ಮ್ಯೂಲ್ ಅಕೌಂಟ್ ಸೈಬರ್ ದಂಧೆಗೆ ಸಿಐಡಿ ಶಾಕ್: ರಾಜ್ಯಾದ್ಯಂತ ಮೆಗಾ ದಾಳಿ, 13 ಮಾಸ್ಟರ್ ಮೈಂಡ್‌ಗಳ ಬಂಧನ
ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಪ್ರಕರಣಗಳಿಗೆ ಕಡಿವಾಣ ಹಾಕಲು ಸಿಐಡಿ ಸೈಬರ್ ಕ್ರೈಂ ಮಹತ್ವದ ಕಾರ್ಯಾಚರಣೆ ನಡೆಸಿದೆ. ಫೆಬ್ರವರಿ 6ರಂದು ನಡೆದ ದಾಳಿಯಲ್ಲಿ, 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಖಾತೆಗಳನ್ನು ಪತ್ತೆ ಹಚ್ಚಿ, 13 ಪ್ರಮುಖ ವಂಚಕರನ್ನು ಬಂಧಿಸಲಾಗಿದೆ. ಅಮಾಯಕರ ಬ್ಯಾಂಕ್ ವಿವರಗಳನ್ನು ದುರ್ಬಳಕೆ ಮಾಡಿಕೊಂಡು ನಡೆಯುತ್ತಿದ್ದ ಆನ್‌ಲೈನ್ ವಂಚನೆಗೆ ಇದರಿಂದ ಬ್ರೇಕ್ ಬಿದ್ದಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.

ಬೆಂಗಳೂರು, ಫೆಬ್ರುವರಿ 06: ರಾಜ್ಯದಲ್ಲಿ ಸೈಬರ್ ಪ್ರಕರಣಗಳು (Cyber crime) ಹೆಚ್ಚುತ್ತಿರುವ ಬೆನ್ನಲ್ಲೇ ಮ್ಯೂಲ್ ಅಕೌಂಟ್‌ಗಳ ಮೂಲಕ ನಡೆಯುತ್ತಿದ್ದ ಭಾರೀ ಸೈಬರ್ ವಂಚನಾ ದಂಧೆಯನ್ನು ಸಿಐಡಿ ಸೈಬರ್ ಕ್ರೈಂ (CID) ವಿಭಾಗ ಭೇದಿಸಿದೆ. ಏಕಕಾಲಕ್ಕೆ ನೂರಾರು ಕಡೆ ದಾಳಿ ನಡೆಸಿದ್ದ ಸಿಐಡಿ ತಂಡಗಳು, ಅಕ್ರಮಕ್ಕಾಗಿ ಬಳಸಲಾಗುತ್ತಿದ್ದ 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್ಗಗಳನ್ನು ಪತ್ತೆ ಹಚ್ಚಿದೆ.
100ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು
ರಾಜ್ಯದಲ್ಲಿ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ ಸಿಐಡಿ ತಂಡ, ಫೆಬ್ರವರಿ 6ರಂದು ಈ ಪ್ರಕರಣದ ಪ್ರಮುಖ 13 ಮಾಸ್ಟರ್ ಮೈಂಡ್‌ಗಳನ್ನು ಬಂಧಿಸಿದೆ. ಅಮಾಯಕ ಜನರ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಹಾಗೂ ಖಾತೆ ವಿವರಗಳನ್ನು ಹಣಕ್ಕಾಗಿ ಸಂಗ್ರಹಿಸಿ ಸೈಬರ್ ವಂಚಕರಿಗೆ ನೀಡಲಾಗುತ್ತಿತ್ತು ಎಂಬುದು ಸಿಐಡಿ ತನಿಖೆ ವೇಳೆ ಬಯಲಾಗಿದೆ. ಈ ಮ್ಯೂಲ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ವಂಚನೆ ನಡೆಸಿ ಹಣ ವರ್ಗಾವಣೆ ಹಾಗೂ ಎಟಿಎಂ ಮೂಲಕ ಹಣ ವಿತ್‌ಡ್ರಾ ಮಾಡಲಾಗುತ್ತಿತ್ತು.
40 ಸಾವಿರಕ್ಕೂ ಹೆಚ್ಚು ಅಕ್ರಮ ಅಕೌಂಟ್‌ಗಳು!
ಖಾತೆ ವಿವರ ನೀಡಿದ ಅಮಾಯಕರಿಗೆ ಈ ವಂಚನೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿದು ಬಂದಿದೆ. ತನಿಖೆಯ ವೇಳೆ ಸುಮಾರು 42 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳು ಬಳಕೆಯಲ್ಲಿರುವುದು ಪತ್ತೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆ ಮ್ಯೂಲ್ ಅಕೌಂಟ್‌ಗಳ ವಿರುದ್ಧ ಸಿಐಡಿ ತಂಡ ತೀವ್ರ ನಿಗಾ ವಹಿಸಿತ್ತು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:46 am, Fri, 6 February 26