PUC ನಂತರ ಮುಂದೇನು? ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಟಾಪ್ ಕೋರ್ಸ್‌ಗಳ ಮಾಹಿತಿ ಇಲ್ಲಿದೆ!
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಂತರ "ಮುಂದೇನು?" ಎಂಬ ಗೊಂದಲ ಸಹಜ. ಈ ನಿರ್ಣಾಯಕ ಘಟ್ಟದಲ್ಲಿ ಸರಿಯಾದ ಕೋರ್ಸ್ ಆಯ್ಕೆ ನಿಮ್ಮ ವೃತ್ತಿಜೀವನವನ್ನು ರೂಪಿಸುತ್ತದೆ. ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಇಂಜಿನಿಯರಿಂಗ್, CA, ಡಿಜಿಟಲ್ ಮಾರ್ಕೆಟಿಂಗ್, ಅನಿಮೇಷನ್ ಸೇರಿದಂತೆ ಅನೇಕ ಉದ್ಯೋಗಾಧಾರಿತ, ಅತ್ಯುತ್ತಮ ವೃತ್ತಿ ಆಯ್ಕೆಗಳ ಸಮಗ್ರ ಮಾಹಿತಿ ಇಲ್ಲಿದೆ. ನಿಮ್ಮ ಭವಿಷ್ಯವನ್ನು ಸಶಕ್ತಗೊಳಿಸಲು ಇದು ಉತ್ತಮ ಮಾರ್ಗದರ್ಶಿ.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನ ಅತ್ಯಂತ ನಿರ್ಣಾಯಕ ಘಟ್ಟಗಳು. ಫಲಿತಾಂಶ ಬಂದ ನಂತರ “ಮುಂದೇನು ಓದಬೇಕು? ಯಾವ ಕೆಲಸಕ್ಕೆ ಬೇಡಿಕೆಯಿದೆ?” ಎಂಬ ಗೊಂದಲ ಸಹಜ. ನೀವು ಆಯ್ದುಕೊಳ್ಳುವ ಒಂದು ಕೋರ್ಸ್ ನಿಮ್ಮ ಇಡೀ ವೃತ್ತಿಜೀವನದ ದಿಕ್ಕನ್ನೇ ಬದಲಿಸಬಹುದು. ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಪಿಯುಸಿ ನಂತರ ಲಭ್ಯವಿರುವ ಅತ್ಯುತ್ತಮ ಮತ್ತು ಉದ್ಯೋಗಾಧಾರಿತ ಕೋರ್ಸ್‌ಗಳ ವಿವರ ಇಲ್ಲಿದೆ:
ವಿಜ್ಞಾನ ವಿಭಾಗ (Science):
ವಿಜ್ಞಾನ ವಿಭಾಗದಲ್ಲಿ ಓದಿದವರಿಗೆ ಕೇವಲ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕ್ಷೇತ್ರ ಮಾತ್ರವಲ್ಲದೆ, ಹತ್ತಾರು ಹೊಸ ಹಾದಿಗಳಿವೆ.
- ವೈದ್ಯಕೀಯ ಮತ್ತು ಅಲೈಡ್ ಸೈನ್ಸ್: MBBS ಹೊರತುಪಡಿಸಿ ನರ್ಸಿಂಗ್, ಪ್ಯಾರಾ ಮೆಡಿಕಲ್, ಮತ್ತು ಬಿ.ಫಾರ್ಮಾ ಕೋರ್ಸ್‌ಗಳಿಗೆ ಈಗ ಭಾರಿ ಬೇಡಿಕೆಯಿದೆ.
- ತಾಂತ್ರಿಕ ಕೋರ್ಸ್‌ಗಳು: ಬಿ.ಸಿ.ಎ (BCA) ಅಥವಾ ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ ಮಾಡುವ ಮೂಲಕ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮಿಂಚಬಹುದು.
- ಸಂಶೋಧನಾ ಕ್ಷೇತ್ರ: ಫೋರೆನ್ಸಿಕ್ ಸೈನ್ಸ್, ಬಯೋಕೆಮಿಸ್ಟ್ರಿ, ಓಸಿಯೋನೋಗ್ರಫಿ (ಸಮುದ್ರ ವಿಜ್ಞಾನ) ಮತ್ತು ಬಯೋಮೆಡಿಕಲ್ ವೃತ್ತಿಗಳು ಭವಿಷ್ಯದ ದೃಷ್ಟಿಯಿಂದ ಅತ್ಯುತ್ತಮವಾಗಿವೆ.
- ಇತರೆ: ಆರ್ಕಿಟೆಕ್ಚರ್, ಏವಿಯೇಷನ್ (ವಿಮಾನಯಾನ), ಮತ್ತು ಸೌಂಡ್ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಆಸಕ್ತಿ ಇದ್ದರೆ ನೂರಕ್ಕೆ ನೂರರಷ್ಟು ಉದ್ಯೋಗ ಖಚಿತ.
ವಾಣಿಜ್ಯ ವಿಭಾಗ (Commerce):
ಲೆಕ್ಕಾಚಾರ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಆಸಕ್ತಿ ಇರುವವರಿಗೆ ವಾಣಿಜ್ಯ ವಿಭಾಗವು ಬಂಗಾರದಂತಹ ಅವಕಾಶ ನೀಡುತ್ತದೆ.
- ಪದವಿ ಕೋರ್ಸ್‌ಗಳು: ಬಿ.ಕಾಂ (B.Com) ಅಥವಾ ಬಿ.ಬಿ.ಎ (BBA) ಮಾಡುವ ಮೂಲಕ ಕಂಪನಿಗಳಲ್ಲಿ ಅಕೌಂಟೆಂಟ್ ಅಥವಾ ಮ್ಯಾನೇಜರ್ ಹುದ್ದೆ ಪಡೆಯಬಹುದು.
- ವೃತ್ತಿಪರ ಕೋರ್ಸ್‌ಗಳು: ಅತ್ಯಂತ ಹೆಚ್ಚು ಸಂಬಳ ತರುವ ಸಿಎ (CA – Chartered Accountancy) ಮಾಡುವುದು ವಾಣಿಜ್ಯ ವಿದ್ಯಾರ್ಥಿಗಳ ಮೊದಲ ಆದ್ಯತೆ. ಇದಲ್ಲದೆ ಕಂಪನಿ ಸೆಕ್ರೆಟರಿ (CS), ಸಿಪಿಎ (CPA) ಕೋರ್ಸ್‌ಗಳೂ ಇವೆ. ಚಾರ್ಟೆಡ್ ಅಕೌಂಟೆನ್ಸಿ ಇದು ಕಠಿಣವಾದರೂ, ಶ್ರಮವಹಿಸಿ ಪಾಸಾದರೆ ಸಮಾಜದಲ್ಲಿ ಗೌರವ ಮತ್ತು ಉನ್ನತ ಸಂಬಳ ಸಿಗುವುದು ಖಚಿತ. ವಾಣಿಜ್ಯ ವಿದ್ಯಾರ್ಥಿಗಳಿಗೆ ಇದು ‘ಗೋಲ್ಡನ್ ಚಾನ್ಸ್’.
- ಆಧುನಿಕ ಆಯ್ಕೆಗಳು: ಡಿಜಿಟಲ್ ಮಾರ್ಕೆಟಿಂಗ್, ಬ್ಯಾಂಕಿಂಗ್ ಮತ್ತು ಅಕೌಂಟೆನ್ಸಿ ಕ್ಷೇತ್ರಗಳು ಈಗಿನ ಕಾಲಕ್ಕೆ ತಕ್ಕಂತ ಉದ್ಯೋಗಗಳನ್ನು ನೀಡುತ್ತವೆ.
ಕಲಾ ವಿಭಾಗ (Arts):
ಕಲಾ ವಿಭಾಗ ಎಂದರೆ ಕೇವಲ ಬಿ.ಎ ಅಂದುಕೊಳ್ಳಬೇಡಿ, ಇಲ್ಲಿ ಸೃಜನಶೀಲತೆಗೆ ಅತಿ ಹೆಚ್ಚು ಮೌಲ್ಯವಿದೆ.
- ಶಿಕ್ಷಣ ಕ್ಷೇತ್ರ: ಬಿ.ಎ ಪದವಿ ಬಳಿಕ ಬಿ.ಎಡ್ ಮಾಡಿ ಶಿಕ್ಷಕರಾಗಬಹುದು ಅಥವಾ ಕೆಪಿಎಸ್‌ಸಿ/ಯುಪಿಎಸ್‌ಸಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬಹುದು.
- ಕ್ರಿಯೇಟಿವ್ ಫೀಲ್ಡ್: ಅನಿಮೇಷನ್, ವೆಬ್ ಡಿಸೈನಿಂಗ್, ಗ್ರಾಫಿಕ್ ಡಿಸೈನಿಂಗ್ ಮತ್ತು ಫ್ಯಾಷನ್ ಡಿಸೈನಿಂಗ್ ಈಗಿನ ಟ್ರೆಂಡಿಂಗ್ ಕೋರ್ಸ್‌ಗಳು.
- ಸೇವೆ ಮತ್ತು ಸಂವಹನ: ಹೋಟೆಲ್ ಮ್ಯಾನೇಜ್‌ಮೆಂಟ್, ಪತ್ರಿಕೋದ್ಯಮ (Journalism) ಮತ್ತು ಪ್ರಾಡಕ್ಟ್ ಡಿಸೈನಿಂಗ್ ಕ್ಷೇತ್ರಗಳಲ್ಲಿ ಕೈತುಂಬಾ ಸಂಬಳ ಸಿಗುವ ಅವಕಾಶಗಳಿವೆ.
- ಫ್ಯಾಷನ್ ಮತ್ತು ಜ್ಯುವೆಲ್ಲರಿ ಡಿಸೈನಿಂಗ್: ನಿಮಗೆ ಬಟ್ಟೆಗಳ ವಿನ್ಯಾಸ ಅಥವಾ ಆಭರಣಗಳ ಡಿಸೈನಿಂಗ್‌ನಲ್ಲಿ ಆಸಕ್ತಿ ಇದ್ದರೆ, ಈ ಕೋರ್ಸ್ ಮಾಡಿ ಸ್ವಂತ ಉದ್ಯಮವನ್ನೂ ಆರಂಭಿಸಬಹುದು.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Thu, 9 April 26




