ಕಾಲ್ತುಳಿತಕ್ಕೆ ಅಧಿಕಾರಿಗಳ ತಲೆದಂಡ; ನಟಿ ರಮ್ಯಾ ಅಸಮಾಧಾನ
ಆರ್‌ಸಿಬಿ ಐಪಿಎಲ್ ಗೆಲುವಿನ ಸಂಭ್ರಮಾಚರಣೆಯಲ್ಲಿ 11 ಮಂದಿ ಮೃತಪಟ್ಟ ಘಟನೆಯನ್ನು ನಟಿ ರಮ್ಯಾ ಖಂಡಿಸಿದ್ದಾರೆ. ಅಧಿಕಾರಿಗಳ ಸಾಮೂಹಿಕ ವೈಫಲ್ಯ ಮತ್ತು ಯೋಜನೆಯ ಕೊರತೆಯಿಂದ ಈ ದುರಂತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಅವರು ಅಧಿಕಾರಿಗಳ ಅಮಾನತು ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ವರದಿಗಾಗಿ ಕಾಯದೆ ಈ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ ಎಂದಿದ್ದಾರೆ.

ಆರ್‌ಸಿಬಿ (RCB) ಐಪಿಎಲ್ ಕಪ್ ಗೆದ್ದ ವೇಳೆ ನಡೆಸಿದ ಸಂಭ್ರಮಾಚರಣೆಯಲ್ಲಿ 11 ಮುಗ್ಧ ಜನರು ಪ್ರಾಣ ಕಳೆದುಕೊಂಡರು. ಆರ್‌ಸಿಬಿ ತಂಡದ ವಿಜಯೋತ್ಸವವನ್ನು ನೋಡಬೇಕು ಎಂದು ಕಾದು ಕುಳಿತಿದ್ದ ಇವರು ಕಾಲ್ತುಳಿತಕ್ಕೆ ಬಲಿಯಾಗಿ ಹೋದರು. ಇದಾದ ಬಳಿಕ ನಡೆದ ಬೆಳವಣಿಗೆಗಳು ಒಂದೆರಡಲ್ಲ. ಈ ಘಟನೆಗೆ ಅನೇಕರು ತಲೆದಂಡ ತೆತ್ತಿದ್ದಾರೆ. ಈಗ ನಟಿ ರಮ್ಯಾ ಈ ಬೆಳವಣಿಗೆ ಬಗ್ಗೆ ಮಾತನಾಡಿದ್ದು ಅಸಮಾಧಾನ ಹೊರಹಾಕಿದ್ದಾರೆ.
ರಮ್ಯಾ ಹೇಳಿದ್ದೇನು?
‘ಆರ್‌ಸಿಬಿ ಗೆದ್ದ ರಾತ್ರಿ ಕರ್ನಾಟಕದಾದ್ಯಂತ ಸಂಭ್ರಮಾಚರಣೆಗಳು ನಡೆದವು. ಮಾಲ್‌ಗಳಲ್ಲಿ ಮತ್ತು ಬೀದಿಗಳಲ್ಲಿ ಜನರು ಖುಷಿಯಿಂದ ಕುಣಿದರು. ಆಗ ಒಂದೇ ಒಂದು ಅಹಿತಕರ ಘಟನೆಯೂ ನಡೆದಿಲ್ಲ. ಕಾಲ್ತುಳಿತಗಳು ಸುಮ್ಮನೆ ಸಂಭವಿಸುವುದಿಲ್ಲ, ಅವುಗಳನ್ನು ಸೃಷ್ಟಿ ಮಾಡಲಾಗುತ್ತದೆ. ಸರ್ಕಾರ, ಅಧಿಕಾರಿಗಳು, ಆರ್‌ಸಿಬಿ, ಪೊಲೀಸರು, ಕೆಎಸ್‌ಸಿಎ ಮತ್ತು ಸಾರ್ವಜನಿಕರ ಸಾಮೂಹಿಕ ವೈಫಲ್ಯದಿಂದ ಈ ಕಾಲ್ತುಳಿತ ನಡೆದಿದೆ’ ಎಂದು ರಮ್ಯಾ ಹೇಳಿದ್ದಾರೆ.
‘ಕ್ರೀಡೆಯ ಗೆಲುವನ್ನು ಆಚರಿಸಲು ಬಂದ ಮುಗ್ಧರು ಮೃತಪಟ್ಟಿದ್ದಾರೆ. ಈ ಸಾವಿಗೆ ಕಾರಣಗಳನ್ನು ಕಂಡುಹಿಡಿಯಲು ಮತ್ತು ನ್ಯಾಯ ಒದಗಿಸಲು ಪ್ರಾಮಾಣಿಕ ಆತ್ಮಾವಲೋಕನದ ಅಗತ್ಯವಿದೆ. ಇಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಿರುವ ನಿರ್ಧಾರವು ಯೋಚಿಸದೇ ತೆಗೆದುಕೊಂಡ ನಿರ್ಧಾರದಂತೆ ಕಾಣುತ್ತದೆ. ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ವರದಿಗಾಗಿ ಕಾಯಬೇಕಿತ್ತು’ ಎಂದು ರಮ್ಯಾ ಅಭಿಪ್ರಾಯ ಹೊರಹಾಕಿದ್ದಾರೆ.
ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ; ಮೃತರ ಆತ್ಮಕ್ಕೆ ನ್ಯಾಯ ನೀಡುವುದು ಹೇಗೆ?
‘ಅಲ್ಲಿ ಬಂದ ಎಲ್ಲರಿಗೂ ಒಳ್ಳೆಯ ಉದ್ದೇಶವೇ ಇತ್ತು. ಆದರೆ, ಯೋಜನೆ ಇಲ್ಲದೆ, ಸಮನ್ವಯದ ಕೊರತೆಯಿಂದ ಈ ರೀತಿ ಆಯಿತು. ಆಟಗಾರನ್ನು ಒಂದೇ ಸ್ಥಳದಲ್ಲಿ ಸೇರಿಸುವ ಬದಲು ತೆರೆದ ಬಸ್ನಲ್ಲಿ ರ್ಯಾಲಿ ಮಾಡಿದ್ದರೆ ಭಯಾನಕ ಘಟನೆಯನ್ನು ತಪ್ಪಿಸಬಹುದಿತ್ತು’ ಎಂದು ರಮ್ಯಾ ಹೇಳಿದ್ದಾರೆ.
ಮಾಯವಾದ ಸ್ಟೇಟಸ್
ರಮ್ಯಾ ಅವರು ನಟನೆ ಹಾಗೂ ರಾಜಕೀಯ ಎರಡರಿಂದಲೂ ದೂರ ಇದ್ದಾರೆ. ಆದರೆ, ಸಮಾಜದಲ್ಲಿ ನಡೆಯುವ ಬೆಳವಣಿಗೆ ಬಗ್ಗೆ ಆಗಾಗ ಪ್ರತಿಕ್ರಿಯೆ ನೀಡುತ್ತಾರೆ. ಈಗ ಅವರು ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಕಾಲ್ತುಳಿತದ ಬಗ್ಗೆ ಹಾಗೂ ಅಧಿಕಾರಿಗಳ ತಲೆದಂಡದ ಬಗ್ಗೆ ಪೋಸ್ಟ್ ಮಾಡಿದ್ದರು. ಆದರೆ, ಅದು ಈಗ ಮಾಯವಾಗಿದೆ. ಸಾಮಾನ್ಯವಾಗಿ ಇನ್ಸ್ಟಾಗ್ರಾಮ್ ಸ್ಟೇಟಸ್ 24 ಗಂಟೆ ಬಳಿಕ ಡಿಲೀಟ್ ಆಗುತ್ತದೆ. ಆದರೆ, ಇದು ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗಿದ್ದೋ ಅಥವಾ ಅವರೇ ಡಿಲೀಟ್ ಮಾಡಿದ್ದೋ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








