Bangalore university: ರಾಜ್ಯಶಾಸ್ತ್ರದಲ್ಲಿ 2ನೇ ರ್‍ಯಾಂಕ್ ಪಡೆದ ದೀಪಾಗೆ ಐಪಿಎಸ್ ಆಗುವ ಕನಸು
ಬಡ ಕುಟುಂಬದಲ್ಲಿ ಬೆಳೆ ದೀಪಾ ಇದೀಗ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಎರಡನೇ ರ್ಯಾಂಕ್ ಪಡೆಯುವ ಮೂಲಕ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಈಕೆ ಮುಂದೆ ಐಪಿಎಸ್ ಆಗುವ ಕನಸು ಕಟ್ಟಿಕೊಂಡಿದ್ದಾಳೆ.
ಕೂಲಿ ಮಾಡಿ ಜೀವನದ ಬಂಡಿ ಎಳೆಯುವ ಬಡ ಕುಟುಂಬದ ಯುವತಿಯೊಬ್ಬಳು ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾಳೆ. ಆರ್ಥಿಕ ಸಂಕಷ್ಟದ ನಡುವೆಯೂ ದೀಪಾ ಕೆ.ಎನ್ ಎಂಬ ಯುವತಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಎರಡನೇ ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿದ್ದಾಳೆ. ಎಂಎ ಸ್ನಾತಕೋತ್ತರ ಪದವಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ 2022ನೇ ಸಾಲಿನಲ್ಲಿ ನಡೆದ ಅಂತಿಮ ವರ್ಷದ ಪರೀಕ್ಷೆಯಲ್ಲಿ 2000ಕ್ಕೆ 1594 ಅಂಕಗಳನ್ನು ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾಳೆ. ಸದ್ಯ ಈಕೆ ಐಪಿಎಸ್ ಆಗಬೇಕೆಂಬ ಕನಸು ಕಾಣುತ್ತಿದ್ದು, ಭೇಷ್ ಮಗಳೇ ಎನ್ನುತ್ತಾ ಇದಕ್ಕೂ ಪೋಷಕರು ಬೆನ್ನು ತಟ್ಟುತ್ತಿದ್ದಾರೆ.
ಮಾಲೂರು ತಾಲ್ಲೂಕು ಕೆಸರಗೆರೆ ಗ್ರಾಮದ ನಂಜುಂಡಪ್ಪ ಲಕ್ಷ್ಮಮ್ಮನವರ ಮಗಳಾದ ದೀಪ ಬಡತನದ ನಡುವೆ ಉನ್ನತ ಸಾಧನೆ ಮಾಡಲು ಸಜ್ಜಾಗುತ್ತಿದ್ದಾಳೆ. ನಾಲ್ಕು ಮಕ್ಕಳಲ್ಲಿ ಒಬ್ಬಳಾಗಿರುವ ದೀಪಾಗೆ ಬಾಲ್ಯದಿಂದಲೇ ತಾನೇನಾದರೂ ಸಾಧನೆ ಮಾಡಿ ಊರಿಗೆ ಮತ್ತು ಪೋಷಕರಿಗೆ ಹೆಸರು ತರಬೇಕು ಅಂತಾ ಅಂದುಕೊಂಡಿದ್ದಳು. ಅದರಂತೆ ಓದಿನಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿ ಇದೀಗ ಎಂಎ ಸ್ನಾತಕೋತ್ತರ ಪದವಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಬೆಂಗಳೂರು ವಿವಿಗೆ ಎರಡನೇ ರ್‍ಯಾಂಕ್ ಪಡೆದು ತನ್ನ ಒಂದು ಕನಸ್ಸನ್ನು ನನಸು ಮಾಡಿಕೊಂಡಿದ್ದಾಳೆ. ಮುಂದೆ ಐಪಿಎಸ್ ಗುರಿಯನ್ನು ಇಟ್ಟುಕೊಂಡಿದ್ದಾಳೆ.
ಸಂಭ್ರಮಿಸುತ್ತಿರುವ ಗ್ರಾಮ; ದೀಪಾಳಿಗೆ ಸನ್ಮಾನ
ಬಡತನವನ್ನು ಮೆಟ್ಟಿನಿಂತ ದೀಪಾಳ ಸಾಧನೆ ಕಂಡು ಇಡೀ ಗ್ರಾಮವೇ ಸಂತಸ ಪಡುತ್ತಿದೆ. 2ನೇ ರ್‍ಯಾಂಕ್ ಪಡೆಯುತ್ತಿದ್ದಂತೆ ಕಾಲೇಜಿನಲ್ಲಿ ದೀಪಾಳಿಗೆ ಸನ್ಮಾನ ಕೂಡ ನಡೆಸಲಾಗುತ್ತದೆ. ಬಳಿಕ ಹಾಸ್ಟೆಲ್ ಮತ್ತು ಊರಿನಲ್ಲೂ ಸ್ಥಳೀಯ ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಮುಂದಿನ ಸಾಧನೆಗೆ ಪ್ರೋತ್ಸಾಹಿಸಿವೆ.
ಓದಿನಲ್ಲಿ ಶಿಸ್ತು ಪಾಲಿಸಿದ ದೀಪಾ
ಬಡತವಿದ್ದರೂ ಮಕ್ಕಳ ಓದಿಗೆ ಯಾವುದೇ ಅಡಚಣೆ ಬರದಂತೆ ಪೋಷಕರು ನೋಡಿಕೊಂಡಿದ್ದಾರೆ. ಊರಿನಲ್ಲಿ ತನ್ನ ಹೆತ್ತವರಿಗೆ ಒಂದು ಹೆಸರನ್ನು ತರಬೇಕು ಎಂದು ಯೋಚಿಸಿದ ದೀಪಾ, ಓದಿನಲ್ಲಿ ಶಿಸ್ತು, ಶ್ರದ್ಧೆಯನ್ನು ಪಾಲಿಸಿದ್ದಾಳೆ. ಈಕೆ ಹೇಳುವಂತೆ, ತನ್ನ ಒಡಹುಟ್ಟಿದವರು ಕೂಡ ಓದಿನಲ್ಲಿ ಮುಂದಿದ್ದಾರೆ. ಪೋಷಕರು ಇವರಿಗೆ ಓದಿ ಅಂತ ಒಂದು ದಿನವೂ ಹೇಳಿಲ್ಲ. ಏಕೆಂದರೆ ತನ್ನ ಮಕ್ಕಳ ಓದಿನ ಬಗ್ಗೆ ಚೆನ್ನಾಗಿಯೇ ತಿಳಿದಿತ್ತು. ಹೀಗಾಗಿ ಊರಿನಲ್ಲಿ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದಾಗ ನಮ್ಮ ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಿದ್ದರು.
ಪೋಷಕರ ಆಸೆ ಏನು?
ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬರದಂತೆ ನೋಡಿಕೊಂಡಿರುವ ಪೋಷಕರು ದೀಪಾಳಲ್ಲಿ ಒಂದು ಕನಸನ್ನು ಕಂಡಿದ್ದಾರೆ. ಮಹಾರಾಣಿ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡುತ್ತಿದ್ದಾಗ ದೀಪಾ ಎನ್ಸಿಸಿಗೆ ಸೇರಿಕೊಂಡಿದ್ದಳು. ಒಂದು ದಿನ ಕಾಲೇಜಿಗೆ ಬಂದ ದೀಪಾಳ ಪೋಷಕರು ತನ್ನ ಮಗಳನ್ನು ಖಾಕಿ ಬಟ್ಟೆಯಲ್ಲಿ ನೋಡಿ ಸಂತಸ ಪಟ್ಟರು. ಅಂದಿನಿಂದ ನೀನು ಮುಂದಕ್ಕೆ ಪೊಲೀಸ್ ಆಗಬೇಕು ಅಂತ ಪೋಷಕರು ಹೇಳಿದರು. ಇದನ್ನೇ ಗುರಿಯಾಗಿಸಿಕೊಂಡ ದೀಪಾ ಇದೀಗ ಐಪಿಎಸ್ ಕನಸು ಈಡೇರಿಸಲು ತರಬೇತಿ ಪಡೆಯಲು ಮುಂದಾಗುತ್ತಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:10 pm, Fri, 14 October 22