Zomato: ಝೊಮ್ಯಾಟೋ ಡೆಲಿವರಿ ಪಾರ್ಟನರ್ ಮಕ್ಕಳ ಶಿಕ್ಷಣಕ್ಕೆ 700 ಕೋಟಿ ರೂಪಾಯಿ ಮೌಲ್ಯದ ಷೇರು ದೇಣಿಗೆ ನೀಡಿದ ದೀಪಿಂದರ್ ಗೋಯಲ್
700 ಕೋಟಿ ರೂಪಾಯಿ ಇಎಸ್ಒಪಿಯನ್ನು ಝೊಮ್ಯಾಟೋ ಫ್ಯೂಚರ್ ಫೌಂಡೇಷನ್‌ಗೆ ದಾನ ಮಾಡುವುದಾಗಿ ಕಂಪೆನಿ ಸಹ-ಸಂಸ್ಥಾಪಕ, ಸಿಇಒ ದೀಪಿಂದರ್ ಗೋಯಲ್ ಹೇಳಿದ್ದಾರೆ.
ಆಹಾರ ತಂತ್ರಜ್ಞಾನ ಕಂಪೆನಿಯಾದ ಝೊಮ್ಯಾಟೋ (Zomato) ಸಹ-ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ಶುಕ್ರವಾರ ಘೋಷಣೆ ಮಾಡಿರುವಂತೆ, ಈ ವರ್ಷ ಅವರ ಪಾಲಿಗೆ ಬರುವ 700 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ದಾನ ಮಾಡುವುದಾಗಿ ಹೇಳಿದ್ದಾರೆ. ಝೊಮ್ಯಾಟೋ ಕಂಪೆನಿಯಲ್ಲಿ ಡೆಲಿವರಿ ಪಾರ್ಟನರ್ ಆಗಿರುವವರ ಮಕ್ಕಳ ಶಿಕ್ಷಣದ ಸಲುವಾಗಿ ಈ ಹಣವನ್ನು ಬಳಸಲಾಗುವುದು. ಗೋಯಲ್ ಪಾಲಿನ ವೈಯಕ್ತಿಕ ಸಂಪತ್ತು ಆಗಬೇಕಿದ್ದ ಮೊತ್ತವನ್ನು ದೇಣಿಗೆ ನೀಡಿದ್ದಾರೆ. ಆಂತರಿಕ ಟಿಪ್ಪಣಿಯೊಂದು ವ್ಯಾಪಕವಾಗಿ ಹರಿದಾಡುತ್ತಿದ್ದು, ಈ ವರ್ಷ ತಮ್ಮ ಪಾಲಿಗೆ ಬರುವ ಎಂಪ್ಲಾಯಿ ಸ್ಟಾಕ್ ಆಪ್ಷನ್ಸ್ ಮೊತ್ತವನ್ನು ದಾನ ಮಾಡುವುದಾಗಿ ತಿಳಿಸಿದ್ದಾರೆ. ಅಂದಹಾಗೆ ಈ ಮೊತ್ತವು ತೆರಿಗೆ ಕಡಿತದ ನಂತರದ್ದು. ಇದು ಝೊಮ್ಯಾಟೋ ಫ್ಯೂಚರ್ ಫೌಂಡೇಷನ್‌ಗೆ ಹೋಗುತ್ತದೆ.
ಅದರ ಮೂಲಕ ಝೊಮ್ಯಾಟೋ ಡೆಲಿವರಿ ಪಾರ್ಟನರ್ಗಳ ಮಕ್ಕಳ ಶಿಕ್ಷಣಕ್ಕೆ ಅದು ಬಳಕೆ ಆಗುತ್ತದೆ. ಯಾರು ಐದು ವರ್ಷಗಳ ಕಾಲ ಕಂಪೆನಿಯ ಡೆಲಿವರಿ ಪಾರ್ಟನರ್ಗಳಾಗಿರುತ್ತಾರೋ ಅಂಥವರ ಮಕ್ಕಳ ಶಿಕ್ಷಣಕ್ಕೆ ಒಂದು ವರ್ಷಕ್ಕೆ, ಒಂದು ಮಗುವಿಗೆ 50,000 ರೂಪಾಯಿ ವೆಚ್ಚ ಕವರ್ ಆಗುತ್ತದೆ. ಒಂದು ವೇಳೆ 10 ವರ್ಷ ಪೂರ್ಣಗೊಳಿಸಿದ್ದಲ್ಲಿ ಮೊತ್ತದ ಮಿತಿ 1 ಲಕ್ಷ ರೂಪಾಯಿ ಆಗಿದೆ. ಈ ರೀತಿ ಎರಡು ಮಕ್ಕಳಿಗೆ ದೊರೆಯುತ್ತದೆ. ಮಹಿಳೆಯರಿಗೆ ಈ ಕಾರ್ಯ ನಿರ್ವಹಣೆ ಅವಧಿಯ ಮಿತಿ ಕಡಿಮೆ ಇದೆ. “ಶಿಕ್ಷಣವೊಂದೇ ಅವರಿಗೆ (ಡೆಲಿವರಿ ಪಾರ್ಟನರ್ಗಳ ಮಕ್ಕಳು) ತಮ್ಮ ಹಿಂದಿನ ತಲೆಮಾರಿನವರಿಗಿಂತ ಬಹಳ ಉತ್ತಮವಾದ ಜೀವನ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬಲ್ಲದು ಎಂಬುದನ್ನು ನಾನು ನಂಬುತ್ತೇನೆ,” ಎಂಬುದಾಗಿ ಗೋಯಲ್ ಹೇಳಿದ್ದಾರೆ.
ಝೊಮ್ಯಾಟೋ ಕಂಪೆನಿಯು ಕಳೆದ ಆಗಸ್ಟ್ನಲ್ಲಿ ನೀಡಿದ ಹೇಳಿಕೆ ಪ್ರಕಾರ, 2021ರ ಜುಲೈ ಹೊತ್ತಿಗೆ 3,10,000 ಸಕ್ರಿಯ ಡೆಲಿವರಿ ಪಾರ್ಟನರ್ಗಳಿದ್ದಾರೆ. ಇದು ಪ್ಲಾಟ್ಫಾರ್ಮ್ನ ಸಾರ್ವಕಾಲಿಕ ಗರಿಷ್ಠ ಸಂಖ್ಯೆಯಾಗಿದೆ. ಝೊಮ್ಯಾಟೋದಿಂದ ಹತ್ತು ನಿಮಿಷದ ಡೆಲಿವರಿ ಬಗ್ಗೆ ಘೋಷಣೆ ಮಾಡಿದಾಗ ಮತ್ತು ರಸ್ತೆ ಅಪಘಾತದಲ್ಲಿ ಡೆಲಿವರಿ ಪಾರ್ಟನರ್ ಒಬ್ಬರು ಮೃತಪಟ್ಟಾಗ ಇದು ಬಹಳ ಚರ್ಚೆಯ ವಿಷಯವಾಯಿತು.
ಕಳೆದ ವರ್ಷ ಕಂಪೆನಿಯಿಂದ ಐಪಿಒ ವಿತರಣೆಗೆ ಮೊದಲು ಗೋಯಲ್ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಝೊಮ್ಯಾಟೋದ ಹೂಡಿಕೆದಾರರು ಮತ್ತು ಮಂಡಳಿಯಿಂದ ESOPS ಅನ್ನು ನೀಡಲಾಯಿತು. ಈ ಕೆಲವು ಎಂಪ್ಲಾಯಿ ಸ್ಟಾಕ್ ಆಪ್ಷನ್ ಪ್ಲಾನ್ (ESOP)ಗಳನ್ನು ಕಳೆದ ತಿಂಗಳು ವೆಸ್ಟಿಂಗ್ ಅವಧಿ ಮುಗಿದಿದೆ. ಏಕೆಂದರೆ ಕನಿಷ್ಠ ಒಂದು ವರ್ಷದ ವೆಸ್ಟಿಂಗ್ ಅವಧಿಯನ್ನು ಕಾನೂನು ನಿಗದಿಪಡಿಸಿದೆ. ಫೌಂಡೇಷನ್‌ಗೆ ಹೆಚ್ಚಿನ ಲಾಭವನ್ನು ಪಡೆಯಲು ಮತ್ತು ಝೊಮ್ಯಾಟೋ ಷೇರುದಾರರ ಹಿತಾಸಕ್ತಿ ರಕ್ಷಿಸಲು, ಗೋಯಲ್ ಈ ಎಲ್ಲ ಷೇರುಗಳನ್ನು ತಕ್ಷಣವೇ “ಆದರೆ ಮುಂದಿನ ಕೆಲವು ವರ್ಷಗಳಲ್ಲಿ” ನಗದು ಮಾಡುವುದಿಲ್ಲ. ಮೊದಲ ವರ್ಷ ಅವರು ಝೊಮ್ಯಾಟೋ ಫ್ಯೂಚರ್ ಫೌಂಡೇಷನ್‌ಗೆ ಈ ESOPಗಳಲ್ಲಿ ಶೇ 10ಕ್ಕಿಂತ ಕಡಿಮೆ ಪ್ರಮಾಣವನ್ನು ನಗದು ಮಾಡುತ್ತಾರೆ.
ಜುಲೈ 6, 2021ರ ಕರಡು ರೆಡ್ ಹೆರಿಂಗ್ ಪ್ರಸ್ತಾವನೆಯ (DRHP) ದಾಖಲೆಯ ಪ್ರಕಾರ, ಏಪ್ರಿಲ್ 1, 2021ರಿಂದ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್‌ನ ದಿನಾಂಕದವರೆಗೆ ದೀಪಿಂದರ್ ಗೋಯಲ್ ಅವರಿಗೆ ನೀಡಲಾದ ಆಪ್ಷನ್ ಸಂಖ್ಯೆ 36,85,00,000. ಪ್ರತಿ ಆಪ್ಷನ್ಗೆ ಒಂದು ಈಕ್ವಿಟಿ ಷೇರನ್ನು ಹಂಚಲಾಗುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇಶೀ ಕಂಪೆನಿಗಳ ಐಪಿಒ ಹೂಡಿಕೆ ಬಗ್ಗೆ ಉತ್ಸಾಹ ಚಿಮ್ಮಿಸಿದ ಝೊಮ್ಯಾಟೋ ಲಿಸ್ಟಿಂಗ್
Published On - 1:51 pm, Sat, 7 May 22