವಾಗಿ ಪರಿಣಾಮ ಬೀರುವುದಿಲ್ಲ.

ಪ್ರಶ್ನೆ: ಎಂಡಿಆರ್​ಗೆ ವಿರೋಧ ಯಾಕೆ?

ಉತ್ತರ: ಯುಪಿಐ ಪಾವತಿಗೆ ಎಂಡಿಆರ್ ಶುಲ್ಕ ವಿಧಿಸಿದರೆ ಜನರು ಡಿಜಿಟಲ್ ಪೇಮೆಂಟ್​ನಿಂದ ವಿಮುಖರಾಗಬಹುದು. ಕ್ಯಾಷ್ ವಹಿವಾಟಿಗೆ ಆದ್ಯತೆ ಕೊಡಬಹುದು ಎನ್ನುವ ಆತಂಕಗಳಿವೆ.

Published On - 12:48 pm, Mon, 10 August 26

Follow Us