Basavana Bagewadi Election Result: ಬಸವನ ಬಾಗೇವಾಡಿ ವಿಧಾನಸಭಾ ಎಲೆಕ್ಷನ್ 2023 ರಿಸಲ್ಟ್: ಬಸವಣ್ಣನ ಜನ್ಮಭೂಮಿಯಲ್ಲಿ ಯಾರಿಗೆ ಗೆಲುವಿನ ಮಾಲೆ?
Basavana Bagewadi Assembly Election Result 2023 Live Counting Updates: ಜಗತ್ತಿನ ಪ್ರಥಮ ಪಾರ್ಲಿಮೆಂಟ್ ರೂಪಿಸಿದ್ದ ಅಣ್ಣ ಬಸವಣ್ಣನವರ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿಯಿಂದ ಕೂಡಿದ್ದು, ಕಾಂಗ್ರೆಸ್ನಿಂದ ಶಿವಾನಂದ ಪಾಟೀಲ್ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದರೆ, ಬಿಜೆಪಿಯಿಂದ ಎಸ್‌ಕೆ ಬೆಳ್ಳುಬ್ಬಿ ಮತ್ತೆ ಕಣದಲ್ಲಿದ್ದಾರೆ. ಇನ್ನು ಜೆಡಿಎಸ್ನಿಂದ ಸೋಮನಗೌಡ ಪಾಟೀಲ್ ಸ್ಪರ್ಧೆ ಮಾಡಿದ್ದಾರೆ.

Basavana Bagewadi Assembly Election Result 2023: ವಿಶ್ವಕ್ಕೆ ಸಮಾನತೆಯೆ ಸಂದೇಶ ಸಾರಿದ ಅಣ್ಣ ಬಸವಣ್ಣ ಜನಿಸಿದ ಶ್ರೇಷ್ಠ ತಾಣ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ. ಬಸವನ ಬಾಗೇವಾಡಿ ಎಂದೊಡನೆ ನೆನಪಾಗುವುದು ಜಗತ್ತಿನ ಮೊದಲ ಸಂಸತ್ತನ್ನು ರೂಪಿಸಿದ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣನ ಹುಟ್ಟೂರು. ಅವರು ಜನಿಸಿದ ಸ್ಥಳವಾಗಿರುವುದರಿಂದ ಇದು ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ. 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಹುಟ್ಟಿದ ನೆಲವಿದು.
ಈ ಕ್ಷೇತ್ರದಲ್ಲಿ ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಖ್ಯಾತಿ ಪಡೆದಿದೆ. ಇನ್ನು ಈ ಕ್ಷೇತ್ರದ ರಾಜಕೀಯ ಚಿತ್ರಣ ನೋಡುವುದಾದರೆ ಇದುವರೆಗೂ 13 ಚುನಾವಣೆ ಕಂಡಿರುವ ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಎಂಟು ಬಾರಿ ಕಾಂಗ್ರೆಸ್ ಗೆದ್ದಿದ್ದರೆ, ಒಂದು ಬಾರಿ ಸಂಸ್ಥಾ ಕಾಂಗ್ರೆಸ್ ವಿಜಯ ಸಾಧಿಸಿದೆ.
1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ನ ಶಂಕರಗೌಡ ಯಶವಂತ ಗೌಡ ಪಾಟೀಲ್ ಮೊದಲ ಬಾರಿಗೆ ಆಯ್ಕೆಯಾಗಿದ್ದರು. 1957ರಲ್ಲಿ ನಡೆದ ದೇಶದ ಎರಡನೇ ಚುನಾವಣೆಯಲ್ಲಿ ಬಸವನ ಬಾಗೇವಾಡಿಯಿಂದ ಮಹಿಳೆಯೊಬ್ಬರು ಶಾಸಕಿಯಾಗಿ ಚುನಾಯಿತರಾದ್ದರು. ಹೀಗೆ ಮಹಿಳಾ ಸಮಾನತೆಯ ಆಶಯವನ್ನು ಸಾಕಾರಗೊಳಿಸಿದ ವಿಜಯಪುರ ಜಿಲ್ಲೆಯ ಮೊದಲ ವಿಧಾನಸಭಾ ಕ್ಷೇತ್ರ ಇದಾಗಿದೆ. ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಸುಶೀಲಾ ಬಾಯಿ ಹೀರಾಚಂದ ಶಾಹ 7,483 ಮತಗಳ ಭಾರಿ ಅಂತರದಿಂದ ಆಯ್ಕೆಯಾಗಿದ್ದರು. 1962ರಲ್ಲಿ ಕೂಡ ಸುಶೀಲಾ ಬಾಯಿ ಎರಡನೇ ಬಾರಿಗೆ ಆಯ್ಕೆಯಾಗಿದ್ದರು. 1967ರಲ್ಲಿ ಕಾಂಗ್ರೆಸ್ನಿಂದ ಶಾಸಕರಾದವರು ಪಿ ಬಿ ಸೋಮನಗೌಡ.
ಆರು ಬಾರಿ ಶಾಸಕರಾಗಿದ್ದ ಬಿ ಎಸ್ ಪಾಟೀಲ್
ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ. ವಿಜಯಪುರ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಬಾರಿ, ಕಾಂಗ್ರೆಸ್ನಿಂದ ಆರು ಬಾರಿ, ಶಾಸಕರಾಗಿ ದಾಖಲೆ ನಿರ್ಮಿಸಿದವರು ಬಿಎಸ್ ಪಾಟೀಲ್ ಮನಗೂಳಿ. 1967 ರಿಂದ 1972,1978 ಹಾಗೂ 1983ರವರೆಗೆ ಸತತ ನಾಲ್ಕು ಬಾರಿ ಪಾಟೀಲರು ಗೆಲುವಿನ ನಗೆ ಬೀರಿದ್ದರು. 1985ರಲ್ಲಿ ಕುಮಾರ ಗೌಡ ಜನತಾ ಪಕ್ಷದಿಂದ ಆಯ್ಕೆಯಾದರೆ ಪುನಃ 1989 ಹಾಗೂ 1994ರಲ್ಲಿ ಎರಡು ಶಾಸಕರಾದರು. ಆರು ಬಾರಿಯಲ್ಲಿ ಒಂದು ಬಾರಿ ಜನತಾ ಪಕ್ಷ ಹಾಗೂ ಮತ್ತೊಂದು ಬಾರಿ ಸಂಸ್ಥಾ ಕಾಂಗ್ರೆಸ್ನಿಂದ ಗೆಲುವು ಸಾಧಿಸಿದ್ದು ವಿಶೇಷ.
ಕಳೆದ ಮೂರು ಚುನಾವಣೆಗಳ ಚಿತ್ರಣ
ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ವಲಸೆ ಬಂದಿದ್ದ ಶಿವಾನಂದ ಪಾಟೀಲ್ ಬಸವನ ಬಾಗೇವಾಡಿಯಿಂದ 2004ರಲ್ಲಿ ಕಾಂಗ್ರೆಸ್ನಿಂದ ಚುನಾಯಿತರಾದ್ದರು. 2008ರಲ್ಲಿ ಮತ್ತೆ ಎಸ್ ಕೆ ಬಿಳ್ಳುಬ್ಬಿ, ಶಿವಾನಂದ ಪಾಟೀಲರನ್ನು ಸೋಲಿಸಿ ಬಿಜೆಪಿಯಿಂದ ಎರಡನೇ ಬಾರಿಗೆ ಶಾಸಕರಾದರು. 2013ರಲ್ಲಿ ಬೆಳ್ಳುಬ್ಬಿಯವರನ್ನು 19 ಸಾವಿರ ಮತಗಳ ಅಂತರದಿಂದ ಸೋಲಿಸಿದ ಶಿವಾನಂದ ಪಾಟೀಲರು ಬಸವನ ಬಾಗೇವಾಡಿಯಿಂದ ಎರಡನೇ ಬಾರಿಗೆ ವಿಧಾನಸೌಧ ಪ್ರವೇಶಿಸಿದ್ದರು. 2018ರಲ್ಲೂ ಕೂಡ ಜೆಡಿಎಸ್ ಅಪ್ಪುಗೌಡ ತೀವ್ರ ಪೈಪೋಟಿ ನೀಡಿದರೂ 3,186 ಮತಗಳ ಕಡಿಮೆ ಅಂತರದಲ್ಲಿ ಸೋಲಿಸುವ ಮೂಲಕ ಕಾಂಗ್ರೆಸ್ನ ಶಿವಾನಂದ ಪಾಟೀಲರು ಬಸವನ ಬಾಗೇವಾಡಿಯಿಂದ ಮೂರನೇ ಬಾರಿ ಶಾಸಕರಾದರು.
2023ರ ವಿಧಾನಸಭೆ ಚಿತ್ರಣ
ಇನ್ನು ಈ ಬಾರಿ ಬಸವನ ಬಾಗೇವಾಡಿ ರಾಜಕೀಯ ಜಿದ್ದಾಜಿದ್ದಿಯಿಂದ ಕೂಡಿದ್ದು, ಕಾಂಗ್ರೆಸ್ನಿಂದ ಶಿವಾನಂದ ಪಾಟೀಲ್ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದರೆ, ಬಿಜೆಪಿಯಿಂದ ಎಸ್‌ಕೆ ಬೆಳ್ಳುಬ್ಬಿ ಮತ್ತೆ ಕಣದಲ್ಲಿದ್ದಾರೆ. ಇನ್ನು ಜೆಡಿಎಸ್ನಿಂದ ಸೋಮನಗೌಡ ಪಾಟೀಲ್ ಸ್ಪರ್ಧೆ ಮಾಡಿದ್ದಾರೆ.




